Asianet Suvarna News Asianet Suvarna News

ಧೂಮಪಾನಿಗಳ ಸಂಖ್ಯೆ : ಭಾರತ ವಿಶ್ವದಲ್ಲೇ ನಂ.2!

  • ಕ್ಯಾನ್ಸರ್‌ಗೆ ಕಾರಣವಾಗುವ ಗುಟ್ಕಾ ಮತ್ತು ತಂಬಾಕು ಬಳಕೆ ಮೇಲಿನ ನಿಯಂತ್ರಣ
  • ಭಾರತದಲ್ಲಿ 16-64 ವಯೋಮಾನದ ಒಟ್ಟಾರೆ 25 ಕೋಟಿಗಿಂತ ಹೆಚ್ಚು ಮಂದಿ ಧೂಮಪಾನದ ದಾಸರಾಗಿದ್ದಾರೆ
India is second to China in terms of numbers of smokers snr
Author
Bengaluru, First Published Nov 19, 2021, 7:40 AM IST
  • Facebook
  • Twitter
  • Whatsapp

ನವದೆಹಲಿ (ನ.19): ಕ್ಯಾನ್ಸರ್‌ಗೆ (Cancer) ಕಾರಣವಾಗುವ ಗುಟ್ಕಾ (Gutka) ಮತ್ತು ತಂಬಾಕು (Tobacco) ಬಳಕೆ ಮೇಲಿನ ನಿಯಂತ್ರಣಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದಾಗ್ಯೂ, ಭಾರತದಲ್ಲಿ (India) 16-64 ವಯೋಮಾನದ ಒಟ್ಟಾರೆ 25 ಕೋಟಿಗಿಂತ ಹೆಚ್ಚು ಮಂದಿ ಧೂಮಪಾನದ ದಾಸರಾಗಿದ್ದಾರೆ. ಈ ಮೂಲಕ ಅತಿಹೆಚ್ಚು ಧೂಮಪಾನಿಗಳನ್ನು ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನ ಪಡೆದಿದೆ ಎಂದು ವರದಿಯೊಂದು ತಿಳಿಸಿದೆ. ಅಲ್ಲದೆ ಧೂಮಪಾನ (Smoking) ತ್ಯಜಿಸುವವರ ಸಂಖ್ಯೆ ಭಾರತದಲ್ಲಿ  ವಿರಳವಾಗಿದೆ ಎಂದು ವರದಿಯೊಂದು ತಿಳಿಸಿದೆ.

‘ದಿ ಇಂಟರ್‌ನ್ಯಾಷನಲ್‌ ಕಮಿಷನ್‌ ಟು ರೀಗ್ನೈಟ್‌ ದಿ ಫೈಟ್‌ ಅಗೇನ್ಸ್ಟ್‌ ಸ್ಮೋಕಿಂಗ್‌’ (Smoking) ಎಂಬ ಸಂಸ್ಥೆ ಈ ವರದಿ ಬಿಡುಗಡೆ ಮಾಡಿದೆ. ಈ ಪ್ರಕಾರ ಭಾರತ ಮತ್ತು ಚೀನಾದಲ್ಲಿ (China) 16ರಿಂದ 64 ವರ್ಷದೊಳಗಿನ 50 ಕೋಟಿಗಿಂತ ಹೆಚ್ಚು ಮಂದಿ ತಂಬಾಕು ವ್ಯಸನಿಗಳಾಗಿದ್ದಾರೆ. 29 ಕೋಟಿ ಜನ ತಂಬಾಕು ವ್ಯಸನಿಗಳನ್ನು ಒಳಗೊಂಡಿರುವ ಚೀನಾ, ವಿಶ್ವದ ಅತಿದೊಡ್ಡ ತಂಬಾಕು ದಾಸ್ಯದ ದೇಶವಾಗಿದೆ.

ವಿಶ್ವಾದ್ಯಂತ ವರ್ಷಕ್ಕೆ 8 ಲಕ್ಷ ಮಂದಿಯ ಸಾವು ಮತ್ತು 20 ಕೋಟಿ ಜನರ ಅಂಗವಿಕಲತೆಗೆ ಕಾರಣವಾಗುವ ತಂಬಾಕಿಗೆ ಈಗಲೂ 114 ಕೋಟಿ ಮಂದಿ ದಾಸರಾಗಿದ್ದಾರೆ ಎಂಬ ಕಳವಳಕಾರಿ ಅಂಶವನ್ನು ಈ ವರದಿಯಲ್ಲಿ ತಿಳಿಸಲಾಗಿದೆ.

