3 ದೇಶದಲ್ಲಿ 3 ಉಗ್ರ ನಾಯಕರ ಬೇಟೆಯಾಡಿದ ಇಸ್ರೇಲ್! ಹಿಟ್​ಲಿಸ್ಟ್​ನಲ್ಲಿ ಇನ್ನೂ ಯಾರ್ ಯಾರು?

ಪ್ಯಾಲಿಸ್ತೇನ್‌ನ ಪ್ರಧಾನಿಯೂ ಆಗಿದ್ದ ಇಸ್ಮಾಯಿಲ್ ಹನಿಯನ್ನು ಆತನ ಮನೆಯಲ್ಲಿಯೇ 2 ತಿಂಗಳಿಗೆ ಮೊದಲು ಬಾಂಬ್ ಇಟ್ಟು ಕೊಲ್ಲಲಾಗಿದೆ ಎನ್ನಲಾಗುತ್ತಿದೆ. ಹಮಾಸ್ ಮುಖ್ಯಸ್ಥರಾದವರನ್ನು ಇಸ್ರೇಲ್ ಕೊಲ್ಲುತ್ತಿರುವ ಬಗೆಯೇ ರೋಚಕ. 

isriel kills three terrorist in 3 nations many more on hit list

ಇಸ್ರೇಲ್.. ಜಗತ್ತಿನ ಯಾವ ದೇಶಕ್ಕಾದರೂ ನುಗ್ಗಿ ತನ್ನ ವೈರಿಯನ್ನ ಹೊಡೆದುರುಳಿಸೋ ತಾಕತ್ತಿರೋ ಜಗತ್ತಿನ ಏಕೈಕ ದೇಶ. ಶಕ್ತಿಶಾಲಿ ದೇಶ ಅಮೆರಿಕವೂ ಈ ವಿಷಯದಲ್ಲಿ ಸರಿ ಸಾಟಿಯಲ್ಲ. ಸುತ್ತಲೂ ಇರುವ ವೈರಿ ಮುಸ್ಲಿಂ ದೇಶಗಳನ್ನ ಎದುರಿಸಿಕೊಂಡು ಕಳೆದ 75 ವರ್ಷಗಳಿಂದ ನೇರ ದಿಟ್ಟ ನಿರಂತರ ಎಂಬಂತೆ ಬದುಕುತ್ತಿದೆ ಇಸ್ರೇಲ್.‌ ತನ್ನ ದೇಶದ ವಿರುದ್ಧ ನಿಂತವನು ಎಷ್ಟೇ ಬಲಶಾಲಿಯಾಗಿದ್ದರೂ ಆತ ಎಲ್ಲೇ ಇದ್ದರೂ ಕೊಂದು ಮುಗಿಸುವ ದೇಶ ಇಸ್ರೇಲ್.‌ ಕಳೆದ 20 ದಿನದಲ್ಲಿ ಇಸ್ರೇಲ್‌ ತನ್ನ ವಿರುದ್ಧ ನಿಂತಿದ್ದ ಮೂವರು ಕುಖ್ಯಾತ ವೈರಿಗಳನ್ನ ಅವರಿರೋ ದೇಶಕ್ಕೇ ನುಗ್ಗಿ ಹತ್ಯೆ ಮಾಡಿದೆ. ಇಸ್ರೇಲ್‌ ಹಿಟ್‌ಲಿಸ್ಟ್‌ನಲ್ಲಿರೋ ಕೆಲವರು ತಲೆಮರೆಸಿಕೊಂಡಿದ್ದಾರೆ. ಯಾವ ಕ್ಷಣದಲ್ಲಾದರೂ ಅವರ ಹೆಣ ಬೀಳಬಹುದು ಅನ್ನೋ ಸ್ಥಿತಿ ನಿರ್ಮಾಣವಾಗಿದೆ.

