* ಮಾಜಿ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಪ್ರವಾದಿ ಮೊಹಮ್ಮದ್‌ ವಿರುದ್ಧ ಅವಹೇಳನಕಾರಿ ಹೇಳಿಕೆ* ಪ್ರವಾದಿ ಅವಹೇಳನಕ್ಕೆ ಪ್ರತೀಕಾರವಾಗಿ ಕ್ರಮ: ಉಗ್ರ ಸಂಘಟನೆ* ಪ್ರವಾದಿಯನ್ನು ಬೆಂಬಲಿಸಲು ಅಪ್ಘಾನಿಸ್ತಾನದ ಸಿಖ್‌ ಗುರುದ್ವಾರದ ಮೇಲೆ ದಾಳಿ  

ಕಾಬೂಲ್‌(ಜೂ.20): ‘ಪ್ರವಾದಿಯನ್ನು ಬೆಂಬಲಿಸಲು ಅಪ್ಘಾನಿಸ್ತಾನದ ಸಿಖ್‌ ಗುರುದ್ವಾರದ ಮೇಲೆ ದಾಳಿ ನಡೆಸಲಾಗಿದೆ’ ಎಂದು ಕಾಬೂಲ್‌ ಗುರುದ್ವಾರದ ದಾಳಿ ಹೊಣೆಯನ್ನು ಹೊತ್ತ ಐಸಿಸ್‌ ಉಗ್ರ ಸಂಘಟನೆ ಹೇಳಿಕೆ ನೀಡಿದೆ.

ಭಾರತದಲ್ಲಿ ಮಾಜಿ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಪ್ರವಾದಿ ಮೊಹಮ್ಮದ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಪ್ರತೀಕಾರ ಸ್ವರೂಪವಾಗಿ ಹಿಂದೂಗಳ ಮೇಲೆ ದಾಳಿ ನಡೆಸುವುದಾಗಿ ಐಸಿಸ್‌ ಬೆಂಬಲಿತ ಇಸ್ಲಾಮಿಕ್‌ ಸ್ಟೇಟ್ಸ್‌ ಖೊರಾಸಾನ್‌ ಉಗ್ರ ಸಂಘಟನೆಯು ಇತ್ತೀಚೆಗೆ ಹೇಳಿತ್ತು. ಅದರ ಬೆನ್ನಲ್ಲೇ ಈ ಕೃತ್ಯ ನಡೆದಿದೆ.

ಇಸ್ಮಾಮಿಕ್‌ ಸ್ಟೇಟ್‌ ಜಾಲತಾಣದಲ್ಲಿ, ‘ಶನಿವಾರ ನಡೆಸಿದ ದಾಳಿ ಹಿಂದೂ ಹಾಗೂ ಸಿಖ್ಖರನ್ನು ಉದ್ದೇಶಿಸಿ ನಡೆಸಿದ್ದು, ಅಲ್ಲಾನ ಸಂದೇಶವಾಹಕನಿಗೆ ಬೆಂಬಲಿಸಲು ಈ ಕೃತ್ಯ ನಡೆಸಲಾಗಿದೆ’ ಎಂದು ಪೋಸ್ಟ್‌ ಮಾಡಲಾಗಿದೆ. ಈ ಹಿಂದೆ ಕೂಡಾ ಅಪ್ಘಾನಿಸ್ತಾನದ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದೂ, ಸಿಖ್ಖರ ಧಾರ್ಮಿಕ ಸ್ಥಳಗಳ ಮೇಲೆ ಇಸ್ಲಾಮಿಕ್‌ ಸ್ಟೇಟ್‌ ದಾಳಿ ನಡೆಸಿತ್ತು.

ಶನಿವಾರ ಕಾಬೂಲಿನ ಕಾರ್ತೆ ಪರ್ವಾನ್‌ ಸಿಖ್ಖ ಗುರುದ್ವಾರದಲ್ಲಿ ಉಗ್ರರು ನುಗ್ಗಿ ಗುಂಡು ಹಾಗೂ ಗ್ರೇನೇಡ್‌ ದಾಳಿ ನಡೆಸಿದ್ದರು. ಅಲ್ಲದೇ ಗುರುದ್ವಾರದ ಬಳಗಡೆ ಬಾಂಬ್‌ ಸ್ಫೋಟ ಮಾಡಿದ್ದರು. ಈ ದಾಳಿಯಲ್ಲಿ ಒಬ್ಬ ಸಿಖ್‌ ಸೇರಿದಂತೆ ಇಬ್ಬರು ಮೃತಪಟ್ಟಿದ್ದರು. 7 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಯಲ್ಲಿ ಭದ್ರತಾಪಡೆಗಳು 3 ಉಗ್ರರ ಹತ್ಯೆಗೈದಿದ್ದವು.