ಬ್ರಿಟನ್ ಪ್ರಧಾನಿ ರೇಸ್‌ನಲ್ಲಿರುವ ರಿಷಿ ಸುನಕ್ 21 ವರ್ಷದ ಹಿಂದಿನ ವಿಡಿಯೋ ವೈರಲ್!
- ಬ್ರಿಟನ್ ಪ್ರಧಾನಿ ರೇಸ್‌ನಲ್ಲಿ ಇನ್ಫಿ ಅಳಿಯ ರಿಷಿ ಸುನಕ್
- ವೈರಲ್ ಆಯ್ತು ರಿಷಿ ಸುನಕ್ ಹಳೇ ವಿಡಿಯೋ
- 21 ವರ್ಷಗಳ ಹಿಂದಿನ ಸಂದರ್ಶನದ ವಿಡಿಯೋ
ಲಂಡನ್(ಜು.10): ಬೊರಿಸ್ ಜಾನ್ಸನ್ ರಾಜೀನಾಮೆ ಬಳಿಕ ಬ್ರಿಟನ್ ಮುಂದಿನ ಪ್ರಧಾನಿ ಸ್ಥಾನಕ್ಕೆ ಮಾಜಿ ವಿತ್ತ ಸಚಿವ ರಿಷಿ ಸುನಕ್ ಹೆಸರು ಮುಂಚೂಣಿಯಲ್ಲಿದೆ. ಇತ್ತ ರಿಷಿ ಸುನಕ್ ಕೂಡ ಮುಂದಿನ ಪ್ರಧಾನಿಯಾಗಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಇದರ ನಡುವೆ ರಿಷಿ ಸುನಕ್ ಹಳೇ ವಿಡಿಯೋ ವೈರಲ್ ಆಗಿದೆ. ಬರೋಬ್ಬರಿ 21 ವರ್ಷಗಳ ಹಿಂದಿನ ಈ ವಿಡಿಯೋದಲ್ಲಿ ರಿಷಿ, ತನಗೆ ಕಾರ್ಮಿಕ ವರ್ಗದ ಸ್ನೇಹಿತರಿಲ್ಲ ಎಂದಿದ್ದಾರೆ. ಇದೀಗ ಭಾರಿ ಸದ್ದು ಮಾಡುತ್ತಿದೆ.
ನನಗೆ ಶ್ರೀಮಂತರಾದ ಸ್ನೇಹಿತರಿದ್ದಾರೆ, ನನಗೆ ಮೇಲ್ವರ್ಗದ ಸ್ನೇಹಿತರಿದ್ದಾರೆ, ನನಗೆ ತಿಳಿದಿರುವ, ದುಡಿಯುವ ವರ್ಗದ ಸ್ನೇಹಿತರಿದ್ದಾರೆ. ಆದರೆ ಕಾರ್ಮಿಕ ವರ್ಗದ ಸ್ನೇಹಿತರಿಲ್ಲ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಈ ಮಾತು ವಿವಾದಕ್ಕೂ ಕಾರಣವಾಗಿದೆ. ಎಲ್ಲಾ ವರ್ಗದ ಜನರ ಸಂಪರ್ಕ ಇಲ್ಲದ ರಿಷಿ ಮುಂದಿನ ಪ್ರಧಾನಿಯಾಗುವುದು ಹೇಗೆ ಎಂದು ಹಲವರು ಪ್ರಶ್ನಿಸಿದ್ದಾರೆ.
ಕುಟುಂಬ ಕತೆಯ ಮೂಲಕ ಬ್ರಿಟನ್ ಮುಂದಿನ ಪ್ರಧಾನಿ ಸಾಲಿನಲ್ಲಿದ್ದೇನೆ ಎಂದು ಘೋಷಿಸಿದ ರಿಷಿ ಸುನಕ್
ರಿಷಿ ಸುನಕ್ 21 ವರ್ಷ ವಯಸ್ಸಿದ್ದಾಗ ಬಿಬಿಸಿ ವಾಹಿನಿ ಸಂದರ್ಶನ ನಡೆಸಿತ್ತು. ಈ ಸಂದರ್ಶನದಲ್ಲಿ ರಿಷಿ ಸುನಕ್ ಆಡಿದ ಮಾತುಗಳೇ ಇದೀಗ ವೈರಲ್ ಆಗಿದೆ. ಈ ಸಂದರ್ಶದಲ್ಲಿ ರಿಷಿ ಸುನಕ್ ಆಡಿದ ಮಾತುಗಳು ಇದೀಗ ಚರ್ಚೆಯಾಗುತ್ತಿದೆ. ವಿಂಚೆಸ್ಟರ್, ಆಕ್ಸ್‌ಫರ್ಡ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ಅವಕಾಶ ನನಗೆ ಸಿಕ್ಕಿದೆ. ಈ ಎರಡು ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಾಂಗ ಮಾಡುವ ಅವಕಾಶ ಸಿಕ್ಕಿದ್ದೆ ನನ್ನ ಅದೃಷ್ಠ ಎಂದು ರಿಷಿ ಸುನಕ್ ಹೇಳಿದ್ದಾರೆ. ಈ ಶಿಕ್ಷಣದಿಂದ ಸಮಾಜದಲ್ಲಿ ನನ್ನನ್ನು ಗಣ್ಯವ್ಯಕ್ತಿಯನ್ನಾಗಿ ಮಾಡಿದೆ. ತಮ್ಮನ್ನು ವೃತ್ತಿಪರ ಮಧ್ಯಮ ವರ್ಗ ಎಂದು ಪರಿಗಣಿಸುತ್ತೇನೆ ಎಂದಿದ್ದಾರೆ.