ಇಸ್ಮಾಯಿಲ್‌ ಹನಿಯೇ, ಹಮಾಸ್‌ ಮುಖ್ಯಸ್ಥ
ಇಸ್ರೇಲ್‌ ಮೇಲೆ 2023ರ ಅಕ್ಟೋಬರ್‌ 7ರಂದು ದಾಳಿ ಮಾಡಿದ್ದ ಹಮಾಸ್‌ ನಾಯಕನ ಹತ್ಯೆಯಾಗಿದೆ. ಇಸ್ರೇಲ್‌ನಿಂದ ಒಂದೂವರೆ ಸಾವಿರ ಕಿಲೋಮೀಟರ್‌ ದೂರದ ಇರಾನ್‌ನಲ್ಲಿದ್ದ ಹಮಾಸ್‌ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೇ ನನ್ನ ಕ್ಷಿಪಣಿ ದಾಳಿ ಮಾಡಿ ಕೊಂದು ಹಾಕಿದೆ ಇಸ್ರೇಲ್.‌ ಜುಲೈ 31ರಂದು ಇರಾನ್‌ನ ಅಧ್ಯಕ್ಷರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋಗಿದ್ದ ಇಸ್ಮಾಯಿಲ್‌ ಹನಿಯೇ ತೆಹ್ರಾನ್‌ನ ಭಾರೀ ಬಿಗಿ ಭದ್ರತೆಯಿರೋ ಮನೆಯಲ್ಲಿ ಉಳಿದುಕೊಂಡಿದ್ದ. ಒಂದೂವರೆ ಸಾವಿರ ಕಿಲೋ ಮೀಟರ್‌ ದೂರದಿಂದಲೇ ಗೈಡೆಡ್‌ ಮಿಸೈಲ್‌ ದಾಳಿ ನಡೆಸುವ ಮೂಲಕ ಹಮಾಸ್‌ ಮುಖ್ಯಸ್ಥನನ್ನ ಮುಗಿಸಿ ಹಾಕಿದೆ ಇಸ್ರೇಲ್.‌ ಕ್ಷಿಪಣಿ ದಾಳಿ ಅಲ್ಲ ಆತನಿದ್ದ ಮನೆಯಲ್ಲಿ 2 ತಿಂಗಳಿಗೆ ಮೊದಲೇ ಬಾಂಬ್‌ ಇಡಲಾಗಿತ್ತು, ರಿಮೋಟ್‌ ಕಂಟ್ರೋಲ್‌ ಮೂಲಕ ಸ್ಪೋಟಿಸಲಾಗಿದೆ ಅನ್ನೋ ವರದಿಗಳೂ ಇವೆ. ಈತ ಯಾರೋ ಸಣ್ಣ ಉಗ್ರನಲ್ಲ. 2006ರಲ್ಲಿ ಇಸ್ಮಾಯಿಲ್‌ ಹನಿಯೇ ಪ್ಯಾಲಿಸ್ತೇನ್‌ನ ಪ್ರಧಾನಿಯೂ ಆಗಿದ್ದ. ಹಮಾಸ್‌ ಅನ್ನೋ ಮೂಲಭೂತವಾದಿ ಸಂಘಟನೆ ಕಟ್ಟಿಕೊಂಡು ಪ್ಯಾಲಿಸ್ತೇನಿಯರ ಕೈಗೆ ಗನ್ನು ಕೊಟ್ಟು ಇಸ್ರೇಲ್‌ ವಿರುದ್ಧ ಛೂ ಬಿಡುತ್ತಿದ್ದ ವ್ಯಕ್ತಿ. 2017ರಿಂದ ಹಮಾಸ್‌ ಮುಖ್ಯಸ್ಥನಾಗಿದ್ದ ಈತ ಗಾಜಾ ಬಿಟ್ಟು ಕತಾರ್‌ ನಲ್ಲೇ ಇರುತ್ತಿದ್ದ. 4 ಬಿಲಿಯನ್‌ ಡಾಲರ್‌ ಅಂದ್ರೆ 32 ಸಾವಿರ ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದ ಈತ ಕತಾರ್‌ನಲ್ಲಿ ಐಷಾರಾಮಿ ಜೀವನ ನಡೆಸ್ತಿದ್ದ. ಈತನ ಮೂವರು ಮಕ್ಕಳು ಮತ್ತು ನಾಲ್ವರು ಮೊಮ್ಮಕ್ಕಳು ಇದೇ ವರ್ಷದ ಏಪ್ರಿಲ್‌ನಲ್ಲಿ ಇಸ್ರೇಲ್‌ ನಡೆಸಿದ ದಾಳಿಗೆ ಬಲಿಯಾಗಿದ್ದರು. ಪ್ಯಾಲಿಸ್ತೇನಿಯರಿಗೆ ಪುಸ್ತಕ, ಊಟ ಕೊಡುವ ಬದಲು ಗನ್ ಕೊಟ್ಟವನು ಇವನು. ಹಮಾಸ್‌ ವಿರುದ್ಧದ ಹೋರಾಟದಲ್ಲಿ ಇಸ್ರೇಲ್‌ಗೆ ಸಿಕ್ಕ ಅತಿದೊಡ್ಡ ಯಶಸ್ಸು.

