ಇಸ್ರೇಲ್ ದಾಳಿಗೆ ಗಾಜಾ ತಲ್ಲಣ: ಹಿರೋಶಿಮಾ ಬಾಂಬ್ ದಾಳಿಯಷ್ಟು ಸ್ಫೋಟಕ ಬಳಕೆ
ಅ.7ರಂದು ದೇಶದ ಗಡಿಯೊಳಗೆ 1400ಕ್ಕೂ ಹೆಚ್ಚು ಜನರನ್ನು ಹತ್ಯೆಗೈದ ಹಮಾಸ್ ಉಗ್ರರ ನಿರ್ನಾಮಕ್ಕೆ ಪಣತೊಟ್ಟು 19 ದಿನದಿಂದ ಇಸ್ರೇಲಿ ಸೇನೆ ನಡೆಸುತ್ತಿರುವ ದಾಳಿಗೆ ಗಾಜಾಪಟ್ಟಿ ಪ್ರದೇಶ ಅಕ್ಷರಶಃ ತಲ್ಲಣಗೊಂಡಿದೆ.
ಟೆಲ್ ಅವಿವ್: ಅ.7ರಂದು ದೇಶದ ಗಡಿಯೊಳಗೆ 1400ಕ್ಕೂ ಹೆಚ್ಚು ಜನರನ್ನು ಹತ್ಯೆಗೈದ ಹಮಾಸ್ ಉಗ್ರರ ನಿರ್ನಾಮಕ್ಕೆ ಪಣತೊಟ್ಟು 19 ದಿನದಿಂದ ಇಸ್ರೇಲಿ ಸೇನೆ ನಡೆಸುತ್ತಿರುವ ದಾಳಿಗೆ ಗಾಜಾಪಟ್ಟಿ ಪ್ರದೇಶ ಅಕ್ಷರಶಃ ತಲ್ಲಣಗೊಂಡಿದೆ. ಪ್ರಮುಖ ನಗರ ರಫಾ ಸೇರಿದಂತೆ ಉತ್ತರ ಮತ್ತು ದಕ್ಷಿಣದ ಗಾಜಾದ ಮೇಲೆ ಇಸ್ರೇಲಿ ಸೇನೆ ಭಾರೀ ಪ್ರಮಾಣದ ವೈಮಾನಿಕ ದಾಳಿ ನಡೆಸಿದ್ದು, ನೂರಾರು ಕಟ್ಟಡಗಳು ನೆಲಸಮವಾಗಿದೆ. ಜೊತೆಗೆ ದಾಳಿಯಲ್ಲಿ ಮತ್ತೆ ನೂರಾರು ಜನರು ಸಾವನ್ನಪ್ಪಿದ್ದು, ಇಡೀ ಪ್ರದೇಶ ಸ್ಮಶಾನಸದೃಶ್ಯವಾಗಿದ್ದು ಯುದ್ಧದ ಭೀಕರತೆ ಸಾರಿ ಹೇಳುತ್ತಿವೆ.
ಮಂಗಳವಾರ ರಾತ್ರಿಯಿಂದಲೂ ಇಸ್ರೇಲಿ ಸೇನಾ ಪಡೆಗಳು (Israel Defense Force) ಹಮಾಸ್ ಉಗ್ರರು ಅಡಗಿದ್ದಾರೆ ಎನ್ನಲಾದ ಮತ್ತು ಶಸ್ತ್ರಾಸ್ತ್ರ ಸಂಗ್ರಹಿಸಿದ್ದಾರೆ ಎನ್ನಲಾದ ಪ್ರದೇಶಗಳನ್ನು ಗುರಿಯಾಗಿಸಿ ಕಂಡುಕೇಳರಿಯದ ರೀತಿಯಲ್ಲಿ ವೈಮಾನಿಕ ದಾಳಿ (Sir strike) ನಡೆಸಿವೆ. ಹೀಗಾಗಿ ಉಗ್ರರು ಹೊರಗೆ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ.
