ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರ ಸಂಪುಟ ಪುನಾರಚನೆಯಲ್ಲಿ ಭಾರತ ಮೂಲದ ಅನಿತಾ ಆನಂದ್ ವಿದೇಶಾಂಗ ಸಚಿವೆಯಾಗಿ ಆಯ್ಕೆಯಾಗಿದ್ದಾರೆ. ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಅವರು, ಈ ಹಿಂದೆ ರಕ್ಷಣಾ ಸಚಿವೆಯಾಗಿ ಸೇವೆ ಸಲ್ಲಿಸಿದ್ದಾರೆ.
ಒಟ್ಟಾವೋ: ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರು ಸಂಪುಟ ಪುನಾರಚನೆ ಮಾಡಿಕೊಂಡಿದ್ದಾರೆ. ಪ್ರಧಾನಿ ಕಾರ್ನಿಯವರ ಸಂಪುಟದಲ್ಲಿ ವಿದೇಶಾಂಗ ಸಚಿವೆಯಾಗಿ ಭಾರತ ಮೂಲದ ಅನಿತಾ ಆನಂದ್ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೊದಲು ಕೆನಡಾದ ರಕ್ಷಣಾ ಸಚಿವೆ ಸೇರಿದಂತೆ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ 58 ವರ್ಷದ ಅನಿತಾ ಆನಂದ್ ಸೇವೆ ಸಲ್ಲಿಸಿದ್ದಾರೆ. ಕೆನಡಾದ ಲಿಬರಲ್ ಪಕ್ಷದ ಹಿರಿಯ ಸದಸ್ಯೆಯಾಗಿರುವ ಅನಿತಾ ಆನಂದ್, ಭಗವದ್ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸಿದರು. ಈ ಹಿಂದಿನ ಸಂಪುಟದ ಸಚಿವೆಯಾಗಿದ್ದಾಗ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡುವ ಮೂಲಕ ಪ್ರಮಾಣ ವಚನ ಸ್ವೀಕರಿಸಿದ್ದರು.
ಪ್ರಧಾನಿ ಮಾರ್ಕ್ ಕಾರ್ನಿ 28 ಸಚಿವರನ್ನೊಳಗೊಂಡ ಸಂಪುಟ ಪುನಾರಚನೆಯನ್ನು ಮಾಡಿಕೊಂಡಿದ್ದಾರೆ. ಹಾಗಾಗಿ ಎಲ್ಲಾ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆದಿದೆ. ಕಾರ್ನಿ ಸರ್ಕಾರದಲ್ಲಿ ಅರ್ಧದಷ್ಟು ಮಹಿಳೆಯರು ಸಂಪುಟದ ಭಾಗವಾಗಿದ್ದಾರೆ. ಇದು ಸಂಪುಟದ ಕ್ಷಮತೆ, ವೈವಿಧ್ಯತೆಯನ್ನು ಸಮತೋಲನಗೊಳಿಸುತ್ತದೆ ಎಂದು ಪ್ರಧಾನಿ ಕಾರ್ನಿ ಹೇಳಿಕೊಂಡಿದ್ದಾರೆ. ಕೆನಡಾ-ಯುಎಸ್ ಸಂಬಂಧಗಳ ಉದ್ವಿಗ್ನತೆಯ ನಡುವೆ "ಕೆನಡಿಯನ್ನರು ಬಯಸುವ ಮತ್ತು ಅಗತ್ಯವಿರುವ ಬದಲಾವಣೆಯನ್ನು ನೀಡಲು" ಕ್ಯಾಬಿನೆಟ್ ಅನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಧಾನಿ ಕಾರ್ನಿ ಹೇಳಿಕೆಯನ್ನು ನೀಡಿದ್ದಾರೆ.
ಎಕ್ಸ್ ಖಾತೆಯಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ಅನಿತಾ ಆನಂದ್, ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ನೇಮಕಗೊಂಡಿರುವುದು ನನಗೆ ಗೌರವ ತಂದಿದೆ. ಸುರಕ್ಷಿತ, ನ್ಯಾಯಯುತ ಜಗತ್ತನ್ನು ನಿರ್ಮಿಸಲು ಮತ್ತು ಕೆನಡಿಯನ್ನರಿಗೆ ತಲುಪಿಸಲು ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ನಮ್ಮ ತಂಡದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಯಾರು ಈ ಅನಿತಾ ಆನಂದ್?