ಇರಾನ್‌ ರಾಜಧಾನಿ ತೆಹರಾನ್‌ನಲ್ಲಿ 2 ತಿಂಗಳ ಮೊದಲೇ ಇರಿಸಿದ್ದ ಬಾಂಬ್‌ನಿಂದ ಹಮಾಸ್‌ ಚೀಫ್‌ ಹತ್ಯೆ!

ಹೆಜ್ಬೊಲ್ಲಾ ಮಿಲಿಟರಿ ಕಮಾಂಡರ್‌ ಫೌದ್‌ ಶುಖರ್
ಇತ್ತೀಚೆಗೆ ಇಸ್ರೇಲ್‌ನ ಗೋಲನ್‌ ಹೈಟ್ಸ್‌ ಮೇಲೆ ದಾಳಿ ಮಾಡಿ ಪುಟ್‌ಬಾಲ್‌ ಆಡುತ್ತಿದ್ದ 12 ಯುವಕರನ್ನ ಕೊಲ್ಲಲಾಗಿತ್ತು. ಇಸ್ರೇಲ್‌ ಪಕ್ಕದಲ್ಲೇ ಇರೋ ಲೆಬನಾನ್‌ ದೇಶದ ಹೆಜ್ಬೊಲ್ಲಾ ಉಗ್ರ ಸಂಘಟನೆ ಈ ದಾಳಿ ಮಾಡಿತ್ತು. ತನ್ನ ದೇಶದ ಮಕ್ಕಳ ರಕ್ತ ಹೀರಿದವನನ್ನ ಮರುದಿನವೇ ಕೊಂದು ಹಾಕಿದೆ ಇಸ್ರೇಲ್. ಜುಲೈ 30ರಂದು‌ ಲೆಬನಾನ್‌ ರಾಜಧಾನಿ ಬೈರೂತ್‌ನ ಅಪಾರ್ಟ್‌ಮೆಂಟ್‌ ಒಂದರ ಮೇಲೆ ದಾಳಿ ಮಾಡಿ ಹೆಜ್ಬೊಲ್ಲಾ ಉಗ್ರನನ್ನ ಕೊಂದು ಹಾಕಿದೆ. ಹೆಜ್ಬೊಲ್ಲಾ ಉಗ್ರ ಸಂಘಟನೆಯ ಟಾಪ್‌ ಮಿಲಿಟರಿ ಕಮಾಂಡರ್‌ ಆಗಿದ್ದ ಫೌದ್‌ ಶುಖರ್‌ನನ್ನ ರಾಕೆಟ್‌ ದಾಳಿ ಮಾಡಿ ಹತ್ಯೆ ಮಾಡಿದೆ ಇಸ್ರೇಲ್.‌ ಈ ಫೌದ್‌ ಶುಖರ್‌ 1983ರಲ್ಲಿ ಲೆಬನಾನ್‌ ರಾಜಧಾನಿಯಲ್ಲಿ 241 ಅಮೆರಿಕನ್‌ ಸೈನಿಕರನ್ನ ಬಾಂಬಿಟ್ಟು ಕೊಂದು ಹಾಕಿದ್ದ. ‌

