Russia Ukraine war ಯುದ್ಧ ಕುರಿತ ಅಂತಾರಾಷ್ಟ್ರೀಯ ಕೋರ್ಟ್ ಕಲಾಪಕ್ಕೆ ರಷ್ಯಾ ಬಹಿಷ್ಕಾರ!
- ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ
- ತಕ್ಷಣವೇ ಸೇನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಉಕ್ರೆನ್ ವನವಿ
- 3ನೇ ಸುತ್ತಿನ ಸಂಧಾನ ಮಾತುಕತೆಗೆ ಮಿಶ್ರಫಲ
ಹೇಗ್(ಮಾ.08): ರಷ್ಯಾ-ಉಕ್ರೇನ್ ಸಮರದ ಕುರಿತು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಸೋಮವಾರದಿಂದ ವಿಚಾರಣೆ ಆರಂಭವಾಗಿದೆ. ಆದರೆ ಕಲಾಪಕ್ಕೆ ರಷ್ಯಾ ಬಹಿಷ್ಕಾರ ಹಾಕಿದೆ. ತನ್ನ ಮೇಲಿನ ದಾಳಿಯಲ್ಲಿ ತಡೆಗೆ ಆದೇಶ ನೀಡಬೇಕು ಎಂದು ಇತ್ತೀಚೆಗೆ ಉಕ್ರೇನ್ ಸರ್ಕಾರ ಅಂತಾರಾಷ್ಟ್ರೀಯ ಕೋರ್ಟ್ ಮೊರೆ ಹೋಗಿತ್ತು. ‘ತನ್ನ ದಾಳಿಯನ್ನು ಸಮರ್ಥಿಸಿಕೊಳ್ಳಲು, ನರಮೇಧದ ಪರಿಕಲ್ಪನೆಯನ್ನೇ ತಿರುಚಿರುವ ರಷ್ಯಾವನ್ನು ದಾಳಿಗೆ ಹೊಣೆ ಮಾಡಬೇಕು. ತಕ್ಷಣವೇ ಸೇನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ರಷ್ಯಾಕ್ಕೆ ಸೂಚಿಸಬೇಕು. ತಕ್ಷಣವೇ ವಿಚಾರಣೆ ನಡೆಸಬೇಕು’ ಎಂದು ಮನವಿ ಮಾಡಿತ್ತು.
3ನೇ ಸುತ್ತಿನ ಸಂಧಾನ ಮಾತುಕತೆಗೆ ಮಿಶ್ರಫಲ
ಯುದ್ಧಕ್ಕೆ ಕೊನೆಹೇಳುವ ನಿಟ್ಟಿನಲ್ಲಿ ರಷ್ಯಾ ಮತ್ತು ಉಕ್ರೇನ್ ಸಂಧಾನಕಾರರ ನಡುವೆ ಸೋಮವಾರ ಇಲ್ಲಿ ನಡೆದ ಮೂರನೇ ಸುತ್ತಿನ ಮಾತುಕತೆಯ ಫಲಶ್ರುತಿಯ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾತುಕತೆಯಲ್ಲಿ ರಷ್ಯಾದ ನಿಯೋಗದ ನೇತೃತ್ವದ ವಹಿಸಿದ್ದ ವ್ಲಾಡಿಮಿರ್ ಮೆಡಿನ್‌ಸ್ಕಿ ಅವರು ನಮ್ಮ ನೆರೆಯ ದೇಶದಿಂದ ನಾವು ಉದ್ದೇಶಿಸಿದ್ದ ಪ್ರತಿಕ್ರಿಯೆ ಸಿಕ್ಕಿಲ್ಲ. ಮುಂದಿನ ಮಾತುಕತೆ ಈ ವಿಷಯದಲ್ಲಿ ಇನ್ನಷ್ಟುಸುಧಾರಣೆಯಾಗವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
Russia- Ukraine War: ಚೀನಾ-ರಷ್ಯಾ ದೋಸ್ತಿ ಭಾರತಕ್ಕೆ ಅಪಾಯವೇಕೆ..?
