5 ತಿಂಗಳಿಂದ ಬಂದ್ ಆಗಿರುವ ಬಾರ್, ಕ್ಲಬ್ ಮಂಗಳವಾರದಿಂದ ಆರಂಭ!
ನಾಳೆಯಿಂದ ಬಾರ್, ಕ್ಲಬ್ ಆರಂಭ| ಇಂದು ಅಧಿಕೃತ ಆದೇಶ ಪ್ರಕಟ: ಸಚಿವ ನಾಗೇಶ್| ಮಾರ್ಗಸೂಚಿ ಸಿದ್ಧಪಡಿಸುವ ಕಾರ‍್ಯ ಪ್ರಗತಿಯಲ್ಲಿ| ಷರತ್ತಿನೊಂದಿಗೆ ಆರಂಭಿಸಲು ಸಿಎಂ ಒಪ್ಪಿಗೆ| 5 ತಿಂಗಳಿಂದ ಬಂದ್ ಆಗಿರುವ ಬಾರ್- ರೆಸ್ಟೋರೆಂಟ್
ಬೆಂಗಳೂರು(ಆ.31): ರಾಜ್ಯದಲ್ಲಿನ ಕ್ಲಬ್, ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಮದ್ಯ ಮಾರಾಟ ಸೆಪ್ಟೆಂಬರ್ 1ರಿಂದ ಆರಂಭವಾಗುವುದು ಬಹುತೇಕ ಖಚಿತವಾಗಿದ್ದು, ಈ ಸಂಬಂಧ ಸೋಮವಾರ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆಯಿದೆ.
ಕೊರೋನಾ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಿನಿಂದ ಬಾರ್ ಅಂಡ್ ರೆಸ್ಟೋರೆಂಟ್‌ಗಳ ಮದ್ಯ ಮಾರಾಟ ಸ್ಥಗಿತವಾಗಿತ್ತು. ಇದೀಗ ಮತ್ತೆ ಅವಕಾಶ ಕಲ್ಪಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೆಲವು ನಿಬಂಧನೆಗಳೊಂದಿಗೆ ಮದ್ಯ ಮಾರಾಟ ಕುರಿತ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಬಾರ್, ಪಬ್ ಪ್ರಾರಂಭದ ಸಿಗ್ನಲ್ ಕೊಟ್ಟ ಸಚಿವ ನಾಗೇಶ್
ಇದನ್ನು ಖಚಿತಪಡಿಸಿರುವ ಅಬಕಾರಿ ಸಚಿವ ಎಚ್. ನಾಗೇಶ್, ‘ಮಂಗಳವಾರದಿಂದ ರಾಜ್ಯದಲ್ಲಿ ಕ್ಲಬ್, ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಮದ್ಯ ಮಾರಾಟಕ್ಕೆ ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ. ಸೋಮವಾರ ಮಾರ್ಗಸೂಚಿಗಳು ಪ್ರಕಟವಾಗಲಿವೆ’ ಎಂದಿದ್ದಾರೆ.
ಲಾಕ್‌ಡೌನ್ ಪರಿಣಾಮ ಕಳೆದ ಹಲವು ತಿಂಗಳುಗಳಿಂದ ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟುಉತ್ತೇಜಿಸಲು ಈ ನಿರ್ಧಾರಕ್ಕೆ ಬರಲಾಗಿದೆ.
ಅಗತ್ಯ ಸಿದ್ಧತೆ ಶುರು:
ಮದ್ಯ ಮಾರಾಟ ಪುನರಾರಂಭವಾಗುವ ನಿರೀಕ್ಷೆಯೊಂದಿಗೆ, ಮಾರಾಟಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರು ನಿರತರಾಗಿದ್ದಾರೆ.
‘ಮುಖ್ಯಮಂತ್ರಿ ಹಸಿರು ನಿಶಾನೆ ತೋರಿರುವ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಕುರಿತು ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಸೋಮವಾರ ಬೆಳಗ್ಗೆ ಮಾರ್ಗಸೂಚಿಗಳನ್ನು ಪ್ರಕಟಿಸಲಿದ್ದು, ಮಂಗಳವಾರದಿಂದ ಮದ್ಯ ಮಾರಾಟಕ್ಕೆ ಅನುಮತಿ ಲಭ್ಯವಾಗಲಿದೆ’ ಎಂದು ಅಬಕಾರಿ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶೀಘ್ರ ಬಾರ್, ಪಬ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ?
ಈ ಹಿಂದೆ ರಾಜ್ಯದಲ್ಲಿ ಎಂಆರ್‌ಪಿ ಹಾಗೂ ಔಟ್‌ಲೆಟ್‌ಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ (ಪಾರ್ಸೆಲ್ ಮಾತ್ರ) ಅವಕಾಶ ನೀಡಲಾಗಿತ್ತು. ಆದರೆ, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿರಲಿಲ್ಲ.
ಸಂಭಾವ್ಯ ಷರತ್ತುಗಳು:
ಬಾರ್ ಮತ್ತು ಕ್ಲಬ್‌ಗಳಲ್ಲಿ ಅಲ್ಲಿನ ಸಾಮರ್ಥ್ಯದ ಆಧಾರದಲ್ಲಿ ಶೇ.50 ರಷ್ಟುಜನ ಮಾತ್ರ ಪ್ರವೇಶಕ್ಕೆ ಅವಕಾಶ ನೀಡುವುದು. ಕ್ಲಬ್‌ಗೆ ಬರುವ ಗ್ರಾಹಕರು ಮತ್ತು ಸಿಬ್ಬಂದಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಕೆ ಮಾಡಲೇಬೇಕು ಎಂಬ ನಿಯಮಗಳನ್ನು ರೂಪಿಸಲಾಗುತ್ತಿದೆ.
ಪ್ರತಿ ಟೇಬಲ್‌ಗೆ ನಾಲ್ವರು ಗ್ರಾಹಕರು ಮತ್ರ ಕುಳಿತುಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಬಾರ್ ಪ್ರವೇಶ ದ್ವಾರದಲ್ಲಿ ಗ್ರಾಹಕರಿಗೆ ಮದ್ಯ ಪೂರೈಕೆ ಮಾಡಬಾರದು. ಕಡ್ಡಾಯವಾಗಿ ಟೇಬಲ್‌ಗಳಲ್ಲೇ ಕುಳಿತು ಮದ್ಯ ಸೇವಿಸಬೇಕು ಎಂಬ ನಿಯಮಗಳನ್ನು ಜಾರಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.