ಮೊಹಮದ್‌ ಡೀಫ್, ಹಮಾಸ್‌ ಮಿಲಿಟರಿ ಮುಖ್ಯಸ್ಥ
ಹಮಾಸ್‌ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೇನನ್ನ ಕೊಂದ ಇಸ್ರೇಲ್‌ ತಾನು ಹಮಾಸ್‌ ಮಿಲಿಟರಿ ಮುಖ್ಯಸ್ಥನನ್ನೂ ಕೊಂದು ಹಾಕಿದ್ದೇವೆ ಎಂದಿದೆ. ಜುಲೈ 13ರಂದು ಗಾಜಾ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಹಮಾಸ್‌ ಉಗ್ರ ಸಂಘಟನೆಯ ಮಿಲಿಟರಿ ನಾಯಕ ಮೊಹಮದ್‌ ಡೀಫ್‌ನನ್ನ ಬಲಿಯಾಗಿದ್ದಾನೆ. ಕಳೆದ ವರ್ಷ ಇಸ್ರೇಲ್‌ ಮೇಲೆ ನಡೆದ ದಾಳಿಯ ನೇತೃತ್ವ ವಹಿಸಿದ್ದವನು ಇವನೇ. ಇಸ್ರೇಲ್‌ ಮೇಲೆ ದಾಳಿ ಮಾಡಿದ್ದ ಹಮಾಸ್‌ ಉಗ್ರ ಸಂಘಟನೆಯ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೇ, ಹಮಾಸ್‌ ಮಿಲಿಟರಿ ಮುಖ್ಯಸ್ಥ ಮೊಹಮದ್‌ ಡೀಫ್, ಲೆಬನಾನ್‌ನ ಹೆಜ್ಬೊಲ್ಲಾ ಉಗ್ರ ಸಂಘಟನೆಯ ಮಿಲಿಟರಿ ಕಮಾಂಡರ್‌ ಫೌದ್‌ ಶುಖರ್‌ ಇಪ್ಪತ್ತೇ ದಿನಗಳ ಅಂತರದಲ್ಲೇ ಬಲಿಯಾಗಿದ್ದಾರೆ. 

ಇಸ್ರೇಲ್‌ ಹಿಟ್‌ಲಿಸ್ಟ್‌ನಲ್ಲಿ ಇನ್ನೂ ಹಲವರಿದ್ದಾರೆ. ಗಾಜಾ, ವೆಸ್ಟ್‌ಬ್ಯಾಂಕ್‌, ಲೆಬನಾನ್‌, ಸಿರಿಯಾ, ಇರಾಕ್‌, ಇರಾನ್‌ ಗಳಲ್ಲಿ ಇಸ್ರೇಲ್‌ಗೆ ಹಲವು ಶತೃಗಳಿದ್ದಾರೆ. ಹಿಟ್‌ಲಿಸ್ಟ್‌ನಲ್ಲಿರೋ ಪ್ರಮುಖರ ವಿವರ ಇಲ್ಲಿದೆ. 

