ಅಕ್ರಮ ವಲಸಿಗರ ಬಂಧನ, ಗಡೀಪಾರಿಗೆ ಟ್ರಂಪ್‌ ಸರ್ಕಾರ ಕೈಗೊಂಡಿರುವ ಕ್ರಮಗಳು ಅಮೆರಿಕದಲ್ಲೀಗ ಭಾರೀ ಹಿಂಸಾಚಾರಕ್ಕೆ ಕಾರಣವಾಗಿದೆ.

 ಅಕ್ರಮ ವಲಸಿಗರ ಬಂಧನ, ಗಡೀಪಾರಿಗೆ ಟ್ರಂಪ್‌ ಸರ್ಕಾರ ಕೈಗೊಂಡಿರುವ ಕ್ರಮಗಳು ಅಮೆರಿಕದಲ್ಲೀಗ ಭಾರೀ ಹಿಂಸಾಚಾರಕ್ಕೆ ಕಾರಣವಾಗಿದೆ. ಇತ್ತೀಚೆಗೆ ಲಾಸ್‌ಏಂಜಲೀಸ್‌ನಲ್ಲಿ 40 ವಲಸಿಗರ ಬಂಧನ ಖಂಡಿಸಿ ಅಕ್ರಮ ವಲಸಿಗರು ಬೀದಿಗಿಳಿದು ಹಿಂಸಾಚಾರ ಆರಂಭಿಸಿದ್ದಾರೆ. ಹಿಂಸೆ ತಡೆವ ಭದ್ರತಾ ಪಡೆಗಳ ಫಲ ಕೊಟ್ಟಿಲ್ಲ. ಹೀಗಾಗಿ ಸೇನೆ ಮತ್ತು ರಾಷ್ಟ್ರೀಯ ಗಾರ್ಡ್‌ಗಳನ್ನು ಅಧ್ಯಕ್ಷ ಟ್ರಂಪ್‌ ನಿಯೋಜಿಸಿದ್ದಾರೆ. ಇದು ಟ್ರಂಪ್‌ ಮತ್ತು ಹಲವು ರಾಜ್ಯ ಸರ್ಕಾರಗಳ ನಡುವೆ ತೀಕ್ಷ್ಣ ವಾಕ್ಸಮರಕ್ಕೂ ಕಾರಣವಾಗಿದೆ. ಈ ನಡುವೆ ಹಿಂಸೆ ಇತರೆ ರಾಜ್ಯಗಳಿಗೂ ಹಬ್ಬುವ ಭೀತಿ ಎದುರಾಗಿದ್ದು ಟ್ರಂಪ್‌ ಸರ್ಕಾರಕ್ಕೆ ಭಾರೀ ದೊಡ್ಡ ಸಮಸ್ಯೆ ಎದುರಾಗುವ ಲಕ್ಷಣ ಕಂಡುಬಂದಿದೆ.

ಲಾಸ್‌ ಏಂಜಲೀಸ್‌ ಉದ್ವಿಗ್ನ ಏಕೆ?

ಕಳೆದ ಶುಕ್ರವಾರ ಲಾಸ್‌ ಏಂಜಲೀಸ್‌ನಲ್ಲಿ ಒಂದೇ ಕಡೆ ಕೆಲಸ ಮಾಡುತ್ತಿದ್ದ ಸುಮಾರು 40 ವಲಸಿಗರ ಬಂಧನವಾಗಿತ್ತು. ಅದನ್ನು ವಿರೋಧಿಸಿ ನಡೆದ ಪ್ರತಿಭಟನೆಯೇ ಗಲಭೆಗೆ ತಿರುಗಿದೆ. ವಾಹನಗಳಿಗೆ ಬೆಂಕಿ, ಹೆದ್ದಾರಿ ತಡೆ ಮೂಲಕ ಹಿಂಸೆಯಾಗಿ ಬದಲಾಗಿದೆ. ಜೊತೆಗೆ ಜನರ ಮೇಲೆ ನಿಗಾ ಇಡುವ ಕಣ್ಗಾವಲು ವಾಹನಗಳಿಗೆ ಜನರು ಬೆಂಕಿ ಹಚ್ಚಿದ್ದಾರೆ. ಗುರುತು ತಡೆಗೆ ಮಾಸ್ಕ್‌ ಧರಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಹೀಗಾಗಿ ಮಾಸ್ಕ್‌ ಹಾಕಿ ಪ್ರತಿಭಟಿಸುತ್ತಿದ್ದವರ ಬಂಧನಕ್ಕೆ ಟ್ರಂಪ್ ಆದೇಶಿಸಿದ್ದರಿಂದ ಹಿಂಸೆ ಮತ್ತಷ್ಟು ಕಾವು ಪಡೆದಿದೆ. ಹೀಗಾಗಿ ಬೀದಿ ಬೀದಿಗಳಲ್ಲಿಯೂ ಪೊಲೀಸರು, ಪ್ರತಿಭಟನಾಕಾರರ ನಡುವೆ ಕಿತ್ತಾಟ ನಡೆಯುತ್ತಿದೆ.

