ವಾಷಿಂಗ್ಟನ್‌ (ಡಿ.11): 2024ರಲ್ಲಿ ಚಂದ್ರನ ಮೇಲೆ ಮನುಷ್ಯನನ್ನು ಇಳಿಸುವ ಯೋಜನೆಯೂ ಸೇರಿದಂತೆ ಅಮೆರಿಕದ ಮುಂಬರುವ ಚಂದ್ರಯಾನ ಯೋಜನೆಗಳಲ್ಲಿ ಕೆಲಸ ಮಾಡಲು ಭಾರತೀಯ ಮೂಲದ ಯುದ್ಧವಿಮಾನ ಪೈಲಟ್‌ ರಾಜಾಚಾರಿ ಸೇರಿದಂತೆ 18 ಮಂದಿಯನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಆಯ್ಕೆ ಮಾಡಿದೆ. ಅದರೊಂದಿಗೆ, ಈ ಹಿಂದೆ ನಾಸಾದಿಂದ ಗಗನಯಾನಕ್ಕೆ ತೆರಳಿದ್ದ ಭಾರತೀಯ ಮೂಲದ ವಿಜ್ಞಾನಿಗಳಾದ ಕಲ್ಪನಾ ಚಾವ್ಲಾ ಹಾಗೂ ಸುನೀತಾ ವಿಲಿಯಮ್ಸ್‌ ನಂತರ ಮತ್ತೊಬ್ಬ ವ್ಯಕ್ತಿ ನಾಸಾದಿಂದ ಚಂದ್ರಯಾನಕ್ಕೆ ತೆರಳುವ ಸಾಧ್ಯತೆ ಸೃಷ್ಟಿಯಾಗಿದೆ.

ಚಂದ್ರಯಾನಿಗಳಿಗಿಲ್ಲ ಟಾಯ್ಲೆಟ್ ಸಮಸ್ಯೆ: ಬಹುಕಾಲದ NASA ತಲೆನೋವಿಗೆ ಪರಿಹಾರ ಕೊಟ್ಟ ಪುಟ್ಟ ಬಾಲಕ ...

ಹೈದರಾಬಾದ್‌ ಮೂಲದ ರಾಜಾಚಾರಿ ಸೇರಿದಂತೆ 18 ಜನರ ತಂಡಕ್ಕೆ ‘ಆರ್ಟೆಮಿಸ್‌ ಟೀಂ’ ಎಂದು ಹೆಸರಿಡಲಾಗಿದೆ. ಈ ತಂಡ ಅಮೆರಿಕದ ಮುಂಬರುವ ಚಂದ್ರಯಾನಗಳಲ್ಲಿ ಪಾಲ್ಗೊಳ್ಳಲಿದೆ. 2024ರಲ್ಲಿ ಚಂದ್ರನ ಮೇಲೆ ಒಬ್ಬ ಮಹಿಳೆ ಸೇರಿದಂತೆ ಇಬ್ಬರನ್ನು ಇಳಿಸುವ ಯೋಜನೆಗೂ ಇದೇ ತಂಡದಿಂದ ಇಬ್ಬರು ಪೈಲಟ್‌ಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಬುಧವಾರ ಪ್ರಕಟಿಸಿದ್ದಾರೆ.

ರಾಜಾಚಾರಿ ಅಮೆರಿಕದ ವಾಯುಪಡೆಯಲ್ಲಿ ಕರ್ನಲ್‌ ಆಗಿದ್ದರು. 2017ರಲ್ಲಿ ನಾಸಾದ ಗಗನಯಾನಿಗಳ ಪಡೆ ಸೇರಿದ್ದಾರೆ. ಇವರು ಬೆಳೆದಿದ್ದು ಅಯೋವಾದಲ್ಲಿ. ಇವರ ತಂದೆ ಶ್ರೀನಿವಾಸ್‌ ವಿ. ಚಾರಿ ಅವರು ಹೈದರಾಬಾದ್‌ನಿಂದ ಅಮೆರಿಕಕ್ಕೆ ವಲಸೆ ಹೋಗಿ ನೆಲೆಸಿದ್ದರು. ರಾಜಾಚಾರಿ ಆಸ್ಟೊ್ರೕನಾಮಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಹಾಗೂ ಏರೋನಾಟಿಕ್ಸ್‌ ಆ್ಯಂಡ್‌ ಆಸ್ಟೊ್ರೕನಾಟಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಾಸಾಕ್ಕೆ ಸೇರುವ ಮೊದಲು ಎಫ್‌-15ಇ ಹಾಗೂ ಎಫ್‌-35 ಯುದ್ಧವಿಮಾನಗಳನ್ನು ಅಭಿವೃದ್ಧಿಪಡಿಸಿದ ತಂಡದಲ್ಲಿ ಕೆಲಸ ಮಾಡಿದ್ದಾರೆ.