Russia Ukraine War ಚಚ್ಚಿ ಹಾಕ್ತೀನಿ: ಉಕ್ರೇನ್‌ಗೆ ರಷ್ಯಾ ಅಧ್ಯಕ್ಷ ಪುಟಿನ್ ಎಚ್ಚರಿಕೆ!
- ಶಾಂತಿ ಓಲೆ ತಂದ ಸಂಧಾನಕಾರನ ಎದುರು ಪುಟಿನ್ ಗರಂ
- ಉಕ್ರೇನ್ ಷರತ್ತು ನೋಡಿ ಆಕ್ರೋಶಗೊಂಡ ಪುಟಿನ್
- ಸಂಧಾನಕಾರನಲ್ಲಿ ಸಂದೇಶ ರವಾನಿಸಿದ ಪುಟಿನ್
ಮಾಸ್ಕೋ(ಮಾ.30): ಯುದ್ಧ ಕೊನೆಗೊಳಿಸಲು ಉಕ್ರೇನ್ ಇಟ್ಟಿದ್ದ ಷರತ್ತುಗಳನ್ನು ಕೆಂಡಾಮಂಡಲವಾದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉಕ್ರೇನ್‌ನನ್ನು ಚಚ್ಚಿ ಹಾಕ್ತೀನಿ ಎಂದು ಎಚ್ಚರಿಕೆ ನೀಡಿದ್ದ ವಿಷಯ ಬೆಳಕಿಗೆ ಬಂದಿದೆ.
ರಷ್ಯಾದ ತೈಲ ಉದ್ಯಮಿ ಮತ್ತು ಚೆಲ್ಸಿ ಫುಟ್ಬಾಲ್ ತಂಡದ ಮಾಲೀಕ ರೋಮನ್ ಅಬ್ರಮೋವಿಚ್, ಉಕ್ರೇನ್ ಕೋರಿಕೆಯಂತೆ ಉಭಯ ದೇಶಗಳ ನಡುವೆ ಹಿಂಬಾಗಿಲ ಸಂಧಾನ ಮಾತುಕತೆ ನಡೆಸುತ್ತಿದ್ದಾರೆ. ಇಂಥದ್ದೊಂದು ಸಂಧಾನದ ಮಾತುಕತೆಯ ಭಾಗವಾಗಿ ಯುದ್ಧ ಕೊನೆಗೊಳಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಕೆಲವೊಂದು ಷರತ್ತುಗಳುಳ್ಳ ಪತ್ರವೊಂದನ್ನು ಸ್ವತಃ ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ ಬರೆದು, ಅದನ್ನು ಅಬ್ರಮೋವಿಚ್‌ಗೆ ಹಸ್ತಾಂತರ ಮಾಡಿದ್ದರು.
ಇದನ್ನು ನೋಡಿ ಆಕ್ರೋಶಗೊಂಡ ಪುಟಿನ್, ‘ಚಚ್ಚಿ ಹಾಕ್ತೀನಿ ಎಂದು ಅವರಿಗೆ ತಿಳಿಸು’ ಎಂದು ಅಬ್ಬರಿಸಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಬ್ರಿಟನ್‌ನ ದ ಟೈಮ್ಸ್ ದಿನಪತ್ರಿಕೆ ವರದಿ ಮಾಡಿದೆ.
ಭಾರತದಲ್ಲಿ ಸಿದ್ಧವಾಗಲಿದೆ ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳ್ಳುವ ಸೂತ್ರ!
ತಟಸ್ಥ ನೀತಿ ಬೇಡಿಕೆ ಪರಿಶೀಲನೆ: ಜೆಲೆನ್‌ಸ್ಕಿ
ಯುದ್ಧ ಬಿಕ್ಕಟ್ಟು ಇತ್ಯರ್ಥಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ನೇರ ಮಾತುಕತೆ ಅತ್ಯಗತ್ಯ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ಮತ್ತೆ ಒತ್ತಯಿಸಿದ್ದಾರೆ. ಇದೇ ವಾರ ಟರ್ಕಿಯಲ್ಲಿ ಉಭಯ ದೇಶಗಳ ನಡುವೆ ನಿಗದಿಯಾಗಿರುವ ಮುಂದಿನ ಸುತ್ತಿನ ಸಂಧಾನ ಮಾತುಕತೆ ಬಗ್ಗೆ ಪ್ರಸ್ತಾಪಿಸಿದ ಜೆಲೆನ್‌ಸ್ಕಿ, ‘ಟರ್ಕಿಯಲ್ಲಿ ನಡೆಯುವ ಮಾತುಕತೆಯು ನಮ್ಮ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಸಂಬಂಧಿಸಿರಲಿದೆ. ನಾವು ಯಾವುದೇ ವಿಳಂಬವಿಲ್ಲದೇ ಶಾಂತಿ ಮರುಸ್ಥಾಪನೆ ಬಯಸುತ್ತಿದ್ದೇವೆ. ನಾವು ನ್ಯಾಟೋ ಒಕ್ಕೂಟದಿಂದ ದೂರ ಉಳಿಯುವ ಮೂಲಕ ತಟಸ್ಥವಾಗಿರಬೇಕು ಎಂಬ ರಷ್ಯಾ ಬೇಡಿಕೆಯನ್ನು ನಾವು ಪರಿಶೀಲಿಸಲಿದ್ದೇವೆ. ಆದರೆ ರಷ್ಯಾ ಯೋಧರು ನಮ್ಮ ದೇಶದಿಂದ ಪೂರ್ಣವಾಗಿ ಹಿಂದೆ ಸರಿದ ಬಳಿಕ ನಾವು ಈ ವಿಷಯವನ್ನು ದೇಶದ ಜನರ ಮುಂದಿಟ್ಟು ಜನಾಭಿಪ್ರಾಯ ಸಂಗ್ರಹಿಸಲಿದ್ದೇವೆ. ಜೊತೆಗೆ ರಷ್ಯಾದಿಂದ ಭದ್ರತೆಯ ಖಾತರಿಯನ್ನೂ ನಾವು ಬಯಸಲಿದ್ದೇವೆ’ ಎಂದು ಹೇಳಿದ್ದಾರೆ.
