Asianet Suvarna News Asianet Suvarna News

ಜೀವದ ಹಂಗು ತೊರೆದು ಸಾಧನೆ: ಭಾರತ ಮೂಲದ ಮೇಘಾಗೆ ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿ!

* ಭಾರತ ಮೂಲದ ಮೇಘಾಗೆ ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿ

* ಜೀವದ ಹಂಗು ತೊರೆದು ಮಾಡಿದ ಸಾಧನೆಗೆ ಜಾಗತಿಕ ಗೌರವ

* ಚೀನಾದ ಮುಸ್ಲಿಂ ದೌರ್ಜನ್ಯ ಬಯಲಿಗೆಳೆದ ಪತ್ರಕರ್ತೆ

Indian Origin Journalist Wins Pulitzer Prize For Exposing China Detention Camps For Muslims pod
Author
Bangalore, First Published Jun 13, 2021, 8:04 AM IST

ನ್ಯೂಯಾರ್ಕ್(ಜೂ.13): ಸಹಸ್ರಾರು ಮುಸ್ಲಿಮರನ್ನು ಅಕ್ರಮವಾಗಿ ಬಂಧಿಸಿಡಲು ಜೈಲಿನಂತಹ ಮೂಲಸೌಕರ್ಯವನ್ನು ಚೀನಾ ನಿರ್ಮಿಸಿರುವುದನ್ನು ನವೀನ ತನಿಖಾ ವರದಿಗಳ ಮೂಲಕ ಜಗತ್ತಿನ ಮುಂದೆ ಅನಾವರಣಗೊಳಿಸಿದ ಭಾರತೀಯ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್‌ಗೆ ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿ ಲಭಿಸಿದೆ.

ಚೀನಾ ಅಸಲಿ ಮುಖ ಬಹಿರಂಗಪಡಿಸಿದ ಭಾರತೀಯ ಮೂಲದ ಪತ್ರಕರ್ತೆಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ!

‘ಬಝ್‌ಫೀಡ್‌ ನ್ಯೂಸ್‌’ ಎಂಬ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇಘಾ ರಾಜಗೋಪಾಲನ್‌ ಅವರಿಗೆ ಜಾಗತಿಕ ಪತ್ರಿಕೋದ್ಯಮದ ಶ್ರೇಷ್ಠ ಪ್ರಶಸ್ತಿಯಾದ ಪುಲಿಟ್ಜರ್‌ನ ‘ಅಂತಾರಾಷ್ಟ್ರೀಯ ವರದಿಗಾರಿಕೆ’ ವಿಭಾಗದಲ್ಲಿ ಗೌರವ ಸಂದಿದೆ. ಈ ಪ್ರಶಸ್ತಿಯನ್ನು ಅವರು ತಮ್ಮ ತಂಡದ ಮತ್ತಿಬ್ಬರ ಜತೆ ಹಂಚಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮೇಘಾ, ‘ನನಗೆ ದಿಗ್ಭ್ರಮೆಯಾಗಿದೆ. ಇದನ್ನು ನಾನು ನಿರೀಕ್ಷಿಸಿರಲಿಲ್ಲ. ತಮಗೆ ಹಾಗೂ ತಮ್ಮ ಕುಟುಂಬದವರಿಗೆ ಪ್ರತೀಕಾರದ ಅಪಾಯವಿದ್ದರೂ ಮಾಹಿತಿ ನೀಡಲು ಧೈರ್ಯ ತೋರಿದ ಮೂಲಗಳಿಗೆ ನಾನು ಚಿರಋುಣಿ. ಏಕೆಂದರೆ, ಇದಕ್ಕೆಲ್ಲಾ ಊಹಿಸಲಾಗದಷ್ಟು ಧೈರ್ಯ ಬೇಕು’ ಎಂದು ಹೇಳಿದ್ದಾರೆ.

ಭಾರತದಿಂದ 6 ಸಮುದ್ರ ಆಹಾರ ಆಮದು ನಿಷೇಧಿಸಿದ ಚೀನಾ!

