Asianet Suvarna News Asianet Suvarna News

ಜಪಾನ್ ಮಿಲಿಟರಿಯ ಮೇಲಿದ್ದ ಸಾಂವಿಧಾನಿಕ ನಿರ್ಬಂಧ ತೆರವು: ಶಿಂಜೋ ಅಬೆಗೆ ಸೂಕ್ತ ಶ್ರದ್ಧಾಂಜಲಿ!

ಜಪಾನಿನ ಸಂವಿಧಾನದಲ್ಲಿ ಜಪಾನ್ ತನ್ನ ಸೇನಾಪಡೆಗಳನ್ನು ಅಭಿವೃದ್ಧಿ ಪಡಿಸಲು ವಿರೋಧವಾಗುವಂತಹ ಅಡೆತಡೆಗಳಿವೆ. ಇದರ ಪರಿಣಾಮವಾಗಿ ಚೀನಾ ಜಪಾನ್ ಮೇಲೆ ದಬ್ಬಾಳಿಕೆ ನಡೆಸಲು ಪ್ರಯತ್ನಿಸುತ್ತಿದೆ. ಆದರೆ ಇಂತಹ ಅಡೆತಡೆಗಳನ್ನು ನಿವಾರಿಸುವುದು ಚೀನಾಗೆ ಒಂದು ಪ್ರಬಲ ಸಂದೇಶ ರವಾನಿಸುತ್ತದೆ

japan remove constitutional restrictions on military warns Chinese intimidation of Taiwan security threats ckm
Author
Bengaluru, First Published Jul 25, 2022, 6:39 PM IST

ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಜುಲೈ 8ರಂದು ನಡೆದ ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆ ಒಂದು ಅನಿರೀಕ್ಷಿತ ದುರ್ಘಟನೆ. ಅವರ ಅಕಾಲಿಕ ನಿಧನದ ಬಳಿಕ ಜಪಾನ್‌ನಲ್ಲಿ ಅವರು ಬಿಟ್ಟುಹೋದ ಪರಂಪರೆ ಮತ್ತು ಅದನ್ನು ಜಪಾನ್ ಹೇಗೆ ಮುಂದುವರಿಸುತ್ತದೆ ಎಂಬ ಕುರಿತು ಸಾಕಷ್ಟು ಮಾತುಕತೆಗಳು ನಡೆಯುತ್ತಾ ಬಂದಿದ್ದವು. ಅದರಲ್ಲೂ ವಿಶೇಷವಾಗಿ ಟೋಕಿಯೊ ಮತ್ತು ಬೀಜಿಂಗ್ ಸಂಬಂಧವೂ ಈಗ ಕಠಿಣವಾಗಿರುವುದರಿಂದ, ಬದಲಾಗುತ್ತಿರುವ ಮಿಲಿಟರಿ ಲೆಕ್ಕಾಚಾರಗಳೂ ಈಗ ಹೆಚ್ಚಿನ ಪ್ರಾಮುಖ್ಯತೆ ಪಡೆದಿವೆ. ಶಿಂಜೋ ಅಬೆಯವರ ಆಡಳಿತ ಅವಧಿಯಲ್ಲಿ ಚೀನಾ ತೈವಾನ್ ವಿಚಾರದಲ್ಲಿ ಉಗ್ರ ನಿಲುವು ತಳೆದಿತ್ತು. ಅದರೊಡನೆ ಈಸ್ಟ್ ಚೈನಾ ಸೀ (ಇಸಿಎಸ್) ಪ್ರಾಂತ್ಯಗಳ ಮೇಲೆ ತನ್ನ ಹಕ್ಕು ಸ್ಥಾಪಿಸಲು ಪ್ರಯತ್ನಿಸುತ್ತಿತ್ತು. ಜಪಾನ್ ತೈವಾನ್ ಜೊತೆ ಹೊಂದಿರುವ ಬಾಂಧವ್ಯ ಮತ್ತು ಇಸಿಎಸ್‌ನಲ್ಲಿರುವ ಸೆಂಕಾಕು ದ್ವೀಪಗಳಲ್ಲಿ ಜಪಾನಿನ ಉಪಸ್ಥಿತಿಯ ಕಾರಣದಿಂದ ಟೋಕಿಯೋ ತನ್ನ ಸೇನಾಪಡೆಗಳನ್ನು ಅಭಿವೃದ್ಧಿಗೊಳಿಸುವ, ಸಶಕ್ತಗೊಳಿಸುವ ಕುರಿತು ಆಲೋಚಿಸುತ್ತಿತ್ತು. ಜಪಾನಿನ ಸಂವಿಧಾನದಲ್ಲಿ ಸೇನಾ ಬಲವರ್ಧನೆಗೆ ಇದ್ದ ವಿರೋಧವನ್ನು ತೆರವುಗೊಳಿಸಬೇಕು ಮತ್ತು ಮಹಾಯುದ್ಧದ ನಂತರದ ತಪ್ಪುಗಳ ಕುರಿತು ಜಪಾನ್ ಆಲೋಚಿಸುವುದನ್ನು ಬಿಡಬೇಕು ಎಂದು ಶಿಂಜೋ ಅಬೆ ಅಭಿಪ್ರಾಯ ಪಟ್ಟಿದ್ದರು. ಅದರಿಂದಾಗಿ ಅವರು ಚೀನಾದಲ್ಲಿ ಅತ್ಯಂತ ವಿವಾದಾತ್ಮಕ ವ್ಯಕ್ತಿಯಾಗಿದ್ದಾರೆ.