ಟ್ರಂಪ್‌ಗೆ ಪ್ರತಿಷ್ಠೆಯ ಪ್ರಶ್ನೆ

ಅಧ್ಯಕ್ಷೀಯ ಚುನಾವಣೆ ವೇಳೆ ದೇಶದಲ್ಲಿ 1.7 ಕೋಟಿಗೂ ಹೆಚ್ಚಿನ ಅಕ್ರಮ ವಲಸಿಗರನ್ನು ದೇಶದಿಂದ ಗಡೀಪಾರು ಮಾಡುವ ಭರವಸೆಯನ್ನು ಟ್ರಂಪ್‌ ನೀಡಿದ್ದರು. ಅದು ಅಮೆರಿಕನ್‌ ಪ್ರಜೆಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಅದರನ್ವಯ ನಿತ್ಯವೂ ಕನಿಷ್ಠ ಪ್ರಮಾಣದ ಅಕ್ರಮ ವಲಸಿಗರ ಗಡೀಪಾರಿಗೆ ಟ್ರಂಪ್‌ ಸೂಚಿಸಿದ್ದಾರೆ. ಇದು ಸರ್ಕಾರದ ವಿರುದ್ಧ ಅಕ್ರಮ ವಲಸಿಗರು ಬೀದಿಗಿಳಿದ ಹೋರಾಟ ಮಾಡಲು ಕಾರಣವಾಗಿದೆ.

ಹಲವು ರಾಜ್ಯಗಳಲ್ಲಿ ಪ್ರತಿಭಟನೆ

ಕಳೆದ ಶುಕ್ರವಾರದಿಂದೀಚೆಗೆ ಲಾಸ್‌ ಏಂಜಲೀಸ್‌, ಕ್ಯಾಲಿಫೋರ್ನಿಯಾ, ಟೆಕ್ಸಾಸ್‌, ಅರಿಝೋನಾ, ಅರ್ಕಾನ್ಸಸ್‌, ಮಿಸ್ಸೋರಿ, ಜಾರ್ಜಿಯಾ, ನಾರ್ತ್‌ ಕ್ಯಾರೋಲಿನಾ, ಅಲ್ಬಾಮಾದಲ್ಲಿ ಟ್ರಂಪ್‌ ಸರ್ಕಾರದ ವಲಸೆ ನೀತಿ ವಿರುದ್ಧ ಅಕ್ರಮ ವಲಸಿಗರು ತಿರುಗಿಬಿದಿದ್ದಾರೆ. ಪೊಲೀಸ್‌ ವಾಹನಗಳಿಗೆ ಬೆಂಕಿ ಹಚ್ಚುವ, ವ್ಯಾಪಾರದ ಸ್ಥಳಗಳನ್ನು ದೋಚುವ ಕೆಲಸ ಮಾಡುತ್ತಿದ್ದಾರೆ.

ಲಾಸ್‌ ಏಂಜಲೀಸಲ್ಲಿ ಸೇನೆ ನಿಯೋಜನೆ

ಸ್ಥಳೀಯಾಡಳಿತ ಅದೆಷ್ಟೇ ಹರಸಾಹಸ ಪಟ್ಟರೂ ಅಲ್ಲಿ ಪರಿಸ್ಥಿತಿ ತಹಬದಿಗೆ ತರುತ್ತಿಲ್ಲ. ಈ ಬೆನ್ನಲ್ಲೇ ಪ್ರತಿಭಟನೆ ನಿಗ್ರಹಕ್ಕಾಗಿ ಪ್‌ ನೌಕಾಪಡೆಯ 700 ಯೋಧರು ಮತ್ತು ರಾಷ್ಟ್ರೀಯ ಗಾರ್ಡ್‌ನ 2000 ಯೋಧರನ್ನು ಲಾಸ್‌ ಏಂಜಲೀಸ್‌ಗೆ ರವಾನಿಸಿದ್ದಾರೆ. ಇದಕ್ಕೆ ಅಲ್ಲಿನ ಸ್ಥಳೀಯಾಡಳಿತದ ವಿರೋಧವವೂ ಇದೆ.