ಮತ್ತೊಬ್ಬ ಭಾರತೀಯನಿಗೂ ಗರಿ

ಸ್ಥಳೀಯ ವರದಿಗಾರಿಕೆ ವಿಭಾಗದಲ್ಲಿ ಅಮೆರಿಕದ ಭಾರತೀಯ ಮೂಲದ ಪತ್ರಕರ್ತ ನೀಲ್‌ ಬೇಡಿ ಅವರಿಗೂ ಪುಲಿಟ್ಜರ್‌ ಸಿಕ್ಕಿದೆ. ಅಮೆರಿಕದ ಕಾನೂನುಪಾಲನಾ ಅಧಿಕಾರಿಗಳು ಭವಿಷ್ಯದಲ್ಲಿ ಅಪರಾಧಿಗಳಾಗುವ ಸಂಭಾವ್ಯತೆ ಇರುವ ವ್ಯಕ್ತಿಗಳ ಕಂಪ್ಯೂಟರ್‌ ಮಾದರಿಯೊಂದನ್ನು ಸಿದ್ಧಪಡಿಸಿದ್ದರು. ಅದನ್ನು ಆಧರಿಸಿ 1000 ವ್ಯಕ್ತಿಗಳ ಮೇಲೆ ನಿಗಾ ಇಟ್ಟಿದ್ದರು. ‘ಟಂಪಾ ಬೇ ಟೈಮ್ಸ್‌’ ಪತ್ರಿಕೆಯ ತನಿಖಾ ವರದಿಗಾರರಾಗಿರುವ ನೀಲ್‌ ಬೇಡಿ ಇದನ್ನು ಬಯಲಿಗೆಳೆದಿದ್ದದರು. ಅವರು ಈ ಪ್ರಶಸ್ತಿಯನ್ನು ಕ್ಯಾಥಲೀನ್‌ ಮೆಕ್‌ಗ್ರೋರಿ ಅವರ ಜತೆ ಹಂಚಿಕೊಂಡಿದ್ದಾರೆ.

ಏನಿದು ಪುಲಿಟ್ಜರ್‌ ಪ್ರಶಸ್ತಿ?

ಪತ್ರಿಕಾ ಪ್ರಕಾಶಕರಾಗಿ ಅಪಾರ ಸಂಪತ್ತು ಗಳಿಸಿದ್ದ ಜೋಸೆಫ್‌ ಪುಲಿಟ್ಜರ್‌ ಅವರ ಉಯಿಲಿನಂತೆ 1917ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಇದನ್ನು ಜಾಗತಿಕ ಪತ್ರಿಕೋದ್ಯಮದ ಅತ್ಯುಚ್ಚ ಪ್ರಶಸ್ತಿ ಎಂದು ಪರಿಗಣಿಸಲಾಗುತ್ತದೆ. ದಿನಪತ್ರಿಕೆ, ನಿಯತಕಾಲಿಕೆ, ಆನ್‌ಲೈನ್‌ ಪತ್ರಿಕೋದ್ಯಮ, ಸಾಹಿತ್ಯ, ಸಂಗೀತದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ. ಪ್ರಶಸ್ತಿಯಲ್ಲಿ ಒಟ್ಟು 21 ವಿಭಾಗಗಳಿವೆ. ಪ್ರತಿಯೊಬ್ಬ ಪ್ರಶಸ್ತಿ ವಿಜೇತನಿಗೂ 11 ಲಕ್ಷ ರು. ಹಾಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ಸಾರ್ವಜನಿಕ ಸೇವಾ ವಿಭಾಗದ ವಿಜೇತರಿಗೆ ಚಿನ್ನದ ಪದಕ ನೀಡಿ ಸತ್ಕರಿಸಲಾಗುತ್ತದೆ.

5 ಲಕ್ಷ ಜನಕ್ಕೆ ‘ಚೀನಿ ಆ್ಯಪ್‌’ 300 ಕೋಟಿ ದೋಖಾ! ಜನರೇ ಹುಷಾರ್‌

ಯಾರು ಈಗ ಮೇಘಾ?

ಲಂಡನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಪತ್ರಕರ್ತೆ. ಅಮೆರಿಕದ ಮೇರಿಲ್ಯಾಂಡ್‌ ಕಾಲೇಜ್‌ ಪಾರ್ಕ್ ವಿವಿಯಿಂದ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. ಬಝ್‌ಫೀಡ್‌ ನ್ಯೂಸ್‌ ಸಂಸ್ಥೆಯ ಚೀನಾ, ಥಾಯ್ಲೆಂಡ್‌, ಇಸ್ರೇಲ್‌, ಪ್ಯಾಲೇಸ್ತೀನ್‌ ವರದಿಗಾಗರ್ತಿಯಾಗಿ ಕೆಲಸ ಮಾಡಿದ್ದಾರೆ. ಅದಕ್ಕೂ ಮುಂಚೆ ಚೀನಾದ ರಾಯಿಟ​ರ್‍ಸ್ ವರದಿಗಾರರಾಗಿದ್ದರು. ಏಷ್ಯಾ, ಮಧ್ಯಪ್ರಾಚ್ಯದ 23 ದೇಶಗಳಿಂದ ವರದಿ ಮಾಡಿದ ಅನುಭವ ಅವರಿಗಿದೆ. ಚೀನಾದ ಉಯಿಗುರ್‌ ಮುಸ್ಲಿಂ ಅಕ್ರಮ ಶಿಬಿರಕ್ಕೆ ಭೇಟಿ ನೀಡಿದ ಮೊದಲ ಪತ್ರಕರ್ತೆ ಅವರು. ಇದಕ್ಕಾಗಿ 2018ರಲ್ಲಿ ಅವರಿಗೆ ಮಾನವ ಹಕ್ಕುಗಳ ಪತ್ರಿಕಾ ಪ್ರಶಸ್ತಿ ಲಭಿಸಿತ್ತು. 2019ರಲ್ಲಿ ಮಿರರ್‌ ಪ್ರಶಸ್ತಿ ದೊರೆತಿತ್ತು.

ಮೇಘಾ ಸಾಧನೆ ಏನು?

ಕ್ಸಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿರುವ ಸಹಸ್ರಾರು ಮುಸ್ಲಿಮರನ್ನು ಅಕ್ರಮ ಬಂಧನದಲ್ಲಿಡುವ ಕೆಲಸವನ್ನು ಚೀನಾ 2017ರಿಂದ ಆರಂಭಿಸಿತ್ತು. ಅಂತಹ ಒಂದು ಶಿಬಿರಕ್ಕೆ ಭೇಟಿ ನೀಡಿದ ಮೊದಲ ಪತ್ರಕರ್ತೆ ಮೇಘಾ. ಈ ಕುರಿತು ವರದಿ ಮಾಡಲು ಮುಂದಾದ ಮೇಘಾ ಅವರ ಧ್ವನಿ ಅಡಗಿಸಲು ಯತ್ನಿಸಿತ್ತು. ಅವರ ವೀಸಾ ರದ್ದುಗೊಳಿಸಿ, ದೇಶದಿಂದಲೇ ಹೊರದಬ್ಬಿತ್ತು. ಆದರೆ ಮೇಘಾ ಸುಮ್ಮನಾಗಲಿಲ್ಲ. ಅಲಿಸನ್‌ ಕಿಲ್ಲಿಂಗ್‌ ಹಾಗೂ ಕ್ರಿಸ್ಟೋ ಬುಶ್ಚೆಕ್‌ ಎಂಬುವರ ಜತೆಗೂಡಿದರು. ಚೀನಾ ಬಂಧನ ಶಿಬಿರದಿಂದ ತಪ್ಪಿಸಿಕೊಂಡು ಬಂದಿದ್ದ ಮುಸ್ಲಿಮರನ್ನು ಭೇಟಿಯಾಗಲು ಕಜಕಸ್ತಾನಕ್ಕೆ ಹೋದರು. ಎರಡು ಡಜನ್‌ ಜನರನ್ನು ಪತ್ತೆ ಹಚ್ಚಿದರು. ಅವರ ಮನವೊಲಿಸಿ ಚೀನಾ ಶಿಬಿರದಲ್ಲಿನ ಚಿತ್ರಣವನ್ನು ಪ್ರಪಂಚಕ್ಕೆ ಕಟ್ಟಿಕೊಟ್ಟರು. ಇದಲ್ಲದೆ 50 ಸಾವಿರ ಉಪಗ್ರಹ ಚಿತ್ರಗಳನ್ನು ಮೇಘಾ ಅವರ ತಂಡ ವಿಶ್ಲೇಷಣೆಗೆ ಒಳಪಡಿಸಿ, 260 ಬಂಧನ ಕೇಂದ್ರಗಳನ್ನು ಪತ್ತೆ ಹಚ್ಚಿತು. ಒಂದೊಂದು ಕೇಂದ್ರದಲ್ಲಿ 1000 ಜನರನ್ನು ಬಂಧಿಸಿಡಬಹುದಾಗಿತ್ತು. ಅಲ್ಲೆಲ್ಲಾ ಮುಸ್ಲಿಮರನ್ನು ಕಾರ್ಮಿಕರಾಗಿ ದುಡಿಸಿಕೊಳ್ಳಲಾಗುತ್ತಿತ್ತು.

