ಈಗ ಜೋ ಬೈಡನ್‌ ಗೆಲುವಿನ ತುದಿಯಲ್ಲಿದ್ದಾರೆ. ಪಾಕಿಸ್ತಾನ, ಚೀನಾ ಜೊತೆಗಿನ ಘರ್ಷಣೆಗಳ ವಿಷಯದಲ್ಲಿ ಟ್ರಂಪ್‌ ಮುಕ್ತವಾಗಿ ಭಾರತದ ಜೊತೆ ನಿಲ್ಲುತ್ತಿದ್ದರು. ಆದರೆ ಬೈಡನ್‌ ಏನು ಮಾಡುತ್ತಾರೆಂದು ಯಾರಿಗೂ ಗೊತ್ತಿಲ್ಲ.

ನವದೆಹಲಿ (ನ. 06): ಒಂದು ರಾಷ್ಟ್ರದ ಚುನಾವಣೆಯಲ್ಲಿ ಇನ್ನೊಂದು ರಾಷ್ಟ್ರ ಅಥವಾ ನಾಯಕತ್ವ ಬಹಿರಂಗವಾಗಿ ಯಾವುದೋ ಒಂದು ನಿರ್ದಿಷ್ಟಪಕ್ಷಕ್ಕೆ ಅಥವಾ ನಾಯಕನಿಗೆ ಸಾಮಾನ್ಯವಾಗಿ ಬೆಂಬಲ ವ್ಯಕ್ತಪಡಿಸುವುದಿಲ್ಲ. ಆದರೆ, ಹಿಂದೆ ಅಮೆರಿಕಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ‘ಅಬ್‌ ಕಿ ಬಾರ್‌ ಟ್ರಂಪ್‌ ಸರ್ಕಾರ್‌’ ಎಂದು ಹೇಳಿದ್ದರು.

ಅದರ ಲಾಭ ಪಡೆಯಲು ಈ ಚುನಾವಣೆಯಲ್ಲಿ ಭಾರತದ ಬೆಂಬಲ ತಮಗಿದೆ ಎಂದೇ ಟ್ರಂಪ್‌ ಬಿಂಬಿಸಿಕೊಂಡಿದ್ದರು. ಆದರೆ, ಈಗ ಜೋ ಬೈಡನ್‌ ಗೆಲುವಿನ ತುದಿಯಲ್ಲಿದ್ದಾರೆ. ಪಾಕಿಸ್ತಾನ, ಚೀನಾ ಜೊತೆಗಿನ ಘರ್ಷಣೆಗಳ ವಿಷಯದಲ್ಲಿ ಟ್ರಂಪ್‌ ಮುಕ್ತವಾಗಿ ಭಾರತದ ಜೊತೆ ನಿಲ್ಲುತ್ತಿದ್ದರು. ಆದರೆ ಬೈಡನ್‌ ಏನು ಮಾಡುತ್ತಾರೆಂದು ಯಾರಿಗೂ ಗೊತ್ತಿಲ್ಲ. ಒಂದು ವೇಳೆ ಬೈಡನ್‌ ಅಧಿಕಾರಕ್ಕೆ ಬಂದದ್ದೇ ಆದಲ್ಲಿ ಅವರ ಜೊತೆಗೆ ಉತ್ತಮ ಸಂಬಂಧ ಸ್ಥಾಪಿಸಿಕೊಳ್ಳಲು ಭಾರತಕ್ಕೆ ಸ್ವಲ್ಪ ಸಮಯ ಬೇಕಾಗಬಹುದು.

'ಚುನಾವಣಾ ರಣತಂತ್ರಗಾರ' ಪ್ರಶಾಂತ್ ಕಿಸೋರ್ ಬಿಹಾರ ಚುನಾವಣೆಯಲ್ಲಿ ನಾಪತ್ತೆ!

2 ತಪ್ಪುಗಳು ಸರಿ ಆಗೋದಿಲ್ಲ!