ಮತ್ತೊಂದೆಡೆ ಉಕ್ರೇನ್‌ನ ಸಲಹೆಗಾರ ಮಿಖಾಯಿಲೋ ಪೊಡೋಲ್‌ಯಾಕ್ ಪ್ರತಿಕ್ರಿಯಿಸಿ, ಮಾತುಕತೆಯಲ್ಲಿ ಮಾನವೀಯ ಕಾರಿಡಾರ್ ನಿರ್ಮಾಣದ ವಿಷಯದಲ್ಲಿ ಒಂದಿಷ್ಟುಧನಾತ್ಮಕ ಪ್ರಗತಿ ಕಂಡುಬಂದಿದೆ ಎಂದು ಹೇಳಿದ್ದಾರೆ.
ಜನರ ತೆರವಿನ ‘ಕದನ ವಿರಾಮ’ 3ನೇ ದಿನವೂ ವಿಫಲ
ಒಂದೆಡೆ ಯುದ್ಧ ನಡೆಯುತ್ತಿದ್ದರೂ ಇನ್ನೊಂದೆಡೆ ನಾಗರಿಕರ ಸುರಕ್ಷಿತ ತೆರವಿಗೆ ಒತ್ತು ನೀಡುವ ನಿಟ್ಟಿನಲ್ಲಿ ಉಕ್ರೇನ್‌ನ ಯುದ್ಧಪೀಡಿತ ಸುಮಿ, ರಾಜಧಾನಿ ಕೀವ್, ಖಾರ್ಕೀವ್ ಹಾಗೂ ಮರಿಯುಪೋಲ್ ನಗರಗಳಲ್ಲಿ ಕೆಲಕಾಲ ಕದನವಿರಾಮ ಸಾರುವುದಾಗಿ ರಷ್ಯಾ ಸೋಮವಾರ ಬೆಳಗ್ಗೆ ಘೋಷಿಸಿತ್ತು. ಆದರೆ ರಷ್ಯಾದ ಈ ಪ್ರಸ್ತಾವಕ್ಕೆ ಉಕ್ರೇನ್ ತಿರಸ್ಕರಿಸಿದೆ. ಇದರೊಂದಿಗೆ ಸತತ 3ನೇ ದಿನವೂ ಕದನವಿರಾಮ ಯತ್ನ ವಿಫಲವಾಗಿದೆ.
Russia Ukraine War: ಉಕ್ರೇನ್ ಜೊತೆ ನಾವಿದ್ದೇವೆ, ರಷ್ಯಾ ಎದುರಿಸಲು ಪ್ಲ್ಯಾನ್ ಬಿ ಸಿದ್ದ ಎಂದ ಅಮೆರಿಕಾ
ಕೀವ್‌ನಲ್ಲಿನ ಜನರು ರಷ್ಯಾದ ಮಿತ್ರದೇಶ ಬೆಲಾರಸ್‌ನ ಗೊಮೆಲ್‌ಗೆ ತೆರಳಲು ಅವಕಾಶ ಮಾಡಿಕೊಡಲಾಗುತ್ತದೆ ಹಾಘೂ ಖಾರ್ಕೀವ್ ಮತ್ತು ಸುಮಿಯಲ್ಲಿನ ಜನರು ರಷ್ಯಾದ ಬೆಲ್‌ಗರಾಡ್ ನಗರಕ್ಕೆ ತೆರಳಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ರಷ್ಯಾ ಪ್ರಸ್ತಾಪಿಸಿತ್ತು.
ದಕ್ಷಿಣದ ಬಂದರು ನಗರಿ ಮರಿಯುಪೋಲ್ ಸೇರಿದಂತೆ ವಿವಿಧ ಊರುಗಳಿಂದ ಜನರನ್ನು ಯುದ್ಧದಿಂದ ದೂರ ಉಳಿದಿರುವ ಪಶ್ಚಿಮ ಉಕ್ರೇನ್‌ಗೆ ಸ್ಥಳಾಂತರಿಸಬೇಕು ಎಂಬುದು ಉಕ್ರೇನ್ ವಾದ. ಹೀಗಾಗಿ ಆದರೆ ರಷ್ಯಾ ಪ್ರಸ್ತಾಪವನ್ನು ಉಕ್ರೇನ್ ಸರ್ಕಾರ ತಿರಸ್ಕರಿಸಿದೆ.
