* ಅಗತ್ಯ ವಸ್ತು, ಔಷಧಗಳು ಸಹ ರವಾನೆ* ಲಂಕಾಗೆ ಭಾರತದಿಂದ 40 ಸಾವಿರ ಟನ್‌ ಡೀಸೆಲ್‌* ಬಿಕ್ಕಟ್ಟಿನಿಂದ ತತ್ತರಿಸಿದ ನೆರೆ ದೇಶಕ್ಕೆ ನೆರವು

ಕೊಲಂಬೋ(ಮೇ.22): ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾಗೆ ಕ್ರೆಡಿಟ್‌ ಲೈನ್‌ ಸೌಲಭ್ಯದಡಿ ಭಾರತ ಶನಿವಾರ ಮತ್ತೆ 40 ಸಾವಿರ ಟನ್‌ ಡೀಸೆಲ್‌ ಪೂರೈಕೆ ಮಾಡಿದೆ. ಇದೇ ವೇಳೆ, ಅಕ್ಕಿ, ಔಷಧದಂಥ ಅಗತ್ಯ ವಸ್ತುಗಳನ್ನೂ ಪ್ರತ್ಯೇಕವಾಗಿ ನೀಡಿದೆ.

‘ಕ್ರೆಡಿಟ್‌ ಲೈನ್‌ ಅಡಿಯಲ್ಲಿ ಮತ್ತೆ 40 ಸಾವಿರ ಟನ್‌ ಡೀಸೆಲ್‌ನ್ನು ಶ್ರೀಲಂಕಾಗೆ ಪೂರೈಕೆ ಮಾಡಲಾಗಿದೆ. ಇದು ಶನಿವಾರ ಕೊಲಂಬೋಗೆ ತಲುಪಿದೆ’ ಎಂದು ಶ್ರೀಲಂಕಾದ ಭಾರತೀಯ ರಾಯಭಾರ ಕಚೇರಿ ಟ್ವೀಟ್‌ ಮಾಡಿದೆ. ಶ್ರೀಲಂಕಾ ವಿದೇಶಿ ವಿನಿಮಯಗಳು ಇತ್ತೀಚಿಗೆ ತೀವ್ರವಾಗಿ ಕುಸಿತ ಕಂಡ ನಂತರ ಭಾರತವು ತನ್ನ ಸಾಲದ ಪ್ರಮಾಣವನ್ನು 38 ಸಾವಿರ ಕೋಟಿ ರು.ಗೆ ಹೆಚ್ಚಳ ಮಾಡಿತ್ತು.

ಅಗತ್ಯ ವಸ್ತು:

ಅಲ್ಲದೇ ಶುಕ್ರವಾರ ಅಗತ್ಯ ಸಾಮಾಗ್ರಿಗಳಾದ ಅಕ್ಕಿ, ಔಷಧ ಮತ್ತು ಹಾಲಿನ ಪುಡಿಯನ್ನು ಹೊತ್ತ ಹಡಗು ಭಾರತದಿಂದ ಶ್ರೀಲಂಕಾಗೆ ಹೊರಟಿದೆ. ಇದು ಭಾನುವಾರ ಕೊಲಂಬೋ ತಲಪುವ ಸಾಧ್ಯತೆ ಇದೆ. 9 ಸಾವಿರ ಮೆಟ್ರಿಕ್‌ ಟನ್‌ ಅಕ್ಕಿ, 200 ಮೆಟ್ರಿಕ್‌ ಟನ್‌ ಹಾಲಿನ ಪುಡಿ, 24 ಮೆಟ್ರಿಕ್‌ ಟನ್‌ ಜೀವರಕ್ಷಕ ಔಷಧಗಳನ್ನು ಭಾರತ ಪೂರೈಕೆ ಮಾಡಿದೆ.