ರೆನೋ ಕ್ವಿಡ್, ಡಸ್ಟರ್, ಕಿಗರ್, ಟ್ರೈಬರ್ ಕಾರು ಖರೀದಿ ಮೇಲೆ ಭರ್ಜರಿ ಜೂನ್ ಆಫರ್ಸ್!

ಕ್ಸಿನ್‌ಜಿಯಾಂಗ್‌ ಸಮಸ್ಯೆ ಏನು?

ಚೀನಾದ ಪಶ್ಚಿಮ ಭಾಗದಲ್ಲಿರುವ ಕ್ಸಿನ್‌ಜಿಯಾಂಗ್‌ ಚೀನಾದ ಅತಿದೊಡ್ಡ ಭೂಭಾಗ. ಭಾರತ, ಆಫ್ಘಾನಿಸ್ತಾನ ಹಾಗೂ ಮಂಗೋಲಿಯಾ ಜತೆ ಗಡಿ ಹಂಚಿಕೊಂಡಿದೆ. ಉಯಿಗುರ್‌, ಕಜಕ್‌ ಹಾಗೂ ಇನ್ನಿತರೆ ಮುಸ್ಲಿಂ ಸಮುದಾಯಗಳು ಇಲ್ಲಿ ವಾಸಿಸುತ್ತಿವೆ. ಟಿಬೆಟ್‌ ರೀತಿ ಇದೂ ಸ್ವಾಯತ್ತ ಪ್ರದೇಶ. ಆದರೂ ಚೀನಾ ಕೇಂದ್ರ ಸರ್ಕಾರದ ನಿರ್ಬಂಧಗಳು ಕಟ್ಟುನಿಟ್ಟಾಗಿ ಇಲ್ಲಿಗೆ ಜಾರಿಯಲ್ಲಿವೆ. ಇದರ ವಿರುದ್ಧ ಉಯಿಗುರ್‌ಗಳು ದಂಗೆ ಎದ್ದಿದ್ದರು. ಹೀಗಾಗಿ ಈ ಪ್ರದೇಶದಲ್ಲಿ ಚೀನಾ ಸರ್ಕಾರ 2017ರಿಂದ ನಿರ್ದಯ ಕ್ರಮಗಳನ್ನು ಆರಂಭಿಸಿತ್ತು. ಜೈಲಿನಂತಹ ನೂರಾರು ಶಿಬಿರ ತೆರೆದು ಮುಸ್ಲಿಮರನ್ನು ಅಲ್ಲಿಗೆ ದಬ್ಬಿ ಮುಸ್ಲಿಮರ ಜನಸಂಖ್ಯೆ ಕುಗ್ಗಿಸಲು ಬಲವಂತದ ಸಂತಾನಹರಣ ಶಸ್ತ್ರಚಿಕಿತ್ಸೆ, ಗರ್ಭಪಾತ ಮಾಡಿಸುತ್ತಿತ್ತು. ಚೀನಾದ ಮ್ಯಾಂಡರೀನ್‌ ಭಾಷೆ ಕಲಿಯಬೇಕು, ಚೀನಾ ಅಧ್ಯಕ್ಷರಿಗೆ ನಿಷ್ಠೆ ತೋರಬೇಕು ಎಂದು ಬಲವಂತ ಮಾಡುತ್ತಿತ್ತು. ಮುಸ್ಲಿಮರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿತ್ತು. ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವರದಿಗಳು ಪ್ರಕಟವಾದಾಗ, ವೃತ್ತಿ ತರಬೇತಿಯನ್ನು ಮುಸ್ಲಿಮರಿಗೆ ನೀಡಲಾಗುತ್ತಿದೆ ಎಂದು ತೇಪೆ ಹಚ್ಚಿತ್ತು. ಈ ಶಿಬಿರಗಳ ಬಗ್ಗೆ ಚರ್ಚೆಯಾದಾಗ ಎಲ್ಲವನ್ನೂ ಮುಚ್ಚಲಾಗಿದೆ ಎಂದು ಚೀನಾ ಹೇಳಿತ್ತು. ಆದರೆ ಅವು ಬಂದ್‌ ಆಗಿರಲಿಲ್ಲ.

Follow Us:
Download App:
  • android
  • ios