ಗಾಜಾಪಟ್ಟಿ ಒಳಗೆ ಇಸ್ರೇಲ್‌ ಸೇನೆ, ಯುದ್ಧ ಟ್ಯಾಂಕರ್‌ ಲಗ್ಗೆ: ಗುಳೆ ಹೊರಟ ಸಾವಿರಾರು ಜನ

ಇಸ್ರೇಲಿನ ಸೇನೆಯ ತೆರವು ಆದೇಶವನ್ನು ನಮ್ಮ ಜನರು ಒಪ್ಪುವುದಿಲ್ಲ, ನಾವು ಜಾಗ ತೆರವು ಮಾಡುವುದಿಲ್ಲ ಎಂದು ಹಮಾಸ್‌ ಉಗ್ರರು ಘೋಷಿಸಿದ್ದಾರೆ. ಆದರೆ ಪ್ರಾಣಭೀತಿಯಿಂದಾಗಿ ಸಾವಿರಾರು ಜನರು ವಾಹನಗಳಲ್ಲಿ ಅಗತ್ಯ ವಸ್ತುಗಳನ್ನ ಹೇರಿಕೊಂಡು ದೇಶದ ದಕ್ಷಿಣ ದಿಕ್ಕಿನತ್ತ ಗುಳೆ ಹೊರಟ ದೃಶ್ಯಗಳು ಎಲ್ಲೆಡೆ ಕಂಡುಬಂದಿವೆ.

israel hamas war israel orders evacuation of 1 million in gaza ash

ಜೆರುಸಲೇಂ (ಅಕ್ಟೋಬರ್ 14, 2023): ಸಾವಿರಾರು ಅಮಾಯಕರ ಬಲಿ ಪಡೆದ ಹಮಾಸ್‌ ಉಗ್ರರ ಹೆಡೆ ಮುರಿಕಟ್ಟಲು ಅಂತಿಮ ದಾಳಿಗೆ ಸಜ್ಜಾಗಿರುವ ಇಸ್ರೇಲಿ ಸೇನಾಪಡೆ, ಹಮಾಸ್‌ ಉಗ್ರರ ವಶದಲ್ಲಿರುವ ಗಾಜಾದ ಉತ್ತರ ಭಾಗದ ಸುಮಾರು 11 ಲಕ್ಷ ಜನರಿಗೆ ಕೂಡಲೇ ಜಾಗ ಖಾಲಿ ಮಾಡುವಂತೆ ಸೂಚಿಸಿದೆ. ಇವರೆಲ್ಲರಿಗೂ ಸುರಕ್ಷತೆಯ ಕಾರಣಕ್ಕಾಗಿ ದೇಶದ ದಕ್ಷಿಣ ಭಾಗಕ್ಕೆ ವಲಸೆ ಹೋಗುವಂತೆ ಸೂಚಿಸಲಾಗಿದೆ. ಇಸ್ರೇಲಿ ಸೇನೆಯ ಈ ಆದೇಶದ ಗಾಜಾಪಟ್ಟಿ ಪ್ರದೇಶದ ಮೇಲಿನ ಭೂದಾಳಿಯ ಸ್ಪಷ್ಟ ಮುನ್ಸೂಚನೆ ಎನ್ನಲಾಗಿದೆ. ಅದಕ್ಕೆ ಇಂಬು ನೀಡುವಂತೆ ನೂರಾರು ಯುದ್ದ ಟ್ಯಾಂಕ್‌ಗಳು ಗಾಜಾದತ್ತ ಪ್ರಯಾಣ ಬೆಳೆಸುತ್ತಿರುವ ದೃಶ್ಯಗಳು ಕಂಡುಬಂದಿವೆ.

