Asianet Suvarna News Asianet Suvarna News

ಉತ್ತರ ಗಾಜಾ ತೊರೆಯಲು ಇಸ್ರೇಲ್‌ ಎಚ್ಚರಿಕೆ: ದಕ್ಷಿಣಕ್ಕೆ ಹೋಗದಿದ್ದರೆ ಉಗ್ರರೆಂದು ಪರಿಗಣಿಸುತ್ತೇವೆ ಎಂದು ವಾರ್ನಿಂಗ್‌!

ಉತ್ತರ ಗಾಜಾ ತೊರೆದು ದಕ್ಷಿಣಕ್ಕೆ ತೆರಳುವಂತೆ ಪ್ಯಾಲೆಸ್ತೀನೀಯರಿಗೆ ಇಸ್ರೇಲ್‌ ಸೇನಾಪಡೆಗಳು ‘ಅರ್ಜೆಂಟ್‌ ವಾರ್ನಿಂಗ್‌’ ನೀಡಿವೆ. ಉತ್ತರ ಗಾಜಾ ತೊರೆಯದಿದ್ದರೆ ನಿಮ್ಮನ್ನೂ ಭಯೋತ್ಪಾದಕರೆಂದು ಪರಿಗಣಿಸಿ ನಿರ್ಮೂಲನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿವೆ. 

israel tells gazans to move south or risk being seen as terrorist partner ash
Author
First Published Oct 23, 2023, 8:57 AM IST

ರಫಾ/ಜೆರುಸಲೇಂ/ಗಾಜಾ (ಅಕ್ಟೋಬರ್ 23, 2023): ಹಮಾಸ್‌ ಉಗ್ರರ ಹುಟ್ಟಡಗಿಸಲು ದಾಳಿ ತೀವ್ರಗೊಳಿಸಿರುವ ಇಸ್ರೇಲ್‌, ಭಾನುವಾರ ಗಾಜಾಪಟ್ಟಿಯ ಉತ್ತರ ಭಾಗ, ಸಿರಿಯಾ ಹಾಗೂ ವೆಸ್ಟ್‌ ಬ್ಯಾಂಕ್‌ ಮೇಲೆ ಭೀಕರ ವಾಯುದಾಳಿ ನಡೆಸಿದೆ. ಈ ದಾಳಿಯಲ್ಲಿ ಅಕ್ಟೋಬರ್ 7ರ ಇಸ್ರೇಲ್‌ ಮೇಲಿನ ದಾಳಿಯನ್ನು ಮುನ್ನಡೆಸಿದ್ದ ಹಮಾಸ್‌ನ ಇಬ್ಬರು ಕಮಾಂಡರ್‌ಗಳು ಹತ್ಯೆಯಾಗಿದ್ದಾರೆ. ಅಲ್ಲದೆ, ಸಿರಿಯಾದ ಎರಡು ವಿಮಾನ ನಿಲ್ದಾಣಗಳು ಕೂಡ ಮತ್ತೆ ಇಸ್ರೇಲ್‌ ದಾಳಿಯಿಂದ ಧಕ್ಕೆಗೀಡಾಗಿವೆ. ಇದೇ ವೇಳೆ, ಪಶ್ಚಿಮ ದಂಡೆಯಲ್ಲಿ ಉಗ್ರರು ಬಳಸುತ್ತಿದ್ದ ಒಂದು ಮಸೀದಿಯನ್ನೂ ಧ್ವಂಸಗೊಳಿಸಲಾಗಿದೆ.

ಈ ದಾಳಿಯ ಬೆನ್ನಲ್ಲೇ ಉತ್ತರ ಗಾಜಾ ತೊರೆದು ದಕ್ಷಿಣಕ್ಕೆ ತೆರಳುವಂತೆ ಪ್ಯಾಲೆಸ್ತೀನೀಯರಿಗೆ ಇಸ್ರೇಲ್‌ ಸೇನಾಪಡೆಗಳು ‘ಅರ್ಜೆಂಟ್‌ ವಾರ್ನಿಂಗ್‌’ ನೀಡಿವೆ. ಉತ್ತರ ಗಾಜಾ ತೊರೆಯದಿದ್ದರೆ ನಿಮ್ಮನ್ನೂ ಭಯೋತ್ಪಾದಕರೆಂದು ಪರಿಗಣಿಸಿ ನಿರ್ಮೂಲನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿವೆ.

