* ಕೋರ್ಟ್‌ನಲ್ಲಿ ಖಾಲಿ ಇರುವ ಒಂದು ಜವಾನ ಹುದ್ದೆ* ಪಾಕ್‌: 1 ಜವಾನ ಹುದ್ದೆಗೆ 15 ಲಕ್ಷ ಜನರ ಅರ್ಜಿ ಸಲ್ಲಿಕೆ* ನಿರುದ್ಯೋಗ ಪ್ರಮಾಣ ತಾರಕಕ್ಕೆ 

ಇಸ್ಲಾಮಾಬಾದ್‌: 1 ಹುದ್ದೆಗೆ 100, 1000, 15000 ಜನರು ಅರ್ಜಿ ಹಾಕುವುದು ಗೊತ್ತು. ಆದರೆ ಪಾಕಿಸ್ತಾನದ ಹೈಕೋರ್ಟ್‌ನಲ್ಲಿ ಖಾಲಿ ಇರುವ ಒಂದು ಜವಾನ ಹುದ್ದೆಗೆ ಇತ್ತೀಚೆಗೆ ಅರ್ಜಿ ಆಹ್ವಾನಿಸಲಾಗಿತ್ತು ಭರ್ಜರಿ 15 ಲಕ್ಷ ಜನರು ಅರ್ಜಿ ಹಾಕಿದ್ದಾರಂತೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ತಮ್ಮ ದೇಶದಲ್ಲಿ ನಿರುದ್ಯೋಗದ ಪ್ರಮಾಣ ಕೇವಲ ಶೇ.6.5ರಷ್ಟುಇದೆ ಎಂಬ ಹೇಳಿಕೆ ಬೆನ್ನಲ್ಲೇ, ಪಾಕಿಸ್ತಾನದಲ್ಲಿನ ನಿರುದ್ಯೋಗ ಪ್ರಮಾಣವನ್ನು ತೋರಿಸುವ ಈ ಪ್ರಕರಣ ಬೆಳಕಿಗೆ ಬಂದಿದೆ.

ಡಾನ್‌ ನ್ಯೂಸ್‌ ವರದಿ ಮಾಡಿರುವ ಅನ್ವಯ, ಇತ್ತೀಚೆಗೆ ಹೈಕೋರ್ಟ್‌ ಖಾಲಿ ಇರುವ ಒಂದು ಜವಾನ ಹುದ್ದೆಗೆ ಅರ್ಜಿ ಅಹ್ವಾನಿಸಿತ್ತು. ಅದಕ್ಕೆ 15 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಬಹುತೇಕರು ಎಂ.ಫಿಲ್‌ ಪದವೀದರರು ಎಂದು ಹೇಳಿದೆ.

ಏತನ್ಮಧ್ಯೆ, ಪಾಕಿಸ್ತಾನ ಆರ್ಥಿಕ ಅಭಿವೃದ್ಧಿ ಸಂಸ್ಥೆ (ಪಿಐಡಿಇ) ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ.16ಕ್ಕೂ ಹೆಚ್ಚಿದೆ. ದೇಶದ ಕನಿಷ್ಠ ಶೇ.24ರಷ್ಟುಶಿಕ್ಷಿತ ಸಮೂಹಕ್ಕೆ ಉದ್ಯೋಗ ಇಲ್ಲ ಎಂದು ತಿಳಿಸಿದೆ. ತನ್ಮೂಲಕ ದೇಶದಲ್ಲಿ ನಿರುದ್ಯೋಗ ಪ್ರಮಾಣ ತುಂಬಾ ಕಮ್ಮಿ ಇದೆ ಎಂಬ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿಕೆ ಸುಳ್ಳು ಎಂದು ಸಾಬೀತಾಗಿದೆ.