ಹಸನ್‌ ನಸರುಲ್ಲಾ, ಹೆಜ್ಬೊಲ್ಲಾ ನಾಯಕ
ಲೆಬನಾನ್‌ನಲ್ಲಿರೋ ಉಗ್ರ ಸಂಘಟನೆ ಹೆಜ್ಬೊಲ್ಲಾದ ನಾಯಕ ಹಸನ್‌ ನಸರುಲ್ಲಾ. 50 ಲಕ್ಷ ಜನಸಂಖ್ಯೆಯಿರೋ ಅರ್ಧದಷ್ಟು ಲೆಬನಾನ್‌ನನ್ನ ಈತ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದಾನೆ. ಅಲ್ಲಿನ ಸರ್ಕಾರದ ಮೇಲೂ ಇವನದ್ದೇ ಮಾತು ನಡೆಯುತ್ತೆ. ಇಸ್ರೇಲ್‌ ತನ್ನನ್ನ ಯಾವಾಗ ಬೇಕಾದರೂ ಹತ್ಯೆ ಮಾಡುತ್ತೆ ಅನ್ನೋದು ಇವನಿಗೆ ಸ್ಪಷ್ಟವಾಗಿ ಗೊತ್ತು. ಜೀವ ಇರುವವರೆಗೆ ಇಸ್ರೇಲ್‌ ವಿರುದ್ಧ ಬಡಿದಾಡುವ ನಿರ್ಣಯ ಮಾಡಿದ್ದಾನೆ ಹಸನ್‌ ನಸರುಲ್ಲಾ. ಲೆಬನಾನ್‌ನಲ್ಲಿ ಇಸ್ರೇಲ್‌ ಕಣ್ಣಿಗೆ ಬೀಳದಂತೆ ರಹಸ್ಯವಾಗಿ ಬದುಕುತ್ತಿದ್ದಾನೆ.

5 ಸ್ಟಾರ್ ಹೋಟೆಲ್ ರೀತಿಯ ಮನೆ, 25ಕ್ಕೂ ಅಧಿಕ ವಾಹನ, ಪ್ರೈವೇಟ್ ಜೆಟ್ - ಹತನಾದ ಹಮಾಸ್ ನಾಯಕನ ಆಸ್ತಿ ಎಷ್ಟು?
 
ಖಲೀದ್ ಮಶಾಲ್, ಹಮಾಸ್‌ನ ಹೊಸ ಮುಖ್ಯಸ್ಥ
ಇಸ್ರೇಲ್‌ ಹಿಟ್‌ಲಿಸ್ಟ್‌ನಲ್ಲಿರೋ 2ನೇ ವ್ಯಕ್ತಿ ಖಲೀದ್ ಮಶಾಲ್. ಇಸ್ಮಾಯಿಲ್‌ ಹನಿಯೇ ಹತ್ಯೆ ನಂತರ ಈಗ ಹಮಾಸ್‌ ಮುಖ್ಯಸ್ಥನಾಗಿದ್ದಾನೆ. ಇಸ್ಮಾಯಿಲ್‌ ಹನಿಯೇ ಹಮಾಸ್‌ ಮುಖ್ಯಸ್ಥನಾಗುವ ಮುನ್ನ ಖಲೀದ್‌ ಮಶಾಲ್‌ ಆ ಸ್ಥಾನದಲ್ಲಿದ್ದ. ಈಗ ಮತ್ತೆ ಹಮಾಸ್‌ ಮುಖ್ಯಸ್ಥನಾಗಿದ್ದಾನೆ. ಇವನೂ ಗಾಜಾ ಜನರನ್ನ ಇಸ್ರೇಲ್‌ ವಿರುದ್ಧ ಎತ್ತಿಕಟ್ಟಿ ಕತಾರ್‌ನಲ್ಲಿ ಸೇಫ್‌ ಆಗಿ ಬದುಕುತ್ತಿದ್ದಾನೆ. 1997ರಿಂದ ಈತ ಇಸ್ರೇಲ್‌ನ ಹಿಟ್‌ಲಿಸ್ಟ್‌ನಲ್ಲಿದ್ದಾನೆ.

