ಮಾಸ್ಕೋ(ಆ.12): ರಷ್ಯಾ ಅಭಿವೃದ್ಧಿಪಡಿಸಿರುವ ಲಸಿಕೆಗೆ 20 ದೇಶಗಳಿಂದ ಬೇಡಿಕೆ ಬಂದಿದೆ. 100 ಕೋಟಿ ಲಸಿಕೆಗಳಿಗೆ ವಿವಿಧ ದೇಶಗಳು ಕೋರಿಕೆ ಸಲ್ಲಿಸಿವೆ. ಲ್ಯಾಟಿನ್‌ ಅಮೆರಿಕ, ಮಧ್ಯಪ್ರಾಚ್ಯ, ಏಷ್ಯಾದ ದೇಶಗಳು ರಷ್ಯಾದ ಲಸಿಕೆಯನ್ನು ಖರೀದಿಸಲು ಉತ್ಸುಕತೆ ತೋರಿವೆ. ಈಗಾಗಲೇ ಹಲವು ಕರಾರುಗಳನ್ನು ಅಂತಿಮಗೊಳಿಸಲಾಗಿದೆ ಎಂದು ರಷ್ಯಾದ ನೇರ ಹೂಡಿಕೆ ನಿಧಿ ಮುಖ್ಯಸ್ಥ ಕಿರಿಲ್‌ ಡಿಮಿಟ್ರೀವ್‌ ತಿಳಿಸಿದ್ದಾರೆ. ಈಮಧ್ಯೆ, ರಷ್ಯಾದ ಲಸಿಕೆಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳುವುದಕ್ಕೆ ಫಿಲಿಪ್ಪೀನ್ಸ್‌ ಮುಂದಾಗಿದ್ದು, ಲಸಿಕೆ ಸಿಕ್ಕ ಕೂಡಲೇ ತಾವೇ ಸಾರ್ವಜನಿಕವಾಗಿ ಮೊದಲ ಇಂಜೆಕ್ಷನ್‌ ತೆಗೆದುಕೊಳ್ಳುವುದಾಗಿ ಫಿಲಿಪ್ಪೀನ್ಸ್‌ ಅಧ್ಯಕ್ಷ ರೊಡ್ರಿಗೋ ಡ್ಯುಟರ್ಟೆ ಹೇಳಿದ್ದಾರೆ. ಬೆಲೆ ಇನ್ನೂ ನಿಗದಿಯಾಗಿಲ್ಲ.

ಯಾರಿಗೆ ಮೊದಲು ಲಸಿಕೆ?:

ರಷ್ಯಾದಲ್ಲಿ ತಯಾರಿಸಿದ ಕೊರೋನಾ ಲಸಿಕೆಯನ್ನು ಮೊದಲಿಗೆ ಕೊರೋನಾಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಕಾರ್ಯಕರ್ತರು ಹಾಗೂ ಶಿಕ್ಷಕರೂ ಸೇರಿದಂತೆ ಕೊರೋನಾ ವಾರಿಯರ್‌ಗಳಿಗೆ ಈ ತಿಂಗಳಿನಿಂದಲೇ ನೀಡಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಸ್ಪುಟ್ನಿಕ್‌ ಹೆಸರೇಕೆ?

1957ರಲ್ಲಿ ‘ಸ್ಪುಟ್ನಿಕ್‌’ ಹೆಸರಿನಲ್ಲಿ ವಿಶ್ವದ ಮೊದಲ ಉಪಗ್ರಹ ಉಡಾವಣೆ ಮಾಡುವ ಮೂಲಕ ಜಗತ್ತನ್ನೇ ರಷ್ಯಾ ಚಕಿತಗೊಳಿಸಿತ್ತು. ಈವರೆಗೆ ಆ ಹೆಸರಿನಲ್ಲಿ 4 ಉಪಗ್ರಹಗಳು ಉಡಾವಣೆಯಾಗಿವೆ. ವಿಶ್ವದಲ್ಲೇ ಮೊದಲ ಬಾರಿಗೆ ಕೊರೋನಾ ಲಸಿಕೆ ಕಂಡುಹಿಡಿದಿರುವ ರಷ್ಯಾ ಇದೇ ಕಾರಣಕ್ಕೆ ಅದಕ್ಕೆ ‘ಸ್ಪುಟ್ನಿಕ್‌ 5’ ಎಂಬ ನಾಮಕರಣ ಮಾಡಿದೆ.

ಪರೀಕ್ಷೆ ನಡೆದಿದ್ದು ಹೇಗೆ?

