ಲಂಡನ್[ಡಿ.17]: ಕೆಲ ಚಾಲಕರು ವಾಹನ ಚಲಾಯಿಸುವಾಗ ಕಾನೂನು, ನಿಯಮವನ್ನು ಗಮನದಲ್ಲಿಟ್ಟುಕೊಂಡು ಡ್ರೈವ್ ಮಾಡುತ್ತಾರೆ. ಆದರೀಗ ಲಂಡನ್‌ನಲ್ಲಿ ಪೊಲೀಸರು ಮದ್ಯ ಕುಡಿದು ವಾಹನ ಚಲಾಯಿಸುತ್ತಿದ್ದಾತನನ್ನು ಬಂಧಿಸಿದ್ದಾರೆ. ಅಚ್ಚರಿಗೊಳಿಸುವ ವಿಚಾರವೆಂದರೆ ಎಣ್ಣೆ ಏಟಿಗೆ ಈತನಿಗೆ ತಾನು ಚಕ್ರವಿಲ್ಲದ ಕಾರನ್ನು ಚಲಾಯಿಸುತ್ತಿದ್ದೇನೆಂದೂ ಗಮನಕ್ಕೆ ಬಂದಿಲ್ಲ.

ಯುಕೆಯ ಸೌತ್ ಯೋರ್ಕ್‌ಶಾಯಿರ್ ಪೊಲೀಸರು ಶನಿವಾರದಂದು ಇಲ್ಲಿನ ರೋಥರ್‌ಹ್ಯಾಮ್‌ನಲ್ಲಿ ಅಪಘಾತಕ್ಕೀಡಾದ ಕಾರನ್ನು ವಶಪಡಿಸಿದ್ದಾರೆ. ಇದಾದ ಬಳಿಕ ಕಾರು ಚಾಲಕನನ್ನೂ ಬಂಧಿಸಿದ್ದಾರೆ. ಕಾರಿನ ಫೋಟೋ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಪೊಲೀಸರು, ವಾಹನಕ್ಕೆ ವಿಮೆಯನ್ನೂ ಮಾಡಿಸಿಲ್ಲ ಅಲ್ಲದೇ ಚಾಲಕನ ಬಳಿ ಸರಿಯಾದ ಲೈಸನ್ಸ್ ಕೂಡಾ ಇಲ್ಲ ಎಂದು ಬರೆದಿದ್ದಾರೆ.

ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ಪೊಲೀಸರು ಘಟನೆಯ ಮಾಹಿತಿಯನ್ನೂ ನೀಡಿದ್ದಾರೆ. 'ಇಂದು ರಾತ್ರಿ ಈ ವಾಹನವನ್ನು ವಶಪಡಿಸಿಕೊಂಡಿದ್ದೇವೆ. ಈ ವಾಹನದ ಚಾಲಕನನ್ನು ಅವಧಿ ಮುಕ್ತಾಯವಾದ ಲೈಸನ್ಸ್, ವಿಮೆ ಮಾಡಸದಿರುವ, RTC ಬಿಟ್ಟು ಹೋದ ಹಾಗೂ ವೃತ್ತಿಗೆ ಸಂಬಂಧಿಸಿದ ಮಾಹಿತಿ ನೀಡದಿರುವ ಕಾರಣಕ್ಕೆ ಬಂಧಿಸಿದ್ದೇವೆ. ತಾನು ಚಲಾಯಿಸುತ್ತಿದ್ದ ಕಾರಿನ ಒಂದು ಚಕ್ರ ಇಲ್ಲ ಎಂಬುವುದೂ ಕೂಡಾ ಈ ಡ್ರೈವರ್‌ಗೆ ತಿಳಿದಿರಲಿಲ್ಲ. ಅಷ್ಟರ ಮಟ್ಟಿಗೆ ಈತ ನಶೆಯಲ್ಲಿದ್ದ' ಎಂದಿದ್ದಾರೆ.

ಪೊಲೀಸರು ಶೇರ್ ಮಾಡಿಕೊಂಡಿರುವ ಪೋಟೋದಲ್ಲಿ ವಾಹನದ ಮುಂಬದಿಯ ಚಕ್ರವಿರದಿರುವುದನ್ನು ಗಮನಿಸಬಹುದಾಗಿದೆ. 

ಡಿಸೆಂಬರ್ 17ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