Asianet Suvarna News Asianet Suvarna News

ಭಾರತದಲ್ಲಿ ಏರುತ್ತಿದೆ ಸೋಂಕಿತರ ಸಂಖ್ಯೆ: ಇಟಲಿ, ಬ್ರಿಟನ್‌, ಅಮೆರಿಕ, ಬ್ರೆಜಿಲ್‌ನಲ್ಲಿ ಹೇಗಿದೆ?

ಪ್ರಪಂಚದ ವಿವಿಧ ದೇಶಗಳಲ್ಲಿ ಕೊರೋನಾ ಅಬ್ಬರ ಹೇಗಿದೆ?| ಇಟಲಿ, ಬ್ರಿಟನ್‌, ಅಮೆರಿಕ, ಬ್ರೆಜಿಲ್‌ನಲ್ಲಿ ಇಳಿಯುತ್ತಿದೆ ಸೋಂಕು| ಭಾರತದಲ್ಲಿ ಏರುತ್ತಿದೆ ಸೋಂಕಿತರ ಸಂಖ್ಯೆ| ಕೆಲವೇ ದಿನಗಳಲ್ಲಿ ನಂ.2 ಪಟ್ಟಕ್ಕೆ ಭಾರತ

How Is The Coronavirus Condition In Other Countries Of World
Author
Bangalore, First Published Aug 31, 2020, 7:28 AM IST

ನವದೆಹಲಿ(ಆ.31): 8 ತಿಂಗಳ ಹಿಂದೆ ಕಾಣಿಸಿಕೊಂಡು ವಿಶ್ವದ ಜನಜೀವನ ಹಾಗೂ ಆರ್ಥಿಕತೆಯನ್ನೇ ಅಲ್ಲೋಲ- ಕಲ್ಲೋಲ ಮಾಡಿರುವ ಕೊರೋನಾ ವೈರಸ್‌ ಅಬ್ಬರ ಜಗತ್ತಿನ ಹಲವು ದೇಶಗಳಲ್ಲಿ ಕೊಂಚ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರೆ ಜನಸಂಖ್ಯೆಯಲ್ಲಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿರುವ ಭಾರತದಲ್ಲಿ ಕೊರೋನಾ ಸೋಂಕು ದಾಖಲೆ ಪ್ರಮಾಣದಲ್ಲಿ ಕಂಡುಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಮೊದಲು ಕೊರೋನಾದಿಂದ ತತ್ತರಿಸಿ ಹೋಗಿದ್ದ ಇಟಲಿ, ಬ್ರಿಟನ್‌ನಂತಹ ದೇಶಗಳಲ್ಲಿ ಪರಿಸ್ಥಿತಿ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಮಾರಕ ವೈರಸ್‌ನ ಜನಕವಾದ ಚೀನಾದಲ್ಲಿ ಕಡೆಯದಾಗಿ ಸೋಂಕು ಕಾಣಿಸಿಕೊಂಡು 20 ದಿನಗಳು ಕಳೆದಿವೆ. ಮಹಾಮಾರಿ ಕೊರೋನಾ ವೈರಸ್‌ ನಿಗ್ರಹಕ್ಕೆ ಇಡೀ ವಿಶ್ವವೇ ಲಸಿಕೆಯ ನಿರೀಕ್ಷೆಯಲ್ಲಿರುವಾಗಲೇ, ಜಗತ್ತಿನ ವಿವಿಧ ಭಾಗಗಳಲ್ಲಿ ಈ ವೈರಸ್‌ ಯಾವ ರೀತಿ ಉಪಟಳ ನೀಡುತ್ತಿದೆ ಎಂಬುದರ ಚಿತ್ರಣ ಇಲ್ಲಿದೆ.

ಭಾರತಲ್ಲಿ 80000 ಕೇಸ್‌: ಒಂದೇ ದಿನ ಯಾವ ದೇಶದಲ್ಲೂ ಇಷ್ಟು ಕೇಸ್‌ ಇಲ್ಲ!