ಇನ್ನು ಜಾಗತಿಕ ಮಟ್ಟದಲ್ಲಿ ನೋಡಿದರೂ, ಅಬೆಯವರ ಜಾಗತಿಕ ರಾಜಕಾರಣದ ಕ್ರಮಗಳು ಜಪಾನನ್ನು ಜಾಗತಿಕವಾಗಿ ಚೀನಾದ ಅತಿಕ್ರಮಣವನ್ನು ಹಿಂದೊತ್ತುವ ವಿಚಾರದಲ್ಲಿ ಮುಂಚೂಣಿಯಲ್ಲಿಟ್ಟಿದೆ.

ತೈವಾನಿನ ರಕ್ಷಣೆಯ ಭರವಸೆ ನೀಡುವತ್ತ ಜಪಾನ್ ಹೆಜ್ಜೆ
ತೈವಾನ್ ಯಾವತ್ತೂ ಚೀನಾದ ಪಾಲಿಗೆ ಭಾವನಾತ್ಮಕ ವಿಚಾರವಾಗಿದೆ. ಐತಿಹಾಸಿಕ ಘಟನೆಗಳನ್ನು ಅವಲೋಕಿಸಿದರೆ, ಚೀನಾದಲ್ಲಿ ನಡೆದ ಅಂತರ್ಯುದ್ಧದಲ್ಲಿ ಸೋತವರು ತೈವಾನ್‌ಗೆ ತೆರಳಿ, ಮುಂದಿನ ಕೆಲ ದಶಕಗಳಲ್ಲಿ ತೈವಾನನ್ನು ಜಾಗತಿಕವಾಗಿ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಿದರು. ತೈವಾನ್ ಪ್ರಜಾಪ್ರಭುತ್ವವನ್ನು ಅಪ್ಪಿಕೊಂಡು, ಚೀನಾದ ಕಮ್ಯುನಿಸಂ ತತ್ವಕ್ಕೆ ವಿರೋಧಿಯಾಗಿತ್ತು. ಚೀನಾದ ನಾಯಕತ್ವಕ್ಕೆ ತೈವಾನ್ ದ್ವೀಪವನ್ನು ಚೀನಾಗೆ ಸೇರಿಸಿಕೊಳ್ಳುವುದು ಒಂದು ಪ್ರಮುಖ ರಾಷ್ಟ್ರೀಯತೆಯ ವಿಚಾರವಾಗಿದೆ. ಕ್ಸಿ ಜಿನ್‌ಪಿಂಗ್ ಅವರ ಕಾರ್ಯತಂತ್ರಗಳಲ್ಲಿ ತೈವಾನನ್ನು ಚೀನಾಗೆ ಸಂಪೂರ್ಣವಾಗಿ ಸೇರಿಸಿಕೊಳ್ಳುವುದು ಒಂದು ಮಹತ್ವದ ಯೋಜನೆಯಾಗಿದೆ. ತೈವಾನ್ ಜಾಗತಿಕ ಸೆಮಿ ಕಂಡಕ್ಟರ್ ಮಾರುಕಟ್ಟೆಯನ್ನು ಆಳುತ್ತಿದ್ದು, ಇಲೆಕ್ಟ್ರಾನಿಕ್ಸ್ ಮತ್ತು ಯಂತ್ರಗಳ ವಿಚಾರದಲ್ಲಿ ಅತ್ಯಂತ ಪ್ರಮುಖ ರಾಷ್ಟ್ರವಾಗಿ ರೂಪುಗೊಂಡಿದೆ. ತೈವಾನ್ ದ್ವೀಪ ಸಮುಚ್ಚಯವನ್ನು ತನ್ನ ಸುಪರ್ದಿಗೆ ಸೇರಿಸಿಕೊಳ್ಳುವುದರಿಂದ ಚೀನಾದ ಆರ್ಥಿಕತೆಗೆ ಅಪಾರ ಲಾಭವಾಗಲಿದೆ.

