ಮೋದಿ ಮಾತು ಕೊಟ್ಟಂತೆ ಪ್ಯಾಲೆಸ್ತೀನ್‌ಗೆ ಮಾನವೀಯ ನೆರವು ಕಳಿಸಿದ ಭಾರತ ಸರ್ಕಾರ: 6.5 ಟನ್ ಔಷಧಿ, ಅಗತ್ಯ ವಸ್ತು ರವಾನೆ
ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ನಡುವೆ, ಗಾಜಾದ ಜನರಿಗೆ ಭಾರತ ಮಾನವೀಯ ನೆರವು ಕಳಿಸಿದೆ. ಮೋದಿ ಪ್ಯಾಲೆಸ್ತೀನ್ ಅಧ್ಯಕ್ಷರ ಜತೆ ದೂರವಾಣಿ ಮಾತುಕತೆ ನಡೆಸಿದ ಬಳಿಕ ನೆರವು ಕಳಿಸಲಾಗುತ್ತಿದೆ.
ನವದೆಹಲಿ (ಅಕ್ಟೋಬರ್ 22, 2023): ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ನಡುವೆ, ಗಾಜಾದ ಜನರಿಗೆ ಭಾರತ ಮಾನವೀಯ ನೆರವು ಕಳಿಸಿದೆ. ಯುದ್ಧದಿಂದಾಗಿ ಗಾಜಾದಲ್ಲಿ ನಾಗರಿಕರು ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಹಿನ್ನೆಲೆ ಭಾರತ ಪ್ಯಾಲೆಸ್ತೀನ್‌ಗೆ 6.5 ಟನ್‌ನಷ್ಟು ನೆರವು ನೀಡಿದೆ. ವಿದೇಶಾಂಗ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದೆ.
ಭಾರತೀಯ ವಾಯುಪಡೆಯ C-17 ವಿಮಾನವು ಈಜಿಪ್ಟ್‌ನ ಎಲ್-ಅರಿಶ್ ವಿಮಾನ ನಿಲ್ದಾಣಕ್ಕೆ ಪರಿಹಾರ ಸಾಮಗ್ರಿಗಳೊಂದಿಗೆ ಹೊರಟಿದೆ ಎಂದು MEA ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ. "ಭಾರತವು ಪ್ಯಾಲೆಸ್ತೀನ್ ಜನರಿಗೆ ಮಾನವೀಯ ನೆರವು ಕಳುಹಿಸುತ್ತದೆ. ಪ್ಯಾಲೆಸ್ತೀನ್ ಜನರಿಗಾಗಿ ಸುಮಾರು 6.5 ಟನ್ ವೈದ್ಯಕೀಯ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ IAF C-17 ವಿಮಾನವು ಭಾರತದಿಂದ ಈಜಿಪ್ಟ್‌ನ ಎಲ್-ಅರಿಶ್ ವಿಮಾನ ನಿಲ್ದಾಣಕ್ಕೆ ಹೊರಟಿದೆ. ಈ ವಸ್ತುವು ಉಳಿತಾಯ ಔಷಧಿಗಳು, ಶಸ್ತ್ರಚಿಕಿತ್ಸಾ ವಸ್ತುಗಳು, ಟೆಂಟ್‌ಗಳು, ಸ್ಲೀಪಿಂಗ್ ಬ್ಯಾಗ್ಸ್, ಟಾರ್ಪಾಲಿನ್‌ಗಳು, ನೈರ್ಮಲ್ಯ ಉಪಯುಕ್ತತೆಗಳು, ನೀರು ಶುದ್ಧೀಕರಣ ಮಾತ್ರೆಗಳು ಇತರ ಅಗತ್ಯ ವಸ್ತುಗಳನ್ನು ಒಳಗೊಂಡಿದೆ’’ ಎಂದು ಎಂಇಎ ವಕ್ತಾರರು ಹೇಳಿದ್ದಾರೆ.