ಅಮೆರಿಕದಲ್ಲಿ ಕೊಂಚ ತಗ್ಗಿದೆ ಅಬ್ಬರ

ಒಟ್ಟು ಸೋಂಕು: 61,39,466

ಸಾವು: 1,86,857

ಕೊರೋನಾದಿಂದ ಅತಿ ಹೆಚ್ಚು ಬಾಧಿತವಾಗಿರುವ ದೇಶವೆಂದರೆ, ಅಮೆರಿಕ. ವಿಶ್ವದಲ್ಲೇ ಅತಿ ಹೆಚ್ಚು ಕೊರೋನಾ ಸೋಂಕಿತರು ಇರುವುದು ಇದೇ ರಾಷ್ಟ್ರದಲ್ಲಿ. ಜನವರಿಯಲ್ಲಿ ಮೊಟ್ಟಮೊದಲ ಕೊರೋನಾ ಕೇಸ್‌ ಅಮೆರಿಕದಲ್ಲಿ ಪತ್ತೆಯಾಯಿತು. ಮಾಚ್‌ರ್‍ ಆರಂಭದ ವೇಳೆಗೆ ಪ್ರತಿನಿತ್ಯ 1000 ಮಂದಿಗೆ ಸೋಂಕು ಪತ್ತೆಯಾಗುತ್ತಿತ್ತು. ಬಳಿಕ ಅದು 50 ಸಾವಿರ, 60 ಸಾವಿರ, ಕೊನೆಗೆ ಜುಲೈ 24ರಂದು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 78586ಕ್ಕೆ ಏರಿಕೆಯಾಗಿತ್ತು. ಈಗ ಸೋಂಕಿನ ಹಾವಳಿ ಕಡಿಮೆಯಾಗಿದ್ದು, ಪ್ರತಿನಿತ್ಯ 50 ಸಾವಿರ ಸೋಂಕಿತರು ಕಂಡುಬರುತ್ತಿದ್ದಾರೆ. ಇನ್ನು ಸಾವಿನ ಸಂಖ್ಯೆಯಲ್ಲೂ ಅಮೆರಿಕ ನಂ.1 ಸ್ಥಾನದಲ್ಲಿದ್ದು, ನಿತ್ಯ ಕನಿಷ್ಠ 1000 ಜನರು ವೈರಸ್ಸಿಗೆ ಬಲಿಯಾಗುತ್ತಿದ್ದಾರೆ. ಒಂದು ಹಂತದಲ್ಲಿ ದೈನಂದಿನ ಸಾವಿನ ಸಂಖ್ಯೆ 2500ರವರೆಗೂ ಏರಿಕೆ ಕಂಡಿತ್ತು. ಹಲವು ರಾಜ್ಯಗಳಲ್ಲಿ ಲಾಕ್‌ಡೌನ್‌ ಸಡಿಲಗೊಂಡಿದೆ. ಹಲವೆಡೆ ಶಾಲೆಗಳು ಪುನಾರಂಭಗೊಂಡಿವೆಯಾದರೂ ಶಿಕ್ಷಕರು, ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಬೀಚ್‌, ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಎಂದಿನಂತೆ ಜನ ಮುಗಿಬೀಳುತ್ತಿದ್ದಾರೆ.