ಹಾಗೆಂದು ಅದು ಚೀನಾ ಪಾಲಿಗೆ ಸುಲಭ ವಿಚಾರವಲ್ಲ. ಚೀನಾ ತೈವಾನ್ ಮೇಲೆ ದಾಳಿ ಮಾಡಿದರೆ ತೈವಾನನ್ನು ರಕ್ಷಿಸುವುದಾಗಿ ಅಮೆರಿಕಾ ಈಗಾಗಲೇ ಮಾತು ಕೊಟ್ಟಿದೆ. ಆದರೆ ಅಮೆರಿಕಾ ಮತ್ತು ತೈವಾನ್ ಮಧ್ಯದ ಅಪಾರವಾದ ದೂರವೇ ಪ್ರಮುಖ ತೊಂದರೆಯಾಗಿದೆ. ಇಂತಹ ಸಂದರ್ಭದಲ್ಲಿ ಜಪಾನಿನಂತಹ ಪ್ರಾದೇಶಿಕ ಮಿತ್ರನ ಪಾತ್ರ ಮಹತ್ವದ್ದಾಗಿದೆ.

ಪ್ರಸ್ತುತ ಸನ್ನಿವೇಶದಲ್ಲಿ ತೈವಾನ್ ಜಪಾನ್‌ಗೆ ಕೇವಲ ಭೌಗೋಳಿಕವಾಗಿ ಮಾತ್ರ ಹತ್ತಿರವಾಗಿಲ್ಲ. ಅದರೊಡನೆ ಜಪಾನ್ ತೈವಾನ್ ಜೊತೆ ಅತ್ಯುತ್ತಮ ಸಂಬಂಧವನ್ನೂ ಹೊಂದಿದೆ. ತೈವಾನಿನ ಉಪಾಧ್ಯಕ್ಷರು ಸೋಮವಾರ ಟೋಕಿಯೋಗೆ ಭೇಟಿ ನೀಡಿ, ಶಿಂಜೋ ಅಬೆಯವರಿಗೆ ಶ್ರದ್ಧಾಂಜಲಿ ಸಲ್ಲಿಸಿರುವುದು ಈ ಎರಡೂ ರಾಷ್ಟ್ರಗಳ ಸಂಬಂಧದ ಆಳವನ್ನು ಪ್ರತಿನಿಧಿಸುತ್ತದೆ. ಒಂದು ವೇಳೆ ತೈವಾನ್ ಮೇಲೆ ಚೀನಾ ದಾಳಿ ನಡೆಸಿದರೆ ಜಪಾನ್ ಕೇವಲ ಅದರ ಪರಿಣಾಮದ ಕುರಿತು ಆಲೋಚಿಸಿ ತೈವಾನ್ ಸಹಾಯಕ್ಕೆ ಧಾವಿಸುವುದಿಲ್ಲ. ಬದಲಿಗೆ ರಾಜತಾಂತ್ರಿಕ ಮತ್ತು ಕಾರ್ಯತಂತ್ರದ ಕಾರಣಗಳನ್ನೂ ಗಮನದಲ್ಲಿಟ್ಟುಕೊಂಡು ತೈವಾನ್ ನೆರವಿಗೆ ಬರುತ್ತದೆ.