ಮೊಹಮದ್‌ ಅಲ್-ಜಹೆರ್‌, ಹಮಾಸ್‌ ಸಂಸ್ಥಾಪಕ ಸದಸ್ಯ
ಹಮಾಸ್‌ ಉಗ್ರ ಸಂಘಟನೆಯ ಸಂಸ್ಥಾಪಕ ಸದಸ್ಯ ಮೊಹಮದ್‌ ಅಲ್‌ ಜಹೆರ್‌ ಇಸ್ರೇಲ್‌ನ ಹಿಟ್‌ಲಿಸ್ಟ್‌ನಲ್ಲಿರೋ ಮೂರನೇ ವ್ಯಕ್ತಿ. 1988ರಲ್ಲಿ ಇವನನ್ನ ಅರೆಸ್ಟ್‌ ಮಾಡಿದ್ದ ಇಸ್ರೇಲ್‌ 1992ರಲ್ಲಿ ಲೆಬನಾನ್‌ಗೆ ಗಡಿಪಾರು ಮಾಡಿತ್ತು. 2006ರಲ್ಲಿ ಈತ ಪ್ಯಾಲಿಸ್ತೇನ್‌ನ ವಿದೇಶಾಂಗ ಸಚಿವನಾಗಿದ್ದ. ಇಸ್ರೇಲ್-ಗಾಜಾ ಯುದ್ಧ ಆರಂಭಕ್ಕೂ ಮೊದಲು ಗಾಜಾದಲ್ಲೇ ಇದ್ದ ಈತ ಈಗ ಲೆಬನಾನ್‌ನಲ್ಲಿ ತಲೆಮರೆಸಿಕೊಂಡಿದ್ದಾನೆ.

ಯಾಹ್ಯಾ ಸಿನ್ವಾರ್‌, ಗಾಜಾದ ಹಮಾಸ್‌ ನಾಯಕ
ಇಸ್ರೇಲ್‌ನ ಟಾಪ್‌ ಹಿಟ್‌ ಲಿಸ್ಟ್‌ನಲ್ಲಿರೋ ಮತ್ತೊಬ್ಬ ಯಾಹ್ಯಾ ಸಿನ್ವಾರ್.‌ ಗಾಜಾ ಪಟ್ಟಿಯೊಳಗೆ ಹಮಾಸ್‌ನ ನೇತೃತ್ವ ಇವನದ್ದೇ. ಇಸ್ರೇಲ್‌ ಮೇಲೆ ನಡೆದ ದಾಳಿಯಲ್ಲಿ ಇವನೂ ಪ್ರಮುಖ ಪಾತ್ರಧಾರಿಯೇ. ಇಬ್ಬರು ಇಸ್ರೇಲಿ ಸೈನಿಕರನ್ನ ಕೊಂದ ಆರೋಪದ ಮೇಲೆ 1989ರಿಂದ ಜೈಲಿನಲ್ಲಿದ್ದ. 2011ರಲ್ಲಿ 1026 ಪ್ಯಾಲಿಸ್ತೇನಿ ಕೈದಿಗಳನ್ನ ಇಸ್ರೇಲ್‌ ಬಿಡುಗಡೆ ಮಾಡಿದಾಗ ಇವನೂ ಜೈಲಿನಿಂದ ಹೊರಬಂದಿದ್ದ. ಸದ್ಯಕ್ಕೆ ಈತ ಗಾಜಾದಲ್ಲಿದ್ದುಕೊಂಡೇ ಇಸ್ರೇಲಿಗಳ ವಿರುದ್ಧ ಬಡಿದಾಡುತ್ತಿದ್ದಾನೆ.

Israel–Hamas war: ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್  ಇರಾನ್‌ನಲ್ಲಿ  ಹತ್ಯೆ

ಇಸ್ರೇಲ್‌ ಹಿಟ್‌ಲಿಸ್ಟ್‌ನಲ್ಲಿರೋ ಈ ನಾಲ್ವರು ಯಾವಾಗ ಬೇಕಾದರೂ ಹತ್ಯೆಯಾಗಬಹುದು. ಇಸ್ರೇಲ್‌ ಕಣ್ಣಿಗೆ ಬಿದ್ದ ಮಾರನೇ ದಿನವೇ ತಾವು ಬದುಕಲ್ಲ ಅಂತ ಇವರಿಗೂ ಗೊತ್ತು. ಅದಕ್ಕೇ ರಹಸ್ಯ ಸ್ಥಳಗಳಲ್ಲಿ ಕೂತು ಇಸ್ರೇಲ್‌ ವಿರುದ್ಧ ದಾಳಿ ಮಾಡಿಸುತ್ತಾರೆ.
 

Latest Videos
Follow Us:
Download App:
  • android
  • ios