ಬ್ರೆಜಿಲ್‌ನಲ್ಲಿ ಮೊದಲಿನಷ್ಟಿಲ್ಲ ಸೋಂಕು

ಸೋಂಕು: 38,46,965

ಸಾವು: 1,20,498

ಕೊರೋನಾದಿಂದ ಅತಿ ಹೆಚ್ಚು ತತ್ತರಿಸಿರುವ ವಿಶ್ವದ ಎರಡನೇ ದೇಶ ಬ್ರೆಜಿಲ್‌. ಫೆಬ್ರವರಿ ಅಂತ್ಯದಲ್ಲಿ ಈ ದೇಶದಲ್ಲಿ ಮೊದಲ ಕೇಸ್‌ ಪತ್ತೆಯಾಗಿತ್ತು. ಮೇ ತಿಂಗಳಿನಿಂದ ಪ್ರತಿನಿತ್ಯ 25 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಲು ಆರಂಭಿಸಿದವು. ಜುಲೈ 29ರಂದು ಒಂದೇ ದಿನ ದಾಖಲೆಯ 70 ಸಾವಿರ ಕೇಸ್‌ ದಾಖಲಾಗಿತ್ತು. ಇದರಿಂದಾಗಿ ವಿಶ್ವದ ಕೊರೋನಾ ಹಾಟ್‌ಸ್ಪಾಟ್‌ಗಳಲ್ಲಿ ಎರಡನೇ ಸ್ಥಾನಕ್ಕೆ ಬ್ರೆಜಿಲ್‌ ಏರಿತ್ತು. ಇದೀಗ ಪ್ರತಿನಿತ್ಯ ಸರಾಸರಿ 30 ಸಾವಿರ ಮಂದಿಯಲ್ಲಿ ಸೋಂಕು ಕಂಡುಬರುತ್ತಿದೆ. ಗರಿಷ್ಠ 1500ದವರೆಗೂ ತಲುಪಿದ್ದ ದೈನಂದಿನ ಸಾವಿನ ಸಂಖ್ಯೆ ಇದೀಗ 904ಕ್ಕೆ ಕುಸಿದಿದೆ. ಚೇತರಿಸಿಕೊಂಡವರ ಪ್ರಮಾಣ 30 ಲಕ್ಷದಷ್ಟಿದೆ. ಲಾಕ್‌ಡೌನ್‌ ಅನ್ನು ತೆರವುಗೊಳಿಸಲಾಗಿದೆ. ಲಾಕ್‌ಡೌನ್‌ಗೆ ಮೊದಲಿನಿಂದಲೂ ಸ್ಥಳೀಯರ ವಿರೋಧವಿತ್ತು. ಹೀಗಾಗಿ ಜನ ಎಲ್ಲವನ್ನೂ ಮರೆತು ಬೀಚ್‌ಗಳಿಗೆ ದಾಳಿ ಇಟ್ಟಿದ್ದಾರೆ. ಎಂದಿನಂತೆ ಪಬ್‌, ಬಾರ್‌ಗಳು ಜನರಿಂದ ತುಂಬಿವೆ.

'ದೇಶದಲ್ಲಿ ದೀಪಾವಳಿ ವೇಳೆಗೆ ಕೊರೋನಾ ನಿಯಂತ್ರಣಕ್ಕೆ'!