ಇದನ್ನು ಓದಿ: ಗಾಜಾ - ಈಜಿಪ್ಟ್‌ ಗಡಿ ಓಪನ್‌: ಆಹಾರ, ನೀರು, ಔಷಧ ಇಲ್ಲದೆ ಪರದಾಡುತ್ತಿದ್ದ ಗಾಜಾ ನಿವಾಸಿಗಳು ನಿರಾಳ

ಗಾಜಾ ಮೇಲೆ ಶನಿವಾರ ರಾತ್ರಿಯಿಡೀ ಇಸ್ರೇಲ್‌ ಪಡೆಗಳು ವಾಯು ದಾಳಿ ನಡೆಸಿವೆ. ಅದೇ ವೇಳೆ, ಸಿರಿಯಾ ಹಾಗೂ ವೆಸ್ಟ್‌ ಬ್ಯಾಂಕ್‌ ಮೇಲೂ ನಿರಂತರ ದಾಳಿ ನಡೆದಿದ್ದು, ಹಮಾಸ್‌ ಜೊತೆಗಿನ ಇಸ್ರೇಲ್‌ ಯುದ್ಧವು ಇದೀಗ ಅಕ್ಕಪಕ್ಕದ ದೇಶಗಳ ಜೊತೆಗೆ ಗಡಿ ಸಂಘರ್ಷವಾಗಿಯೂ ಮಾರ್ಪಡುವ ಸುಳಿವು ದೊರೆತಿದೆ.

ಗಾಜಾ ಜನರ ಮೊಬೈಲ್‌ಗೆ ಸಂದೇಶ:
ಗಾಜಾ ಗಡಿಯಲ್ಲಿ ಈಗಲೂ ಹತ್ತಾರು ಸಾವಿರ ಇಸ್ರೇಲಿ ಸೈನಿಕರು ಹಾಗೂ ಯುದ್ಧ ಟ್ಯಾಂಕ್‌ಗಳು ಬೀಡುಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಭೂದಾಳಿ ನಡೆಸಬಹುದು ಎಂದು ಹೇಳಲಾಗುತ್ತಿದೆ. ಆ ಕಾರಣಕ್ಕಾಗಿಯೇ ಉತ್ತರ ಗಾಜಾ ತೊರೆಯದಿದ್ದರೆ ನಿಮ್ಮನ್ನೂ ಭಯೋತ್ಪಾದಕರೆಂದು ಪರಿಗಣಿಸಿ ದಾಳಿ ನಡೆಸುತ್ತೇವೆ ಎಂದು ಇಸ್ರೇಲ್‌ ಸೇನಾಪಡೆಗಳು ‘ಅರ್ಜೆಂಟ್‌ ವಾರ್ನಿಂಗ್‌’ ನೀಡಿವೆ ಎಂದು ಹೇಳಲಾಗಿದೆ.

ಇದನ್ನು ಓದಿ: ಉಗ್ರರ ಸರ್ವನಾಶಕ್ಕೆ ರೆಡಿ! ಅಮೆರಿಕ, ಯುಕೆ ಬಲದ ಬಳಿಕ ಗಾಜಾದಲ್ಲಿ ದಾಳಿಗೆ ಸಿದ್ಧರಾಗುವಂತೆ ಭೂಸೇನೆಗೆ ಇಸ್ರೇಲ್‌ ಸೂಚನೆ!

‘ಗಾಜಾ ನಿವಾಸಿಗಳಿಗೆ ಇದು ತುರ್ತು ಎಚ್ಚರಿಕೆಯ ಸಂದೇಶ. ನೀವು ಉತ್ತರದ ವಾಡಿ ಗಾಜಾ ಪ್ರದೇಶದಲ್ಲಿ ಇನ್ನೂ ಇದ್ದರೆ ನಿಮ್ಮ ಜೀವ ಅಪಾಯದಲ್ಲಿದೆ. ಉತ್ತರ ಗಾಜಾ ತೊರೆದು ದಕ್ಷಿಣಕ್ಕೆ ಯಾರು ಹೋಗುವುದಿಲ್ಲವೋ ಅವರನ್ನೆಲ್ಲ ಭಯೋತ್ಪಾದಕ ಸಂಘಟನೆಗೆ ಸೇರಿದವರು ಎಂದು ಪರಿಗಣಿಸುತ್ತೇವೆ’ ಎಂಬ ಕರಪತ್ರವನ್ನು ಇಸ್ರೇಲ್‌ ಸೇನೆ ಬಿಡುಗಡೆ ಮಾಡಿದೆ. ಅಲ್ಲದೆ ಗಾಜಾ ನಿವಾಸಿಗಳ ಮೊಬೈಲ್‌ಗಳಿಗೂ ಇದೇ ಸಂದೇಶ ರವಾನಿಸಿದೆ.