ರಷ್ಯಾದ ಕೊರೋನಾ ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ ಜೂನ್‌ 18ರಂದು ಆರಂಭವಾಯಿತು. ಮೊದಲಿಗೆ 38 ಸ್ವಯಂಸೇವಕರಿಗೆ ಲಸಿಕೆ ನೀಡಲಾಯಿತು. ಎಲ್ಲರಲ್ಲೂ ರೋಗನಿರೋಧಕ ಶಕ್ತಿ ಬೆಳೆಯಿತು. ಇವರಲ್ಲಿ ಮೊದಲ ಗುಂಪನ್ನು ಜುಲೈ 15ರಂದು ಹಾಗೂ ಎರಡನೇ ಗುಂಪನ್ನು ಜುಲೈ 20ರಂದು ಡಿಸ್‌ಚಾಜ್‌ರ್‍ ಮಾಡಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಲಸಿಕೆಯ ಮೊದಲ ಹಂತದ ಪ್ರಯೋಗದಲ್ಲಿ ಎಲ್ಲಾ ಸ್ವಯಂಸೇವಕರಲ್ಲೂ ರೋಗನಿರೋಧಕ ಶಕ್ತಿ ಬೆಳೆಯಿತು ಎಂದು ಲಸಿಕೆಯ ತಯಾರಕರು ಹೇಳಿದ್ದರೂ ಪ್ರಯೋಗದ ಫಲಿತಾಂಶವನ್ನು ಯಾವುದೇ ವೈದ್ಯಕೀಯ ಜರ್ನಲ್‌ನಲ್ಲಿ ಪ್ರಕಟಿಸದೆ ಇರುವುದು ವಿವಾದಕ್ಕೆ ಕಾರಣವಾಗಿದೆ. ಇನ್ನು, ಲಸಿಕೆಯ ಎರಡನೇ ಹಂತದ ಪ್ರಯೋಗವನ್ನು ರಷ್ಯಾದ ಸೈನಿಕರ ಮೇಲೆ ನಡೆಸಲಾಗಿದೆ. ಅದರ ಫಲಿತಾಂಶವನ್ನೂ ಪ್ರಕಟಿಸಿಲ್ಲ. ಲಸಿಕೆಯ ಮೂರನೇ ಹಂತದ ಪ್ರಯೋಗ ಬಹಳ ಮುಖ್ಯವಾಗಿದ್ದು, ಲಸಿಕೆ ಎಷ್ಟುಪರಿಣಾಮಕಾರಿಯಾಗಿದೆ ಮತ್ತು ಅದರಿಂದ ಅಡ್ಡಪರಿಣಾಮಗಳು ಉಂಟಾಗುತ್ತವೆಯೇ ಎಂಬುದನ್ನು ಈ ಹಂತದಲ್ಲಿ ತಿಳಿದುಕೊಳ್ಳಲಾಗುತ್ತದೆ.

ತರಾತುರಿಯಲ್ಲಿ ಲಸಿಕೆ ಘೋಷಣೆ

ರಷ್ಯಾ ಸರ್ಕಾರ ಕೆಲ ದಿನಗಳ ಹಿಂದೆಯೇ ಕೊರೋನಾಗೆ ತನ್ನ ಲಸಿಕೆ ಸಿದ್ಧವಾಗುತ್ತಿದೆ ಎಂದು ಹೇಳಿತ್ತು. ಆದರೆ, ಯಾವುದೇ ಲಸಿಕೆಯೊಂದನ್ನು ಬಿಡುಗಡೆಗೊಳಿಸುವ ಮುನ್ನ ನಡೆಸುವ ಎಲ್ಲಾ ಪರೀಕ್ಷೆಗಳನ್ನೂ ಸೂಕ್ತವಾಗಿ ನಡೆಸಿಯೇ ಈ ಲಸಿಕೆ ಬಿಡುಗಡೆ ಮಾಡುವುದಾದರೆ ಇಷ್ಟುಬೇಗ ಕೊರೋನಾಗೆ ಲಸಿಕೆ ಹೊರಬರಲು ಸಾಧ್ಯವಿಲ್ಲ ಎಂದು ಜಗತ್ತಿನ ಪ್ರಮುಖ ಫಾರ್ಮಾಸುಟಿಕಲ್‌ ಕಂಪನಿಗಳು ಹಾಗೂ ಔಷಧ ವಿಜ್ಞಾನಿಗಳು ಹೇಳಿದ್ದರು. ಆದರೂ ರಷ್ಯಾ ತನ್ನ ಲಸಿಕೆಯ ಪರೀಕ್ಷೆಗಳನ್ನು ಚುಟುಕಾಗಿ ಮುಗಿಸಿ ತರಾತುರಿಯಲ್ಲಿ ಬಿಡುಗಡೆ ಮಾಡಿದೆ. ಇದಕ್ಕೆ ರಷ್ಯಾದ ಫಾರ್ಮಾಸುಟಿಕಲ್‌ ಕಂಪನಿಗಳೂ ಸೇರಿದಂತೆ ಜಗತ್ತಿನ ಅನೇಕ ಕಡೆಗಳಿಂದ ಅಪಸ್ವರ ಕೇಳಿಬಂದಿದೆ. ಮೂರನೇ ಹಂತದ ಕ್ಲಿನಿಕಲ್‌ ಟ್ರಯಲ್‌ ಅನ್ನು ಯುಎಇ, ಸೌದಿ ಅರೇಬಿಯಾ ಮತ್ತಿತರೆ ನಡೆಸುತ್ತೇವೆ ಎಂದು ರಷ್ಯಾ ಹೇಳಿದೆ.