2ನೇ ಸ್ಥಾನದತ್ತ ಭಾರತ ದಾಪುಗಾಲು

ಸೋಂಕು: 35,46,705

ಸಾವು: 63,690

ಜನವರಿ 30ರಂದು ಭಾರತದಲ್ಲಿ ಮೊದಲ ಕೊರೋನಾ ಕೇಸ್‌ ಪತ್ತೆಯಾಯಿತು. ಆರಂಭದಲ್ಲಿ ಈ ವೈರಸ್‌ ಭಾರತದಲ್ಲಿ ತಕ್ಕಮಟ್ಟಿಗೆ ನಿಯಂತ್ರಣದಲ್ಲೇ ಇತ್ತು. ಆದರೆ ಲಾಕ್‌ಡೌನ್‌ ತೆರವಾದ ಬಳಿಕ ದೇಶದಲ್ಲಿ ಸೋಂಕಿತರ ಸಂಖ್ಯೆ ಅಗಾಧ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ಅತಿ ಹೆಚ್ಚು ಸೋಂಕಿತರು ಹಾಗೂ ಮೃತರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ. ಪ್ರತಿನಿತ್ಯ 70 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಶನಿವಾರ ದಾಖಲೆಯ ವಿಶ್ವದಲ್ಲೇ ದಾಖಲೆಯ 78700 ಸೋಂಕಿತರು ಕಂಡುಬಂದಿದ್ದಾರೆ. ನಿತ್ಯ ಸರಾಸರಿ 1000 ಸಾವುಗಳು ಸಂಭವಿಸುತ್ತಿವೆ. ಸೋಂಕಿತರ ಸಂಖ್ಯೆ ಇದೇ ರೀತಿ ಹೆಚ್ಚುತ್ತಾ ಹೋದರೆ ಇನ್ನು ಕೆಲವೇ ದಿನಗಳಲ್ಲಿ 2ನೇ ಸ್ಥಾನದಲ್ಲಿರುವ ಬ್ರೆಜಿಲ್‌ ಅನ್ನು ಭಾರತ ಹಿಂದಿಕ್ಕಿಲಿದೆ. ಶಾಲಾ- ಕಾಲೇಜು ಇನ್ನೂ ಆರಂಭವಾಗಿಲ್ಲ. ಸೀಮಿತ ಸಂಖ್ಯೆಯಲ್ಲಿ ವಿಮಾನ, ರೈಲು ಸಂಚಾರವಿದೆ.

ಕೊರೋನಾ ಮೂಲ ಚೀನಾದಲ್ಲಿ ಒಂದೂ ಕೇಸಿಲ್ಲ!

ಸೋಂಕು: 85,031

ಸಾವು: 4,634

ಕೊರೋನಾ ಜನ್ಮಸ್ಥಳ ಚೀನಾದಲ್ಲಿ ಕೊರೋನಾ ಹಾವಳಿ ಬಹುತೇಕ ನಿಂತಿದೆ. ಆಗಸ್ಟ್‌ 11ರಂದು 44 ಪ್ರಕರಣಗಳು ಪತ್ತೆಯಾಗಿದ್ದೇ ಕೊನೆ, ಕಳೆದ 20 ದಿನಗಳಿಂದ ಒಂದೂ ಹೊಸ ಕೇಸ್‌ ಕಂಡುಬಂದಿಲ್ಲ. ಕೊರೋನಾ ವೈರಸ್‌ ಕಳೆದ ವರ್ಷಾಂತ್ಯದಲ್ಲಿ ಚೀನಾದ ವುಹಾನ್‌ ನಗರದಲ್ಲಿ ಮೊಟ್ಟಮೊದಲಿಗೆ ಕಾಣಿಸಿಕೊಂಡಿತ್ತು. ಬಳಿಕ ಅದು ವಿಶ್ವದಾದ್ಯಂತ ಹಬ್ಬಿ, ಇಡೀ ವಿಶ್ವವೇ ಸಾಂಕ್ರಾಮಿಕ ರೋಗದ ಭೀತಿಯಲ್ಲಿದೆ. ಆದರೆ ಚೀನಾದಲ್ಲಿ ಮಾತ್ರ ಕೊರೋನಾ ಹೆಮ್ಮಾರಿಯ ರುದ್ರನರ್ತನ ನಿಂತಿದ್ದು, ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ. ಕೊರೋನಾ ಹಿನ್ನೆಲೆಯಲ್ಲಿ ದೇಶದಲ್ಲಿ ಹೇರಿದ್ದ ಲಾಕ್‌ಡೌನ್‌ ನಿರ್ಬಂಧಗಳನ್ನು ಬಹುತೇಕ ಸಡಿಲಿಸಲಾಗಿದೆ. ವಿಶ್ವದಲ್ಲಿ ಮೊದಲು ಕೊರೋನಾ ಕಾಣಿಸಿಕೊಂಡಿದ್ದ ವುಹಾನ್‌ ನಗರದಲ್ಲಿ ಶಾಲಾ-ಕಾಲೇಜುಗಳು ಮಂಗಳವಾರದಿಂದ ಆರಂಭಗೊಳ್ಳಲಿವೆ. ದೇಶಾದ್ಯಂತ ಜನಜೀವನ ಬಹುತೇಕ ಸಾಮಾನ್ಯ ಸ್ಥಿತಿಗೆ ಬಂದಿದೆ.