ಉಕ್ರೇನ್‌ನಲ್ಲೇ ಚಿರತೆ ಬಿಟ್ಟು
ಉಕ್ರೇನಿನಿಂದ ಭಾರತೀಯರು ದೇಶಕ್ಕೆ ಮರಳುವಾಗ ಸಾಕಿದ ಬೆಕ್ಕು, ನಾಯಿಗಳನ್ನು ತಮ್ಮೊಂದಿಗೆ ಕರೆತಂದ ಬೆನ್ನಲ್ಲೇ ಭಾರತೀಯ ಮೂಲದ ವೈದ್ಯನೊಬ್ಬ ತಾನು ಸಾಕಿದ ಚಿರತೆಗಳನ್ನು ಬಿಟ್ಟು ಭಾರತಕ್ಕೆ ಮರಳುವುದಿಲ್ಲ ಎಂದು ಹಟ ಹಿಡಿದಿದ್ದಾನೆ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಡಾ. ಗಿರಿಕುಮಾರ್ ಪಾಟೀಲ್ ಪ್ರಸ್ತುತ ಡೋನ್‌ಬಾಸ್ ಸಂಘರ್ಷ ವಲಯದಲ್ಲಿದ್ದು ತನ್ನ ಮನೆಯ ಕೆಳಗಿರುವ ಬಂಕರ್‌ನಲ್ಲಿ ಚಿರತೆಗಳೊಂದಿಗೆ ವಾಸಿಸುತ್ತಿದ್ದಾನೆ. ರಷ್ಯಾ ಪರ ಪ್ರತ್ಯೇಕವಾದಿಗಳಿರುವ ಈ ವಲಯದಲ್ಲಿ ಯುದ್ಧ ತೀವ್ರವಾಗಿದ್ದರೂ ದೇಶಕ್ಕೆ ಮರಳಲು ಈತನು ಒಪ್ಪುತ್ತಿಲ್ಲ. ‘ನಾನು ಪ್ರಾಣ ಉಳಿಸಿಕೊಳ್ಳಲು ಸಾಕಿದ ಚಿರತೆಗಳನ್ನು ಇಲ್ಲೇ ಬಿಡಲಾರೆ. ನನ್ನ ಕುಟುಂಬದವರು ನನಗೆ ಭಾರತಕ್ಕೆ ಮರಳುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ನಾನು ಸಾಕಿದ ಚಿರತೆಗಳು ನನಗೆ ಮಕ್ಕಳಿದ್ದಂತೇ ನಾನು ನನ್ನ ಕೊನೆಯ ಉಸಿರಿನವರೆಗೂ ಅವುಗಳ ಜೊತೆಯಲ್ಲೇ ಇದ್ದು, ಅವುಗಳನ್ನು ರಕ್ಷಿಸುತ್ತೇನೆ’ ಎಂದಿದ್ದಾರೆ. ಅಲ್ಲದೇ ಭಾರತ ಸರ್ಕಾರವು ಚಿರತೆಗಳನ್ನೂ ತನ್ನೊಂದಿಗೆ ದೇಶಕ್ಕೆ ಕರೆತರಲು ಅನುಮತಿ ನೀಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.
2007ರಲ್ಲಿ ಉಕ್ರೇನಿಗೆ ವೈದ್ಯಕೀಯ ವಿದ್ಯಾರ್ಥಿಯಾಗಿ ತೆರಳಿದ ಗಿರಿಕುಮಾರ್ ಡೋನ್‌ಬಾಸ್ ವಲಯದಲ್ಲೇ ವೈದ್ಯರಾಗಿ ಮುಂದುವರೆದಿದ್ದರು. ಸ್ಥಳೀಯ ಮೃಗಾಲಯದಲ್ಲಿ ಅನಾರೋಗ್ಯ ಪೀಡಿತ ಚಿರತೆಯನ್ನು ಇವರು ದತ್ತುಪಡೆದುಕೊಂಡು ಸಾಕಿದ್ದರು. 2 ತಿಂಗಳ ಹಿಂದೆ ಇನ್ನೊಂದು ಬ್ಲಾಕ್ ಪ್ಯಾಂಥರ್‌ನ್ನು ಖರೀದಿಸಿದ್ದರು.