ಸೆಂಕಾಕು ದ್ವೀಪದ ವಿವಾದ
ಸೆಂಕಾಕು ದ್ವೀಪ ಪ್ರಸ್ತುತ ಜಪಾನ್ ಆಡಳಿತಕ್ಕೆ ಒಳಪಟ್ಟಿದ್ದರೂ, ಚೀನಾ ಅದನ್ನು ದಿಯಾವೋಯುದೊ ದ್ವೀಪ ಎಂದು ಕರೆಯುತ್ತದೆ. ಅದು ತನಗೇ ಸೇರಿದ್ದು ಎಂದು ಚೀನಾ ಪ್ರತಿಪಾದಿಸುತ್ತದೆ. ದ್ವೀಪದ ಮೇಲೆ ಹಕ್ಕು ಸ್ಥಾಪಿಸುವ ಜೊತೆಗೆ ಚೀನಾ ತನ್ನ ನೌಕಾಪಡೆ ಚಟುವಟಿಕೆಗಳನ್ನು ಹೆಚ್ಚಿಸುತ್ತಾ ಬಂದಿದೆ. ವಿಶೇಷವಾಗಿ ಸಮುದ್ರದಲ್ಲಿ ಗಸ್ತು ತಿರುಗುವ ಮೂಲಕ ಸೆಂಕಾಕು ದ್ವೀಪದ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವ ವಿಚಾರವನ್ನು ಮೂಲೆಗುಂಪು ಮಾಡಿದೆ.

ಕೆಲವು ವಾರಗಳ ಹಿಂದೆ ನಾಲಕ್ಕು ಚೀನೀ ಕಡಲ್ಗಾವಲು ಹಡಗುಗಳು ಈಸ್ಟ್ ಚೀನಾ ಸಮುದ್ರದಲ್ಲಿ ಜಪಾನ್ ಆಡಳಿತದಲ್ಲಿರುವ ಸೆಂಕಾಕು ದ್ವೀಪದ ಬಳಿ ಸಂಚರಿಸಿದ್ದವು. ಇದು ಜಪಾನೀ ಸೇನಾಪಡೆಗಳಿಗೆ ಎಚ್ಚರಿಕೆಯ ಕರೆಯಾಗಿತ್ತು. ಈ ವರ್ಷದಲ್ಲಿ ಒಂಬತ್ತನೇ ಬಾರಿಗೆ ಚೀನೀ ಹಡಗುಗಳು ಜಪಾನ್ ಸಮುದ್ರ ಪ್ರದೇಶದಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದವು. ಜಪಾನ್ ಈ ವಿವಾದಿತ ಪ್ರದೇಶದ ಸುತ್ತಲಿನ ಪರಿಸ್ಥಿತಿಯ ಕುರಿತು ತನ್ನ ಕಳವಳ ವ್ಯಕ್ತಪಡಿಸಿತ್ತು.

ಚೀನಾದ ಆಕ್ರಮಣಕಾರಿ ಪ್ರವೃತ್ತಿಯನ್ನು ಹತೋಟಿಯಲ್ಲಿಡಲು ಮತ್ತು ತೈವಾನ್ ಮತ್ತು ಸೆಂಕಾಕು ದ್ವೀಪ ಪ್ರದೇಶದಲ್ಲಿ ಒಂದಷ್ಟು ಸಾಮರಿಕ ಬಲವನ್ನು ತೋರಿಸಲು ಜಪಾನ್ ತನ್ನ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಬೇಕಾದ ಅನಿವಾರ್ಯತೆಯಿದೆ. ಶಿಂಜೋ ಅಬೆಯವರ ಆಡಳಿತ ಅವಧಿಯಲ್ಲಿ ಇದಕ್ಕೆ ಬೇಕಾದ ಪ್ರಬಲ ಅಡಿಪಾಯ ಹಾಕಲಾಗಿತ್ತು.

