ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬ್ರೈಮ್ ಹ್ಯಾಮ್ರೇಜ್‌ನಿಂದ ನಿಧನರಾಗಿದ್ದಾರೆ ಅನ್ನೋ ಸುದ್ದಿ ಭಾರಿ ಹಬ್ಬಿದೆ. ಇದರ ಬೆನ್ನಲ್ಲೇ ಕೆಲ ಫೋಟೋಗಳು ವೈರಲ್ ಆಗಿದೆ. ಏನಿದು ನಿಧನ ಸುದ್ದಿ ಹಾಗೂ ಲೈಫ್ ಆಫ್ ಪ್ರೂಫ್ ಫೋಟೋ?

ಕೊರಿಯಾ (ಅ.20) ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕುರಿತು ಹಲವು ಬಾರಿ ಸುಳ್ಳು ಸುದ್ದಿಗಳು ಹಬ್ಬಿದೆ. ಕಳೆದ ಕೆಲ ದಿನಗಳಿಂದ ಕಿಮ್ ಜಾಂಗ್ ಉನ್ ಸಾರ್ವಜನಿಕವಾಗಿ, ಉತ್ತರ ಕೊರಿಯಾದ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಇದರ ನಡುವೆ ಸೆರೆಬ್ರಲ್ ಹ್ಯಾಮ್ರೇಜ್‌ನಿಂದ ಕುಸಿದು ಬಿದ್ದ ಕಿಮ್ ಜಾಂಗ್ ಉನ್ ತಕ್ಷಣವೇ ಆಸ್ಪತ್ರೆ ದಾಖಲಿಸುವ ಪ್ರಯತ್ನ ನಡೆದಿದೆ. ಆದರೆ ಬುದುಕಿಳಿಯಲಿಲ್ಲ ಅನ್ನೋ ಸುದ್ದಿ ಎಲ್ಲೆಡೆ ಹರಡಿದೆ. ಸೋಶಿಯಲ್ ಮೀಡಿಯಾಗಳಲ್ಲಿ ರಿಪ್ ಕಿಮ್ ಜಾಂಗ್ ಎಂಬ ಸಂದೇಶಗಳು ಹರಿದಾಡಿದೆ. ಕಳೆದೆರಡು ದಿನಗಳಿಂದ ಈ ಸುದ್ದಿ ಹರಿದಾಡುತ್ತಿದ್ದಂತೆ ಇದೀಗ ಉತ್ತರ ಕೊರಿಯಾ ಕಿಮ್ ಜಾಂಗ್ ಉನ್ ಲೈಫ್ ಆಫ್ ಪ್ರೂಫ್ ಫೋಟೋಗಳನ್ನು ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದೆ.

ಉತ್ತರ ಕೊರಿಯಾದ ಅಧಿಕೃತ ಸೆಂಟ್ರಲ್ ನ್ಯೂಸ್ ಎಜೆನ್ಸಿ ಕಿಮ್ ಜಾಂಗ್ ಉನ್ ಫೋಟೋಗಳನ್ನು ಬಿಡುಗಡೆ ಮಾಡಿದೆ. ಸೋಮವಾರ (ಅ.19) ಉತ್ತರ ಕೊರಿಯಾದಲ್ಲಿ ಆಯೋಜಿಸಿದ್ದ ಬೃಹತ್ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗೆ ಬೇಟಿ ನೀಡಿರುವ ಫೋಟೋಗಳನ್ನು ನ್ಯೂಸ್ ಎಜೆನ್ಸಿ ಬಿಡುಗಡೆ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಸಾವಿನ ಸುದ್ದಿ ತೀವ್ರವಾಗಿ ಹರಡುತ್ತಿದ್ದಂತೆ ಕಿಮ್ ಜಾಂಗ್ ಉನ್ ಫೋಟೋಗಳು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಉತ್ತರ ಕೊರಿಯಾ ಕಿಮ್ ಜಾಂಗ್ ಉನ್ ಸಾವಿನ ಕುರಿತು ಹರಡುತ್ತಿರುವ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದೆ.