ಇಸ್ರೇಲ್ ಮೇಲೆ ಹಮಾಸ್ ದಾಳಿ: ಭಯೋತ್ಪಾದನೆಗೆ ಕುಮ್ಮುಕ್ಕು ನೀಡಿದ ಖ್ಯಾತ ನಟಿ ಅರೆಸ್ಟ್
ಈ ನಡುವೆ ಹಮಾಸ್ ಉಗ್ರರ (Hamas terrorist) ಬಳಿ ಒತ್ತೆ ಇರುವ 200ಕ್ಕೂ ಹೆಚ್ಚು ಪ್ರಜೆಗಳ ಬಿಡುಗಡೆ ಪ್ರಯತ್ನ ಮುಂದುವರೆಸಿರುವ ಇಸ್ರೇಲಿ ಸೇನೆ, ಯಾರು ಮುಂದಿನ ದಿನಗಳಲ್ಲೂ ಬದುಕುಳಿಯಬೇಕೆಂದು ಬಯಸಿದ್ದೀರೋ? ಯಾರು ನಿಮ್ಮ ಮಕ್ಕಳು ಉತ್ತಮ ಭವಿಷ್ಯ ಹೊಂದಬೇಕು ಎಂದು ಬಯಸಿದ್ದಿರೋ? ಅವರು ಒತ್ತೆಯಾಳುಗಳು ಇರುವ ಸ್ಥಳದ ಬಗ್ಗೆ ನಿಖರ ಮಾಹಿತಿ ನೀಡಿ. ನಿಮ್ಮ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು, ಆರ್ಥಿಕ ನೆರವು ನೀಡಲಾಗುವುದು ಮತ್ತು ಎಲ್ಲಾ ರೀತಿಯಲ್ಲೂ ಭದ್ರತೆ ನೀಡಲಾಗುವುದು ಎಂದು ಗಾಜಾಪಟ್ಟಿ (Gaza Strip) ಪ್ರದೇಶದ ಪ್ಯಾಲೆಸ್ತೀನಿ ಜನರಿಗೆ ಸೂಚಿಸಿದೆ.
ಈ ನಡುವೆ ಗಾಜಾ ಪಟ್ಟಿ ಪ್ರದೇಶಕ್ಕೆ ಇಸ್ರೇಲ್ ಸರ್ಕಾರ, ಅಗತ್ಯ ಆಹಾರ ಸಾಮಗ್ರಿ, ಇಂಧನ ಮತ್ತು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ 2 ವಾರ ಕಳೆದಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ಆಹಾರ, ನೀರು, ವೈದ್ಯಕೀಯ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದಾರೆ ಎಂದು ಪರಿಹಾರ ಕೆಲಸದಲ್ಲಿ ತೊಡಗಿರುವ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಸತತ ವೈಮಾನಿಕ ದಾಳಿ ಮತ್ತು ಇಂಧನ ಕೊರತೆಯ ಪರಿಣಾಮ ಗಾಜಾದ 3ರ ಪೈಕಿ ಕನಿಷ್ಠ 1 ಆಸ್ಪತ್ರೆ ಸೇವೆ ನೀಡುವುದನ್ನು ಸ್ಥಗಿತಗೊಳಿಸಿದೆ. ಹೀಗಾಗಿ ಗಾಯಾಳುಗಳು ಮತ್ತು ಸಂತ್ರಸ್ತರ( war victims) ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ.
ಮನೆಗೆ ಬೆಂಕಿ ಹಚ್ಚಿದ್ದ ಹಮಾಸ್ ಉಗ್ರರು, ಕಿಟಕಿಯಲ್ಲಿ ಮಗು ಮಲಗಿಸಿ ಬದುಕಳಿದ ಇಸ್ರೇಲ್ ಕುಟುಂಬ!
ಕರ್ತವ್ಯ:
ಇದೇ ವೇಳೆ ‘ಅ.7ರ ದಾಳಿಗೆ ಸರಿಸಮನಾದ ಪ್ರತಿಕ್ರಿಯೆ ಎಂದರೆ ಹಮಾಸ್‌ನ ಕೊನೆಯ ಉಗ್ರನ ಸಂಪೂರ್ಣ ವಿನಾಶ. ಇದು ಕೇವಲ ಇಸ್ರೇಲಿಗಳ ಹಕ್ಕಲ್ಲ ಬದಲಾಗಿ ಅದು ನಮ್ಮ ಕರ್ತವ್ಯ ಎಂದು ಇಸ್ರೇಲ್‌ನ ವಿದೇಶಾಂಗ ಸಚಿವ ಎಲಿ ಕೋಹೆನ್ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಮಾಹಿತಿ ನೀಡಿದ್ದಾರೆ.