ಈ ನಡುವೆ ಇಸ್ರೇಲಿನ ಸೇನೆಯ ತೆರವು ಆದೇಶವನ್ನು ನಮ್ಮ ಜನರು ಒಪ್ಪುವುದಿಲ್ಲ, ನಾವು ಜಾಗ ತೆರವು ಮಾಡುವುದಿಲ್ಲ ಎಂದು ಹಮಾಸ್‌ ಉಗ್ರರು ಘೋಷಿಸಿದ್ದಾರೆ. ಆದರೆ ಪ್ರಾಣಭೀತಿಯಿಂದಾಗಿ ಸಾವಿರಾರು ಜನರು ವಾಹನಗಳಲ್ಲಿ ಅಗತ್ಯ ವಸ್ತುಗಳನ್ನ ಹೇರಿಕೊಂಡು ದೇಶದ ದಕ್ಷಿಣ ದಿಕ್ಕಿನತ್ತ ಗುಳೆ ಹೊರಟ ದೃಶ್ಯಗಳು ಎಲ್ಲೆಡೆ ಕಂಡುಬಂದಿವೆ. ಗಾಜಾದ ಒಟ್ಟು 23 ಲಕ್ಷ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರು ದೇಶದ ಉತ್ತರ ಭಾಗದಲ್ಲಿ ನೆಲೆಸಿದ್ದಾರೆ. ಈ ನಡುವೆ ಏಕಕಾಲಕ್ಕೆ 11 ಲಕ್ಷಕ್ಕೂ ಹೆಚ್ಚು ಜನರ ತೆರವಿಗೆ ಆದೇಶಿಸಿದ ಇಸ್ರೇಲಿ ಸೇನೆಯ ಕ್ರಮದ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕಪಡಿಸಿದ್ದು, ಇದು ಭಾರೀ ಅನಾಹುತಕ್ಕೆ ಎಡೆಮಾಡಿಕೊಡಲಿದೆ ಎಂದು ಎಚ್ಚರಿಸಿದೆ.

ಇದನ್ನು ಓದಿ: ಆಪರೇಷನ್ ಅಜಯ್: 9 ಕನ್ನಡಿಗರು ಸೇರಿ 235 ಮಂದಿ ಭಾರತೀಯರು ಇಸ್ರೇಲ್‌ನಿಂದ ತಾಯ್ನಾಡಿಗೆ ಎಂಟ್ರಿ

ಭೂ ದಾಳಿ ಸನ್ನಿಹಿತ:
ಹಮಾಸ್‌ ಉಗ್ರರ ಪ್ರಮುಖ ಕೇಂದ್ರಗಳು, ಶಸ್ತ್ರಾಸ್ತ್ರ ಸಂಗ್ರಹಾಗಾರ, ಭೂಗತ ಕೇಂದ್ರಗಳು ಮತ್ತು ಗಾಜಾ ಸಿಟಿ ಇರುವ ದೇಶದ ಉತ್ತರ ಭಾಗದಲ್ಲಿನ 11 ಲಕ್ಷ ಜನರಿಗೆ ಜಾಗ ಖಾಲಿ ಮಾಡುವಂತೆ ಇಸ್ರೇಲಿ ಸೇನೆ ಶುಕ್ರವಾರ ಸೂಚಿಸಿದೆ. ಹಮಾಸ್‌ ಉಗ್ರರು, ಈ ಪ್ರದೇಶದಲ್ಲಿ ತಮ್ಮ ಪ್ರಮುಖ ನೆಲೆ ಹೊಂದಿದ್ದು, ಸ್ಥಳೀಯ ನಾಗರಿಕರನ್ನು ಮಾನವ ತಡೆಗೋಡೆ ರೀತಿಯಲ್ಲಿ ಬಳಸಿಕೊಂಡು ಇಸ್ರೇಲ್‌ ಮೇಲೆ ದಾಳಿ ನಡೆಸುತ್ತಿದೆ ಎಂಬುದು ಇಸ್ರೇಲ್‌ ವಾದ.

