ಇಸ್ರೇಲ್‌ನಲ್ಲಿ ದಿನಸಿ ಅಂಗಡಿಗಳು ಬಹುತೇಕ ಖಾಲಿ. 72 ತಾಸಿಗೆ ಆಗುವಷ್ಟು ದಿನಸಿ ಕೂಡಿಟ್ಟುಕೊಳ್ಳಿ ಎಂದು ಸೇನೆ ಸೂಚನೆ. ಅಂಗಡಿ, ಸೂಪರ್‌ ಮಾರ್ಕೆಟ್‌ಗೆ ಮುಗಿಬಿದ್ದ ಜನ ಅಗತ್ಯ ವಸ್ತುಗಳು ಖಾಲಿ.

ಟೆಲ್‌ ಅವೀವ್‌ (ಅ.11): ದೇಶದ ಪ್ರಧಾನಿ ಹಮಾಸ್‌ ಬಂಡುಕೋರರನ್ನು ಬುಡಸಮೇತ ನಿರ್ನಾಮ ಮಾಡುತ್ತೇವೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಗರ್ಜಿಸಿರುವ ನಡುವೆಯೇ ಇಸ್ರೇಲಿ ಸೇನೆಯು ತನ್ನ ನಾಗರಿಕರಿಗೆ ಮುಂದಿನ 72 ಗಂಟೆಗಳಿಗಾಗುವಷ್ಟು ಅಗತ್ಯ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಸೂಚನೆ ನೀಡಿದೆ. ಹೀಗಾಗಿ ಅಂಗಡಿ ಹಾಗೂ ಸೂಪರ್‌ ಮಾರ್ಕೆಟ್‌ಗೆ ಜನ ಮುಗಿಬಿದ್ದು ಖರೀದಿಸಿದ್ದು, ಬಹುತೇಕ ಅಂಗಡಿಗಳು ಖಾಲಿ ಆಗಿವೆ.

ಸೇನೆ ಸೂಚನೆ ನೀಡುತ್ತಿದ್ದಂತೆಯೇ ಸೋಮವಾರ ಹಾಗೂ ಮಂಗಳವಾರ ಆಹಾರ ಪದಾರ್ಥಗಳನ್ನು ಖರೀದಿಸಲು ಅಂಗಡಿಗಳಿಗೆ ದಂಗುಡಿಯಿಟ್ಟ ಗ್ರಾಹಕರು, ಭಯಭೀತರಾಗಿಯೇ ಅಗತ್ಯ ವಸ್ತುಗಳನ್ನು ಖರೀದಿ ಮಾಡಿದ್ದಾರೆ.

ಇಸ್ರೇಲ್‌ನಲ್ಲಿ ಕರೆನ್ಸಿ ಕುಸಿತ, ಭಾರತೀಯ ರೂಪಾಯಿ ಮೌಲ್ಯವೂ

ಆದರೆ ಅಂಗಡಿಗಳಲ್ಲಿ ವಸ್ತುಗಳ ದಾಸ್ತಾನು ಕೊರತೆ ಕಂಡುಬಂದಿದ್ದು, ಕೆಲವು ಅಂಗಡಿಗಳು ಗ್ರಾಹಕರು ಖರೀದಿಸುವ ವಸ್ತುಗಳ ಮೇಲೆ ಮಿತಿಯನ್ನು ಹಾಕಿವೆ.

ಇಸ್ರೇಲ್‌ ಪ್ರಧಾನಿ ಅಬ್ಬರಿಸಿದ್ದಂತೆ ಹಮಾಸ್‌ ಬಂಡುಕೋರರ ಮೇಲೆ ಸೇನೆ ಬೃಹತ್‌ ದಾಳಿ ನಡೆಸಬಹುದು. ಆಗ ಇಸ್ರೇಲ್‌ ಸ್ಥಿತಿ ಬಿಗಡಾಯಿಸಬಹುದು. ಹೀಗಾಗಿ ಜನರಿಗೆ ಅಗತ್ಯವಸ್ತು ದಾಸ್ತಾನಿಗೆ ಸೇನೆ ಸೂಚಿಸಿರಬಹುದು ಎಂದು ಅಂದಾಜಿಸಲಾಗಿದೆ.

ಗಾಜಾಗೆ ಇಸ್ರೇಲ್‌ ನೆರವು ನಿಲ್ಲಿಸಿದ ಹಿನ್ನೆಲೆ, ನಿವಾಸಿಗಳಿಗೆ ಸಹಾಯಹಸ್ತ ಚಾಚಲು ವಿಶ್ವ ಆರೋಗ್ಯ ಸಂಸ್ಥೆ ಕರೆ
ಗಾಜಾ ಪ್ರಾಂತ್ಯದಲ್ಲಿ ವಾಸಿಸುತ್ತಿರುವ ಪ್ಯಾಲೆಸ್ತೀನಿ ನಾಗರಿಕರು ಅಮಾಯಕರಾಗಿದ್ದು ಅವರಿಗೆ ಸಮಸ್ತ ವಿಶ್ವಸಮುದಾಯ ಸಹಾಯ ಹಸ್ತ ಚಾಚಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಕೋರಿದೆ.

ಇಸ್ರೇಲ್‌- ಪ್ಯಾಲೆಸ್ತೀನ್‌ ಯುದ್ಧದಲ್ಲಿ ಹಲವು ವಿದೇಶಿಗರ ಸಾವು

ಗಾಜಾ ಪ್ರದೇಶವನ್ನು ಹಮಾಸ್‌ ಬಂಡುಕೋರರು ಸಂಪೂರ್ಣವಾಗಿ ಆಕ್ರಮಿಸಿಕೊಂಡಿರುವ ಹಿನ್ನೆಲೆಯಲ್ಲಿ ಅಲ್ಲಿನ ಸಮಸ್ತ ಪ್ರದೇಶಕ್ಕೆ ಇಸ್ರೇಲ್‌ ಸರ್ಕಾರ ಮೂಲಭೂತ ಸೌಕರ್ಯಗಳಾದ ಆಹಾರ, ನೀರು ಹಾಗೂ ವಿದ್ಯುಚ್ಛಕ್ತಿ ಪೂರೈಕೆಯನ್ನು ಬಂದ್‌ ಮಾಡಿದೆ. ಇದರಿಂದ 23 ಲಕ್ಷ ಗಾಜಾ ಜನತೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಮನುಷ್ಯತ್ವದ ನೆಲೆಯಲ್ಲಿ ವಿಶ್ವಸಮುದಾಯ ಅವರಿಗೆ ತಮ್ಮ ಕೈಲಾದ ರೀತಿಯಲ್ಲಿ ಅಗತ್ಯ ನೆರವು ನೀಡಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.