ಅಡಿಕೆ ತಟ್ಟೆಯಲ್ಲಿ ಊಟ ಮಾಡಿದರೆ ಕ್ಯಾನ್ಸರ್; ಭಾರತದ ಉದ್ಯಮಕ್ಕೆ ಅಮೆರಿಕ ವರದಿ ಆಘಾತ
ಅಮೆರಿಕದ ಎಫ್‌ಡಿಎ ಅಡಿಕೆ ಹಾಳೆಯ ತಟ್ಟೆಗಳ ಮೇಲೆ ನಿಷೇಧ ಹೇರಿದೆ, ಇದು ಕರ್ನಾಟಕದಲ್ಲಿ ಸಾವಿರಾರು ಜನರ ಉದ್ಯೋಗದ ಮೇಲೆ ಪರಿಣಾಮ ಬೀರಿದೆ. ಸಿಪಿಸಿಆರ್‌ಐ ಸಂಶೋಧನೆಗೆ ₹9.3 ಕೋಟಿ ಅನುದಾನ ನೀಡಲಾಗಿದ್ದು, ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯಿಸಲಾಗುತ್ತಿದೆ.
- FB
- TW
- Linkdin
Follow Us
)
ಬೆಂಗಳೂರು (ಜೂ.10): ಪರಿಸರ ಸ್ನೇಹಿ, ನೈಸರ್ಗಿಕ ಹಾಗೂ ಮರು ಬಳಕೆಗೂ ಅನುಕೂಲವಾಗುವ ಅಡಿಕೆ ಹಾಳೆ ತಟ್ಟೆಗಳು ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಪರ್ಯಾಯವಾಗಿ ದೇಶವ್ಯಾಪಿ ಹಾಗೂ ವಿದೇಶಗಳಲ್ಲಿ ಕೂಡ ಪ್ರಸಿದ್ಧಿಯಾಗಿದ್ದವು. ಆದರೆ ಅಮೆರಿಕದ ಎಫ್‌ಡಿಎ (ಅಹಾರ ಮತ್ತು ಔಷಧಿ ಆಡಳಿತ) ನೀಡಿರುವ ನಿಷೇಧದ ಆದೇಶ ಈ ಉದ್ಯಮದ ಭವಿಷ್ಯಕ್ಕೆ ದೊಡ್ಡ ಧಕ್ಕೆಯಾಗಿ ಪರಿಣಮಿಸಿದೆ.
ಅಡಿಕೆ ಹಾಳೆಯ ತಟ್ಟೆಗಳಿಗೆ ಅಮೆರಿಕದ ನಿಷೇಧ:
2025ರ ಮೇ 8ರಂದು ಎಫ್‌ಡಿಎ ಬಿಡುಗಡೆ ಮಾಡಿದ ವರದಿಯಲ್ಲಿ ಅಡಿಕೆ ಹಾಳೆಯಿಂದ ತಯಾರಿಸಲಾದ ತಟ್ಟೆ, ಲೋಟ, ಬಟ್ಟಲುಗಳು ಕೆಲವು ಸಂದರ್ಭಗಳಲ್ಲಿ ಅಲ್ಕಲಾಯ್ಡ್ ಎಂಬ ರಾಸಾಯನಿಕಗಳನ್ನು ಹೊರಸೂಸುತ್ತವೆ ಎಂಬ ಉದ್ದೇಶದಿಂದ ನಿಷೇಧ ಹೇರಲಾಗಿದೆ. ಈ ರಾಸಾಯನಿಕಗಳು ಆಹಾರ ಅಥವಾ ಪಾನೀಯಗಳೊಂದಿಗೆ ಬೆರೆತು ಆರೋಗ್ಯಕ್ಕೆ ಹಾನಿಕಾರಕವಾಗಬಹುದು, ಕ್ಯಾನ್ಸರ್ ಸೇರಿದಂತೆ ಹಲವಾರು ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಮೇಲೆ ಗಂಭೀರ ಪರಿಣಾಮ:
ಈ ನಿರ್ಧಾರದಿಂದಾಗಿ ದೇಶದಾದ್ಯಂತ ಅಡಿಕೆ ಹಾಳೆ ಉತ್ಪನ್ನಗಳನ್ನು ತಯಾರಿಸುತ್ತಿದ್ದ ಸಾವಿರಾರು ಮಂದಿ ವ್ಯಾಪಾರಸ್ಥರು, ಕೈಗಾರಿಕೆದಾರರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಾವಣಗೆರೆ, ಶಿವಮೊಗ್ಗ, ಉತ್ತರ ಮತ್ತು ದಕ್ಷಿಣ ಕನ್ನಡ, ತುಮಕೂರು ಸೇರಿದಂತೆ ಅನೇಕ ಜಿಲ್ಲೆಗಳ ಜನರು ಈ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರು ತೀವ್ರ ಅನಿಶ್ಚಿತತೆಯ ಭೀತಿಯಲ್ಲಿ ಬದುಕುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಅಂದಾಜು 1 ಲಕ್ಷಕ್ಕೂ ಹೆಚ್ಚು ಜನ ಈ ಉದ್ಯಮದ ನೇರ ಅಥವಾ ಪರೋಕ್ಷವಾಗಿ ಭಾಗಿಯಾಗಿದ್ದಾರೆ.