ಧೂಮಪಾನಿಗಳಲ್ಲಿ ಕೋವಿಡ್  ಸಾವಿನ ಪ್ರಮಾಣ ಅಧಿಕ :  ಧೂಮಪಾನ ಮಾಡುವವರಿಗೆ ಕೊರೋನಾ (Corona) ಸೋಂಕು ತಗಲಿದರೆ ಅದು ವಿಪರೀತಕ್ಕೆ ಹೋಗುವ ಹಾಗೂ ರೋಗಿ ಮರಣಹೊಂದುವ ಸಾಧ್ಯತೆ ಶೇ.50ರಷ್ಟುಹೆಚ್ಚಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO)) ಹೇಳಿದೆ.

ಮೇ 31ರ ವಿಶ್ವ ತಂಬಾಕು ಮುಕ್ತ ದಿನದ ನಿಮಿತ್ತ ‘ತಂಬಾಕು ಬಿಡಿ’ ಆಂದೋಲವನ್ನು ಡಬ್ಲ್ಯುಎಚ್‌ಒ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಟೆಡ್ರೋಸ್‌ ಅಧನೋಮ್‌ ಗೇಬ್ರಿಯೇಸಸ್‌, ‘ಧೂಮಪಾನ ಮಾಡುವವರಿಗೆ ಕ್ಯಾನ್ಸರ್‌, ಹೃದ್ರೋಗ ಹಾಗೂ ಶ್ವಾಸಕೋಶದ ರೋಗಗಳು ಬರುವ ಸಾಧ್ಯತೆ ಹೆಚ್ಚು. ಕೊರೋನಾ ಪೀಡಿತರು ಧೂಮಪಾನಿಗಳಾಗಿದ್ದರೆ ಈ ರೋಗಗಳು ಬರುವ ಸಾಧ್ಯತೆ ಇನ್ನೂ ಹೆಚ್ಚಾಗುತ್ತದೆ. ಜೊತೆಗೆ ಕೋವಿಡ್‌ ಸೋಂಕು ತೀವ್ರಕ್ಕೆ ಹೋಗುವ ಮತ್ತು ಸಾವು ಸಂಭವಿಸುವ ಸಾಧ್ಯತೆ 50% ಹೆಚ್ಚಾಗುತ್ತದೆ’ ಎಂದು ಹೇಳಿದ್ದಾರೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಧೂಮಪಾನಿಗಳಿಗೆ ಕೊರೋನಾದ ಅಪಾಯ ಹೆಚ್ಚು ಎಂದು ಒಂದು ವರ್ಷದ ಹಿಂದೆಯೇ ಭಾರತ ಸರ್ಕಾರ ಹೇಳಿತ್ತು.

ಹರ್ಷವರ್ಧನ್‌ಗೆ ಡಬ್ಲ್ಯುಎಚ್‌ಒ ಪ್ರಶಸ್ತಿ: ಭಾರತದಲ್ಲಿ ಧೂಮಪಾನ ನಿಯಂತ್ರಣಕ್ಕೆ 2019ರಲ್ಲಿ ಇ-ಸಿಗರೆಟ್‌ ಹಾಗೂ ಹುಕ್ಕಾ ನಿಷೇಧಿಸುವ ಕಾಯ್ದೆ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ

ಹರ್ಷವರ್ಧನ್‌ ಅವರಿಗೆ ವಿಶ್ವ ಆರೋಗ್ಯ ಸಂಸ್ಥೆ ವಿಶೇಷ ಸಾಧನೆಯ ಪ್ರಶಸ್ತಿ ನೀಡಿ ಗೌರವಿಸಿದೆ.

