ಲಡಾಖ್‌ನ ಹತ್ತಿರದವರೆಗೆ ಬಂದು ಕುಳಿತಿದ್ದ ಚೀನಾ ಭಾರತದ ಜೊತೆ ಗಡಿ ತಂಟೆ ಮಾಡಲಿಕ್ಕಿಲ್ಲ ಎಂಬ ಭ್ರಮೆಯಲ್ಲೇ 1949ರಿಂದ 1954ರ ವರೆಗೆ ನೆಹರು ಕಮ್ಯುನಿಸ್ಟ್‌ ಚೀನಾದ ಉದಯ ಶತಮಾನದ ಅದ್ಭುತ ಎಂದು ಭಾಷಣ ಮಾಡುತ್ತಿದ್ದರು. ಟಿಬೆಟ್‌ ಆಕ್ರಮಣದ ನಂತರ ರಾಯಭಾರಿ ಪಣಿಕ್ಕರ್‌ ಅವರನ್ನು ನೆಹರು ಅವರೇ ಚೌ ಎನ್‌ ಲಾಯ್‌ ಬಳಿ ಕಳುಹಿಸಿದರೂ ಕೂಡ ಚೀನಾ ಆ ಬಗ್ಗೆ ಮಾತನ್ನೇ ಆಡಲಿಲ್ಲ. ಮತ್ತು ಚೀನಾ ಜೊತೆ ಗಡಿ ಬಗ್ಗೆ ಪ್ರಸ್ತಾಪಿಸಲು ನೆಹರು ತಯಾರಿರಲಿಲ್ಲ.

ವಿಶ್ವಸಂಸ್ಥೆಯಲ್ಲಿ ನಾನು ಇಷ್ಟೊಂದು ಸಹಾಯ ಮಾಡಿದ್ದೇನೆ, ನನ್ನ ಮೇಲಿನ ಗೌರವದಿಂದ ನಾನು ಹೇಳಿದ್ದನ್ನು ಚೀನಾ ಒಪ್ಪಿಕೊಳ್ಳುತ್ತದೆ. ಅದಕ್ಕೇ ಚೌ ಎನ್‌ ಲಾಯ… ಮೌನವಾಗಿದ್ದಾರೆ ಎಂದು ನೆಹರು ಭ್ರಮೆಯಲ್ಲೇ ಮಾಲ್ಡಿವ್ಸ್‌, ಕೊರಿಯಾ, ಬರ್ಮಾ, ರಷ್ಯಾದ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಂಡಿದ್ದರು. ಚೌ ಎನ್‌ ಲಾಯ್‌ ಅವರನ್ನು ದೆಹಲಿಗೆ ಕರೆಸಿ ಹಿಂದಿ-ಚೀನಿ ಭಾಯಿ ಭಾಯಿ ಎಂದು ಹೇಳಿ ಪಂಚತತ್ವವನ್ನು ಉಪದೇಶಿಸಿದರು. ಆದರೆ ಮಹತ್ವಾಕಾಂಕ್ಷಿ ಚೀನಾದ ಪರವಾಗಿ ಚೌ ಎನ್‌ ಲಾಯ್‌ ‘ಬ್ರಿಟಿಷ್‌ ಭಾರತ ಹಾಗೂ ಚೀನಾದ ಹಿಂದಿನ ಸರ್ಕಾರ ಮಾಡಿಕೊಂಡ ಒಪ್ಪಂದಗಳಿಗೆ ಯಾವುದೇ ಕಿಮ್ಮತ್ತಿಲ್ಲ.

ಚೀನಾಗೆ ಲಾಸಾ ಆಕ್ರಮಣ ತಯಾರಿಯಾದ್ರೆ, ನೆಹರೂಗೆ ಚೀನಾಗೆ ವಿಟೋ ಕೊಡಿಸುವ ತಯಾರಿ.!

ಹೊಸದಾಗಿ ಗಡಿ ಮಾತುಕತೆ ನಡೆಸೋಣ’ ಎಂದರು. ಅಂದರೆ 4 ವರ್ಷ ಭಾರತದ ಸಹಾಯ ಪಡೆದು ಟಿಬೆಟ್‌ ಮೇಲಿನ ಹಿಡಿತ ಬಿಗಿಗೊಳಿಸಿದ ಚೀನಾ ಈಗ ಭಾರತದ ಬಳಿ ಇದ್ದ ಲಡಾಖ್‌, ಅರುಣಾಚಲ, ಸಿಕ್ಕಿಂ ಮೇಲೆ ಕಣ್ಣು ಹಾಕಿ ಕುಳಿತಿತ್ತು. ಚೀನಾವನ್ನು ನಂಬಿದ್ದ ನೆಹರು ಗಡಿಯಲ್ಲಿ ಚೆಕ್‌ ಪೋಸ್ಟ್‌ ಹಾಕಲು ಕೂಡ ದುಡ್ಡು ಕೊಟ್ಟಿರಲಿಲ್ಲ. ಉತ್ತರ ಪ್ರದೇಶದ ಸರ್ಕಾರ ಗಡಿಯಲ್ಲಿ ರಸ್ತೆಗಾಗಿ ದುಡ್ಡು ಕೇಳಿದರೆ ನೋಡೋಣ ಎಂದು ಪ್ರಧಾನಿ ಕಾರ್ಯಾಲಯ ತಳ್ಳಿ ಹಾಕುತ್ತಿತ್ತು. ಚೀನಾ ಜೊತೆ ಗಡಿ ವಿವಾದ ಪ್ರಸ್ತಾಪಿಸದೇ ಇದ್ದರೆ ವಿವಾದವೇ ಇರುವುದಿಲ್ಲ ಎಂಬ ಭ್ರಮೆಯಲ್ಲಿ ನೆಹರು ಇದ್ದರು.

