IMF on Indian Economy: ಇಡೀ ವಿಶ್ವದ ಆರ್ಥಿಕತೆ ಕಾರ್ಗತ್ತಲೆಯಿಂದ ಕೂಡಿದ್ದರೂ, ಭಾರತದ ಆರ್ಥಿಕತೆ ಆಶಾದಾಯಕವಾಗಿದೆ ಮತ್ತು ಭಾರತದ ಆರ್ಥಿಕತೆ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ ಎಂದು ವಿಶ್ವ ಹಣಕಾಸು ನಿಧಿ ತಿಳಿಸಿದೆ
ವಾಷಿಂಗ್ಟನ್ (ಅ. 14): ಇಡೀ ವಿಶ್ವದ ಆರ್ಥಿಕತೆ ಕಾರ್ಗತ್ತಲೆಯಿಂದ ಕೂಡಿದ್ದರೂ, ಭಾರತದ ಆರ್ಥಿಕತೆ ಆಶಾದಾಯಕವಾಗಿದೆ ಮತ್ತು ಭಾರತದ ಆರ್ಥಿಕತೆ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ ಎಂದು ವಿಶ್ವ ಹಣಕಾಸು ನಿಧಿಯ ಮುಖ್ಯಸ್ಥೆ ಕ್ರಿಸ್ಟಾಲಿನಾ ಜಿಯಾರ್ಜಿವಿಯಾ ಮತ್ತು ಮುಖ್ಯ ಆರ್ಥಿಕ ತಜ್ಞ ಪಿರೀ ಓಲಿವರ್ ಗೌರಿಚಾನ್ಚಾಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಅತ್ಯಂತ ದುಸ್ಥಿತಿಯ ಸಮಯದಲ್ಲೂ ಭಾರತದ ಆರ್ಥಿಕತೆ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಇದು ದೇಶದ ಆರ್ಥಿಕತೆಯ ರಚನಾತ್ಮಕ ಸುಧಾರಣೆಗಳನ್ನು ಆಧರಿಸಿದೆ’ ಎಂದು ವಿಶ್ವ ಹಣಕಾಸು ನಿಧಿಯ ಮುಖ್ಯಸ್ಥೆ ಕ್ರಿಸ್ಟಾಲಿನಾ ಹೇಳಿದ್ದಾರೆ.
ಈ ನಡುವೆ, ಪಿರೀ ಆಲಿವರ್ ಮಾತನಾಡಿ, ‘ವಿಶ್ವ ಆರ್ಥಿಕ ಹಿಂಜರಿತ ಅನುಭವಿಸುತ್ತಿರುವ ಕತ್ತಲಿನ ಹೊತ್ತಿನಲ್ಲೇ ಭಾರತದ ಆರ್ಥಿಕತೆ ಪ್ರಕಾಶಮಾನವಾಗಿ ಹೊರಹೊಮ್ಮಿದೆ. ಆದರೂ ಭಾರತದ ಗುರಿಯಾದ 10 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಲು ಪ್ರಮುಖ ರಚನಾತ್ಮಕ ಸುಧಾರಣೆಗಳ ಅಗತ್ಯವಿದೆ. ಸಧ್ಯಕ್ಕೆ ಹೇಳುವುದಾದರೆ ಭಾರತದ ಆರ್ಥಿಕತೆ ಆಶಾದಾಯಕವಾಗಿದೆ. ಈ ಹಿಂದೆ ಹಲವಾರು ದೇಶಗಳ ಆರ್ಥಿಕತೆಗಳು ವೇಗವಾಗಿ ಬೆಳವಣಿಗೆ ಹೊಂದುವುದನ್ನು ನಾವು ನೋಡಿದ್ದೆವು. ಸಧ್ಯದ ಪರಿಸ್ಥಿತಿಯಲ್ಲಿ ಅದು ಕಷ್ಟವಾಗಿದೆ. ಆದರೆ ಭಾರತದ ಆರ್ಥಿಕತೆಗೆ ಆ ಸಾಮರ್ಥ್ಯವಿದೆ’ ಎಂದು ಹೇಳಿದ್ದಾರೆ.
ಭಾರತದ ನೇರ ನಗದು ವರ್ಗಾವಣೆ ವ್ಯವಸ್ಥೆಗೆ ಐಎಂಎಫ್ ಪ್ರಶಂಸೆ: ಭಾರತದ ನೇರ ನಗದು ವರ್ಗಾವಣೆ ವ್ಯವಸ್ಥೆ ಹಾಗೂ ಈ ರೀತಿಯ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ‘ಲಾಜಿಸ್ಟಿಕ್ ಅದ್ಭುತ’ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಪ್ರಶಂಸಿಸಿದೆ. ಹೇಗೆ ತಂತ್ರಜ್ಞಾನ ಬಳಸಿಕೊಂಡು ಕಠಿಣ ಸಮಸ್ಯೆಗಳನ್ನು ಇತ್ಯರ್ಥ ಮಾಡಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದಿದೆ.
ಭಾರತದ ಆರ್ಥಿಕ ಬೆಳವಣಿಗೆ ದರ ಪರಿಷ್ಕರಿಸಿದ ವಿಶ್ವಬ್ಯಾಂಕ್, ಇತರ ರಾಷ್ಟ್ರಗಳಿಗಿಂತ ಅತ್ಯಧಿಕ ವೇಗದಲ್ಲಿ ಚೇತರಿಕೆ!