ಇದನ್ನು ಓದಿ: ಗಾಜಾ - ಈಜಿಪ್ಟ್ ಗಡಿ ಓಪನ್: ಆಹಾರ, ನೀರು, ಔಷಧ ಇಲ್ಲದೆ ಪರದಾಡುತ್ತಿದ್ದ ಗಾಜಾ ನಿವಾಸಿಗಳು ನಿರಾಳ
ಅಕ್ಟೋಬರ್ 19 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಮಾತನಾಡಿದ ಬಳಿಕ ಈ ಕ್ರಮ ಬಂದಿದೆ. ದೂರವಾಣಿ ಸಂಭಾಷಣೆಯ ಸಮಯದಲ್ಲಿ, ಗಾಜಾದ ಅಲ್ ಅಹ್ಲಿ ಆಸ್ಪತ್ರೆಯಲ್ಲಿ ನಾಗರಿಕರ ಪ್ರಾಣಹಾನಿಗಾಗಿ ಪ್ರಧಾನಿ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
"ಭಾರತ ಮತ್ತು ಈ ಪ್ರದೇಶದ ನಡುವಿನ ಸಾಂಪ್ರದಾಯಿಕವಾಗಿ ನಿಕಟ ಮತ್ತು ಐತಿಹಾಸಿಕ ಸಂಬಂಧಗಳನ್ನು ಎತ್ತಿ ತೋರಿಸುತ್ತಾ, ಪ್ರಧಾನಮಂತ್ರಿಯವರು ಈ ಪ್ರದೇಶದಲ್ಲಿ ಭಯೋತ್ಪಾದನೆ, ಹಿಂಸಾಚಾರ ಮತ್ತು ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಅವರು ಇಸ್ರೇಲ್ - ಪ್ಯಾಲೆಸ್ತೀನ್ ವಿಷಯದಲ್ಲಿ ಭಾರತದ ದೀರ್ಘಕಾಲದ ಮತ್ತು ತತ್ವಬದ್ಧ ನಿಲುವನ್ನು ಪುನರುಚ್ಚರಿಸಿದರು" ಎಂದು ಪಿಎಂಒ ಹೇಳಿಕೆ ನೀಡಿದೆ.
ಇದನ್ನು ಓದಿ: ಉಗ್ರರ ಸರ್ವನಾಶಕ್ಕೆ ರೆಡಿ! ಅಮೆರಿಕ, ಯುಕೆ ಬಲದ ಬಳಿಕ ಗಾಜಾದಲ್ಲಿ ದಾಳಿಗೆ ಸಿದ್ಧರಾಗುವಂತೆ ಭೂಸೇನೆಗೆ ಇಸ್ರೇಲ್ ಸೂಚನೆ!
ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಪ್ರಧಾನಿ ಮೋದಿಯವರೊಂದಿಗೆ ಪರಿಸ್ಥಿತಿಯ ಮೌಲ್ಯಮಾಪನವನ್ನು ಹಂಚಿಕೊಂಡರು ಮತ್ತು ಭಾರತದ ಬೆಂಬಲಕ್ಕಾಗಿ ಧನ್ಯವಾದ ಅರ್ಪಿಸಿದರು ಎಂದೂ ಪಿಎಂಒ ಹೇಳಿದೆ. ಹಾಗೂ, ಪ್ಯಾಲೆಸ್ತೀನ್ ಜನರಿಗೆ ಭಾರತ ಮಾನವೀಯ ನೆರವು ಕಳುಹಿಸುವುದನ್ನು ಮುಂದುವರಿಸುತ್ತದೆ ಎಂದು ಅಧ್ಯಕ್ಷ ಅಬ್ಬಾಸ್‌ಗೆ ತಿಳಿಸಿದ್ದರು.
ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರಗಾಮಿ ಗುಂಪು ನಡೆಸಿದ ಭಯೋತ್ಪಾದಕ ದಾಳಿಯ ನಂತರ, ಪ್ರಧಾನಿ ಮೋದಿ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಇಸ್ರೇಲ್‌ಗೆ ಭಾರತದ ಬೆಂಬಲ ನೀಡಿದರು. ಆದರೂ ಸಹ ಮಾತುಕತೆಯ ಮೂಲಕ ಸಾರ್ವಭೌಮ, ಸ್ವತಂತ್ರ ಮತ್ತು ಕಾರ್ಯಸಾಧ್ಯವಾದ ಪ್ಯಾಲೆಸ್ತೀನ್ ರಾಜ್ಯವನ್ನು ಸ್ಥಾಪಿಸಲು ತನ್ನ ದೀರ್ಘಕಾಲದ ಬೆಂಬಲವನ್ನು ಭಾರತ ಸರ್ಕಾರ ನಂಬುತ್ತದೆ ಎಂದೂ ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.
ಇದನ್ನೂ ಓದಿ: ಜೋ ಬೈಡೆನ್ ಭೇಟಿ ಬೆನ್ನಲ್ಲೇ ಇಸ್ರೇಲ್‌ಗೆ ಬಂದಿಳಿದ ರಿಷಿ ಸುನಕ್: ಬೆಂಜಮಿನ್ ನೆತನ್ಯಾಹು ಭೇಟಿಯಾಗಲಿರೋ ಭಾರತದ ಅಳಿಯ