Asianet Suvarna News Asianet Suvarna News

ಭೃಂಗದ  ಸಂಗೀತ ಕೇಳಿ... ಸಿಂಗಪುರ ಕನ್ನಡಿಗರ ಸಾಹಸ

* ಸಿಂಗಪುರದ ಹೊಂಗೆ ಹೂವಿನಲ್ಲಿ ಕೇಳಿ ಬಂದ. ಭೃಂಗದ  ಸಂಗೀತ ಕೇಳಿ 
* ಆನ್ ಲೈನ್ ನಲ್ಲಿ ಕನ್ನಡ ಸಂಭ್ರಮ
* ಆನ್ ಲೈನ್ ನಲ್ಲಿ ಸಂಗೀತ ಸುಧೆ
* ಹಿರಿಯ ಕವಿಗಳ ಸಾಹಿತ್ಯ ಪರಿಚಯ

Kannada Sangha Singapore 25 years Brungada benneri Music celebration mah
Author
Bengaluru, First Published Jul 1, 2021, 9:51 PM IST

ಸತೀಶ್ ಆರ್.ಎಲ್

ಸಿಂಗಾಪುರ(ಜೂ. 01)  ಭೃಂಗದ  ಸಂಗೀತ ಕೇಳಿ...  ಕನ್ನಡ ಸಂಘ (ಸಿಂಗಪುರ)ವು ತನ್ನ 25 ವಸಂತಗಳ ಸಂಭ್ರಮವನ್ನು ಸಿಂಗಪುರದ ತನ್ನ ಎಲ್ಲ ಸಿಂಗನ್ನಡಿಗರ ಜೊತೆಯಲ್ಲಿ ಆಚರಿಸಿತು.

ಜಗತ್ತು ಇಂದು ಎದುರಿಸುತ್ತಿರುವ ಕರೋನ ಮಹಾಮಾರಿಯ ನಿರ್ಬಂಧಗಳ ಕಾರಣದಿಂದ ಯೂಟ್ಯೂಬ್ ವೇದಿಕೆಯ ಶನಿವಾರ ಸಂಜೆ ನಮ್ಮ ಹೆಮ್ಮೆಯ ಸಿಂಗನ್ನಡಿಗರ ಮನೆಗಳ ಪರದೆಗಳಲ್ಲಿ ಮೂಡಿಸುವ ಪ್ರಯತ್ನ ಯಶಸ್ವಿಯಾಗಿ,  ವಾರಾಂತ್ಯವನ್ನು ಸುಂದರವಾಗಿಸಿತು. 

ಅನಿವಾಸಿ ಕನ್ನಡಿಗರ ಕನ್ನಡ ಸಂಭ್ರಮಕ್ಕೆ ಹಾಸ್ಯದ ವಿಡಿಯೋ

ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯೆ ರಮ್ಯಾ ಕಾರ್ಯಕ್ರಮಕ್ಕೆ  ಮುನ್ನುಡಿ ಹಾಕಿದರು. ಅನಂತರ ಸಂಘದ ಅಧ್ಯಕ್ಷ ವೆಂಕಟ್ ಅವರು ಕಾರ್ಯಕ್ರಮದ ಹಿನ್ನೆಲೆ, ಉದ್ದೇಶಗಳನ್ನು ಸವಿಸ್ತಾರವಾಗಿ ವಿವರಿಸಿದರು. ಹಳೆಯ ಬೇರು ಹಾಗು ಹೊಸ ಚಿಗುರಿನ ಸಂಧಾನವೇ ಹೊಸತನ, ಹೊಸ ಚಿಗುರು ಮುಡಿದಾಗಲೆ ಜೀವನದಲ್ಲಿ ಹೊಸತನ ಕಾಣುವುದು. ಹೊಸ ಲವಲವಿಕೆ ಮತ್ತು ಹೊಸ ಅನ್ವೇಷಣೆಯಲ್ಲಿ ಮನುಷ್ಯ ತನ್ನನ್ನು ತೊಡಗಿಸಿಕೊಂಡಾಗ ಜೀವನಕ್ಕೆ ಹೊಸ ಅರ್ಥ ಬರುವುದು ಎಂಬುದನ್ನು ಡಿವಿಜಿ ಅವರ ಕಗ್ಗಗಳನ್ನು ವಾಚನ ಮಾಡುವ ಮೂಲಕ ಹೇಳಿದರು. ನಂತರ ಸಂಘದ ಕಾರ್ಯದರ್ಶಿ ಶಿವಕುಮಾರ್ ಅವರು ಕಲಾವಿದರ ಪರಿಚಯ ಮಾಡಿಸಿ ಅದ್ಭುತ ಕಾರ್ಯಕ್ರಮದ ವೇದಿಕೆಗೆ ಅನುವು ಮಾಡಿಕೊಟ್ಟರು. 

