ಹಮಾಸ್ ಉಗ್ರರಿಗೆ ಇರಾನ್ ನೇರ ಬೆಂಬಲ, ಇಸ್ರೇಲ್‌ಗೆ 5000 ಯೋಧರ ತಂಡ ಕಳುಹಿಸಿದ ಅಮೆರಿಕ
ಹಮಾಸ್ ಉಗ್ರರಿಗೆ ನೇರ ಬೆಂಬಲ ಘೋಷಿಸಿದ ಇರಾನ್. ಇಸ್ರೇಲ್ ಮತ್ತು ಸೌದಿ ಅರೇಬಿಯಾ ನಡುವಿನ ಸಂಬಂಧ ಸುಧಾರಣೆ ತಡೆಯುವ ಹುನ್ನಾರ ಇದಾಗಿದೆ. ಇದರ ಬೆನ್ನಲ್ಲೇ ಇಸ್ರೇಲ್ ಗೆ ಬೆಂಬಲ ಘೋಷಿಸಿ ಅಮೆರಿಕದಿಂದ ಸೈನ್ಯ ರವಾನೆಯಾಗಿದೆ.

ವಾಷಿಂಗ್ಟನ್ (ಅ.9): ಇಸ್ರೇಲ್ ಮೇಲಿನ ಹಮಾಸ್ ಉಗ್ರರ ದಾಳಿಗೆ ಇರಾನ್ ಸರ್ಕಾರ ಬಹಿರಂಗ ಬೆಂಬಲ ಘೋಷಿಸಿದೆ. ಇಸ್ರೇಲ್ ಮತ್ತು ಸೌದಿ ಅರೇಬಿಯಾ ನಡುವಿನ ಸಂಬಂಧ ಸುಧಾರಣೆ ತಡೆಯುವ ಹುನ್ನಾರ ಇದರ ಹಿಂದಿದೆ ಎನ್ನಲಾಗಿದೆ.
ಇಸ್ರೇಲ್ ತನ್ನ ಸುತ್ತಮುತ್ತಲಿನ ಯಾವುದೇ ಅರಬ್ ದೇಶಗಳ ಜೊತೆಗೂ ಉತ್ತಮ ಸಂಬಂಧ ಹೊಂದಿಲ್ಲ. ಈ ನಡುವೆ ಈ ವೈಮನಸ್ಸು ದೂರ ಮಾಡಿ ಸೌದಿ ಮತ್ತು ಇಸ್ರೇಲ್ ನಡುವೆ ಸಂಬಂಧ ಸುಧಾರಣೆಗೆ ಅಮೆರಿಕ ಸತತ ಪ್ರಯತ್ನ ನಡೆಸುತ್ತಿದೆ. ಇದಕ್ಕೆ ಸೌದಿ ಕೂಡಾ ಪೂರಕವಾಗಿ ಸ್ಪಂದಿಸಿದೆ. ಇದು ಕೊಲ್ಲಿ ದೇಶಗಳ ಪೈಕಿ ಸೌದಿಯ ಬದ್ಧವೈರಿಯಾಗಿರುವ ಇರಾನ್‌ಗೆ ಸಾಕಷ್ಟು ಕಸಿವಿಸಿ ತಂದಿದೆ.
ಹಮಾಸ್ ಉಗ್ರರ ದಾಳಿಗೆ 1000 ಕ್ಕೂ ಹೆಚ್ಚು ಬಲಿ, 4000 ದಾಟಿದ ಗಾಯಾಳುಗಳ ಸಂಖ್ಯೆ!
ಹೀಗಾಗಿ ಹಮಾಸ್ ಉಗ್ರರಿಗೆ ನೇರ ಬೆಂಬಲ ಘೋಷಿಸುವ ಮೂಲಕ ಸೌದಿ ಅರೇಬಿಯಾಕ್ಕೆ ಎಚ್ಚರಿಕೆ ಸಂದೇಶ ರವಾನಿಸುವ ಯತ್ನವನ್ನು ಇರಾನ್ ಮಾಡಿದೆ. ಇಸ್ರೇಲ್ ಜೊತೆಗೆ ನೀವು ಒಪ್ಪಂದಕ್ಕೆ ಮುಂದಾಗಿದ್ದೇ ಆದಲ್ಲಿ ಮಧ್ಯಪ್ರಾಚ್ಯದಲ್ಲಿ ಸಂಘರ್ಷಮಯ ವಾತಾವರಣ ನಿರ್ಮಿಸಲು ತಾನು ರೆಡಿ ಎಂಬ ಸಂದೇಶ ಈ ಬೆಂಬಲದಲ್ಲಿ ಅಡಗಿದೆ ಎಂದು ಅಮೆರಿಕ ಮಾಧ್ಯಮವೊಂದು ವರದಿ ಮಾಡಿದೆ.