5 ತಿಂಗಳಿಂದ ಬಂದ್‌ ಆಗಿರುವ ಬಾರ್, ಕ್ಲಬ್ ಮಂಗಳವಾರದಿಂದ‌ ಆರಂಭ!

ಇಟಲಿಯಲ್ಲಿ ತಗ್ಗಿದ್ದ ವೈರಸ್‌ ಕೊಂಚ ಏರಿಕೆ

ಸೋಂಕು: 2,66,853

ಸಾವು: 35,473

ಕೊರೋನಾ ವೈರಸ್ಸಿನ ಭೀಕರತೆ ವಿಶ್ವಕ್ಕೆ ಪರಿಚಯವಾಗಿದ್ದೇ ಇಟಲಿಯ ಮೂಲಕ. ನಿತ್ಯ ಸಾವಿರಾರು ಕೊರೋನಾ ಕೇಸ್‌ಗಳು ದೃಢಪಡುತ್ತಿದ್ದಾಗ ಸರಿಯಾದ ವೈದ್ಯಕೀಯ ಸೌಲಭ್ಯಗಳಿಲ್ಲದೆ ಇಟಲಿ ಅಕ್ಷರಶಃ ತತ್ತರಿಸಿತ್ತು. ಮಾಚ್‌ರ್‍ನಲ್ಲಿ ವಿಶ್ವದ ನಂ.1 ಕೊರೋನಾ ಹಾಟ್‌ಸ್ಪಾಟ್‌ ಆಗಿದ್ದ ಇಟಲಿ ಇದೀಗ 19ನೇ ಸ್ಥಾನಕ್ಕೆ ಇಳಿದಿದೆ. ಇಟಲಿಯಲ್ಲೀಗ ದೈನಂದಿನ ಕೊರೋನಾ ಪ್ರಕರಣಗಳು ಮತ್ತು ಸಾವಿನ ಪ್ರಮಾಣ ಇಳಿಮುಖವಾಗಿದೆ. ಕಳೆದ ಮಾಚ್‌ರ್‍ನಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ಗರಿಷ್ಠ 6,500ಕ್ಕೆ ಏರಿಕೆಯಾಗಿ ಜೂನ್‌ ತಿಂಗಳಲ್ಲಿ 200ಕ್ಕೆ ಕುಸಿತ ಕಂಡಿತ್ತು. ಆದರೆ ಆಗಸ್ಟ್‌ನಲ್ಲಿ ಮತ್ತೆ ದೈನಂದಿನ ಪ್ರಕರಣಗಳು ಏರುಗತಿಯಲ್ಲಿದ್ದು, ಆಗಸ್ಟ್‌ 29ರಂದು 1,444 ಪ್ರಕರಣಗಳು ದೃಢಪಟ್ಟಿವೆ. ಲಾಕ್‌ಡೌನ್‌ ತೆರವಾಗಿದೆ. ಈ ತಿಂಗಳು ಶಾಲೆ ಪುನಾರಂಭಕ್ಕೆ ನಿರ್ಧಾರ ಮಾಡಲಾಗಿದೆ. ವಿದ್ಯಾರ್ಥಿಗಳಿಗಾಗಿ 30 ಲಕ್ಷ ಸಿಂಗಲ್‌ ಸೀಟರ್‌ ಡೆಸ್ಕ್‌ ಖರೀದಿಗೆ ಸರ್ಕಾರ ತೀರ್ಮಾನಿಸಿದೆ. ಯುರೋಪ್‌ ದೇಶಗಳ ಪೈಕಿ ಇಟಲಿಯಲ್ಲಿ ಹೊಸ ಕೇಸು ಅತ್ಯಂತ ಕನಿಷ್ಠ ಪ್ರಮಾಣದಲ್ಲಿದೆ. ಪ್ರವಾಸೋದ್ಯಮ ಇನ್ನು ಆರಂಭವಾಗಿಲ್ಲ. ಬಾರ್‌, ರೆಸ್ಟೋರೆಂಟ್‌ ಆರಂಭಗೊಂಡಿವೆ. ಚಚ್‌ರ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದೆ. ಜಿಮ್‌, ಸ್ವಿಮ್ಮಿಂಗ್‌ಫೂಲ್‌, ಥಿಯೇಟರ್‌, ಚಿತ್ರಮಂದಿರಗಳು ಕಾರ್ಯಾರಂಭ ಮಾಡಿವೆ.

