Russia Ukraine War ಸ್ವೀಡನ್, ಫಿನ್ಲೆಂಡ್‌ಗೂ ರಷ್ಯಾ ದಾಳಿ ಎಚ್ಚರಿಕೆ
-ಉಕ್ರೇನ್ ಮೇಲೆ ದಾಳಿ ಬೆನ್ನಲ್ಲೇ 2 ದೇಶಗಳ ನ್ಯಾಟೋ ಸೇರ್ಪಡೆ ಪ್ರಸ್ತಾಪ
- ನ್ಯಾಟೋ ಸೇರ್ಪಡೆ ರಾಜಕೀಯ, ಮಿಲಿಟರಿ ಪರಿಣಾಮ ಹೊಂದಿರಲಿದೆ
- ರಷ್ಯಾ ದಾಳಿಗೆ ಉಕ್ರೇನಿನ 49 ಮಕ್ಕಳು ಸೇರಿ 579 ನಾಗರಿಕರು ಬಲಿ
ಮಾಸ್ಕೋ (ಮಾ.13): ರಷ್ಯಾವು (Russia) ಉಕ್ರೇನ್ (Ukraine) ಮೇಲೆ ಭೀಕರ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ನೆರೆಯ ಫಿನ್ಲೆಂಡ್ ( Finland) ಮತ್ತು ಸ್ವೀಡನ್ (Sweden) ದೇಶಗಳು ನ್ಯಾಟೋ (ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್) ಸೇರ್ಪಡೆಗೆ ಇಚ್ಛೆ ವ್ಯಕ್ತಪಡಿಸಿವೆ. ಇದಕ್ಕೆ ತೀವ್ರ ಆತಂಕ ವ್ಯಕ್ತಪಡಿಸಿರುವ ರಷ್ಯಾ ವಿದೇಶಾಂಗ ಸಚಿವಾಲಯ (Russian Foreign Ministry), ‘ಒಂದು ವೇಳೆ ಸ್ವೀಡನ್ ಮತ್ತು ಫಿನ್‌ಲ್ಯಾಂಡ್ ನ್ಯಾಟೋ (NATO) ಸೇರ್ಪಡೆಯಾದರೆ ರಾಜಕೀಯ ಮತ್ತು ಮಿಲಿಟರಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂಬ ಎಚ್ಚರಿಕೆ ನೀಡಿದೆ. ಈ ಮೂಲಕ ಉಕ್ರೇನ್ ಬೆನ್ನಲ್ಲೇ ಸ್ವೀಡನ್ ಮತ್ತು ಫಿನ್ಲೆಂಡ್ ಮೇಲೂ ಯುದ್ಧ ಸಾರುವ ಎಚ್ಚರಿಕೆ ರವಾನಿಸಿದೆ.
ಆಸ್ಪ್ರೇಲಿಯಾ, ಐರ್ಲೆಂಡ್, ಸಿಪ್ರಸ್ ಮತ್ತು ಮಾಲ್ಟಾ, ಫಿನ್ಲೆಂಡ್ ಮತ್ತು ಸ್ವೀಡನ್ ನ್ಯಾಟೋ ಸೇರ್ಪಡೆಯಾಗದೇ ಉಳಿದಿರುವ ಯುರೋಪಿಯನ್ ಒಕ್ಕೂಟದ ರಾಜ್ಯಗಳು. 2ನೇ ಮಹಾಯುದ್ಧ ಅಂತ್ಯದಿಂದಲೂ ಸ್ವೀಡನ್ ಮತ್ತು ಫಿನ್ಲೆಂಡ್ ಎರಡೂ ಮಿಲಿಟರಿ ಮತ್ತು ರಾಜಕೀಯವಾಗಿ ಅಲಿಪ್ತ ನೀತಿ ಅನುಸರಿಸುತ್ತಿವೆ. 1995ರ ಬಳಿಕ ರಷ್ಯಾ ಆಕ್ರಮಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನ್ಯಾಟೋ ಸೇರ್ಪಡೆಗೆ ಒಲವು ತೋರಿಸುತ್ತಿವೆ. ಅದರಲ್ಲೂ ಇತ್ತೀಚೆಗೆ ಉಕ್ರೇನ್-ರಷ್ಯಾ ಬಿಕ್ಕಟ್ಟಿನ ಬಳಿಕ ಸೃಷ್ಟಿಯಾದ ಅಸ್ಥಿರತೆ ಪರಿಣಾಮ ಉಭಯ ದೇಶಗಳ ಬಹುತೇಕ ಪ್ರಜೆಗಳು ನ್ಯಾಟೋ ಪರ ಮತ ಚಲಾಯಿಸಿದ್ದಾರೆ. ಅಲ್ಲದೆ ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಕ್ರಮವನ್ನು ಉಭಯ ದೇಶಗಳು ಖಂಡಿಸಿ, ಉಕ್ರೇನಿಗೆ ಮಿಲಿಟರಿ ಮತ್ತು ಆರ್ಥಿಕ ನೆರವು ಘೋಷಿಸಿವೆ.
