ನವದೆಹಲಿ(ಜ.03): ಪಾಕಿಸ್ತಾನದ ಗುರುನಾನಕ್ ಸಾಹೀಬ್ ಗುರುದ್ವಾರದ ಮೇಲೆ ಗುಂಪೊಂದು ದಾಳಿ ಮಾಡಿದ್ದು, ಭಾರೀ ಕಲ್ಲು ತೂರಾಟದಲ್ಲಿ ನಿರತವಾಗಿದೆ.

ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ಸಾಹೀಬ್ ಅವರ ಐತಿಹಾಸಿಕ ಗುರುದ್ವಾರದ ಮೇಲೆ ಭಾರೀ ಕಲ್ಲು ತೂರಾಟ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಾಂಬ್ ತುಣುಕು ಇರಿಸಿ ಸಿಖ್ಖರ ಎತ್ತಿಕಟ್ಟಲು ಪಾಕ್ ಯತ್ನ

ಗುರುದ್ವಾರದ ಸಿಬ್ಬಂದಿಯ ಮಗಳು ಜಗ್ಜೀತ್ ಕೌರ್ ಎಂಬಾಕೆಯನ್ನು ಕಳೆದ ಆಗಸ್ಟ್’ನಲ್ಲಿ ಮನೆಯಿಂದ ಅಪಹರಿಸಿದ್ದ ಯುವಕನೋರ್ವ ಆಕೆಯನ್ನು ಬಲವಂತಾಗಿ ಇಸ್ಲಾಂಗೆ ಮತಾಂತರಿಸಿದ್ದ. ಈ ಕುರಿತು ಆಕೆಯ ತಂದೆ ದೂರು ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಗುರುದ್ವಾರದಲ್ಲಿ ಭಜನೆ ಆರಂಭವಾಗುತ್ತಿದ್ದಂತೇ ಆವರಣದ ಎದುರಿಗೆ ಜಮಾಯಿಸಿದ ಗುಂಪು, ಕಲ್ಲುತೂರಾಟದಲ್ಲಿ ತೊಡಗಿದೆ. ಒಳಗಡೆ ಭಾರೀ ಸಂಖ್ಯೆಯಲ್ಲಿ ಭಕ್ತರು ಇರುವುದು ಆತಂಕಕ್ಕೆ ಕಾರಣವಾಗಿದೆ.

ಈ ಮಧ್ಯೆ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಪಂಜಾಬ್ ಸಿಎಂ ಕ್ಯಾ. ಅಮರಿಂದರ್ ಸಿಂಗ್, ಈ ಕೂಡಲೇ ಮಧ್ಯಪ್ರವೇಶಿಸಿ ಭಕ್ತರ ರಕ್ಷಣೆಗೆ ಧಾವಿಸಬೇಕೆಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಒತ್ತಾಯಿಸಿದ್ದಾರೆ.