ಟ್ರಂಪ್ ಭದ್ರಕೋಟೆಯಲ್ಲೂ ಬೈಡೆನ್ ಲೀಡ್, ಅಮೆರಿಕ ಅಧ್ಯಕ್ಷರಾಗೋದು ಬಹುತೇಕ ಖಚಿತ!
ಟ್ರಂಪ್ ಭದ್ರಕೋಟೆಯಲ್ಲೂ ಬೈಡೆನ್ ಲೀಡ್| ಅಂತಿಮ ಹಂತದಲ್ಲಿ ಐದು ರಾಜ್ಯಗಳ ಮತ ಎಣಿಕೆ| ಇಂದು ಫಲಿತಾಂಶ ಹೊರಬೀಳುವ ನಿರೀಕ್ಷೆ| ನಿರ್ಣಾಯಕ ರಾಜ್ಯಗಳಲ್ಲಿ ಡೆಮಾಕ್ರೆಟಿಕ್ ಅಭ್ಯರ್ಥಿ ಮುನ್ನಡೆ| ಅಮೆರಿಕ ಅಧ್ಯಕ್ಷ ಹುದ್ದೆಗೆ ಮತ್ತಷ್ಟುಸನಿಹ
ವಾಷಿಂಗ್ಟನ್: ಅಮೆರಿಕ ಇತಿಹಾಸದಲ್ಲೇ ಅತ್ಯಂತ ತುರುಸಿನ ಸ್ಪರ್ಧೆ ಕಂಡ ಚುನಾವಣೆಗಳ ಪೈಕಿ ಒಂದಾದ 2020ರ ಅಧ್ಯಕ್ಷೀಯ ಹಣಾಹಣಿಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡೆನ್ ವಿಜಯಿಯಾಗುವ ಅತ್ಯಂತ ಸ್ಪಷ್ಟಸುಳಿವುಗಳು ಕಂಡುಬಂದಿದೆ. ಇನ್ನೂ ಮತ ಎಣಿಕೆ ಮುಂದುವರೆದಿರುವ 5 ರಾಜ್ಯಗಳ ಪೈಕಿ ಜಾರ್ಜಿಯಾ ಮತ್ತು ಪೆನ್ಸಿಲ್ವೇನಿಯಾದಲ್ಲಿ ಜೋ ಬೈಡೆನ್ ಅವರು ಶುಕ್ರವಾರ ಮುನ್ನಡೆ ಸಾಧಿಸಿದ್ದಾರೆ. ಗುರುವಾರ ತಡರಾತ್ರಿಯವರೆಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಭಾರೀ ಮುನ್ನಡೆ ಸಾಧಿಸಿದ್ದ ಈ ಎರಡೂ ರಾಜ್ಯಗಳಲ್ಲಿ ಇದೀಗ ಬೈಡೆನ್ ಮುನ್ನಡೆ ಸಾಧಿಸಿರುವುದು ಅವರ ವಿಜಯದ ಹಾದಿಯಲ್ಲಿ ಅತ್ಯಂತ ದೊಡ್ಡ ತಿರುವು ಎಂದೇ ಪರಿಗಣಿಸಲಾಗಿದೆ.
ಒಂದು ವೇಳೆ ಇದೇ ಮುನ್ನಡೆಯನ್ನು ಬೈಡೆನ್ ಅಂತಿಮ ಹಂತೆದವರೆಗೂ ಕಾದುಕೊಂಡರೆ ಅಮೆರಿಕದ 46ನೇ ಅಧ್ಯಕ್ಷರಾಗಿ ಅವರೇ ಆಯ್ಕೆಯಾಗುವುದು ಖಚಿತ. ಆದರೂ ಅಂಚೆಮತಗಳ ಹಣೆಬರಹವನ್ನು ಯಾರೂ ಸ್ಪಷ್ಟವಾಗಿ ಊಹಿಸಲಾಗದ ಕಾರಣ ಶನಿವಾರದ ವೇಳೆಗೆ ನೂತನ ಅಧ್ಯಕ್ಷರ ಕುರಿತು ಸ್ಪಷ್ಟಚಿತ್ರಣ ಹೊರಬೀಳುವ ಸಾಧ್ಯತೆ.