ಅದರಲ್ಲಿ ಶಿವಮೊಗ್ಗ ಜಿಲ್ಲೆ ಒಂದರಲ್ಲಿಯೇ 70,000ಕ್ಕಿಂತ ಹೆಚ್ಚಿನ ಕಾರ್ಮಿಕರು ಅಡಿಕೆ ತಟ್ಟೆ ತಯಾರಿಕೆ ಕೆಲಸ ಮಾಡುತ್ತಿದ್ದಾರೆ. ಈ ಜಿಲ್ಲೆಯಲ್ಲಿ 2,000ಕ್ಕೂ ಹೆಚ್ಚು ತಯಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಈಗ, ಅಮೆರಿಕ ದೇಶಕ್ಕೆ ಅಡಿಕೆ ತಟ್ಟೆ ರಫ್ತು ನಿಂತಿದ್ದು, ದೇಶೀಯ ಮಾರುಕಟ್ಟೆಯಲ್ಲಿ ತೀವ್ರ ಬೇಡಿಕೆ ಕುಸಿತವಾಗಿದೆ.
ಸಿಪಿಸಿಆರ್‌ಐ ಸಂಶೋಧನೆಗೆ ₹9.3 ಕೋಟಿ ಅನುದಾನ:
ಕಾಸರಗೋಡುನಲ್ಲಿರುವ 'ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ)'ನಲ್ಲಿ ಅಡಿಕೆ ಹಾಗೂ ಅದರ ಉಪ ಉತ್ಪನ್ನಗಳ ಆರೋಗ್ಯ ಸುರಕ್ಷತೆಯನ್ನು ದೃಢಪಡಿಸಲು ಸಂಶೋಧನಾ ಯೋಜನೆ ಜಾರಿಯಲ್ಲಿದೆ. ಮೇ 30ರಂದು ರೈತರು, ವಿಜ್ಞಾನಿಗಳು, ಸಂಘ ಸಂಸ್ಥೆಗಳೊಂದಿಗೆ ಸಭೆ ನಡೆಸಲಾಗಿದೆ. ಇತ್ತ, ಮೈಸೂರು ಸಿಎಫ್‌ಟಿಆರ್‌ಐ ಹಾಗೂ ನವದೆಹಲಿ ಐಸಿಎಂಆರ್‌ನಿಂದಲೂ ಸಂಶೋಧನೆ ನಡೆಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. 'ಕೇಂದ್ರ ಸರ್ಕಾರ ತ್ವರಿತವಾಗಿ ಮಧ್ಯಪ್ರವೇಶಿಸಿ ಅಮೆರಿಕದ ನಿರ್ಧಾರ ವಿರುದ್ಧ ರಾಜತಾಂತ್ರಿಕ ಕ್ರಮ ತೆಗೆದುಕೊಳ್ಳಬೇಕು' ಎಂದು ಶಿವಮೊಗ್ಗ ಅಡಿಕೆ ಹಾಳೆ ತಟ್ಟೆ ತಯಾರಕರ ಸಂಘದ ಅಧ್ಯಕ್ಷ ಕನಸು ಮಂಜುನಾಥ ಆಗ್ರಹಿಸಿದ್ದಾರೆ.
ಪ್ರಧಾನಿಗೆ ಪತ್ರ – 100 ತಜ್ಞರಿಂದ ಸಹಿ:
ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಅವರ ನೇತೃತ್ವದಲ್ಲಿ ಕೃಷಿ, ವಿಜ್ಞಾನ, ಆಹಾರ ಮತ್ತು ಆರೋಗ್ಯ ಕ್ಷೇತ್ರದ 100ಕ್ಕೂ ಹೆಚ್ಚು ತಜ್ಞರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಅಮೆರಿಕದ ನಿರ್ಧಾರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಅಮೆರಿಕದ ನಿರ್ಬಂಧ ತೆರವಿಗೆ ರಾಜತಾಂತ್ರಿಕ ಚಟುವಟಿಕೆ. ಅಲ್ಕಲಾಯ್ಡುಗಳ ಸ್ವೀಕಾರಾರ್ಹ ಪ್ರಮಾಣವನ್ನು ಸ್ಪಷ್ಟಪಡಿಸುವಂತೆ ಒತ್ತಾಯ. ಭಾರತೀಯ ಉತ್ಪಾದಕರಿಗೆ ತಾಂತ್ರಿಕ ನೆರವು. ಭಾರತೀಯ ಸಂಶೋಧನಾ ಸಂಸ್ಥೆಗಳ ಮೂಲಕ ದೃಢವಾದ ಪುರಾವೆಗಳ ಸಂಗ್ರಹ ಮಾಡುವುಕ್ಕೆ ಮನವಿ ಮಾಡಿದ್ದಾರೆ.