ವಯೋಮಿತಿ ಏರಿಕೆ :  ಸಾರಿಗೆ ನಿಯಮಗಳ ಉಲ್ಲಂಘನೆಗೆ ವಿಧಿಸುವ ದಂಡವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ ಮೇಲೆ ಇದೀಗ ಕೇಂದ್ರ ಸರ್ಕಾರ ತಂಬಾಕು ಉತ್ಪನ್ನಗಳ ಸೇವನೆ ಹಾಗೂ ಮಾರಾಟಕ್ಕೆ ಕಡಿವಾಣ ಹಾಕಲು ಅತ್ಯಂತ ಕಠಿಣ ನಿರ್ಬಂಧ ಹಾಗೂ ಭಾರಿ ಪ್ರಮಾಣದ ದಂಡ ಜಾರಿಗೊಳಿಸಲು ಮುಂದಾಗಿದೆ. ಇದಕ್ಕಾಗಿ ದೇಶದಲ್ಲಿ ಧೂಮಪಾನ ಹಾಗೂ ತಂಬಾಕು ಸೇವನೆಯ ಕಾನೂನುಬದ್ಧ ವಯೋಮಿತಿಯನ್ನು ಈಗಿರುವ 18 ವರ್ಷದಿಂದ 21 ವರ್ಷಕ್ಕೆ ಏರಿಸಲು ಸರ್ಕಾರ ನಿರ್ಧರಿಸಿದೆ. ಜೊತೆಗೆ, ನಿಷೇಧಿತ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ವಿಧಿಸುವ ದಂಡವನ್ನು ಈಗಿನ 200 ರು.ದಿಂದ 2000 ರು.ಗೆ ಏರಿಸುವುದಕ್ಕೂ ಮುಂದಾಗಿದೆ.

ಇದಕ್ಕಾಗಿ ಕೇಂದ್ರ ಆರೋಗ್ಯ ಇಲಾಖೆಯು ‘ಸಿಗರೆಟ್‌ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ, ಉತ್ಪಾದನೆ, ಪೂರೈಕೆ ಹಾಗೂ ಮಾರಾಟ ನಿಯಂತ್ರಣ) ತಿದ್ದುಪಡಿ ಕಾಯ್ದೆ-2020’ರ ಕರಡು ಸಿದ್ಧಪಡಿಸಿದೆ. ಈಗಾಗಲೇ ಜಾರಿಯಲ್ಲಿರುವ ಈ ಕಾಯ್ದೆಗೆ ಇನ್ನಷ್ಟುಬಲ ತುಂಬಲು ಸೆಕ್ಷನ್‌ 7ಕ್ಕೆ ತಿದ್ದುಪಡಿ ಮಾಡಲಾಗುತ್ತಿದ್ದು, ಅದರಲ್ಲಿ ‘ಯಾವುದೇ ವ್ಯಕ್ತಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರಿಗೂ ತಂಬಾಕು ಉತ್ಪನ್ನಗಳನ್ನು ಮಾರುವಂತಿಲ್ಲ ಮತ್ತು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಉತ್ಪನ್ನಗಳನ್ನು ಖರೀದಿಸುವಂತಿಲ್ಲ. ಶಿಕ್ಷಣ ಸಂಸ್ಥೆಗಳಿಂದ 100 ಮೀಟರ್‌ ಸುತ್ತಳತೆಯಲ್ಲಿ ಈ ಉತ್ಪನ್ನಗಳನ್ನು ಮಾರುವಂತಿಲ್ಲ. ತಂಬಾಕು ಉತ್ಪನ್ನಗಳನ್ನು ಸರಿಯಾಗಿ ಪ್ಯಾಕ್‌ ಮಾಡಲಾದ ಮೂಲ ಪೊಟ್ಟಣಗಳಲ್ಲೇ ಮಾರಾಟ ಮಾಡಬೇಕು’ ಎಂದು ಹೇಳಲಾಗಿದೆ. ತಂಬಾಕು ಉತ್ಪನ್ನಗಳನ್ನು ಮೂಲ ಪೊಟ್ಟಣಗಳಲ್ಲೇ ಮಾರಾಟ ಮಾಡಬೇಕು ಅಂದರೆ ಸಿಗರೆಟ್‌ಗಳನ್ನು ಅಂಗಡಿಗಳಲ್ಲಿ ಬಿಡಿಬಿಡಿಯಾಗಿ ಮಾರಾಟ ಮಾಡುವಂತಿಲ್ಲ.

Follow Us:
Download App:
  • android
  • ios