"
ಭಾರತೀಯ ಕಾಲಮಾಲ ಶುಕ್ರವಾರ ಮಧ್ಯಾಹ್ನದವರೆಗೂ ಪೆನ್ಸಿಲ್ವೇನಿಯಾ, ಜಾರ್ಜಿಯಾ, ನಾತ್‌ರ್ ಕ್ಯಾರೋಲಿನಾ, ಅಲಾಸ್ಕಾದಲ್ಲಿ ಟ್ರಂಪ್ ಮುನ್ನಡೆ ಸಾಧಿಸಿದ್ದರೆ, ಬೈಡೆನ್ ನೆವಾಡಾದಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದರು. ಅಧ್ಯಕ್ಷರಾಗಿ ಆಯ್ಕೆಯಾಗಲು ಬೇಕಾದ 270 ಮತ ಪಡೆಯಲು ಬೈಡೆನ್ ಕೇವಲ ನೆವಾಡಾ (6 ಸ್ಥಾನ) ರಾಜ್ಯ ಗೆದ್ದಿದ್ದರೆ ಸಾಕಿತ್ತು. ಕಾರಣ ಅವರು ಈಗಾಗಲೇ 264 ಮತಗಳನ್ನು ಪಡೆದುಕೊಂಡಿದ್ದಾರೆ. ಆದರೆ ಮತ್ತೊಂದೆಡೆ ಈವರೆಗೆ ಕೇವಲ 214 ಸ್ಥಾನ ಗೆದ್ದಿರುವ ಟ್ರಂಪ್ 270ರ ಗಡಿ ಮುಟ್ಟಲು ಎಲ್ಲಾ 5 ರಾಜ್ಯ ಗೆಲ್ಲಬೇಕಿತ್ತು.
ಆದರೆ ಶುಕ್ರವಾರದ ಮತ ಎಣಿಕ ವೇಳೆ ಪೆನ್ಸಿಲ್ವೇನಿಯಾ ಮತ್ತು ಜಾರ್ಜಿಯಾದಲ್ಲಿ ಕ್ರಮವಾಗಿ ಟ್ರಂಪ್ ಹೊಂದಿದ್ದ 70000 ಮತ್ತು 50000 ಮತಗಳ ಮುನ್ನಡೆಯನ್ನು ಹಿಂದಕ್ಕೆ ಹಾಕಿದ ಬೈಡೆನ್ ಸ್ವತಃ ತಾವೇ ಅಲ್ಪ ಮುನ್ನಡೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಮುನ್ನಡೆ ಇದೇ ಸ್ವರೂಪದಲ್ಲಿ ಮುಂದುವರೆದರೆ ಅವರು ಅಮೆರಿಕದ ನೂತನ ಅಧ್ಯಕ್ಷರಾಗಿ ಹೊರಹೊಮ್ಮುವುದು ಖಚಿತವಾಗಲಿದೆ.
ಮ್ಯಾಜಿಕ್ ನಂಬರ್: 270
ಜೋ ಬೈಡೆನ್
ಗೆಲುವು: 264
ಮುನ್ನಡೆ: 42 (ಪೆನ್ಸಿಲ್ವೇನಿಯಾ 20, ಜಾರ್ಜಿಯಾ 16, ನೆವಾಡಾ 6)
ಡೊನಾಲ್ಡ್ ಟ್ರಂಪ್
ಗೆಲುವು: 214
ಮುನ್ನಡೆ: 18 (ಸೌತ್ ಕ್ಯಾರೋಲಿನಾ15 ಸ್ಥಾನ, ಅಲಾಸ್ಕಾ 3)