ಜಪಾನಿನ ಮಿಲಿಟರಿ ಸಾಮರ್ಥ್ಯ
ಎರಡನೇ ಮಹಾಯುದ್ಧದಲ್ಲಿ ಮಿತ್ರರಾಷ್ಟ್ರಗಳ ಸೇನಾಪಡೆಯ ಕೈಯಲ್ಲಿ ಜಪಾನ್ ಸೋಲನುಭವಿಸಿದ ಬಳಿಕ ಜಪಾನಿನ ಸಂವಿಧಾನವನ್ನು ತಿದ್ದುಪಡಿ ಮಾಡಲಾಯಿತು. ಜಪಾನ್ ತನ್ನ ಅಗತ್ಯಕ್ಕಿಂತ ಹೆಚ್ಚಿನ ಸೇನಾ ಶಕ್ತಿಯನ್ನು ಹೊಂದುವುದು ಮತ್ತು ಜಿಡಿಪಿ ದರದ 1%ಕ್ಕಿಂತ ಹೆಚ್ಚಿನ ಹಣವನ್ನು ರಕ್ಷಣಾ ವೆಚ್ಚಕ್ಕೆ ಬಳಸಿಕೊಳ್ಳುವುದು ಕಾನೂನಿಗೆ ವಿರುದ್ಧ ಎಂದು ತಿದ್ದುಪಡಿ ಮಾಡಲಾಯಿತು. ಇದು ಜಪಾನಿನ ಸಂವಿಧಾನದ 9ನೇ ವಿಧಿಯಲ್ಲಿ ದಾಖಲಿಸಲ್ಪಟ್ಟಿದೆ.

ಈ ತಿದ್ದುಪಡಿಯನ್ನು ಅಮೇರಿಕಾದ ನೇರ ಪ್ರಭಾವದಿಂದ ಕೈಗೊಳ್ಳಲಾಗಿತ್ತು. ಅಮೆರಿಕಾ ಯಾವತ್ತೂ ಜಪಾನ್ನಿಂದ ಮುಂದೆ ಯಾವತ್ತೂ ತನಗೆ ತೊಂದರೆ ಎದುರಾಗಬಾರದು ಎಂಬ ಕಾರಣಕ್ಕೆ ಈ ಕ್ರಮಕ್ಕೆ ಮುಂದಾಗಿತ್ತು. ಆದರೆ ಇಂದಿನ ಜಾಗತಿಕ ರಾಜಕಾರಣದ ವಾಸ್ತವದಲ್ಲಿ ಚೀನಾ ಅಮೆರಿಕಾ ಮತ್ತು ಜಪಾನ್ ಎರಡೂ ರಾಷ್ಟ್ರಗಳಿಗೂ ಶತ್ರುವಾಗಿದೆ. ಈಗ ಜಪಾನ್ ಮತ್ತು ಅಮೆರಿಕಾ ಮಿತ್ರ ರಾಷ್ಟ್ರಗಳಾಗಿದ್ದು, ಈ ಸಂವಿಧಾನದ ತಿದ್ದುಪಡಿ ಮತ್ತು ಸೇನಾ ಅಭಿವೃದ್ಧಿ ಕುರಿತ ನಿರ್ಬಂಧಗಳು ಅಮೆರಿಕಾದ ಹಿತಾಸಕ್ತಿಗೆ ಮತ್ತು ಜಪಾನಿ ನಾಗರಿಕರಿಗೂ ಅಪಾಯಕಾರಿಯಾಗಿದೆ.

