ಇರಾನ್‌ನಲ್ಲಿ ನಡೆಯುತ್ತಿರುವ ತೀವ್ರ ಪ್ರತಿಭಟನೆಗಳು, ಅದರ ವಿಶಿಷ್ಟ ಧಾರ್ಮಿಕ ಚೌಕಟ್ಟನ್ನು ಜಗತ್ತಿನ ಗಮನಕ್ಕೆ ತಂದಿವೆ. ಜಾಗತಿಕವಾಗಿ ಅಲ್ಪಸಂಖ್ಯಾತರಾದ ಶಿಯಾ ಮುಸ್ಲಿಮರು ಇರಾನ್‌ನಲ್ಲಿ ಬಹುಸಂಖ್ಯಾತರಾಗಿರುವುದು ಹೇಗೆ]? 1979ರ ಕ್ರಾಂತಿಯ ನಂತರ ಧಾರ್ಮಿಕ ನಾಯಕರು ಹೇಗೆ ಅಧಿಕಾರವನ್ನು ಹಿಡಿದಿದ್ದಾರೆ?

ಜಾಗತಿಕ ರಾಜಕೀಯದ ಕೇಂದ್ರಬಿಂದುವಾಗಿರುವ ಇರಾನ್ ಇತ್ತೀಚಿನ ದಿನಗಳಲ್ಲಿ ತನ್ನ ಆಂತರಿಕ ಪ್ರತಿಭಟನೆಗಳು ಮತ್ತು ವಿಶಿಷ್ಟ ಧಾರ್ಮಿಕ ಚೌಕಟ್ಟಿನಿಂದಾಗಿ ಸುದ್ದಿಯಲ್ಲಿದೆ. ವಿಶ್ವದ ಬಹುಪಾಲು ಇಸ್ಲಾಮಿಕ್ ರಾಷ್ಟ್ರಗಳಿಗಿಂತ ಇರಾನ್ ಭಿನ್ನವಾಗಿರುವುದು ಹೇಗೆ? ಅಲ್ಲಿನ ಮುಸ್ಲಿಂ ಪಂಗಡಗಳ ಲೆಕ್ಕಾಚಾರವೇನು? ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಪ್ರತಿಭಟನೆಯ ಕಿಚ್ಚು: ಇಂಟರ್ನೆಟ್ ಕಟ್ ಮಾಡುವಷ್ಟು ಉದ್ವಿಗ್ನತೆ!

ಇರಾನ್ ಸದ್ಯದ ಪರಿಸ್ಥಿತಿಯಲ್ಲಿ ದೊಡ್ಡ ಮಟ್ಟದ ತಲ್ಲಣಕ್ಕೆ ಸಾಕ್ಷಿಯಾಗಿದೆ. ನಿರುದ್ಯೋಗ ಮತ್ತು ಹಣದುಬ್ಬರದ ವಿರುದ್ಧ ಶುರುವಾದ ಸಣ್ಣ ಕಿಡಿ, ಈಗ ಅಲ್ಲಿನ ಇಸ್ಲಾಮಿಕ್ ಸರ್ಕಾರ ಮತ್ತು ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ವಿರುದ್ಧದ ದೊಡ್ಡ ಹೋರಾಟವಾಗಿ ಮಾರ್ಪಟ್ಟಿದೆ. ಎಷ್ಟೋ ಜೀವಗಳು ಬಲಿಯಾಗಿವೆ, ಸಾವಿರಾರು ಜನರು ಜೈಲು ಪಾಲಾಗಿದ್ದಾರೆ. ಪ್ರತಿಭಟನಾಕಾರರ ಆಕ್ರೋಶದ ಧ್ವನಿ ವಿಶ್ವಕ್ಕೆ ಕೇಳದಂತೆ ತಡೆಯಲು ಸರ್ಕಾರ ಇಂಟರ್ನೆಟ್ ಮತ್ತು ಫೋನ್ ಸೇವೆಗಳನ್ನೇ ಸ್ಥಗಿತಗೊಳಿಸುವ ಮಟ್ಟಕ್ಕೆ ಪರಿಸ್ಥಿತಿ ತಲುಪಿದೆ.

ಶಿಯಾ ವರ್ಸಸ್ ಸುನ್ನಿ: ಇರಾನ್ ಯಾರ ಪಾಲಿನ ದೇಶ?

