ಬಹುತೇಕ ಎಲ್ಲರೂ ವ್ಯಾಟ್ಸಾಪ್ ಬಳಕೆ ಮಾಡುತ್ತಿದ್ದಾರೆ. ಒಂದಷ್ಟು ಮಂದಿ ಹಲವು ಗ್ರೂಪ್‌ಗಳ ಅಡ್ಮಿನ್ ಆಗಿದ್ದಾರೆ. ಆದರೆ ನೀವು ಯಾರನ್ನಾದರೂ ಗ್ರೂಪ್‌ನಿಂದ ರೀಮೂವ್ ಮಾಡಿದ್ದೀರಾ? ಹೀಗಿದ್ರೆ ಈ ಸುದ್ದಿ ಒಮ್ಮೆ ಓದಿ. 

ವ್ಯಾಟ್ಸಾಪ್ ಅತೀ ಹೆಚ್ಚು ಬಳಕೆಯಾಗುತ್ತಿರುವ ಮೆಸೇಂಜ್ ಪ್ಲಾಟ್‌ಫಾರ್ಮ್. ಜನಸಾಮಾನ್ಯರು, ಕಚೇರಿಯ ಸಂವಹನ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರದಲ್ಲೂ ವ್ಯಾಟ್ಸಾಪ್ ಬಳಕೆ ಮಾಡಲಾಗುತ್ತದೆ. ಇನ್ನು ವೈಯುಕ್ತಿಕವಾಗಿ ಕುಟುಂಬ ಸದಸ್ಯರ ಗ್ರೂಪ್, ಗೆಳೆಯರ ಗ್ರೂಪ್, ಶಾಲಾ ಕಾಲೇಜು ಗೆಳಯರ ಗ್ರೂಪ್ ಸೇರಿದಂತೆ ಹಲವು ಗ್ರೂಪ್‌ಗಳು ಪ್ರತಿಯೊಬ್ಬರ ವ್ಯಾಟ್ಸಾಪ್‌ನಲ್ಲಿ ಇದ್ದೇ ಇದೆ. ಇನ್ನು ಗ್ರೂಪ್ ತನ್ನ ಆಶಯಕ್ಕೆ ತಕ್ಕಂತೆ ವರ್ತಿಸದಿದ್ದರೆ, ಅಥವಾ ಗ್ರೂಪ್ ಉದ್ದೇಶಕ್ಕೆ ವಿರುದ್ಧವಾದ ಚರ್ಚೆಗಳು, ಫಾರ್ವಡ್ ಮೆಸೇಜ್ ಮಾಡಿದ ಕಾರಣಕ್ಕೆ ಗ್ರೂಪ್ ಅಡ್ಮಿನ್ ಗ್ರೂಪ್ ಸದಸ್ಯರನ್ನು ಕಿತ್ತು ಹಾಕಿದ ಹಲವು ಘಟನೆಗಳಿವೆ. ಆದರೆ ನೀವು ಗ್ರೂಪ್‌ನಿಂದ ಯಾರನ್ನಾದರೂ ಕಿತ್ತು ಹಾಕಿದ್ದೀರಾ? 