ಶಿಂಜೋ ಅಬೆಯವರ ಆಡಳಿತದ ಅವಧಿಯಲ್ಲಿ ಇದು ಸ್ಪಷ್ಟವಾಗಿ ಗೋಚರವಾಗಿತ್ತು. ಅದರಿಂದಾಗಿ ಅಬೆ ಈ ಸಮಸ್ಯೆಗಳನ್ನು ನಿವಾರಿಸಲು ಕೆಲವು ಕ್ರಮಗಳನ್ನು ಕೈಗೊಂಡರು. ಆದರೆ ಶಿಂಜೋ ಅಬೆಯವರ ದುರಂತ ಸಾವಿನ ಕೆಲವು ದಿನಗಳ ಬಳಿಕ ಅವರ ಕನಸಾಗಿದ್ದ ಈ ಕಾನೂನು ತೊಡಕಿನ ನಿವಾರಣೆ ಕೆಲವೇ ದಿನಗಳಲ್ಲಿ ನನಸಾಗಲಿದೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಶಿಂಜೋ ಅಬೆಯವರ ಪಕ್ಷ ವಿಜೇತವಾಗಿದ್ದು, ಲಿಬರಲ್ ಡೆಮಾಕ್ರಟಿಕ್ ಪಕ್ಷಕ್ಕೆ ಜಪಾನಿನಲ್ಲಿ ಅಗತ್ಯವಿರುವ ಕಾನೂನು ಸುಧಾರಣೆಗಳನ್ನು ಕೈಗೊಳ್ಳಲು ದಾರಿ ಮಾಡಿಕೊಟ್ಟಿದೆ.

ಪ್ರಧಾನ ಮಂತ್ರಿ ಫುಮಿಯೋ ಕಿಶಿಡಾ ಅವರ ಪಕ್ಷ 63 ಸ್ಥಾನಗಳಲ್ಲಿ, ಅಂದರೆ ಇರುವ 125 ಸ್ಥಾನಗಳಲ್ಲಿ ಅರ್ಧಕ್ಕೂ ಹೆಚ್ಚು ಸ್ಥಾನಗಳನ್ನು ಹೌಸ್ ಆಫ್ ಕೌನ್ಸಿಲರ್ಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಇದು ಸಂವಿಧಾನದ ತಿದ್ದುಪಡಿಯನ್ನು ಆಗ್ರಹಿಸುತ್ತಿದ್ದವರಿಗೆ ಅದಕ್ಕೆ ಬೇಕಾಗಿದ್ದ ಮೂರನೆ ಎರಡರಷ್ಟು ಬಹುಮತ ಗಳಿಸಲು ಸಹಾಯಕವಾಗಿದೆ.

ಜಪಾನಿನ ಸಂವಿಧಾನದಲ್ಲಿ ಜಪಾನ್ ತನ್ನ ಸೇನಾಪಡೆಗಳನ್ನು ಅಭಿವೃದ್ಧಿ ಪಡಿಸಲು ವಿರೋಧವಾಗುವಂತಹ ಅಡೆತಡೆಗಳಿವೆ. ಇದರ ಪರಿಣಾಮವಾಗಿ ಚೀನಾ ಜಪಾನ್ ಮೇಲೆ ದಬ್ಬಾಳಿಕೆ ನಡೆಸಲು ಪ್ರಯತ್ನಿಸುತ್ತಿದೆ. ಆದರೆ ಇಂತಹ ಅಡೆತಡೆಗಳನ್ನು ನಿವಾರಿಸುವುದು ಚೀನಾಗೆ ಒಂದು ಪ್ರಬಲ ಸಂದೇಶ ರವಾನಿಸುತ್ತದೆ. ಸೆಂಕಾಕು ದ್ವೀಪದ ಸುತ್ತ ಪ್ರಬಲ ಜಪಾನಿ ಸೈನಿಕರು ಕಾವಲು ಕಾಯುವುದು ಸೆಂಕಾಕು ದ್ವೀಪಗಳು ಮತ್ತು ತೈವಾನ್ ಮೇಲೆ ಎದುರಾಗುವ ಎಂತಹ ಆಕ್ರಮಣಶೀಲತೆಯನ್ನು ಎದುರಿಸಲೂ ಅತ್ಯಂತ ಸೂಕ್ತ ಕ್ರಮವಾಗಿರುತ್ತದೆ.
 

Follow Us:
Download App:
  • android
  • ios