ವಿಫಲ ಯತ್ನ:
ಈ ನಡುವೆ ಸಮುದ್ರದ ಮಾರ್ಗದಲ್ಲಿ ಈಜಿಬಂದು ದೇಶದ ಗಡಿ ಪ್ರವೇಶಕ್ಕೆ ಯತ್ನಿಸುತ್ತಿದ್ದ ಹಮಾಸ್ ಉಗ್ರರ ಗುಂಪಿನ ಯತ್ನವನ್ನು ಯಶಸ್ವಿಯಾಗಿ ತಡೆಯಲಾಗಿದೆ. ಜೊತೆಗೆ ಇತ್ತೀಚೆಗೆ ತನ್ನ ಮೇಲೆ ದಾಳಿ ನಡೆಸಿದ್ದ ಸಿರಿಯಾದ (Syria) ಸೇನಾ ಮೂಲಸೌಕರ್ಯವೊಂದನ್ನು ದಾಳಿಯ ಮೂಲಕ ಧ್ವಂಸಗೊಳಿಸಲಾಗಿದೆ ಎಂದು ಇಸ್ರೇಲ್ ಸೇನೆ ಮಾಹಿತಿ ನೀಡಿದೆ.
ಭೂದಾಳಿ ಇಸ್ರೇಲ್‌ಗೆ ಬಿಟ್ಟ ವಿಷಯ: ಬೈಡೆನ್
ಇದೇ ವೇಳೆ ಗಾಜಾದ ಮೇಲಿನ ಭೂದಾಳಿ ಮುಂದೂಡುವಂತೆ ಇಸ್ರೇಲ್‌ಗೆ ಸಲಹೆ ನೀಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅಮೆರಿಕದ ಅಧ್ಯಕ್ಷ ಜೋ ಬೈಡೆನ್(Joe Biden) ಏನು ಮಾಡಬೇಕೆಂಬುದು ಇಸ್ರೇಲ್‌ಗೆ ಗೊತ್ತಿಗೆ. ಅದು ಅವರಿಗೆ ಬಿಟ್ಟ ವಿಷಯ. ಎಚ್ಚರಿಕೆ ವಹಿಸಿ ಎಂದಷ್ಟೇ ನಾವು ಅವರಿಗೆ ಸಲಹೆ ನೀಡುತ್ತೇವೆ ಎನ್ನುವ ಮೂಲಕ ಭೂ ದಾಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಗಾಜಾದ ಮೇಲೆ ಹಿರೋಶಿಮಾ ಬಾಂಬ್ ದಾಳಿಯಷ್ಟು ಸ್ಫೋಟಕ ಬಳಕೆ
ಗಾಜಾ: ಕಳೆದ 2 ವಾರದಿಂದ ಗಾಜಾಪಟ್ಟಿ ಪ್ರದೇಶದ ಮೇಲೆ ಸತತವಾಗಿ ದಾಳಿ ನಡೆಸುತ್ತಿರುವ ಇಸ್ರೇಲಿ ಸೇನಾಪಡೆಗಳು, ಈ ದಾಳಿಗೆ 12000 ಟನ್‌ನಷ್ಟು ಭಾರೀ ಪ್ರಮಾಣದ ಸ್ಫೋಟಕ ಬಳಸಿವೆ ಎಂದು ಗಾಜಾ ಸರ್ಕಾರದ ಮಾಧ್ಯಮ ಕಚೇರಿ ಹೇಳಿದೆ. ಇಸ್ರೇಲಿ ಸೇನೆ ಬಳಸಿರುವ ಈ ಸ್ಫೋಟದ ಪ್ರಮಾಣವು, 1945ರಲ್ಲಿ ಜಪಾನ್‌ನ ಹಿರೋಷಿಮಾ ಮೇಲೆ ಅಮೆರಿಕ ನಡೆಸಿದ ಬಾಂಬ್ ದಾಳಿಗೆ ಸಮನಾದುದು. ಪ್ರತಿ ಚದರ ಕಿ.ಮೀ ವ್ಯಾಪ್ತಿಯಲ್ಲಿ 33 ಟನ್‌ಗಳಷ್ಟು ಸ್ಫೋಟಕವನ್ನು ಬಳಸಿ ದಾಳಿ ನಡೆಸಲಾಗಿದೆ ಎಂದು ಅದು ಹೇಳಿದೆ. ಯುದ್ಧವು ಈವರೆಗೆ 7 ಸಾವಿರಕ್ಕೂ ಹೆಚ್ಚು ಜನರ ಬಲಿ ಪಡೆದಿದೆ.