ವಿಷ ನೀಡಿ, ಸಂಧಾನ ಹಾಳು ಮಾಡಲು ರಷ್ಯಾದಿಂದ ಯತ್ನ
ಪುಟಿನ್ ಪದಚ್ಯುತಿಗೆ ಯತ್ನ ಇಲ್ಲ:
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪದಚ್ಯುತಿಗೆ ಅಮೆರಿಕ ಯತ್ನಿಸುತ್ತಿಲ್ಲ ಎಂದು ಅಮೆರಿಕ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್ ಭಾನುವಾರ ಸ್ಪಷ್ಟಪಡಿಸಿದ್ದಾರೆ. ಶನಿವಾರ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಈ ವ್ಯಕ್ತಿಯನ್ನು (ಪುಟಿನ್) ಹೀಗೆ ಅಧಿಕಾರದಲ್ಲಿ ಮುಂದುವರೆಯಲು ಬಿಡಲಾಗದು. ಅವರನ್ನು ಕಿತ್ತೊಗೆಯಲೇಬೇಕು’ ಎಂದು ಕರೆ ನೀಡಿದ್ದರು. ಆದರೆ, ಇದಕ್ಕೆ ಕಿಡಿಕಾರಿದ್ದ ರಷ್ಯಾ, ‘ನಮ್ಮ ದೇಶದ ಆಂತರಿಕ ವಿಚಾರದಲ್ಲಿ ಅಮೆರಿಕ ಹಸ್ತಕ್ಷೇಪ ಸಲ್ಲದು’ ಎಂದಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಬ್ಲಿಂಕನ್, ‘ಉಕ್ರೇನ್ ಮೇಲೆ ಯುದ್ಧ ಮಾಡಲು ಪುಟಿನ್‌ಗೆ ಅಧಿಕಾರವಿಲ್ಲ ಎಂಬರ್ಥದಲ್ಲಿ ಬೈಡೆನ್ ಮಾತನಾಡಿದ್ದಾರೆ. ಇದರ ಹೊರತು ಪುಟಿನ್ ಪದಚ್ಯುತಿಗೆ ಯತ್ನ ನಡೆಸಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕ ಪರ ದೇಶದ್ರೋಹಿಗಳನ್ನು ಮಟ್ಟಹಾಕುತ್ತೇವೆ: ಪುಟಿನ್
ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳ ಪರವಾಗಿ ರಷ್ಯಾದಲ್ಲಿ ರಹಸ್ಯವಾಗಿ ಕೆಲಸ ಮಾಡುತ್ತಿರುವ ದೇಶದ್ರೋಹಿಗಳಿಂದ ದೇಶವನ್ನು ಶುದ್ಧೀಕರಿಸುವುದಾಗಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. 2 ದಿನಗಳ ಹಿಂದೆ ರಷ್ಯಾದ ಪತ್ರಕರ್ತೆಯೊಬ್ಬರು ಉಕ್ರೇನಿನಲ್ಲಿ ಯುದ್ಧ ನಿಲ್ಲಿಸುವಂತೆ ಆಗ್ರಹಿಸಿ ರಷ್ಯಾದ ಜನರಿಗೆ ಪ್ರತಿಭಟಿಸುವಂತೆ ಕರೆ ನೀಡಿದ್ದರು. ಮಾಧ್ಯಮಗಳಲ್ಲಿ ನಿಮಗೆ ಸುಳ್ಳು ಸುದ್ದಿಯನ್ನು ಬಿತ್ತರಿಸಲಾಗುತ್ತಿದೆ ಎಂದು ಟೀವಿ ನೇರ ಪ್ರಸಾರದಲ್ಲಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಪುಟಿನ್, ‘ರಷ್ಯಾದ ಜನರು ದೇಶಭಕ್ತರು. ಆದರೆ ರಷ್ಯಾ ವಿನಾಶ ಬಯಸುವ ಪಾಶ್ಚಿಮಾತ್ಯ ರಾಷ್ಟ್ರಗಳ ಪರ ರಹಸ್ಯವಾಗಿ ಕೆಲಸ ಮಾಡುತ್ತಿರುವ ದೇಶದ್ರೋಹಿಗಳಿಗೆ ಸರಿಯಾದ ಪಾಠ ಕಲಿಸಬೇಕು. ದೇಶದ್ರೋಹಿಗಳನ್ನು ನಾಶಪಡಿಸಿ ಸಮಾಜವನ್ನು ಶುದ್ಧೀಕರಿಸಿದಾಗಲೇ ದೇಶದ ಒಗ್ಗಟ್ಟು ಬಲವಾಗುತ್ತದೆ. ಅಲ್ಲದೇ ಯಾವುದೇ ಕಠಿಣ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ನನಗೆ ಮನವರಿಕೆಯಾಗಿದೆ’ ಎಂದು ಹೇಳಿದರು.