ಇದೇ ಕಾರಣಕ್ಕಾಗಿ ಉಗ್ರರ ಜಂಘಾಬಲವನ್ನೇ ನುಚ್ಚುನೂರು ಮಾಡುವ ಸಲುವಾಗಿ ಇದೀಗ ಆ ಪ್ರದೇಶದ ಮೇಲೆ ಭೂ ದಾಳಿ ನಡೆಸಲು ಸಜ್ಜಾಗಿದೆ. ಆದರೆ ಜನದಟ್ಟಣೆಯಲ್ಲಿ ವಿಶ್ವದಲ್ಲೇ 3ನೇ ಸ್ಥಾನದಲ್ಲಿರುವ ಗಾಜಾ ಪ್ರದೇಶದ ಮೇಲಿನ ಏಕಾಏಕಿ ದಾಳಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗುವ ಕಾರಣ, ಮೊದಲು ಅಲ್ಲಿಂದ ಜನರನ್ನು ತೆರವು ಮಾಡಲು ಇಸ್ರೇಲ್‌ ಸೇನೆ ಸಜ್ಜಾಗಿದೆ. ಜನರ ತೆರವು ಬಳಿಕ ಅಲ್ಲಿ ಭೂದಾಳಿ ನಡೆಸಿ ಉಗ್ರರ ಮೂಲಸೌಕರ್ಯವನ್ನು ಪೂರ್ಣವಾಗಿ ನಾಶ ಮಾಡಿದರೆ ಇನ್ನೊಂದಿಷ್ಟು ವರ್ಷ ಉಗ್ರರ ಹಾವಳಿ ಇರದು ಎಂಬುದು ಇಸ್ರೇಲ್‌ ಲೆಕ್ಕಾಚಾರ. ಹೀಗಾಗಿ ಅಲ್ಲಿಗೆ ದಾಳಿ ನಡೆಸಲು ಅದು ಯೋಜಿಸಿದೆ.

ಇದನ್ನು ಓದಿ: ಯಾರ್ಯಾರು ಬದುಕ್ಬೇಕೋ ಅವರು 24 ಗಂಟೆಗಳಲ್ಲಿ ಊರು ಖಾಲಿ ಮಾಡಿ ಎಂದ ಇಸ್ರೇಲ್‌: ದಿಕ್ಕಾಪಾಲಾಗಿ ಓಡ್ತಿರೋ ಗಾಜಾ ಜನತೆ!

ನಾಗರಿಕರಿಗೆ ಯಾವುದೇ ಹಾನಿ ಮಾಡಲು ನಾವು ಬಯಸುವುದಿಲ್ಲ. ಹೀಗಾಗಿ ಅವರ ತೆರವಿಗೆ ಸೂಚಿಸಿದ್ದೇವೆ. ಕಾರ್ಯಾಚರಣೆ ಮುಗಿದ ಬಳಿಕ ಮತ್ತೆ ಅವರಿಗೆ ತಮ್ಮ ತಮ್ಮ ಸ್ಥಳಕ್ಕೆ ಮರಳಲು ಅವಕಾಶ ಕಲ್ಪಿಸಲಾಗುವುದು ಎಂದು ಇಸ್ರೇಲಿ ಸೇನೆ ಹೇಳಿಕೊಂಡಿದೆ.

ಸಾಮೂಹಿಕ ಗುಳೆ:
ಇಸ್ರೇಲ್‌ ಸೇನೆ ಸೂಚನೆ ಬೆನ್ನಲ್ಲೇ ಸಾವಿರಾರು ಜನರು ಆತಂಕದಿಂದಾಗಿ ವಾಹನ ಏರಿ ದೇಶದ ದಕ್ಷಿಣ ಭಾಗಗಳತ್ತ ಪ್ರಯಾಣ ಬೆಳೆಸಿದ್ದಾರೆ. ಈಗಾಗಲೇ ವಿದ್ಯುತ್‌, ಇಂಧನ, ನೀರು, ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತದಿಂದ ಕಂಗಾಲಾಗಿರುವ ಜನತೆ ಇದೀಗ ಜೀವ ಉಳಿಸಿಕೊಳ್ಳುವ ಸಲುವಾಗಿ ಸಾಮೂಹಿಕ ಗುಳೆ ಹೊರಟಿದ್ದಾರೆ. ಸದ್ಯಕ್ಕೆ ಜನರಿಗೆ ಇಂಧನ, ನೀರು, ವಿದ್ಯುತ್‌ಗಿಂತ ಜೀವ ಉಳಿಸಿಕೊಳ್ಳುವುದು ಮೊದಲ ಆದ್ಯತೆಯಾಗಿದೆ ಎಂದು ಗಾಜಾ ನಗರದ ರೆಡ್‌ಕ್ರಾಸ್‌ ಸಿಬ್ಬಂದಿಯೊಬ್ಬರು ಸ್ಥಳೀಯರ ಪರಿಸ್ಥಿತಿ ವರ್ಣಿಸಿದ್ದಾರೆ.