ಎಡ-ಬಲ, ಬಿಜೆಪಿ-ಕಾಂಗ್ರೆಸ್‌ ಹೀಗೆ ಎಲ್ಲರಿಗೂ ಪತ್ರಕರ್ತರು ತಮ್ಮ ಮೂಗಿನ ನೇರಕ್ಕೆ ಇರಬೇಕು ಹಾಗೂ ನಮಗೆ ಬೇಕಾದಂತೆ ವರದಿ ಮಾಡಬೇಕು ಎಂದು ಅನಿಸುತ್ತಲೇ ಇರುತ್ತದೆ. ಕೆಲ ಪತ್ರಕರ್ತರಿಗೂ ನಾವು ಎಡಕ್ಕೆ ವಾಲಬೇಕು, ಬಲಕ್ಕೆ ತಿರುಗಬೇಕು ಎಂದು ಅನಿಸುತ್ತದೆ. ತಪ್ಪೇನು ಎಂದು ಕೆಲವರು ವಾದಿಸುತ್ತಾರೆ. ಹೌದು, ಏನಾಗುತ್ತದೆ ಎಂದು ಪ್ರಶ್ನಿಸುವವರೂ ಇದ್ದಾರೆ. ಅತಿಯಾದರೆ ಅಮೃತವೂ ವಿಷ ಎನ್ನುತ್ತಾರಲ್ಲ ಹಾಗೆ ಮುಂಬೈನಲ್ಲಿ ಎರಡೂ ಬದಿಯಿಂದ ನಡೆದಿದ್ದು ಅತಿರೇಕಗಳೇ.

ಮುಂಬೈ ಪೊಲೀಸರು ಹಳೆ ಪ್ರಕರಣ ಕೆದಕಿ ಅರ್ನಬ್‌ ಗೋಸ್ವಾಮಿಗೆ ಕಿರುಕುಳ ನೀಡುತ್ತಿರುವುದು ಎಷ್ಟುತಪ್ಪೋ ಹಾಗೆಯೇ ಅರ್ನಬ್‌ ಪತ್ರಕರ್ತರಾಗಿ ನಡೆದುಕೊಂಡ ರೀತಿಯೂ ಅಷ್ಟೇ ತಪ್ಪು ಎಂಬ ಟೀಕೆಗಳಿವೆ. ಒಂದು ವ್ಯವಸ್ಥೆಯ ಅಸ್ತಿತ್ವ ಆಯಕಟ್ಟಿನ ಜಾಗದಲ್ಲಿರುವವರು ಎಷ್ಟುಪ್ರಬುದ್ಧತೆಯಿಂದ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ನಿರ್ಧಾರವಾಗಿರುತ್ತದೆ. ಅವರೇ ಸರಿ-ತಪ್ಪುಗಳ ವಿವೇಚನೆ ಕಳೆದುಕೊಂಡರೆ ನಂತರ ಉಳಿಯುವುದು ಜನಸಂದಣಿ ಅಷ್ಟೆ.

ಅಮೆರಿಕದಲ್ಲಿ ‘ಟ್ರಂಪ್‌ ಬಿಕ್ಕಟ್ಟು’

ಅಮೆರಿಕದ ಚುನಾವಣೆ ಜನತಾ ನ್ಯಾಯಾಲಯದಲ್ಲಿ ಇತ್ಯರ್ಥ ಕಾಣದೆ ಸೀದಾ ಸುಪ್ರೀಂಕೋರ್ಟ್‌ನಲ್ಲಿ ಅಂತ್ಯ ಕಾಣುವ ಸಾಧ್ಯತೆಗಳು ಹೆಚ್ಚಿವೆ. ಒಂದು ತಿಂಗಳ ಹಿಂದೆಯೇ ಟ್ರಂಪ್‌ ಕೋರ್ಟ್‌ಗೆ ಹೋಗುವ ಬಗ್ಗೆ ಮಾತನಾಡಿದ್ದರು. ಅಮೆರಿಕದ ಸುಪ್ರೀಂಕೋರ್ಟ್‌ನ 10ರಲ್ಲಿ 6 ನ್ಯಾಯಮೂರ್ತಿಗಳು ಟ್ರಂಪ್‌ ಅವರಿಂದ ನಿಯುಕ್ತರಾದವರು. ಶತಮಾನಗಳ ಹಿಂದೆ ಸಾಕಷ್ಟುಸಿವಿಲ್‌ ವಾರ್‌ ನೋಡಿರುವ ಅಮೆರಿಕದಲ್ಲಿ ಈಗಿನ ಚುನಾವಣಾ ಕಾದಾಟ ಇನ್ನೊಂದು ಅತಿರೇಕಕ್ಕೆ ಹೋದರೂ ಆಶ್ಚರ್ಯವಿಲ್ಲ. ಇದೆಲ್ಲವನ್ನೂ ನೋಡಿದರೆ ಅಧಿಕಾರ ಹಸ್ತಾಂತರ ಸುಗಮವಾಗಿ ನಡೆಯುವಂತೆ ಕಾಣುತ್ತಿಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

'ಇಂಡಿಯಾ ಗೇಟ್' ದೆಹಲಿಯಿಂದ ಕಂಡ ರಾಜಕಾರಣ