ಇರಾನಿನ ಸರ್ವೋಚ್ಚ ಧಾರ್ಮಿಕ ನಾಯಕ ಆಯತೊಲ್ಲಾ ಖೊಮೇನಿ, ಅತ್ಯುನ್ನತ ಮಿಲಿಟರಿ ಸಲಹೆಗಾರ ಯಾಹ್ಯಾ ರಹೀಂ ಸಫಾವಿ, ಪ್ಯಾಲೆಸ್ತೀನ್ ಮತ್ತು ಜೆರುಸಲೇಂ ಎರಡಕ್ಕೂ ವಿಮೋಚನೆ ಸಿಗುವರೆಗೂ ಹಮಾಸ್‌ಗೆ ಇರಾನ್ ಎಲ್ಲಾ ರೀತಿಯ ಬೆಂಬಲ ಮುಂದುವರೆಸಲಿದೆ ಎಂದು ಹೇಳಿದ್ದರು.
ಇಸ್ರೇಲ್‌ನಲ್ಲಿ ಸಿಲುಕಿದ್ದ ಏರ್ ಇಂಡಿಯಾ ಸಿಬ್ಬಂದಿ ರಕ್ಷಣೆ: ಅ.14ರವರೆಗೆ ವಿಮಾನ ಸಂಚಾರ ರದ್ದು
ಇಸ್ರೇಲ್‌ಗೆ ಅಮೆರಿಕ ಬೆಂಬಲ
ಇಸ್ರೇಲ್‌ಗೆ ಹಮಾಸ್ ಉಗ್ರರ ವಿರುದ್ಧದ ಯುದ್ಧದಲ್ಲಿ ಬೆಂಬಲ ನೀಡಲು ಅಮೆರಿಕವು ತನ್ನ ನೌಕಾಪಡೆ ಹಾಗೂ ವಾಯುಪಡೆಯ 5000 ಯೋಧರ ತಂಡವನ್ನು ಕಳಿಸಿದೆ. ಈ ತಂಡವನ್ನು ಯುದ್ಧನೌಕೆ ಹಾಗೂ ಯುದ್ಧವಿಮಾನ ಸಮೇತ ಅದನ್ನು ಮೆಡಿಟರೇನಿಯನ್ ಸಮುದ್ರದಲ್ಲಿ ನಿಯೋಜಿಸಲಾಗುತ್ತದೆ. ಯಾವುದೇ ಅಪಾಯದ ಸಂದರ್ಭದಲ್ಲಿ ಈ ತಂಡ ದಾಳಿಗೆ ಸಿದ್ಧವಾಗಿರುತ್ತದೆ.
ಇಸ್ರೇಲ್ ಮೇಲೆ ಪ್ಯಾಲೆಸ್ತಿನ್ ಉಗ್ರರ ಅಟ್ಟಹಾಸ, ಸಂಭ್ರಮಿಸಿದ ಲಂಡನ್
ಇಸ್ರೇಲ್ ಮೇಲೆ ದಾಳಿ ಮಾಡಿದ ಪ್ಯಾಲೆಸ್ತಿನ್‌ನ ಹಮಾಸ್ ಉಗ್ರರು ಹಲವಾರು ಜನರನ್ನು ಕೊಲೆ ಮಾಡಿ, ಅಪಹರಿಸಿದ ಘಟನೆ ಕುರಿತು ಲಂಡನ್‌ನಲ್ಲಿ ಸಂಭ್ರಮಾಚರಣೆ ನಡೆಸಲಾಗಿದೆ. ಲಂಡನ್‌ನ ಬೀದಿಗಳಲ್ಲಿ ಹಲವರು ಪ್ಯಾಲೆಸ್ತಿನ್ ಧ್ವಜ ಹಿಡಿದು ಇಸ್ರೇಲ್ ಮೇಲಿನ ದಾಳಿಯನ್ನು ಸಂಭ್ರಮಿಸಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಲಂಡನ್ ಪೊಲೀಸರು ‘ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿರುವ ಘಟನೆಗಳ ಬಗ್ಗೆ ನಮಗೆ ತಿಳಿದಿದೆ. ಇದು ಮುಭರುವ ದಿನಗಳಲ್ಲಿ ಪ್ರತಿಭಟನೆಗೆ ಕಾರಣವಾಗಬಹುದು ಎಂದು ನಮಗೆ ತಿಳಿದಿದ್ದು ಲಂಡನ್ ನಿವಾಸಿಗಳ ತೊಂದರೆಯಾಗುವಂತಹ ಯಾವುದೇ ಗದ್ದಲಗಳು ನಡೆಯದಂತೆ ಪೊಲೀಸ್ ಕ್ರಮ ಕೈಗೊಳ್ಳಲಾಗಿದೆ’ ಎಂದಿದ್ದಾರೆ. ಇನ್ನು ಈ ಸಂಭ್ರಮಾಚರಣೆಗೆ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.