ಸೂಪರ್ ಪವರ್ ದೇಶಗಳ ಪಟ್ಟಿ ಸೇರಲು ಭಾರತ ಅರ್ಹ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ದಶಕಗಳಿಂದಲೂ ಭಾರತದ ಆಪ್ತ ಮಿತ್ರನಾಗಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇದೀಗ ವಿಶ್ವದ ಸೂಪರ್‌ಪವರ್ ದೇಶಗಳ ಪಟ್ಟಿ ಸೇರಲು ಭಾರತ ಅರ್ಹವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾಸ್ಕೋ (ನ.09): ದಶಕಗಳಿಂದಲೂ ಭಾರತದ ಆಪ್ತ ಮಿತ್ರನಾಗಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇದೀಗ ವಿಶ್ವದ ಸೂಪರ್‌ಪವರ್ ದೇಶಗಳ ಪಟ್ಟಿ ಸೇರಲು ಭಾರತ ಅರ್ಹವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಭಾರತದ ಸಾಮರ್ಥ್ಯವನ್ನು ಹಾಡಿ ಹೊಗಳಿದ್ದಾರೆ. ಸೋಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪುಟಿನ್, ‘ಅಪಾರ ಜನಸಂಖ್ಯೆ ಹೊಂದಿರುವ ಭಾರತದ ಆರ್ಥಿಕತೆ ಪ್ರಸಕ್ತ ವಿಶ್ವದ ಇತರೆ ಯಾವುದೇ ದೇಶಗಳಿಗಿಂತ ವೇಗವಾಗಿ ಆರ್ಥಿಕ ಬೆಳವಣಿಗೆ ಕಾಣುತ್ತಿದೆ. ಪ್ರಾಚೀನ ಸಂಸ್ಕೃತಿಯನ್ನು ಹೊಂದಿದೆ. ಜೊತೆಗೆ ಭವಿಷ್ಯದಲ್ಲಿ ಉತ್ತಮ ಬೆಳವಣಿಗೆ ಕಾಣಲಿದೆ. ಆದ ಕಾರಣ ಭಾರತವೂ ಜಾಗತಿಕ ಸೂಪರ್‌ಪವರ್ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಅರ್ಹವಾಗಿದೆ’ ಎಂದರು.
ಇದೇ ವೇಳೆ ಉಭಯ ದೇಶಗಳ ಸಂಬಂಧದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ ಅವರು, ‘ನಾವು ಭಾರತದೊಂದಿಗೆ ಎಲ್ಲಾ ಆಯಾಮಗಳಲ್ಲಿ ಸಂಬಂಧ ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದೇವೆ. ವರ್ಷ ಕಳೆದಂತೆ ನಮ್ಮ ಬಾಂಧವ್ಯ ಬಲಗೊಳ್ಳುತ್ತಿದೆ. ಭಾರತದ ಸೇನೆಯಲ್ಲಿ ರಷ್ಯಾ ನಿರ್ಮಿತ ಆಯುಧಗಳು ಅಪಾರ ಸಂಖ್ಯೆಯಲ್ಲಿವೆ. ನಾವು ಆಯುಧವನ್ನು ಮಾರುವುದಷ್ಟೇ ಅಲ್ಲ, ಬದಲಿಗೆ ಜಂಟಿಯಾಗಿ ಅವುಗಳನ್ನು ನಿರ್ಮಿಸುತ್ತೇವೆ’ ಎಂದರು. ಇದಕ್ಕೆ ಉದಾಹರಣೆಯಾಗಿ ಬ್ರಹ್ಮೋಸ್ ಯೋಜನೆಯನ್ನು ನೆನಪಿಸುತ್ತಾ, ‘ನಾವಿಬ್ಬರೂ ಸೇರಿ ಭಾರತದ ಭದ್ರತೆಗಾಗಿ ಭೂಮಿ, ಜಲ ಹಾಗೂ ಆಗಸದ ಮೂಲಕ ಬಳಸಬಹುದಾದ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದ್ದೇವೆ. ಇದು ಪರಸ್ಪರ ನಂಬಿಕೆ ಹಾಗೂ ಸಹಕಾರದ ಸಂಕೇತವಾಗಿದೆ. ಇದನ್ನು ಭವಿಷ್ಯದಲ್ಲೂ ಮುಂದುವರೆಸಿಕೊಂಡು ಹೋಗುತ್ತೇವೆ’ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಏನಿದು ಸೂಪರ್ ಪವರ್ ದೇಶ?: ಆರ್ಥಿಕತೆ, ಸೇನೆ, ಭೂಗೋಳ, ಜನಸಂಖ್ಯೆ, ಸಂಪನ್ಮೂಲಗಳು, ಸರ್ಕಾರದ ನೀತಿಗಳು ಹಾಗೂ ಸಂಸ್ಕೃತಿಯಂತಹ ವಿಷಯಗಳಲ್ಲಿ ಜಾಗತಿಕವಾಗಿ ಪರಿಣಾಮ ಬೀರಬಲ್ಲ ದೇಶಗಳನ್ನು ಜಾಗತಿಕ ಸೂಪರ್ ಪವರ್ ರಾಷ್ಟ್ರಗಳು ಎಂದು ಗುರುತಿಸಲಾಗುತ್ತದೆ.
ವಿಶ್ವದ ಯಾರಿಂದಲೂ ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿ ವಾಪಸ್ ತರಲಾಗದು: ಪ್ರಧಾನಿ ಮೋದಿ
ಅಪಾರ ಜನಸಂಖ್ಯೆ ಹೊಂದಿರುವ ಭಾರತದ ಆರ್ಥಿಕತೆ ಪ್ರಸಕ್ತ ವಿಶ್ವದ ಇತರೆ ಯಾವುದೇ ದೇಶಗಳಿಗಿಂತ ವೇಗವಾಗಿ ಆರ್ಥಿಕ ಬೆಳವಣಿಗೆ ಕಾಣುತ್ತಿದೆ. ಪ್ರಾಚೀನ ಸಂಸ್ಕೃತಿಯನ್ನು ಹೊಂದಿದೆ. ಜೊತೆಗೆ ಭವಿಷ್ಯದಲ್ಲಿ ಉತ್ತಮ ಬೆಳವಣಿಗೆ ಕಾಣಲಿದೆ. ಆದ ಕಾರಣ ಭಾರತವೂ ಜಾಗತಿಕ ಸೂಪರ್‌ಪವರ್ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಅರ್ಹವಾಗಿದೆ.
- ವ್ಲಾಡಿಮಿರ್ ಪುಟಿನ್, ರಷ್ಯಾ ಅಧ್ಯಕ್ಷ