ಗವರ್ನರ್‌ ವರ್ಸಸ್‌ ಟ್ರಂಪ್‌ ಸಮರ

ಲಾಸ್‌ ಏಂಜಲೀಸ್‌ನಲ್ಲಿ ಪ್ರತಿಭಟನೆ ಹತ್ತಿಕ್ಕಲು ಸೇನೆ ನಿಯೋಜಿಸುವ ಅಧ್ಯಕ್ಷ ಟ್ರಂಪ್‌ ನಿರ್ಧಾರವನ್ನು ಕ್ಯಾಲಿಫೋರ್ನಿಯಾದ ರಾಜ್ಯಪಾಲ ಗೆವಿನ್‌ ನ್ಯೂಸಂ ಟೀಕಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಅವರು ಪೋಸ್ಟ್‌ ಮಾಡಿದ್ದು, ‘ರಾಷ್ಟ್ರೀಯ ಭದ್ರತಾ ಪಡೆಯನ್ನು ಸರ್ಕಾರದ ಅಗತ್ಯತೆಗೆ ಟ್ರಂಪ್‌ ಅಕ್ರಮವಾಗಿ ಬಳಸಿದ್ದಾರೆ. ಅವರ ವಿರುದ್ಧ ಮೊಕದ್ದಮೆ ಹೂಡುತ್ತೇವೆ’ ಎಂದಿದ್ದಾರೆ. ಅಮೆರಿಕದ ನಿಯಮದ ಪ್ರಕಾರ, ರಾಜ್ಯಗಳ ಅನುಮತಿ ಪಡೆಯದೆ ಫೆಡರಲ್‌ ಸರ್ಕಾರ ಸೇನೆಯನ್ನು ನಿಯೋಜಿಸುವಂತಿಲ್ಲ.

1965ರ ಬಳಿಕ ಮೊದಲ ಬಾರಿ ನ್ಯಾಷನಲ್ ಗಾರ್ಡ್

1965ರ ನಂತರ ಅಮೆರಿಕದಲ್ಲಿ ಯಾವೊಬ್ಬ ಅಧ್ಯಕ್ಷ ಕೂಡ ಆಯಾ ರಾಜ್ಯದ ಗವರ್ನರ್‌ಗಳ ಇಚ್ಛೆಗೆ ವಿರುದ್ಧವಾಗಿ ರಾಷ್ಟ್ರೀಯ ಗಾರ್ಡ್‌ ನೇಮಿಸಿದ ಉದಾಹರಣೆಯಿಲ್ಲ. ಆದರೆ ಟ್ರಂಪ್ ಇದೀಗ ಆ ಕೆಟ್ಟ ದಾಖಲೆ ಬರೆದಿದ್ದಾರೆ. 1992ರಲ್ಲಿ ರೋಡ್‌ ನೈ ಕಿಂಗ್ ಗಲಭೆ ಸಂದರ್ಭದಲ್ಲಿ ಕ್ಯಾಲಿಫೋರ್ನಿಯಾ ಗವರ್ನರ್‌ ಮನವಿಗೆ ಮೇರೆಗೆ ಅಂದಿನ ಅಧ್ಯಕ್ಷ ಜಾರ್ಜ್‌ ಡಬ್ಲ್ಯೂ ಬುಶ್ ರಾಷ್ಟ್ರೀಯ ಗಾರ್ಡ್‌ನ ಯೋಧರನ್ನು ನಿಯೋಜಿಸಿದ್ದರು.

ಅಮೆರಿಕಕ್ಕೆ ಅಕ್ರಮ ವಲಸಿಗರೇ ಸಮಸ್ಯೆ

ಅಮೆರಿಕದ ಜನಸಂಖ್ಯೆಯಲ್ಲಿ ಶೇ.15.8 ಅಂದರೆ ಸುಮಾರು 4 ರಿಂದ 5 ಕೋಟಿ ಆಸುಪಾಸಿನಲ್ಲಿ ಅಕ್ರಮ ವಲಸಿಗರಿದ್ದಾರೆ. ಇವರ ಗಡೀಪಾರಿಗೆ ಟ್ರಂಪ್ ಪಣ ತೊಟ್ಟಿದ್ದು ಇದಕ್ಕಾಗಿ ಚುನಾವಣೆಗೂ ಮುನ್ನವೇ ಅಮೆರಿಕದಲ್ಲಿ ನಾಗರಿಕಲ್ಲದ ಮಕ್ಕಳಿಗೆ ತನ್ನ ದೇಶದ ಪೌರತ್ವ ನೀಡುವುದಿಲ್ಲ ಎಂದು ಘೋಷಿಸಿದ್ದರು. ಅದನ್ನೂ ಪಾಲಿಸಿದ್ದರು ಕೂಡ. ಅಲ್ಲದೇ ಅಕ್ರಮ ವೀಸಾ ಅಡಿ ಬಂಧಿಸಿದ್ದ ಆರೋಪದಲ್ಲಿ ಭಾರತವು ಸೇರಿದಂತೆ ವಿವಿದ ದೇಶಗಳ ಪ್ರಜೆಗಳನ್ನು ಗಡೀಪಾರು ಮಾಡಿದ್ದರು.