ಇದನ್ನೂ ಓದಿ: ಗಾಜಾಗೆ ಮತ್ತೊಂದು ದೊಡ್ಡ ಶಾಕ್ ನೀಡಿದ ಇಸ್ರೇಲ್‌: ನೀರಿಲ್ಲ, ಕರೆಂಟಿಲ್ಲ, ಇಂಧನವೂ ಇಲ್ಲ!

ಈ ನಡುವೆ ಆಸ್ಪತ್ರೆಯಲ್ಲಿ ಸಾವಿರಾರು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ತೆರವುಗೊಳಿಸುವುದು ಸಾಧ್ಯವಿಲ್ಲ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ ಇದು ಯುದ್ಧಭೂಮಿ. ನಾವು ಮುನ್ನೆಚ್ಚರಿಕೆ ನೀಡಿದ್ದೇವೆ. ತೆರವು ಮಾಡದೇ ಇದ್ದಲ್ಲಿ ಮುಂದೆ ಆಗುವ ಪರಿಣಾಮಗಳಿಗೆ ಹಮಾಸ್‌ ಹೊಣೆಯಾಗಲಿದೆ ಎಂದು ಇಸ್ರೇಲ್‌ ಸೇನೆ ಸ್ಪಷ್ಟಪಡಿಸಿದೆ.

ವಿಶ್ವಸಂಸ್ಥೆ ಕಳವಳ:
ಈ ನಡುವೆ ಭೀಕರ ಮಾನವೀಯ ಪರಿಣಾಮಗಳಿಲ್ಲದೇ ಏಕಾಏಕಿ ಇಷ್ಟು ಜನರ ಸ್ಥಳಾಂತರ ಸಾಧ್ಯವಿಲ್ಲ. ಹೀಗಾಗಿ ಇಂಥ ಸೂಚನೆಯನ್ನು ಇಸ್ರೇಲ್‌ ಸರ್ಕಾರ ಹಿಂಪಡೆಯಬೇಕು ಎಂದು ವಿಶ್ವಸಂಸ್ಥೆ ಒತ್ತಾಯಿಸಿದೆ. ಇಂಥ ನಿರ್ಧಾರ, ಈಗಾಗಲೇ ಉದ್ವಿಗ್ನವಾಗಿರುವ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ನೆರವಾಗಲಿದೆ ಎಂದು ವಿಸ್ವಸಂಸ್ಥೆ ಹೇಳಿದೆ.

ಇದನ್ನೂ ಓದಿ: ಹಮಾಸ್‌ ಬಗ್ಗೆ ಶಶಿ ತರೂರ್‌ ಹೇಳಿಕೆಗೆ ಇಸ್ರೇಲ್‌ ಮಾಜಿ ರಾಯಭಾರಿ ಆಘಾತ: ಕಾಂಗ್ರೆಸ್‌ ನಾಯಕನ ಸ್ಪಷ್ಟನೆ ಹೀಗಿದೆ..

ಈಜಿಪ್ಟ್‌ ಗಡಿಯಲ್ಲಿ ಬಂದೋಬಸ್ತ್‌:
ಈ ನಡುವೆ ಗುಳೆ ಹೊರಟ ಜನರು ತನ್ನ ದೇಶ ಪ್ರವೇಶಿಸದಂತೆ ನೋಡಿಕೊಳ್ಳಲು ಈಜಿಪ್ಟ್‌ ಸರ್ಕಾರ ಎಲ್ಲಾ ಬಂದೋಬಸ್ತ್‌ ಮಾಡಿದೆ. ಗಾಜಾ ತನ್ನ ದಕ್ಷಿಣ ದಿಕ್ಕಿನಲ್ಲಿ ಈಜಿಪ್ಟ್‌ನೊಂದಿಗೆ ಮತ್ತು ಉತ್ತರ ಹಾಗೂ ಪೂರ್ವದಲ್ಲಿ ಇಸ್ರೇಲ್‌ನೊಂದಿಗೆ ಗಡಿ ಹಂಚಿಕೊಂಡಿದೆ.

Latest Videos
Follow Us:
Download App:
  • android
  • ios