ಇನ್ನು ನಮ್ಮ ಸಿಂಗನ್ನಡಿಗರನ್ನು ಬೆಂಗಳೂರಿನ ಸ್ಟುಡಿಯೋದಿಂದ ನೇರವಾಗಿ ರಂಜಿಸಿದವರು. ಗಾಯಕ ಅಜಯ್ ವಾರಿಯರ್,ಶಶಿಕಲಾ ಸುನಿಲ್ ನೇತೃತ್ವದಲ್ಲಿ ಸಂಗೀತ ಮೂಡಿಬಂತು. ಪ್ರತಿಭಾವಂತ ರಿದಮ್ ಪ್ಯಾಡ್/ಡ್ರಮ್ಸ್‌ನಲ್ಲಿ ಪ್ರಕಾಶ್ ಅಂಥೋಣಿ ಮತ್ತು ಕೀಬೋರ್ಡ್ ಕಲಾವಿದ ದೀಪಕ್ ಜಯಶೀಲನ್. ಈ ನಾಲ್ವರ ತಂಡದ ಸಂಯೋಗ ಮೆಚ್ಚುಗೆ ಪಡೆದುಕೊಂಡಿತು. ನಿರೂಪಕಿ ರಂಜನಿ ಕೀರ್ತಿಯವರು ನಡೆಸಿಕೊಟ್ಟರು.

ಅಜಯ್ ಅವರು ಗಣೇಶ ಸ್ತುತಿಯಿಂದ ಕಾರ್ಯಕ್ರಮದ ಶುಭಾರಂಭ ಮಾಡಿ, ನಾದಮಯವಾದ ರಾಜಣ್ಣವರ " ನಾದಮಯ", "ಕಲ್ಲು ಕಲ್ಲಲ್ಲಿ ನುಡಿಯುವ” ಕನ್ನಡ ನುಡಿಯ ಕಿಚ್ಚನ್ನು ಹೊಡೆದೆಬ್ಬಿಸಿ, ಜುಮ್ ಎನಿಸುವ  “ಪ್ರೇಮಲೋಕ”ಕ್ಕೆ ಕೊಂಡೈದು, “ಮಳೆ ಬಿಲ್ಲು-ಮೋಡ”ದ ಜೋಡಿಯ ಮಳೆಯನ್ನು ಸುರಿಸಿ, ಮತ್ತೆ “ಕನ್ನಡಮ್ಮನ” ಸಿರಿಯನ್ನು ಕೊಂಡಾಡಿ, “ಮನವ ಕಾಡುವ ರೂಪಸಿ ನ್ನು ಎಲ್ಲೆಲ್ಲೂ ಕಾಣಿಸಿ, “ತುಂತುರು ಅಲ್ಲಿ ನೀರ ಹಾಡು” ಎಂಬ ತಂಪಾದ ಹಾಡಿನೊಂದಿಗೆ ಮೊದಲ ಸುತ್ತನ್ನು ಮುಗಿಸಿದರು.