ಅಡಿಕೆ ಹಾಳೆ ರಫ್ತು ತಡೆಗೆ ವಿರೋಧ.
"ಅಡಿಕೆ ಆರೋಗ್ಯಕಾರಕ " ತಜ್ಞರ ಜೊತೆಗೆ ಪುಟ್ಟ ಮಾತುಕತೆ
****
ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರೂ, ಆತ್ಮೀಯರೂ ಆದ ಡಾ. ಪ್ರಕಾಶ್ ಕಮ್ಮರಡಿ ಇಂದು ಶಿರಸಿಗೆ ಬಂದಿದ್ದರು. ಅಡಿಕೆ ಸುತ್ತ ಹಲವು ಚರ್ಚೆ ನಡೆಯಿತು.ಅಡಿಕೆ ಕ್ಯಾನ್ಸರ್ ಕಾರಕವೆಂಬ ವಿಶ್ವ ಆರೋಗ್ಯ ಸಂಸ್ಥೆ ವರದಿ ಹಾಗೂ ಅಮೇರಿಕಾ ಸಂಯುಕ್ತ ಸಂಸ್ಥಾನದ *“ಆಹಾರ ಮತ್ತು ಔಷಧಿ ಆಡಳಿತ ಸಂಸ್ಥೆ” (* US Food and Drug Administration) ಅಡಕೆಯ ಒಂದು ಪ್ರಮುಖ ಉಪ ಉತ್ಪನ್ನವಾದ ಹಾಳೆಯಿಂದ ತಯಾರಿಸಿದ *ಪರಿಸರ ಸ್ನೇಹಿ ತಟ್ಟೆ , ಲೋಟ* ಇತ್ಯಾದಿ ಊಟದ ಪಾತ್ರೆಗಳನ್ನು ಈಗ ಕ್ಯಾನ್ಸರ್ ಕಾರಕವೆಂದು ನಿಷೇಧಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಸೀಮಿತ ಸಮಯದಲ್ಲಿ ಶಿರಸಿ ಟಿ ಎಸ್ ಎಸ್ ನಲ್ಲಿ ಕೃಷಿಕರ ಜೊತೆಗೆ ವಿಶೇಷ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ಅಡಿಕೆ ಹಾಳೆ ತಟ್ಟೆ ತಯಾರಿಕಾ ಘಟಕಗಳ ಸಂಘದ ಅಧ್ಯಕ್ಷರಾದ ಶ್ರೀ ಮಂಜುನಾಥ ಕೂಡಾ ಬಂದಿದ್ದರು. ಸಾಂದರ್ಭಿಕವಾಗಿ ನಡೆಸಿದ ಪುಟ್ಟ ಮಾತುಕತೆ ಇಲ್ಲಿದೆ.
ವಾರ್ಷಿಕ 3500ಕೋಟಿ ರುಪಾಯಿ ವಹಿವಾಟು ಅಡಿಕೆ ಹಾಳೆ ರಫ್ತು ಮೂಲಕ ರಾಜ್ಯದಲ್ಲಿದೆ. ಸುಮಾರು 2000 ಕ್ಕೂ ಹೆಚ್ಚು ಘಟಕಗಳು ಸಾವಿರಾರು ಜನಕ್ಕೆ ಉದ್ಯೋಗ ನೀಡುತ್ತಿದೆ. ಅಡಿಕೆ ಕ್ಯಾನ್ಸರ್ ಕಾರಕ, ಈಗ ಅಡಿಕೆ ತಟ್ಟೆ ನಿಷೇಧ ಹಿನ್ನಲೆಯ ಕುರಿತು ನಮ್ಮ ಅಡಿಕೆ ಬದುಕು ಅರಿತ ಶ್ರೀ ಪ್ರಕಾಶ್ ಕಮ್ಮರಡಿ ಮಾರ್ಮಿಕವಾಗಿ ಮಾತಾಡಿದ್ದಾರೆ.