ಮಧ್ಯವರ್ತಿ ಸಂಸ್ಥೆಯನ್ನು ತೊಡೆದುಹಾಕಿ ವಿವಿಧ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನಗಳು ಮತ್ತು ಸಹಾಯಧನಗಳನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಸಮಯಕ್ಕೆ ವರ್ಗಾಯಿಸುವುದು ನೇರ ನಗದು ವರ್ಗಾವಣೆ ವ್ಯವಸ್ಥೆಯ ಪ್ರಮುಖ ಉದ್ದೇಶ. ಸರ್ಕಾರದ ಅಂಕಿಅಂಶಗಳ ಪ್ರಕಾರ 2013 ರಿಂದಲೂ ನೇರ ನಗದು ವರ್ಗಾವಣೆ ವ್ಯವಸ್ಥೆ ಮೂಲಕ 24.8 ಲಕ್ಷ ಕೋಟಿ ರು.ಗೂ ಹೆಚ್ಚು ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ.
ಈ ನಿಟ್ಟಿನಲ್ಲಿ ಐಎಂಎಫ್ ಹಣಕಾಸು ವ್ಯವಹಾರಗಳ ಉಪ ನಿರ್ದೇಶಕ ಪೌಲೋ ಮೌರೋ, ‘ಭಾರತದಿಂದ ಕಲಿಯಬೇಕಾಗಿದ್ದು ಸಾಕಷ್ಟಿದೆ. ಭಾರತ ಕಡಿಮೆ ಆದಾಯ ಉಳ್ಳವರ ನೆರವಿಗೆ ಹಮ್ಮಿಕೊಂಡಿರುವ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪುವಂತೆ ಮಾಡಲಾಗಿರುವುದು ಅದ್ಭುತ’ ಎಂದಿದ್ದಾರೆ.
ಐಎಂಎಫ್‌ನಿಂದ ಜಿಡಿಪಿ ಬೆಳವಣಿಗೆ ಶೇ.7.4ರಿಂದ ಶೇ.6.8ಕ್ಕೆ ಕಡಿತ: ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 2022ರಲ್ಲಿ ಭಾರತದ ಆರ್ಥಿಕಾಭಿವೃದ್ಧಿಯ ಅಂದಾಜು ದರವನ್ನು ಶೇ. 6.8ಕ್ಕೆ ಕಡಿತಗೊಳಿಸಿದೆ. ಏಪ್ರಿಲ್ 2022ರಿಂದ ಆರಂಭವಾದ ಆರ್ಥಿಕ ವರ್ಷದಲ್ಲಿ ಭಾರತ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ದರವು ಶೇ. 7.4 ರಷ್ಟುಇರಲಿದೆ ಎಂದು ಐಎಂಎಫ್ ಜುಲೈ ತಿಂಗಳಿನಲ್ಲಿ ಅಂದಾಜಿಸಿತ್ತು.
ಇದಕ್ಕೂ ಮುನ್ನ ವರ್ಷದ ಆರಂಭದಲ್ಲಿ ಜಿಡಿಪಿ ಬೆಳವಣಿಗೆ ದರವು ಶೇ. 8.2ರಷ್ಟಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಇತರೆ ಜಾಗತಿಕ ಹಣಕಾಸು ಸಂಸ್ಥೆಗಳಂತೆ ಐಎಂಎಫ್ ಕೂಡಾ ಜಿಡಿಪಿ ಬೆಳವಣಿಗೆ ಅಂದಾಜನ್ನು ಕಡಿತಗೊಳಿಸಿದೆ. 2021-22ನೇ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ.8.7ರಷ್ಟಿತ್ತು ಎಂಬುದು ಗಮನಾರ್ಹ
ಮುಂದಿನ 25 ವರ್ಷಗಳಲ್ಲಿ ಭಾರತ 25 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಯಲಿದೆ: ಕೆ.ವಿ.ಕಾಮತ್
ಐಎಂಎಫ್ ಮಂಗಳವಾರ ತನ್ನ ವಾರ್ಷಿಕ ವಿಶ್ವ ಆರ್ಥಿಕ ಹೊರನೋಟದ ವರದಿಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ ಶೇ. 6.8ರಷ್ಟಿರಲಿದೆ ಎಂದು ಅಂದಾಜಿಸಿದ್ದು, ಜುಲೈನಲ್ಲಿ ಬಿಡುಗಡೆಗೊಳಿಸಿದ ಅಂದಾಜು ದರಕ್ಕಿಂತ ಶೇ.0.6ರಷ್ಟಕಡಿತಗೊಳಿಸಿದೆ. ಇದರೊಂದಿಗೆ 2021ರಲ್ಲಿ ಶೇ. 6ರಷ್ಟಿದ್ದ ಜಾಗತಿಕ ಅಭಿವೃದ್ಧಿ ದರವು 2022ರಲ್ಲಿ ಶೇ. 3.2ಕ್ಕೆ ಹಾಗೂ 2023ರಲ್ಲಿ ಶೇ. 2.7ಕ್ಕೆ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದೆ. ಕೋವಿಡ್ ಸಾಂಕ್ರಾಮಿಕ, ಚೀನಾದಲ್ಲಿ ಮುಂದುವರೆದ ಲಾಕ್‌ಡೌನ್, ಜಾಗತಿಕ ಆರ್ಥಿಕ ಬಿಕ್ಕಟ್ಟು ಮೊದಲಾದವು ಕಾರಣವಾಗಿದೆ ಎಂದು ಐಎಂಎಫ್ ತಿಳಿಸಿದೆ.