ಇರಾನ್ ಒಂದು ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರವಾಗಿದ್ದು, ಅಲ್ಲಿನ ಜನಸಂಖ್ಯೆಯ ಶೇ. 99 ರಷ್ಟು ಮಂದಿ ಇಸ್ಲಾಂ ಧರ್ಮವನ್ನು ಪಾಲಿಸುತ್ತಾರೆ. ಆದರೆ, ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇರಾನ್ ವಿಶ್ವದ ಅತಿದೊಡ್ಡ 'ಶಿಯಾ' ಬಹುಸಂಖ್ಯಾತ ದೇಶ. ಇಲ್ಲಿ ಶೇ. 90 ರಿಂದ 95 ರಷ್ಟು ಜನರು ಶಿಯಾ ಮುಸ್ಲಿಮರಾಗಿದ್ದರೆ, ಸುನ್ನಿಗಳು ಕೇವಲ ಶೇ. 5 ರಿಂದ 10 ರಷ್ಟು ಮಾತ್ರ ಇದ್ದಾರೆ. ಉಳಿದಂತೆ ಅಲ್ಪ ಸಂಖ್ಯೆಯಲ್ಲಿ ಯಹೂದಿಗಳು, ಕ್ರಿಶ್ಚಿಯನ್ನರು ಮತ್ತು ಪಾರ್ಸಿಗಳು ಇಲ್ಲಿದ್ದಾರೆ.

ವಿಶ್ವದಲ್ಲಿ ಅಲ್ಪಸಂಖ್ಯಾತರು, ಇರಾನ್‌ನಲ್ಲಿ ಸುಪ್ರೀಂ!

ವಿಶ್ವಾದ್ಯಂತ ಸುಮಾರು 1.6 ಬಿಲಿಯನ್ ಮುಸ್ಲಿಂ ಜನಸಂಖ್ಯೆಯಿದೆ. ಇದರಲ್ಲಿ ಶೇ. 85 ರಿಂದ 90 ರಷ್ಟು ಸುನ್ನಿ ಮುಸ್ಲಿಮರಿದ್ದರೆ, ಕೇವಲ ಶೇ. 10 ರಷ್ಟು ಮಾತ್ರ ಶಿಯಾ ಮುಸ್ಲಿಮರಿದ್ದಾರೆ. ಜಾಗತಿಕವಾಗಿ ಶಿಯಾಗಳು ಅಲ್ಪಸಂಖ್ಯಾತರಾಗಿದ್ದರೂ, ಇರಾನ್ ಮತ್ತು ಇರಾಕ್‌ನಂತಹ ದೇಶಗಳಲ್ಲಿ ಅವರದ್ದೇ ಪ್ರಾಬಲ್ಯ. ಪ್ರವಾದಿ ಮುಹಮ್ಮದ್ ಅವರ ನಂತರ ನಾಯಕತ್ವವು ಅವರ ಕುಟುಂಬಕ್ಕೇ ಸಲ್ಲಬೇಕು ಎಂಬುದು ಶಿಯಾಗಳ ಬಲವಾದ ನಂಬಿಕೆ.

12 ಇಮಾಮ್‌ಗಳ ನಂಬಿಕೆ ಮತ್ತು ಕ್ರಾಂತಿಯ ಪ್ರಭಾವ

ಇರಾನ್‌ನಲ್ಲಿ ಹನ್ನೆರಡು ಇಮಾಮ್‌ಗಳನ್ನು ನಂಬುವ ಶಿಯಾ ಪಂಥವೇ ಅಧಿಕೃತ ಧರ್ಮ. ಹನ್ನೆರಡನೆಯ ಇಮಾಮ್ 'ಮಹ್ದಿ' ಒಂದು ದಿನ ಮರಳಿ ಬಂದು ಜಗತ್ತಿನಲ್ಲಿ ನ್ಯಾಯ ಸ್ಥಾಪಿಸುತ್ತಾರೆ ಎಂಬುದು ಇವರ ಅಚಲ ವಿಶ್ವಾಸ. 1979 ರ ಇಸ್ಲಾಮಿಕ್ ಕ್ರಾಂತಿಯ ನಂತರ, ಇರಾನ್‌ನ ರಾಜಕೀಯದಲ್ಲಿ ಧಾರ್ಮಿಕ ನಾಯಕರ ಹಿಡಿತ ಬಿಗಿಯಾಯಿತು. ಇಂದು ಇರಾನ್‌ನ ಪ್ರತಿ ಕಾನೂನು ಮತ್ತು ಸಾಮಾಜಿಕ ನಿರ್ಧಾರಗಳ ಮೇಲೆ ಶಿಯಾ ಧರ್ಮಗುರುಗಳ ಪ್ರಭಾವ ನೇರವಾಗಿದ್ದು, ಸುಪ್ರೀಂ ಲೀಡರ್ ಅಲ್ಲಿ ಅತ್ಯಂತ ಶಕ್ತಿಶಾಲಿ ವ್ಯಕ್ತಿಯಾಗಿದ್ದಾರೆ.