ನವದೆಹಲಿ (ನ.29) : ಭಾರತ ಮತ್ತು ರಷ್ಯಾ ಎರಡು ಉಪಗ್ರಹಗಳು ಶುಕ್ರವಾರ ಅತ್ಯಂತ ಸಮೀಪಕ್ಕೆ ಬಂದು ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಕೆಳ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುಹಾಕುತ್ತಿರುವ ಭಾರತದ ಕಾರ್ಟೋಸ್ಯಾಟ್‌ -2ಎಫ್‌ ಮತ್ತು ರಷ್ಯಾದ ಕಾನೋಪುಸ್‌-ವಿ ಉಪಗ್ರಹಗಳು ಶುಕ್ರವಾರ ಪರಸ್ಪರ ಕೇವಲ 224 ಮೀಟರ್‌ ಅಂತರಕ್ಕೆ ಬಂದಿದ್ದವು.

ಈ ಘಟನೆ ನಡೆದಿದ್ದನ್ನು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್‌ಕಾಸ್ಮೋಸ್‌ ಖಚಿತಪಡಿಸಿದೆ. ಆದರೆ ಈ ಬಗ್ಗೆ ಇಸ್ರೋ ಮೊದಲಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲವಾದರೂ, ವಿಷಯ ಅಂತರ್ಜಾಲದಲ್ಲಿ ಸಾಕಷ್ಟುಚರ್ಚೆಯಾದ ಬಳಿಕ ಉಪಗ್ರಹಗಳ ಸಾಮೀಪ್ಯದ ಘಟನೆಯನ್ನು ಖಚಿತಪಡಿಸಿದೆ.

ಬೆಂಗಳೂರು ಟೆಕ್‌ ಸಮ್ಮಿಟ್‌-2020: ದೇಶದ ಡಿಜಿಟಲ್‌ ಕ್ರಾಂತಿಗೆ ಉಪಗ್ರಹಗಳ ನೆರವು .

ಈ ಕುರಿತು ಪ್ರತಿಕ್ರಿಯಿಸಿರುವ ಇಸ್ರೋ ಮುಖ್ಯಸ್ಥ ಕೆ.ಶಿವನ್‌, ಇತ್ತೀಚಿನ ವರ್ಷಗಳಲ್ಲಿ ಉಪಗ್ರಹಗಳ ಉಡ್ಡಯನ ಹೆಚ್ಚಾದ ಬಳಿಕ ಇಂಥ ಘಟನೆ ಸಾಮಾನ್ಯ. ಹೀಗಾಗಿ ಇಂಥ ಎಲ್ಲಾ ಘಟನೆಗಳನ್ನೂ ನಾವು ಜನರ ಎದುರು ಇಡಲು ಹೋಗುವುದಿಲ್ಲ. ಅಷ್ಟಕ್ಕೂ ನಾವು 4 ದಿನಗಳಿಂದ ಕಾರ್ಟೋಸ್ಯಾಟ್‌- 2ಎಫ್‌ ಮೇಲೆ ನಿಗಾ ಇಟ್ಟಿದ್ದೆವು. 

ಉಪಗ್ರಹಗಳು ಕನಿಷ್ಠ 150 ಮೀಟರ್‌ ಸಮೀಪಕ್ಕೆ ಬಂದರೆ ಮಾತ್ರವೇ ಅದರ ಪಥ ಬದಲಾವಣೆ ಕೆಲಸ ಮಾಡುತ್ತೇವೆ. ಶುಕ್ರವಾರ ನಡೆದ ಘಟನೆಯಲ್ಲಿ ರಷ್ಯಾ ಹೇಳಿದಂತೆ ಉಪಗ್ರಹಗಳು 224 ಮೀಟರ್‌ ಸಮೀಪಕ್ಕೆ ಬಂದಿರಲಿಲ್ಲ. ಬದಲಾಗಿ ಅವು ಪರಸ್ಪರ 420 ಮೀಟರ್‌ ದೂರದಲ್ಲಿದ್ದವು ಎಂದು ಸ್ಪಷ್ಟಪಡಿಸಿದ್ದಾರೆ.