ಫ್ರಾನ್ಸ್‌ನಲ್ಲಿ ಮತ್ತೆ ಉಬ್ಬರ

ಒಟ್ಟು ಕೇಸ್‌: 2,72,530

ಒಟ್ಟು ಸಾವು: 30,602

ಫ್ರಾನ್ಸ್‌ನಲ್ಲಿ ಮಾಚ್‌ರ್‍ ಆರಂಭದಲ್ಲಿ ಮೊದಲ ಕೊರೋನಾ ಕೇಸ್‌ ಪತ್ತೆಯಾಗಿತ್ತು. ಮಾಚ್‌ರ್‍ 31ರಂದು 7,578 ಕೊರೋನಾ ಕೇಸ್‌ ದೃಢಪಡುವ ಮೂಲಕ ದೈನಂದಿನ ಗರಿಷ್ಠ ಸಂಖ್ಯೆ ದಾಖಲಾಗಿತ್ತು. ಅನಂತರ ಕಟ್ಟುನಿಟ್ಟಿನ ಲಾಕ್‌ಡೌನ್‌ ಪರಿಣಾಮ ಮೇ ವೇಳೆಗೆ ಕೊರೋನಾ ಸಂಖ್ಯೆ ಕನಿಷ್ಠ 200ಕ್ಕೆ ಇಳಿಕೆಯಾಗಿತ್ತು. ಆದರೆ ಲಾಕ್‌ಡೌನ್‌ ಸಡಿಲಗೊಳಿಸಿದ ಹಿನ್ನೆಲೆಯಲ್ಲಿ ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಶುಕ್ರವಾರ 7 ಸಾವಿರಕ್ಕೂ ಅಧಿಕ ಪ್ರಕರಣಗಳು ಕಂಡುಬಂದಿವೆ. ಇನ್ನು ಏಪ್ರಿಲ್‌ ವೇಳೆಗೆ ಗರಿಷ್ಠ (1437) ತಲುಪಿದ್ದ ಸಾವಿನ ಪ್ರಮಾಣ ಕ್ರಮೇಣ ಇಳಿಕೆಯಾಗುತ್ತಿದ್ದು, ಶನಿವಾರ ಕೇವಲ 20 ಜನರು ವೈರಸ್ಸಿನಿಂದ ಮೃತಪಟ್ಟಿದ್ದಾರೆ. ಲಾಕ್‌ಡೌನ್‌ ತೆರವಾಗಿದೆ. ಶಾಲೆ ಆರಂಭಕ್ಕೆ ಸಿದ್ಧತೆ ನಡೆದಿದೆ. ಬಹುತೇಕ ಸಾಮಾನ್ಯ ಜನಜೀವನ ಸಹಜಸ್ಥಿತಿಗೆ ಬಂದಿದೆ. ವಿದೇಶಿ ಪ್ರವಾಸಿಗರ ಆಗಮನ ಇನ್ನೂ ಆರಂಭವಾಗಿಲ್ಲ. ಆದರೆ ಪ್ರವಾಸಿ ಸ್ಥಳಗಳಲ್ಲಿ ಮತ್ತೆ ಸ್ವಲ್ಪ ಪ್ರಮಾಣದಲ್ಲಿ ಚಟುವಟಿಕೆ ಆರಂಭವಾಗಿದೆ. ಬಾರ್‌, ರೆಸ್ಟೋರೆಂಟ್‌, ಬೀಚ್‌ಗಳನ್ನು ಜನ ಕಂಡುಬರುತ್ತಿದ್ದಾರೆ. ಹೈಸ್ಕೂಲ್‌ ಹೊರತು ಮತ್ತೆಲ್ಲಾ ಶಾಲಾ ಚಟುವಟಿಕೆ ಶುರುವಾಗಿದೆ. 10ಕ್ಕಿಂತ ಹೆಚ್ಚು ಜನ ಒಂದೆಡೆ ಸೇರಲು ಹಾಗೂ ಹಿರಿಯರು ಹೊರಗೆ ತೆರಳಲು ಅನುಮತಿ ನೀಡಲಾಗಿದೆ.

