ವಾಷಿಂಗ್ಟನ್‌(ಅ.20): ಕೊರೋನಾ ಸೋಂಕಿಗೆ ಚಿಕಿತ್ಸೆಯಾಗಬಲ್ಲ ಸಂಶೋಧನೆ ನಡೆಸಿದ ಭಾರತೀಯ ಮೂಲದ ಅಮೆರಿಕನ್‌ ಬಾಲಕಿ ಅನಿಕಾ ಚೆಬ್ರೊಲು ಎಂಬಾಕೆ 2020ನೇ ಸಾಲಿನ ಪ್ರತಿಷ್ಠಿತ ‘3ಎಂ ಯಂಗ್‌ ಸೈಂಟಿಸ್ಟ್‌ ಚಾಲೆಂಜ್‌’ ಪ್ರಶಸ್ತಿ ಗೆದ್ದಿದ್ದಾಳೆ. 8ನೇ ತರಗತಿಯಲ್ಲಿ ಓದುತ್ತಿರುವ, ಕೇವಲ 14 ವರ್ಷದ ಬಾಲಕಿ ಈ ಮಹತ್ವದ ಸಂಶೋಧನೆ ನಡೆಸಿರುವುದು ಅಮೆರಿಕದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಅನಿಕಾಗೆ ಲಭಿಸಿರುವ ಪ್ರಶಸ್ತಿಯು 25 ಸಾವಿರ ಡಾಲರ್‌ (ಸುಮಾರು 18 ಲಕ್ಷ ರು.) ಮೊತ್ತದ್ದಾಗಿದೆ. ಕೊರೋನಾ ವೈರಸ್‌ನ ಪ್ರೊಟೀನ್‌ ಕೋಶಗಳನ್ನು ಕಟ್ಟಿಹಾಕುವ ಕೋಶವೊಂದನ್ನು ಅನಿಕಾ ಅಭಿವೃದ್ಧಿಪಡಿಸಿದ್ದಾಳೆ. ಈ ಕೋಶವು ಕೊರೋನಾ ವೈರಸ್ಸನ್ನು ನಿಷ್ಕಿ್ರಯಗೊಳಿಸುತ್ತದೆ. ಸಿಲಿಕೋ ಮೆಥಡಾಲಜಿ ಮೂಲಕ ವಿವಿಧ ಕಂಪ್ಯೂಟರ್‌ ಪ್ರೋಗ್ರಾಂಗಳನ್ನು ಬಳಸಿ ಅನಿಕಾ ಈ ಕೋಶವನ್ನು ಅಭಿವೃದ್ಧಿಪಡಿಸಿದ್ದಾಳೆ. ಆದರೆ, ಇದನ್ನು ಔಷಧ ಉತ್ಪಾದನೆಗೆ ಬಳಸಿಕೊಳ್ಳುವ ಬಗ್ಗೆ ಪ್ರಯತ್ನಗಳು ಆರಂಭವಾಗಿರುವ ಕುರಿತು ಇನ್ನೂ ತಿಳಿದುಬಂದಿಲ್ಲ.

‘ಕೊರೋನಾ ವೈರಸ್‌ ಕಾಣಿಸಿಕೊಳ್ಳುವುದಕ್ಕೂ ಮುನ್ನ ಋುತುಮಾನದ ಜ್ವರವೊಂದಕ್ಕೆ ಅನಿಕಾ ಪರಿಹಾರ ಹುಡುಕುವ ಸಂಶೋಧನೆ ನಡೆಸುತ್ತಿದ್ದಳು. ಕೊರೋನಾ ಬಂದ ಮೇಲೆ ಆಕೆ ಇದಕ್ಕೆ ಪರಿಹಾರ ಹುಡುಕತೊಡಗಿದಳು. ಅನಿಕಾಳ ಅಜ್ಜ ರಸಾಯನಶಾಸ್ತ್ರದ ವಿಜ್ಞಾನಿಯಾಗಿದ್ದು, ಬಾಲ್ಯದಿಂದಲೇ ಈಕೆಗೆ ವೈಜ್ಞಾನಿಕ ವಿಷಯಗಳನ್ನು ತಿಳಿಸಿ ಹೇಳುತ್ತಿದ್ದರು. ಅದರಂದ ಸ್ಫೂರ್ತಿ ಪಡೆದ ಬಾಲಕಿ ಸಣ್ಣ ವಯಸ್ಸಿನಲ್ಲೇ ಇಂತಹ ಸಂಶೋಧನೆಗಳನ್ನು ನಡೆಸುತ್ತಿದ್ದಾಳೆ’ ಎಂದು ಎಬಿಸಿ ನ್ಯೂಸ್‌ ವರದಿ ಮಾಡಿದೆ.