ಮಿಲಾನ್‌ [ಮಾ.11]:  ಚೀನಾ ನಂತರ ಅತಿ ಹೆಚ್ಚು ಕೊರೋನಾ ವೈರಾಣು ಬಾಧೆಗೆ ಒಳಗಾಗಿರುವ ಇಟಲಿಯಲ್ಲಿ ಈ ವ್ಯಾಧಿ ತಡೆಯಲು ಪ್ರಧಾನಿ ಗುಯಿಸೆಪ್‌ ಕೊಂಟೆ ಅವರು ಹಲವು ಕಠಿಣ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. 

ಇಟಲಿಯಲ್ಲಿನ ಜನರು ತಮ್ಮ ಮನೆಗಳಿಂದ ಹೊರಬರಕೂಡದು ಎಂದು ಆದೇಶಿಸಿರುವ ಅವರು, ಇಡೀ ಇಟಲಿಯನ್ನೇ ‘ಲಾಕ್‌ ಡೌನ್‌’ ಮಾಡಲು ಆದೇಶಿಸಿದ್ದಾರೆ. ಕೊರೋನಾ ವ್ಯಾಧಿ ತೀವ್ರಗೊಂಡಾಗ ಚೀನಾದ ವುಹಾನ್‌ ಸೇರಿದಂತೆ ಕೆಲ ಪ್ರಾಂತ್ಯಗಳು ಮತ್ತು ನಗರಗಳಲ್ಲಿ ಜನರ ಸಂಚಾರಕ್ಕೆ ಸಂಪೂರ್ಣ ನಿಯಂತ್ರಣ ಹೇರಲಾಗಿತ್ತಾದರೂ, ಇಡೀ ದೇಶಕ್ಕೆ ದೇಶವನ್ನೇ ಹೀಗೆ ನಿರ್ಬಂಧಕ್ಕೆ ಗುರಿಪಡಿಸಿದ್ದು ಇದೇ ಮೊದಲು.

ರೋಗ ತಡೆಗೆ ಇಟಲಿ ಸರ್ಕಾರ ಇತ್ತೀಚೆಗೆ ಹಲವು ಕ್ರಮಗಳನ್ನು ಇತ್ತೀಚೆಗೆ ಘೋಷಿಸಿತ್ತಾದರೂ, ಅವುಗಳಿಗೆ ಸೂಕ್ತ ಜನಸ್ಪಂದನೆ ಸಿಕ್ಕಿರಲಿಲ್ಲ. ಅದರ ಬೆನ್ನಲ್ಲೇ ಸೋಂಕು ಪೀಡಿತರ ಸಂಖ್ಯೆ 9000ರ ಗಡಿದಾಟಿತ್ತು. ಜೊತೆಗೆ ಕಳೆದೊಂದು ವಾರದಲ್ಲೇ ಸಾವಿನ ಭಾರೀ ಪ್ರಮಾನದಲ್ಲಿ ಏರಿತ್ತು. ಈ ಹಿನ್ನೆಲೆಯಲ್ಲಿ ಮತ್ತಷ್ಟುಕಠಿಣ ಕ್ರಮ ಜಾರಿಗೆ ನಿರ್ಧರಿಸಿರುವ ಸರ್ಕಾರ, ದೇಶದ 6 ಕೋಟಿ ಜನರಿಗೆ ಮನೆಯಲ್ಲೇ ಇರಬೇಕೆಂದು ಸೂಚಿಸಿದೆ. ಶಾಲೆ-ಕಾಲೇಜುಗಳು, ವಿಶ್ವವಿದ್ಯಾಲಯಗಳು, ಪಬ್‌ಗಳು, ಹೋಟೆಲ್‌ ಹಾಗೂ ಕೆಫೆಗಳನ್ನು ಮಂಗಳವಾರದಿಂದ ಸಂಪೂರ್ಣ ಬಂದ್‌ ಮಾಡಲಾಗಿದೆ.

ಕರಗದ ಮೇಲೂ ಕರೋನಾ ಕರಿನೆರಳು; ಉತ್ಸವ ಆಚರಣೆ ಅನುಮಾನ..

ಇಟಲಿಯಲ್ಲಿ ಈಗಾಗಲೇ ಸಭೆ-ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ ಹಾಗೂ ಅನಿವಾರ್ಯ ಪ್ರವಾಸಗಳನ್ನು ಹೊರತುಪಡಿಸಿದರೆ ಮಿಕ್ಕ ಪ್ರವಾಸಗಳ ಮೇಲೆ ನಿರ್ಬಂಧ ಹೇರಲಾಗಿದೆ. ಕೆಲಸದ ನಿಮಿತ್ತ, ಆರೋಗ್ಯ ತಪಾಸಣೆ ಸಂಬಂಧ ಅಥವಾ ಇನ್ನಾವುದಾದರೂ ಅನಿವಾರ್ಯ ಕಾರಣಗಳಿದ್ದರೆ ಮಾತ್ರ ಪ್ರವಾಸಕ್ಕೆ ಅನುಮತಿಸಲಾಗುತ್ತದೆ.

‘ಇಟಲಿಯ ಒಳಿತಿಗಾಗಿ ನಮ್ಮ ಹವ್ಯಾಸಗಳು ಬದಲಾಗಬೇಕು. ಬದಲಾಗುತ್ತಿವೆ’ ಎಂದು ಪ್ರಧಾನಿ ಹೇಳಿದ್ದಾರೆ. ಕೊರೋನಾಗೆ ಸೋಮವರದವರೆಗೆ ಇಟಲಿಯಲ್ಲಿ 463 ಮಂದಿ ಬಲಿಯಾಗಿದ್ದಾರೆ.