ಡೇಟ್ ಪ್ರಶ್ನಿಸಿ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹಂಗಾಮ

ಕಿಮ್ ಜಾಂಗ್ ಉನ್ ಕುರಿತು ಸಾವಿನ ಸುದ್ದಿಗಳಿಗೆ ಸ್ಪಷ್ಟನೆ ನೀಡಿ ಫೋಟೋ ರಿಲೀಸ್ ಮಾಡಿದ ಬೆನ್ನಲ್ಲೇ ಮತ್ತಷ್ಟು ಗೊಂದಲ ಸೃಷ್ಟಿಯಾಗಿದೆ. ಈ ಫೋಟೋಗಳು ತೆಗೆದ ದಿನಾಂಕ ಹಾಗೂ ಸ್ಥಳದ ಕುರಿತು ಯಾವುದೇ ಮಾಹಿತಿ ಇಲ್ಲ. ಇದು ಹಳೇ ಫೋಟೋಗಳು ಎಂಬ ವಾದವು ಜೋರಾಗುತ್ತಿದೆ. ಕಿಮ್ ಜಾಂಗ್ ಉನ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿ, ಬದಲಾಗಿ ಫೋಟೋ , ವಿಡಿಯೋ ಬಹಿರಂಗ ಮಾಡುವುದು ಸ್ಪಷ್ಟನೆಯಾಗಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಸಾವಿನ ಸುದ್ದಿ ಹರಡಿದ್ದು ಹೇಗೆ?

ಚೀನಾದ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥ ಕ್ಸಿ ವಂಜುನ್ ತಮ್ಮ ಭಾಷಣದ ವೇಳೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮೃತಪಟ್ಟಿರುವುದಾಗಿ ಹೇಳಿದ್ದರು. ಹೀಗಾಗಿ ಚೀನಾ 9000 ಸೈನಿಕರನ್ನು ಕಳುಹಿಸಿದೆ. ಅಧಿಕಾರ ಹಸ್ತಾಂತರ ವೇಳೆ ಎದುರಾಗಬಹುದಾದ ಅಪಾಯ, ದಂಗೆ ತಪ್ಪಿಸಲು ಚೀನಾ ಸೈನಿಕರನ್ನು ಕಳುಹಿಸಿದೆ ಎಂದು ಹೇಳಿದ್ದರು. ಬೀಜಿಂಗ್‌ನಿಂದ ನುರಿತ ವೈದ್ಯರ ತಂಡ ಉತ್ತರ ಕೊರಿಯಾಗೆ ತೆರಳಿ ಕಿಮ್ ಜಾಂಗ್ ಚಿಕಿತ್ಸೆ ನೀಡಿದ್ದರು. ಆದರೆ ತೀವ್ರ ಬ್ರೈನ್ ಹ್ಯಾಮರೇಜ್‌ನಿಂದ ನಿಧನರಾಗಿದ್ದಾರೆ ಎಂದಿದ್ದರು.

ಉತ್ತರ ಕೊರಿಯಾದಿಂದ ಹೆಚ್ಚಿನ ಚಿಕಿತ್ಸೆಗೆ ಚೀನಾದ ಬೀಜಿಂಗ್‌ನ ಆಸ್ಪತ್ರೆಗೆ ಕರೆತರೆಲಾಗಿತ್ತು. ಆದರೆ ಕಿಮ್ ಜಾಂಗ್ ಉನ್ ಬದುಕುಳಿಯಲಿಲ್ಲ. ಉತ್ತರ ಕೊರಿಯಾ ಸರ್ಕಾರದ ಆದೇಶದಂತೆ ಕಿಮ್ ಜಾಂಗ್ ಕುರಿತ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ. ರಹಸ್ಯವಾಗಿ ಕಿಮ್ ಜಾಂಗ್ ಉನ್ ಮೃತದೇಹವನ್ನು ಉತ್ತರ ಕೊರಿಯಾಗೆ ಕಳುಹಿಸಲಾಗಿದೆ ಎಂದು ಕ್ಸಿ ವುಂಜುನ್ ಹೇಳಿದ್ದಾರೆ. ಈ ಹೇಳಿಕೆಯಿಂದ ಕಿಮ್ ಜಾಂಗ್ ಉನ್ ಸಾವಿನ ಸುದ್ದಿ ಎಲ್ಲೆಡೆ ಹರಿದಾಡಿತ್ತು.