ಪ್ರಧಾನಿ ನೆತನ್ಯಾಹು ತುರ್ತು ಸಂಪುಟ ಸಭೆ:
ಇಸ್ರೇಲ್‌ ಪದೇಪದೇ ಎಚ್ಚರಿಕೆ ನೀಡುತ್ತಿದ್ದರೂ ಉತ್ತರ ಗಾಜಾದಲ್ಲಿ ಈಗಲೂ ಸಾವಿರಾರು ಪ್ಯಾಲೆಸ್ತೀನಿ ನಾಗರಿಕರು ಜಾಗ ಖಾಲಿ ಮಾಡದೆ ಪಟ್ಟುಹಿಡಿದು ಕುಳಿತಿದ್ದಾರೆ. ಇದು ಇಸ್ರೇಲ್‌ನ ಭೂದಾಳಿಗೆ ಅಡ್ಡಿಯಾಗಿ ಪರಿಣಮಿಸಿದೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಶನಿವಾರ ತಡರಾತ್ರಿ ತುರ್ತು ಸಚಿವ ಸಂಪುಟ ಸಭೆ ನಡೆಸಿದ್ದು, ಅದರಲ್ಲಿ ಭೂದಾಳಿ ನಡೆಸುವ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮೋದಿ ಮಾತು ಕೊಟ್ಟಂತೆ ಪ್ಯಾಲೆಸ್ತೀನ್‌ಗೆ ಮಾನವೀಯ ನೆರವು ಕಳಿಸಿದ ಭಾರತ ಸರ್ಕಾರ: 6.5 ಟನ್ ಔಷಧಿ, ಅಗತ್ಯ ವಸ್ತು ರವಾನೆ

ಈಗಲೂ ಕತ್ತಲಿನಲ್ಲಿ ಗಾಜಾಪಟ್ಟಿ:
ಗಾಜಾ ಪಟ್ಟಿಗೆ ಆಹಾರ, ನೀರು, ಔಷಧ ಸರಬರಾಜು ಮಾಡುವ ಟ್ರಕ್‌ಗಳನ್ನು ಶನಿವಾರದಿಂದ ಒಳಗೆ ಬಿಡಲಾಗುತ್ತಿದೆಯಾದರೂ, ಇಂಧನ ಪೂರೈಕೆ ಟ್ರಕ್‌ಗಳು ಇನ್ನೂ ಗಡಿ ದಾಟಿ ಸಂಪೂರ್ಣ ಒಳಗೆ ಹೋಗಿಲ್ಲ. ಹೀಗಾಗಿ ಗಾಜಾದ ಆಸ್ಪತ್ರೆಗಳು ಈಗಲೂ ಕತ್ತಲಿನಲ್ಲಿ ಮುಳುಗಿದ್ದು, ಆಸ್ಪತ್ರೆಯ ಕಾರಿಡಾರ್‌ಗಳಲ್ಲಿ ವಿದ್ಯುತ್‌ ಇಲ್ಲದೆ ಕತ್ತಲಿನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ಸಾವಿನ ಸಂಖ್ಯೆ 5900ಕ್ಕೆ ಏರಿಕೆ:
ಗಾಜಾ ಪಟ್ಟಿಯಲ್ಲಿ ಈವರೆಗೆ ಇಸ್ರೇಲ್‌ ದಾಳಿಯಿಂದ ಮೃತಪಟ್ಟವರ ಸಂಖ್ಯೆ 4469ಕ್ಕೆ ಏರಿದೆ ಎಂದು ಅಲ್ಲಿನ ಆರೋಗ್ಯ ಸಚಿವರು ತಿಳಿಸಿದ್ದಾರೆ. ಇಸ್ರೇಲ್‌ನಲ್ಲಿ ಈವರೆಗೆ ಹಮಾಸ್‌ ದಾಳಿಯಿಂದ 1400 ಜನರು ಮೃತಪಟ್ಟಿದ್ದಾರೆ.

ಇಬ್ಬರು ನುಕ್‌ಬಾ ಕಮಾಂಡೋ ಹತ್ಯೆ:
ಶನಿವಾರ ರಾತ್ರಿ ಗಾಜಾ ಗಡಿಯ ಮೇಲೆ ಇಸ್ರೇಲ್‌ ನಡೆಸಿದ ವಾಯುದಾಳಿಯಲ್ಲಿ ಹಮಾಸ್‌ನ ‘ನುಕ್‌ಬಾ’ ಹೆಸರಿನ ಕಮಾಂಡೋ ಪಡೆಯ ಇಬ್ಬರು ಯೋಧರನ್ನು ಹತ್ಯೆಗೈಯಲಾಗಿದೆ. ಅವರ ಜೊತೆಗೆ ಇನ್ನಷ್ಟು ಹಮಾಸ್‌ ಉಗ್ರರನ್ನೂ ಹತ್ಯೆಗೈಯಲಾಗಿದೆ ಎಂದು ಇಸ್ರೇಲ್‌ ಹೇಳಿಕೊಂಡಿದೆ. ಅಕ್ಟೋಬರ್ 7ರಂದು ಇಸ್ರೇಲ್‌ ಮೇಲೆ ಹಮಾಸ್‌ ನಡೆಸಿದ ದಾಳಿಯನ್ನು ಇದೇ ನುಕ್‌ಬಾ ಕಮಾಂಡೋಗಳು ಮುನ್ನಡೆಸಿದ್ದರು ಎಂದು ಹೇಳಲಾಗಿದೆ.
 

Follow Us:
Download App:
  • android
  • ios