ಹೌದು, ಗ್ರೂಪ್‌ನಿಂದ ಯಾರನ್ನಾದರೂ ಕಿತ್ತು ಹಾಕುವ ಮೊದಲು ಎರಡೆರಡು ಬಾರಿ ಯೋಚಿಸುವುದು ಅತ್ಯಗತ್ಯ. ಕಾರಣ ಇದೀಗ ವ್ಯಾಟ್ಸಾಪ್ ಗ್ರೂಪ್‌ನಿಂದ ಕಿತ್ತೆಸೆದ ಕಾರಣಕ್ಕೆ ಗ್ರೂಪ್ ಅಡ್ಮಿನ್‌ಗೆ ಗುಂಡಿಕ್ಕಿದ ಘಟನೆ ನಡೆದಿದೆ. ವಿಶೇಷ ಅಂದರೆ ಗ್ರೂಪ್‌ನಲ್ಲಿ ಕೆಲ ವಿಚಾರಗಳ ಕಾರಣಕ್ಕೆ ಚರ್ಚೆಯಾಗಿದೆ. ಈ ಚರ್ಚೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ವಾದ ವಿವಾದ ತಾರಕಕ್ಕೇರಿದೆ. ಅದೇನೇ ಹೇಳಿದರೂ ಚರ್ಚೆ ನಿಲ್ಲಿಸುವ ವಿವಾದಕ್ಕೆ ಅಂತ್ಯಹಾಡಲು ಮುಂದಾಗಿಲ್ಲ. ಹೀಗಾಗಿ ಗ್ರೂಪ್ ಆಡ್ಮಿನ್ ಕೊನೆಗೆ ಬೇರೆ ದಾರಿ ಕಾಣದೆ ಸದಸ್ಯನನ್ನು ಗ್ರೂಪ್‌ನಿಂದ ರಿಮೂವ್ ಮಾಡಿದ್ದಾರೆ. ಇಷ್ಟಕ್ಕೆ ಆಕ್ರೋಶಗೊಂಡ ಸದಸ್ಯ, ಗ್ರೂಪ್ ಆಡ್ಮಿನ್‌ನ ಹುಡುಕಿಕೊಂಡು ಹೋಗಿ ಗುಂಡಿಕ್ಕಿದ ಘಟನೆ ನಡೆದಿದೆ.

ಈ ಘಟನೆ ನಡೆದಿರೋದು ಪಾಕಿಸ್ತಾನದ ಖೈಬರ್ ಪಂಖ್ತುಕ್ವಾದಲ್ಲಿ. ಗ್ರೂಪ್ ಅಡ್ಮಿನ್ ಮುಷ್ತಾಕ್ ಅಹಮ್ಮದ್ ಹತ್ಯೆಯಾಗಿದ್ದಾನೆ. ಗ್ರೂಪ್ ಸದಸ್ಯ ಅಶ್ರಫ್ ವಿರುದ್ದ ಪ್ರಕರಣ ದಾಖಲಾಗಿದೆ. ಪೊಲೀಸರು ಅಶ್ರಫ್ ಬಂಧಿಸಿ ವಿಚಾರಣೆ ನಡೆಸಿದಾಗ ಹತ್ಯೆ ಹಿಂದಿನ ಕಾರಣ ಬಯಲಾಗಿದೆ. ಇಷ್ಟೇ ಅಲ್ಲ ಈ ಕಾರಣ ಪೊಲೀಸರನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ. 

ವಿಚಾರಣೆ ವೇಳೆ ನಡೆದ ಘಟನೆಯನ್ನು ಅಶ್ರಫ್ ಬಾಯ್ಬಿಟ್ಟಿದ್ದಾನೆ. ವ್ಯಾಟ್ಸಾಪ್ ಗ್ರೂಪ್‌ನನಲ್ಲಿ ವಿವಾದ ಜೋರಾಗಿದೆ. ಹಲವು ಬಾರಿ ಕೆಲ ವಿಚಾರಗಳಿಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದೆ. ಆದರೆ ಬಳಿಕ ಎಲ್ಲವೂ ಶಾಂತವಾಗಿದೆ. ಆದರೆ ಈ ಬಾರಿ ವಿವಾದ ಜೋರಾಗುತ್ತಿದ್ದಂತೆ ಗ್ರೂಪ್ ಅಡ್ಮಿನ್ ಮುಷ್ತಾಕ್ ಅಹಮ್ಮದ್, ಸದಸ್ಯ ಆಶ್ರಫ್ ಕಿತ್ತು ಹಾಕಿದ್ದಾರೆ. ಗ್ರೂಪ್‌ನಿಂದ ರಿಮೂವ್ ಮಾಡಿದ ಕಾರಣಕ್ಕೆ ಅಶ್ರಫ್ ತೀವ್ರ ಆಕ್ರೋಶಗೊಂಡಿದ್ದ. ಹೀಗಾಗಿ ಪಿಸ್ತೂಲ್ ಹಿಡಿದು ಗ್ರೂಪ್ ಆಡ್ಮಿನ್ ಹುಡುಕಾಡಿ ಗುಂಡು ಹಾರಿಸಿದ್ದಾನೆ.