ವಾಷಿಂಗ್ಟನ್‌(ನ. 16): ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌, ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಹಾಗೂ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ದೀಪಾವಳಿ ಶುಭಾಶಯ ತಿಳಿಸಿದ್ದಾರೆ.

‘ಬೆಳಿಕಿನ ಹಬ್ಬ ಆಚರಿಸುತ್ತಿರುವ ಲಕ್ಷಾಂತರ ಹಿಂದೂ, ಜೈನ, ಸಿಖ್‌ ಹಾಗೂ ಬೌದ್ಧರಿಗೆ ದೀಪಾವಳಿ ಶುಭಾಶಯಗಳು. ನಿಮ್ಮ ಹೊಸ ವರ್ಷ ಅಶಾವಾದ, ಸಂತೋಷ ಹಾಗೂ ಸಮೃದ್ಧಿಯಿಂದ ತುಂಬಿ ತುಳುಕಲಿ. ಸಾಲ್‌ ಮುಬಾರಕ್‌’ ಎಂದು ಟ್ವೀಟ್‌ ಮಾಡಿದ್ದಾರೆ.

ನಿಯೋಜಿತ ಉಪಾಧ್ಯಕ್ಷೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಟ್ವೀಟ್‌ ಮಾಡಿ, ‘ದೀಪಾವಳಿ ಹಾಗೂ ಸಾಲ್‌ ಮುಬಾರಕ್‌. ಸುರಕ್ಷಿತ, ಆರೋಗ್ಯವಂತ ಹಾಗೂ ಹರ್ಷದ ದೀಪಾವಳಿ ಆಚರಣೆ ನಿಮ್ಮದಾಗಲಿ’ ಎಂದು ಟ್ವೀಟ್‌ ಮಾಡಿದ್ದಾರೆ.

ಈ ನಡುವೆ, ಬೈಡೆನ್‌ ಹಾಗೂ ಹ್ಯಾರಿಸ್‌ ಜಂಟಿ ಹೇಳಿಕೆ ಹೊರಡಿಸಿ, ‘ಕೊರೋನಾ ಪಿಡುಗು ತಾಂಡವ ಆಡುತ್ತಿರುವ ಈ ಸಂದರ್ಭದಲ್ಲಿ ದೀಪಾವಳಿಯು ಅಂಧಕಾರವನ್ನು ತೊಡೆದು ಹಾಕುವ ಸಂಕೇತ. ಮುಂದಿನ ವರ್ಷ ದೀಪಾವಳಿಯನ್ನು ಎಲ್ಲರೂ ಸೇರಿ ಶ್ವೇತಭವನದಲ್ಲಿ ಆಚರಿಸೋಣ’ ಎಂದಿದ್ದಾರೆ.

ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಶ್ವೇತಭವನದಲ್ಲಿ ತಮ್ಮ ಪತ್ನಿ ಮೆಲಾನಿಯಾ ಟ್ರಂಪ್‌ ಜತೆಗೂಡಿ ದೀಪ ಹಚ್ಚಿ ದೀಪಾವಳಿ ಆಚರಿಸಿದರು. ಈ ಫೋಟೋವನ್ನು ಅವರು ಟ್ವೀಟ್‌ ಮಾಡಿ, ‘ಅಂಧಕಾರ ತೊಡೆಯುವ ಹಬ್ಬದ ಶುಭಾಶಯ’ ಎಂಬ ಸಂದೇಶ ನೀಡಿದ್ದಾರೆ.

ಸಾಲ್‌ ಮುಬಾರಕ್‌ ಬಗ್ಗೆ ಚರ್ಚೆ:

‘ಸಾಲ್‌ ಮುಬಾರಕ್‌ ಎಂಬುದು ದೀಪಾವಳಿ ಮರುದಿನ ಗುಜರಾತಿಗಳು ಆಚರಿಸುವ ಹೊಸ ವರ್ಷಕ್ಕೆ ಹೇಳುವ ಶುಭಾಶಯ. ದೀಪಾವಳಿಗೆ ಹೊಸ ವರ್ಷ ಎಂದು ಕರೆದು ಬೈಡೆನ್‌ ಅವರು ಸಾಲ್‌ ಮುಬಾರಕ್‌ ಎಂದು ಹೇಳಬಾರದಿತ್ತು’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆದಿದೆ.

ಪಿಡುಗಿಗೆ ನಿಮ್ಮವರನ್ನು ಕಳೆದುಕೊಂಡ ದುಃಖದಲ್ಲಿದ್ದೀರಿ. ಮನೆಯಲ್ಲಿ ಸುಮ್ಮನೆ ಕೂರದೆ ಈ ಪಿಡುಗಿನ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವವರ ಬಗ್ಗೆ ನಮ್ಮ ಸಹಾನುಭೂತಿ ಇದೆ. ಇನ್ನು ಕೊರೋನಾ ಕಾರಣ ಸಮ್ಮಿಲನಗೊಳ್ಳದೆ ಮನೆಯಲ್ಲೇ ವಿಡಿಯೋ ಕಾಲ್‌ ಮೂಲಕ ಅನೇಕರು ದೀಪಾವಳಿ ಆಚರಿಸುತ್ತಿದ್ದಾರೆ. ಆದರೆ ಮುಂದಿನ ವರ್ಷ ಹೀಗೆ ಆಗದಂತೆ ಪ್ರಾರ್ಥಿಸುತ್ತೇವೆ.