ಬ್ರಿಟನ್‌ ಇಳಿಮುಖ

ಒಟ್ಟು ಕೇಸ್‌: 3,32,752

ಸಾವು: 41,498

ಇನ್ನು ಕೊರೋನಾ ವೈರಸ್ಸಿನ ರುದ್ರನರ್ತನ ಕಂಡ ದೇಶಗಳಲ್ಲಿ ಒಂದಾದ ಬ್ರಿಟನ್‌ನಲ್ಲಿ ಈವರೆಗೆ 41,498 ಜನರು ಬಲಿಯಾಗಿದ್ದಾರೆ. ಏಪ್ರಿಲ್‌ನಲ್ಲಿ ಗರಿಷ್ಠ (7860)ಕ್ಕೆ ಏರಿಕೆಯಾಗಿದ್ದ ದೈನಂದಿನ ಕೊರೋನಾ ಪ್ರಕರಣಗಳ ಸಂಖ್ಯೆ ಸದ್ಯ ತೀವ್ರ ಇಳಿಮುಖ ಕಂಡಿದೆ. ಆಗಸ್ಟ್‌ 29ರಂದು 1,108 ಕೊರೋನಾ ಕೇಸ್‌ ಪತ್ತೆಯಾಗಿವೆ. ಸಾಮಾನ್ಯ ಜನಜೀವನ ಪುನಾರಂಭವಾಗಿದೆ. ಆದರೆ ಆರ್ಥಿಕತೆ ಹಲವು ದಶಕಗಳಲ್ಲೇ ಕನಿಷ್ಠ ಸ್ಥಿತಿಗೆ ತಲುಪಿದೆ. ಜಿ7 ದೇಶಗಳಲ್ಲೇ ಅತ್ಯಂತ ಆರ್ಥಿಕ ಹೊಡೆತ ತಿಂದ ದೇಶ ಬ್ರಿಟನ್‌. ಸೀಮಿತ ಪ್ರಮಾಣದ ನಿರ್ಬಂಧ ಮಾತ್ರ ಜಾರಿಯಲ್ಲಿದೆ. ದೇಶವ್ಯಾಪಿ ಲಾಕ್‌ಡೌನ್‌ ಬದಲಾಗಿ ನಿರ್ದಿಷ್ಟಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಮಾಸ್ಕ್‌ ಧರಿಸಲು ಇದ್ದ ನಿಯಮ ಸಡಿಲಿಕೆ ಮಾಡಲಾಗಿದೆ. ಶಾಲೆಗಳನ್ನು ಪುನಾರಂಭಿಸಲಾಗಿದೆ.

ಜಿಎಸ್‌ಟಿ ವಿಚಾರ, ಕೇಂದ್ರಕ್ಕೆ ಶಾಕ್ ನೀಡಲು ಮುಂದಾಗಿವೆ ಈ ರಾಜ್ಯಗಳು!