ಭಾರತೀಯ ಮೂಲದ ಅನಿತಾ ಆನಂದ್, ಕೆನಡಾದ ವಕೀಲೆ ಮತ್ತು ಲಿಬರಲ್ ಪಕ್ಷದ ಹಿರಿಯ ಸದಸ್ಯೆಯಾಗಿದ್ದಾರೆ. ಈ ಹಿಂದೆ ಸಾರಿಗೆ ಮತ್ತು ದೇಶೀಯ ವಾಣಿಜ್ಯ, ರಕ್ಷಣಾ ಸಚಿವೆಯಾಗಿಯೀ ಸೇವೆ ಸಲ್ಲಿಸಿದ್ದಾರೆ. ಸದ್ಯ ಕೆನಡಾದ ವಿದೇಶಾಂಗ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಶಿಕ್ಷಣ
ಟೊರೊಂಟೊದ ಉಪನಗರ ಓಕ್ವಿಲ್ಲೆಯನ್ನು ಪ್ರತಿನಿಧಿಸುವ ಅನಿತಾ, 2019ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದಾಗಿನಿಂದ ಪಕ್ಷದ ಪ್ರಮುಖ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಕ್ವೀನ್ಸ್ ವಿಶ್ವವಿದ್ಯಾಲಯದಿಂದ ರಾಜಕೀಯ ಶಾಸ್ತ್ರದಲ್ಲಿ ಪದವಿ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ, ಡಲ್ಹೌಸಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಮತ್ತು ಟೊರೊಂಟೊ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಕಾನೂನು ಪದವಿ ಪಡೆದಿದ್ದಾರೆ.
ಅನಿತಾ ಆನಂದ್ ಯೇಲ್, ಕ್ವೀನ್ಸ್ ವಿಶ್ವವಿದ್ಯಾಲಯ ಮತ್ತು ವೆಸ್ಟರ್ನ್ ವಿಶ್ವವಿದ್ಯಾಲಯದಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶಿಕ್ಷಣ ಹುದ್ದೆಗಳನ್ನು ಅಲಂಕರಿಸಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ಕಾನೂನು ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ.
ಕುಟುಂಬ ಹಿನ್ನೆಲೆ
ಅನಿತಾ ಆನಂದ್ ನೋವಾ ಸ್ಕಾಟಿಯಾದ ಕೆಂಟ್‌ವಿಲ್ಲೆಯಲ್ಲಿ ಜನಿಸಿದರು. ಅನಿತಾ ಅವರ ತಾಯಿ ಸರೋಜ್ ಡಿ. ರಾಮ್ ಮತ್ತು ತಂದೆ ಎಸ್.ವಿ. (ಆಂಡಿ) ಆನಂದ್ ಇಬ್ಬರೂ ಭಾರತೀಯ ವೈದ್ಯರು. ಗೀತಾ ಮತ್ತು ಸೋನಿಯಾ ಆನಂದ್ ಎಂಬ ಇಬ್ಬರು ಸಹೋದರಿಯರಿದ್ದಾರೆ.
ರಾಜಕೀಯ ಜೀವನ
ಅನಿತಾ ಆನಂದ್ ತಮ್ಮ ಜೀವನದುದ್ದಕ್ಕೂ ಸಾರ್ವಜನಿಕ ಸೇವೆ ಮತ್ತು ಸಚಿವ ಸ್ಥಾನ ಸೇರಿದಂತೆ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. COVID-19 ಸಾಂಕ್ರಾಮಿಕ ಸಮಯದಲ್ಲಿ ಲಸಿಕೆಗಳನ್ನು ಖರೀದಿಸಿದ್ದಕ್ಕಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. 2021 ರಲ್ಲಿ, ಅವರು ಕೆನಡಾದ ರಕ್ಷಣಾ ಸಚಿವರಾದರು. ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಉಕ್ರೇನ್‌ಗೆ ನೆರವು ನೀಡುವ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡರು.
ಕೆನಡಾದ ಸಶಸ್ತ್ರ ಪಡೆಗಳಲ್ಲಿ ಸಿಬ್ಬಂದಿ ಕೊರತೆಯನ್ನು ನಿಭಾಯಿಸಿದರು. ಡಿಸೆಂಬರ್‌ನಲ್ಲಿ, ಅನಿತಾ ಆನಂದ್ ಅವರನ್ನು ಸಾರಿಗೆ ಸಚಿವರನ್ನಾಗಿ ನೇಮಿಸಲಾಯಿತು. ಇನ್ನೊಬ್ಬ ಭಾರತೀಯ ಮೂಲದ ರಾಜಕಾರಣಿ ಮತ್ತು ಸಮುದಾಯ ನಾಯಕ ಜಾರ್ಜ್ ಸಾಹಲ್, ಪ್ರಧಾನಿ ಹುದ್ದೆಗೆ ಪ್ರಬಲ ಸ್ಪರ್ಧಿ ಆಗಿದ್ದರು ಎಂಬುದು ಗಮನಾರ್ಹ.