42 ವರ್ಷ ವಯಸ್ಸಿನ ರಿಷಿ ಸುನಕ್ ಬ್ರಿಟನ್ ಮುಂದಿನ ಪ್ರಧಾನಿಯಾಗಲು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಪ್ರಚಾರಕ್ಕಾಗಿ ರಿಷಿ ತಮ್ಮ ಕುಟುಂಬದ ಕತೆಯ ವಿಡಿಯೋ ಪೋಸ್ಟ್ ಮಾಡಿದ್ದರು. ರಿಷಿ ಸುನಾಕ್ ಬ್ರಿಟನ್ ಪ್ರಧಾನಿಯಾಗುವ ಇಚ್ಚೆಯನ್ನು ಶುಕ್ರವಾರ( ಜು.08) ವ್ಯಕ್ತಪಡಿಸಿದ್ದಾರೆ. ಬೋರಿಸ್ ಜಾನ್ಸನ್ ಅವರ ರಾಜೀನಾಮೆಯಿಂದ ತೆರವಾಗಿರುವ ಪ್ರಧಾನಿ ಸ್ಥಾನವನ್ನು ಕನ್ಸರ್ವೇಟೀವ್ ಪಕ್ಷದಿಂದ ತುಂಬಲು ಸಿದ್ಧನಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಬ್ರಿಟನ್ ಪ್ರಧಾನಿ ಬೋರಿಸ್ ರಾಜಕೀಯ ಜೀವನ ಸರ್ವನಾಶಗೊಳಿಸಿದ ಐದು ವಿವಾದಗಳು!
ಜಾನ್ಸನ್ ಅವರ ರಾಜೀನಾಮೆಯ ನಂತರ ಯಾರದರೂ ಈ ಕ್ಷಣವನ್ನು ಹಿಡಿದುಕೊಳ್ಳಬೇಕು ಮತ್ತು ಉತ್ತಮ ನಿರ್ಧಾರಗಳನ್ನು ಕೈಗೊಳ್ಳಬೇಕು. ಹಾಗಾಗಿ ನಾನು ಕನ್ಸರ್ವೇಟೀವ್ ಪಕ್ಷದಿಂದ ಮುಂದಿನ ಅಭ್ಯರ್ಥಿಯಾಗಿ, ನಿಮ್ಮ ಮುಂದಿನ ಪ್ರಧಾನಿಯಾಗಿ ನಿಲ್ಲುತ್ತಿದ್ದೇನೆ. ಇಂದು ನಾವು ತೆಗೆದುಕೊಳ್ಳುವ ನಿರ್ಧಾರಗಳು, ಮುಂದಿನ ಪೀಳಿಗೆ ಬ್ರಿಟಿಷ್ ಜನರ ಭವಿಷ್ಯವನ್ನು ಉತ್ತಮಗೊಳಿಸುತ್ತದೆಯೇ ಎಂಬುದನ್ನು ಅವಲಂಬಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅವರು ಆರಂಭಿಸಿರುವ ಚಳುವಳಿಯಲ್ಲಿ ಹೇಳಿದ್ದಾರೆ. ಅಲ್ಲದೇ ಜನರಲ್ಲಿ ನಂಬಿಕೆಯನ್ನು ಪುನರ್‌ಸ್ಥಾಪನೆ, ಆರ್ಥಿಕತೆಯನ್ನು ಪುನರ್‌ನಿರ್ಮಾಣ ಮತ್ತು ದೇಶವನ್ನು ಒಗ್ಗೂಡಿಸೋಣ ಎಂದು ಅವರು ಹೇಳಿದ್ದಾರೆ. ಒಂದು ವೇಳೆ ಸುನಾಕ್ ಅವರು ಆಯ್ಕೆಯಾದರೆ ಬ್ರಿಟನ್ ಪ್ರಧಾನಿಯಾದ ಭಾರತೀಯ ಮೂಲದ ಮೊದಲ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ.
ಈ ನಡುವೆ ಬ್ರೆಕ್ಸಿಟ್ ನಂತರದ ಸಯದಲ್ಲಿ ಆಡಳಿತಾರೂಢ ಪಕ್ಷವನ್ನು ಯಾರಾದರೂ ಒಂದು ಮಾಡಬಹುದಾದರೆ ಮತ್ತು ದೇಶ ಎದುರಿಸುತ್ತಿರುವ ಬೃಹತ್ ಆರ್ಥಿಕ ಬಿಕ್ಕಟ್ಟನ್ನು ಯಾರಾದರೂ ಮೆಟ್ಟಿನಿಲ್ಲಬಹುದಾದರೆ ಅದು ರಿಷಿ ಸುನಾಕ್ ಎಂದು ಹಲವು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೌಸ್ ಆಫ್ ಕಾಮನ್ಸ್‌ನ ನಾಯಕ ಮಾರ್ಕ್ ಸ್ಪೆನ್ಸರ್, ಪಕ್ಷದ ಮಾಜಿ ಅಧ್ಯಕ್ಷ ಓಲಿವರ್ ಡೌಡೆನ್, ಮಾಜಿ ಸಚಿವ ಲಿಯಾನ್ ಫಾಕ್ಸ್ ಸೇರಿದಂತೆ ಟೋರಿ ಪಕ್ಷದ ಹಲವು ಸಂಸದರು ರಿಷಿ ಪರ ಬಹಿರಂಗವಾಗಿಯೇ ಬೆಂಬಲ ವ್ಯಕ್ತಪಡಿಸಿದ್ದಾರೆ.