ಗಡಿ ಬಗ್ಗೆ ಚೀನಾ ಜತೆ ಮಾತೇ ಇಲ್ಲ!

ಜಿನಿವಾಕ್ಕೆ ಹೋಗಿದ್ದ ನೆಹರು ಅವರ ವಿದೇಶಾಂಗ ಸಚಿವ ಕೃಷ್ಣ ಮೆನನ್‌, ಚೌ ಎನ್‌ ಲಾಯ್‌ ಅವರನ್ನು ಕೇಳಿಕೊಂಡ ಮೇಲೆ ಮೂರು ದಿನಗಳ ಭೇಟಿಗಾಗಿ ಬಂದರು ಚೀನಾದ ಪ್ರಧಾನಿ. 1954ರ ಜೂನ್‌ 23, 24, 25ರಂದು 5 ಸುತ್ತಿನ ಚರ್ಚೆ ನಡೆಯಿತು ನೆಹರು ಮತ್ತು ಚೌ ಎನ್‌ ಲಾಯ್‌ ಮಧ್ಯೆ. ಆದರೆ ಒಮ್ಮೆಯೂ ಟಿಬೆಟ್‌ ಹೋಗಲಿ, ನಮ್ಮದೇ ಲಡಾಖ್‌ನ ಗಡಿ ಬಗ್ಗೆ ಕೂಡ ನೆಹರು ಪ್ರಸ್ತಾಪಿಸಲಿಲ್ಲ.

ಸ್ವತಃ ಚೌ ಎನ್‌ ಲಾಯ್‌ ‘ಸ್ವಲ್ಪ ಇಂಡೋ-ಚೀನಾ ಬಗ್ಗೆ ಮಾತನಾಡೋಣ’ ಎಂದರೆ ನೆಹರು ಅವರು, ಬರ್ಮಾ, ಶ್ರೀಲಂಕಾ, ಮಾಲ್ಡೀವ್ಸ್‌, ಪಾಕಿಸ್ತಾನದ ಬಗ್ಗೆ ತಮ್ಮ ಅಭಿಪ್ರಾಯ ಹೇಳಿ ದಕ್ಷಿಣ ಏಷ್ಯಾ ಶಾಂತಿಯ ತಾಣ ಆಗಬೇಕು ಎಂದು ಪಂಚಶೀಲ ತತ್ವದ ಬಗ್ಗೆ ಹೇಳುತ್ತಾ ಹೋದರಂತೆ. ಚೌ ಎನ್‌ ಲಾಯ್‌ ಕೂಡ ವಿಧೇಯ ವಿದ್ಯಾರ್ಥಿಯಂತೆ ಜಗತ್ತಿನ ಬೇರೆ ಎಲ್ಲ ದೇಶಗಳ ರಾಜಕೀಯ ಆಸಕ್ತಿ ಬಗ್ಗೆ ಮಾತನಾಡುತ್ತಾ ಹೋದರಂತೆ. ಚೌ ಎನ್‌ ಲಾಯ್‌ಗೆ ವಿಶ್ವ ರಾಜಕೀಯವೇ ಗೊತ್ತಿಲ್ಲ ಎಂದುಕೊಂಡು ಬರ್ಮಾದ ಬಗ್ಗೆ ನೆಹರು ಹೇಳಿದರೆ, ನಂತರದ ಮೂರೇ ತಿಂಗಳಲ್ಲಿ ಚೀನಾದ ಸೈನಿಕರು ಬರ್ಮಾಕ್ಕೆ ನುಗ್ಗಿದ್ದರು. ಸ್ವತಃ ಚೌ ಎನ್‌ ಲಾಯ್‌ ನಮ್ಮ ಗಡಿಗಳ ಬಗ್ಗೆ ಮಾತನಾಡೋಣ ಎಂದರೂ ನೆಹರು ಅದರ ಬಗ್ಗೆ ಆಸಕ್ತಿಯನ್ನೇ ತೋರಿರಲಿಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