ರಷ್ಯಾ ದಾಳಿಗೆ ಉಕ್ರೇನಿನ 49 ಮಕ್ಕಳು ಸೇರಿ 579 ನಾಗರಿಕರು ಬಲಿ
ಜಿನೇವಾ: ಉಕ್ರೇನಿನಲ್ಲಿ ಯುದ್ಧ ಆರಂಭವಾದಾಗಿನಿಂದ ಸುಮಾರು 579 ನಾಗರಿಕರು ರಷ್ಯಾ ಪಡೆಗಳ ದಾಳಿಯಲ್ಲಿ ಬಲಿಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಶನಿವಾರ ತಿಳಿಸಿದೆ.ಯುದ್ಧದಲ್ಲಿ 49 ಮಕ್ಕಳು ಸೇರಿದಂತೆ 579 ನಾಗರಿಕರು ಮೃತಪಟ್ಟಿದ್ದಾರೆ. 54 ಮಕ್ಕಳು ಸೇರಿದಂತೆ 1000ಕ್ಕೂ ಹೆಚ್ಚು ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಷ್ಯಾದ ಬಾಂಬ್, ಶೆಲ್ ಹಾಗೂ ಕ್ಷಿಪಣಿ ದಾಳಿಯೇ ಬಹುತೇಕ ಜನರು ಬಲಿಯಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಮಾಹಿತಿ ಸ್ವೀಕೃತಿಯಲ್ಲಿನ ವಿಳಂಬ ಹಾಗೂ ಇನ್ನೂ ಅನೇಕ ವರದಿಗಳನ್ನು ದೃಢೀಕರಿಸುವ ಅಗತ್ಯವಿರುವುದರಿಂದ ನಿಜವಾದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು ಎಂದು ವಿಶ್ವಸಂಸ್ಥೆ ಹೇಳಿದೆ.
Russia Ukraine War ಉಕ್ರೇನ್‌ನಲ್ಲಿ ರಷ್ಯಾ ಭೀಕರ ವಾಯುದಾಳಿ
ಮರಿಯುಪೋಲ್‌ನಲ್ಲಿ 12 ದಿನದಲ್ಲಿ 1582 ಮಂದಿ ಬಲಿ
ಕೀವ್ (ಉಕ್ರೇನ್): ದಕ್ಷಿಣ ಉಕ್ರೇನ್‌ನ ಪ್ರಮುಖ ಬಂದರು ನಗರಿ ಮರಿಯುಪೋಲ್ ಮೇಲೆ ರಷ್ಯಾ ಬಿಟ್ಟೂಬಿಡದೇ ದಾಳಿ ನಡೆಸುತ್ತಿರುವ ಕಾರಣ ಇಡೀ ನಗರ ಅವಶೇಷಗಳಿಂದ ತುಂಬಿಹೋಗಿದೆ. ಕಳೆದ 12 ದಿನಗಳಿಂದ ಇಲ್ಲಿ ರಷ್ಯಾ ವಾಯುದಾಳಿ ನಡೆಸುತ್ತಿದ್ದು 1582 ಜನರು ಸಾವನ್ನಪ್ಪಿದ್ದಾರೆ. ಶವಗಳನ್ನು ಹೂಳಲು ಜಾಗ ಸಿಗದ ಕಾರಣ ಪ್ರತ್ಯೇಕ ಸ್ಮಶಾನ ನಿರ್ಮಿಸಲಾಗಿದೆ. ಅಲ್ಲಿ ಸಾಮೂಹಿಕವಾಗಿ ಶವಗಳನ್ನು ಹೂಳಲಾಗುತ್ತಿದೆ. ಆದರೆ ಶನಿವಾರ ಶವ ಸಂಸ್ಕಾರ ಕೂಡ ನಡೆಸಲು ಬಿಡದೇ ರಷ್ಯಾ ಅಲ್ಲಿ ದಾಳಿ ನಡೆಸುತ್ತಿದೆ.
Russia Ukraine War:ಮರಿಯೋಪೋಲ್ ಮೇಯರ್ ಕಿಡ್ನ್ಯಾಪ್ ಮಾಡಿದ ರಷ್ಯಾ
ರಷ್ಯಾ ತಾಯಂದಿರೇ, ನಿಮ್ಮ ಮಕ್ಕಳ ಯುದ್ಧಕ್ಕೆ ಕಳಿಸಬೇಡಿ: ಜೆಲೆನ್‌ಸ್ಕಿ
ಕೀವ್: ‘ನಿಮ್ಮ ಮಕ್ಕಳನ್ನು ಉಕ್ರೇನ್ ವಿರುದ್ಧದ ಯುದ್ಧಕ್ಕೆ ಕಳಿಸಬೇಡಿ’ ಎಂದು ಉಕ್ರೇನಿ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ಅವರು ರಷ್ಯಾ ಅಮ್ಮದಿರಿಗೆ ಮನವಿ ಮಾಡಿದ್ದಾರೆ. ವಿಡಿಯೋ ಸಂದೇಶ ನೀಡಿರುವ ಅವರು, ‘ನಿಮ್ಮ ಮಗ ಎಲ್ಲಿದ್ದಾನೋ ನೋಡಿ. ಒಂದು ವೇಳೆ ಯುದ್ಧಕ್ಕೆ ಹೋಗುವ ಸಂದೇಹ ಬಂತು ಎಂದರೆ ಆತನನ್ನು ತಡೆಯಿರಿ’ ಎಂದು ಹೇಳಿದ್ದಾರೆ. ಈ ಮೂಲಕ ಉಕ್ರೇನಿ ಪ್ರತಿದಾಳಿಗೆ ರಷ್ಯನ್ನರು ಬಲಿಯಾಗುವುದನ್ನು ತಪ್ಪಿಸಿ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಆದರೆ ಉಕ್ರೇನ್ ಯಾವತ್ತೂ ಯುದ್ಧ ಬಯಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.