Kannada Sangha Singapore 25 years Brungada benneri Music celebration mah

 ಎರಡನೇ ಸುತ್ತಿನಲ್ಲಿ ನಮ್ಮ ಹೆಮ್ಮೆಯ ಕವಿ ಜಿ.ಸ್. ಶಿವರುದ್ರಪ್ಪನವರ ಕಾಣದ ಕಡಲಿಗೆ ಗೀತೆಯಿಂದ,  ಕಾಣದ ಕಡಲಿಗೆ ಬದುಕು ಕಟ್ಟಿಕೊಳ್ಳಲು ಬಂದ  ಹೊರನಾಡಿನಲ್ಲಿರುವ  ನಮೆಲ್ಲ ಕನ್ನಡಿಗರಿಗೂ ಮತ್ತೆ ಮರಳಿ ಕನ್ನಡಮ್ಮನ ಕಡಲಿಗೆ ಮರಳಿ ಹೋಗಬೇಕೆಂಬ ಬಯಕೆ ಮೂಡಿಸಿದರು. ಮಕ್ಕಳಿಗೆಂದು ಹಾಡಿದ "ಹಿಂದುಸ್ಥಾನವು ಎಂದು ಮರೆಯದ", ಹಾಗು ಜನಪದ ಶೈಲಿಯ ಗೀತೆಗಳು, ಶರೀಫಜ್ಜರ ಗೀತೆಗಳು ಕಾರ್ಯಕ್ರಮವನ್ನು ಹೆಚ್ಚು ವೈವಿಧ್ಯಮಯ ಹಾಗೂ ಸಂಗೀತಮಯಗೊಳಿಸಿದವೆಂದರೆ ಅತಿಶಯೋಕ್ತಿಯಲ್ಲ. ಕಾರ್ಯಕ್ರಮದ ಒಂದು ಭಾಗವನ್ನು ಇತ್ತೀಚಿಗೆ ನಮ್ಮನ್ನು ಅಗಲಿದ SPB ಹಾಗು ರಾಜನ್-ನಾಗೇಂದ್ರ ಅವರ ಸ್ಮರಣಾರ್ಥವಾಗಿ ಹಲವು ಮರೆಯದ ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸುವುದರ ಮೂಲಕ ಸಮರ್ಪಿಸಲಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ ನೀಡಿದ ಹಲವು ಹಾಡುಗಳ ಸಮ್ಮಿಲನದ ಗುಚ್ಚ ಪ್ರೇಕ್ಷಕರನ್ನು ತಮ್ಮ ಆಸನಗಳಿಂದ ಬಡಿದೆಬ್ಬಿಸಿ, ಗಾಯನಕ್ಕೆ ಹೆಜ್ಜೆ ಕೂಡಿಸಲು ಪ್ರೇರೇಪಿಸುವಂತೆ ಮಾಡಿತು.

ಅಂತೂ ಇದೊಂದು ಮರೆಯಲಾಗದ ಮುಂದುವರೆದ ಯುಗಾದಿಯ ಸಂಭ್ರಮವಾಗಿತ್ತು. ಸಿಂಗನ್ನಡಿಗರ ಉತ್ತೇಜಕ ಪ್ರತಿಕ್ರಿಯೆ ಇದಕ್ಕೆ ಸಾಕ್ಷಿ. ಮನರಂಜನೆ ಮತ್ತು ಅದನ್ನು ಸವಿಯುವ ಮನಸ್ಸು ಕೇವಲ ಸಭಾಂಗಣದಲ್ಲಿ ಅಲ್ಲದೆ, ಮನೆ ಮನೆಗಳ ಅಂಗಳ, ಪರದೆಗಳಲ್ಲಿಯೂ ಸಾಧ್ಯ ಎಂದು ನಮ್ಮ ಎಲ್ಲ ಸಿಂಗನ್ನಡಿಗರು ಸಾಬೀತು ಪಡಿಸಿದರು. ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲರೂ ಸುರಕ್ಷಿತವಾಗಿರಲಿ, ಆರೋಗ್ಯವನ್ನು ಕಾಪಾಡಿಕೊಳ್ಳಲಿ. ಕಾರ್ಯಕ್ರಮಗಳು ಮತ್ತೆ ಯಥಾರೀತಿ ನಡೆದು ಕಲಾವಿದರೆಲ್ಲಾ ಮತ್ತೆ ಸೇರಿ ಕಾರ್ಯಕ್ರಮಗಳನ್ನು ನಡೆಸುವಂತಾಗಲೆಂದು ಹಾರೈಸುತ್ತಾ, ಕಾರ್ಯಕ್ರಮದ ಆರಂಭದಲ್ಲಿ ಉಂಟಾದ ತಾಂತ್ರಿಕ ಅಡಚಣೆಗೆ ಕ್ಷಮೆಯನ್ನು ಕೋರಿ, ಕಾರ್ಯಕ್ರಮದ ವಂದನಾರ್ಪಣೆಯಲ್ಲಿ ಇಂತಹ ಅದ್ಭುತ ಕಾರ್ಯಕ್ರಮವನ್ನು ಬೆಂಗಳೂರಿನಿಂದಲೇ ನಡೆಸಿಕೊಟ್ಟಂತಹ ಎಲ್ಲಾ ಕಲಾವಿದರಿಗೆ, ತಾಂತ್ರಿಕ ಸಿಬ್ಬಂದಿಗೆ ಹಾಗು ಪ್ರೋತ್ಸಾಹಿಸಿ, ಬೆಂಬಲಿಸಿದ ಎಲ್ಲಾ ಸಿಂಗನ್ನಡಿಗರಿಗೆ ವಂದನೆಗಳನ್ನು ಸಲ್ಲಿಸಲಾಯಿತು.

Follow Us:
Download App:
  • android
  • ios