ಯುರೋಪ್‌ ರಾಷ್ಟ್ರಗಳಲ್ಲಿ ಶಾಲೆಗಳ ಪುನಾರಂಭ

ಯುರೋಪ್‌ನ ನಾರ್ವೆ, ಡೆನ್ಮಾರ್ಕ್ , ಪೋಲೆಂಡ್‌ ಹಾಗೂ ಫ್ರಾನ್ಸ್‌ ರಾಷ್ಟ್ರಗಳು ಶಾಲೆಗಳನ್ನು ಆರಂಭಿಸುವ ಮೂಲಕ ಮಕ್ಕಳು ಮನೆಯಿಂದ ಶಾಲೆಯತ್ತ ಮುಖ ಮಾಡುವಂತೆ ಕ್ರಮ ಕೈಗೊಂಡಿವೆ. ಡೆನ್ಮಾರ್ಕ್ನಲ್ಲಿ ಏ.27ರಿಂದಲೇ ಪ್ರಾಥಮಿಕ ಶಾಲೆಗಳನ್ನು ಪುನಾರಂಭಿಸಲಾಗಿದೆ.

ಜಪಾನ್‌ನಲ್ಲೂ ತಗ್ಗಿದೆ ಸೋಂಕು

ಇನ್ನು ಜಪಾನ್‌ನಲ್ಲಿ ಈವರೆಗೆ 66,056 ಜನರಿಗೆ ಕೊರೋನಾ ದೃಢಪಟ್ಟಿದ್ದು, 1255 ಮಂದಿ ಬಲಿಯಾಗಿದ್ದಾರೆ. ಫೆಬ್ರವರಿ ಮಧ್ಯಭಾಗದಲ್ಲಿ ಜಪಾನಿನಲ್ಲಿ ಮೊದಲ ಕೊರೋನಾ ಕೇಸ್‌ ಪತ್ತೆಯಾಗಿದ್ದು, ಮೇನಲ್ಲಿ ವೈರಸ್‌ ಬಹುತೇಕ ನಿಯಂತ್ರಣಕ್ಕೆ ಬಂದಿತ್ತು. ಆದರೆ ಜುಲೈನಲ್ಲಿ ಮತ್ತೊಮ್ಮೆ ಕೊರೋನಾ ಸ್ಫೋಟಗೊಳ್ಳಲು ಆರಂಭವಾಗಿದ್ದು ಆಗಸ್ಟ್‌ 9ರಂದು 1,998 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು. ಅನಂತರ ಮತ್ತೆ ಇಳಿಮುಖವಾಗಿ ಆಗಸ್ಟ್‌ 29ರಂದು 850 ಕೊರೋನಾ ಕೇಸ್‌ ಪತ್ತೆಯಾಗಿವೆ.

ಕೊರಿಯಾದಲ್ಲೂ ಇಳಿಮುಖ

ದಕ್ಷಿಣ ಕೊರಿಯಾದಲ್ಲಿ ಈವರೆಗೆ ಕೇವಲ 19,699 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 323 ಜನರು ಬಲಿಯಾಗಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಗರಿಷ್ಠ ಮಟ್ಟಅಂದರೆ ನಿತ್ಯ 850 ಕೇಸ್‌ ದಾಖಲಾಗುತ್ತಿದ್ದವು. ಏಪ್ರಿಲ್‌ ಮಧ್ಯಭಾಗದಿಂದ ಆಗಸ್ಟ್‌ ಆರಂಭದವರೆಗೆ ಬಹುತೇಕ ನಿಯಂತ್ರಣಕ್ಕೆ ಬಂದಿತ್ತು. ಆದರೆ ಇದೀಗ ಮತ್ತೆ ಕೊರೋನಾ ಪ್ರಕರಣಗಳಲ್ಲಿ ಕೊಂಚ ಏರಿಕೆಯಾಗಿದ್ದು ಆಗಸ್ಟ್‌ 29ರಂದು 323 ಪ್ರಕರಣಗಳು ಪತ್ತೆಯಾಗಿವೆ.

Follow Us:
Download App:
  • android
  • ios