Asianet Suvarna News Asianet Suvarna News

ಜಿಎಸ್‌ಟಿ ವಿಚಾರ, ಕೇಂದ್ರಕ್ಕೆ ಶಾಕ್ ನೀಡಲು ಮುಂದಾಗಿವೆ ಈ ರಾಜ್ಯಗಳು!

ಜಿಎಸ್‌ಟಿ: ಬಿಜೆಪಿಯೇತರ ರಾಜ್ಯಗಳ ಒಗ್ಗಟ್ಟು ಪ್ರದರ್ಶನ| ನಷ್ಟಭರ್ತಿಗೆ ಸಾಲ: ಕೇಂದ್ರದ ವಿರುದ್ಧ ಇಂದು ಸಭೆ

Non BJP states unhappy with GST may unite for joint strategy
Author
Bangalore, First Published Aug 31, 2020, 8:09 AM IST

ನವದೆಹಲಿ(ಆ.31): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಯಿಂದಾಗಿ ರಾಜ್ಯಗಳಿಗೆ ಈ ವರ್ಷ ಉಂಟಾಗುವ ನಷ್ಟವನ್ನು ಭರಿಸಿಕೊಳ್ಳಲು ರಾಜ್ಯ ಸರ್ಕಾರಗಳೇ ಸಾಲ ಮಾಡಬೇಕು ಎಂದು ಹೇಳಿರುವ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿಯೇತರ ಪಕ್ಷಗಳ ಆಳ್ವಿಕೆಯ ರಾಜ್ಯಗಳು ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿವೆ. ಈ ನಿಟ್ಟಿನಲ್ಲಿ ಮುಂದಿನ ನಡೆ ನಿರ್ಧರಿಸಲು ಸೋಮವಾರ ಈ ರಾಜ್ಯಗಳ ಪ್ರತಿನಿಧಿಗಳು ಸಭೆ ನಡೆಸಲಿದ್ದಾರೆ.

ಬಿಜೆಪಿ ಆಳ್ವಿಕೆಯ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರ ನೀಡಿರುವ ಎರಡು ಆಯ್ಕೆಗಳಲ್ಲಿ ಯಾವುದು ತಮಗೆ ಅನುಕೂಲಕರವಾಗಿವೆ ಎಂದು ನಿಷ್ಕರ್ಷಿಸಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿವೆ. ಆದರೆ, ಬಿಜೆಪಿಯೇತರ ಪಕ್ಷಗಳ ಆಳ್ವಿಕೆಯಿರುವ ರಾಜ್ಯಗಳು ಕೇಂದ್ರ ಸರ್ಕಾರವೇ ಬೇಕಿದ್ದರೆ ಸಾಲ ಮಾಡಿ ತಮಗಾಗಿರುವ ನಷ್ಟಭರಿಸಬೇಕು. ಅದರ ಬದಲು ತಮಗೇ ಸಾಲ ಮಾಡಲು ಹೇಳುತ್ತಿರುವುದು ಸರಿಯಲ್ಲ ಎಂಬ ನಿಲುವು ತಾಳಿವೆ.

ಸಾಲ ಮಾಡಲು ಅಥವಾ ಹಣ ಸಂಗ್ರಹಿಸಲು ರಾಜ್ಯಗಳಿಗಿಂತ ಕೇಂದ್ರ ಸರ್ಕಾರಕ್ಕೇ ಹೆಚ್ಚು ಅವಕಾಶಗಳಿವೆ. ಬಹಳ ಕಡಿಮೆ ಬಡ್ಡಿ ದರದಲ್ಲಿ ಕೇಂದ್ರ ಸರ್ಕಾರ ಸಾಲ ತರಬಹುದು. ರಾಜ್ಯಗಳು ಸಾಲ ಮಾಡಬೇಕು ಎಂಬ ಸೂಚನೆಗೆ ನಮ್ಮ ವಿರೋಧವಿದೆ. ಸಾಲ ಮಾಡುವಂತೆ ಕೇಂದ್ರ ಸರ್ಕಾರ ನಮ್ಮ ಮೇಲೆ ಒತ್ತಡ ಹೇರುತ್ತಿದೆ. ಸೋಮವಾರ ಈ ಬಗ್ಗೆ ಸಭೆ ನಡೆಸಿ ಮುಂದಿನ ನಡೆಯ ಬಗ್ಗೆ ನಿರ್ಧರಿಸುತ್ತೇವೆ ಎಂದು ಛತ್ತೀಸ್‌ಗಢದ ಸಚಿವ ಹಾಗೂ ಜಿಎಸ್‌ಟಿ ಮಂಡಳಿಯ ಪ್ರತಿನಿಧಿ ಟಿ.ಎಸ್‌.ಸಿಂಗ್‌ ದೇವ್‌ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ 2020-21ನೇ ಸಾಲಿನಲ್ಲಿ ರಾಜ್ಯಗಳಿಗೆ ಆಗುವ ನಷ್ಟವನ್ನು ಭರಿಸಲು 2 ಆಯ್ಕೆ ನೀಡಿದ್ದರು. ಮೊದಲನೆಯ ಆಯ್ಕೆಯಾಗಿ, 97,000 ಕೋಟಿ ರು. ನಷ್ಟವನ್ನು ಭರಿಸಿಕೊಳ್ಳಲು ರಾಜ್ಯಗಳು ಆರ್‌ಬಿಐನಿಂದ ಸಾಲ ಪಡೆಯಬಹುದು. ಇದಕ್ಕೆ ಕೇಂದ್ರ ಸರ್ಕಾರ ಬಡ್ಡಿ ಪಾವತಿಸುತ್ತದೆ. ಎರಡನೆಯ ಆಯ್ಕೆಯಾಗಿ, ಈ ಸಾಲಿನಲ್ಲಿ ಒಟ್ಟಾರೆ ಆಗುವ 2.35 ಲಕ್ಷ ಕೋಟಿ ರು. ನಷ್ಟದಲ್ಲಿ ಇಡೀ ಮೊತ್ತಕ್ಕೆ ರಾಜ್ಯಗಳು ಮಾರುಕಟ್ಟೆಯಿಂದ ಸಾಲ ಪಡೆಯಬಹುದು. ಇದಕ್ಕೆ ರಾಜ್ಯಗಳೇ ಬಡ್ಡಿ ಪಾವತಿಸಬೇಕು. ಆದರೆ, ರಾಜ್ಯಗಳ ಒಟ್ಟಾರೆ ಸಾಲದ ಲೆಕ್ಕದಲ್ಲಿ ಇದನ್ನು ಪರಿಗಣಿಸುವುದಿಲ್ಲ. ಈ ಎರಡು ಆಯ್ಕೆಗಳ ಮೂಲಕ ಕೇಂದ್ರ ಸರ್ಕಾರ ತಾನು ಪಾವತಿಸಬೇಕಿದ್ದ ಜಿಎಸ್‌ಟಿ ನಷ್ಟವನ್ನು ರಾಜ್ಯಗಳ ಹೆಗಲ ಮೇಲೆ ಹಾಕಲು ಮುಂದಾಗಿದೆ ಎಂದು ವಿರೋಧ ವ್ಯಕ್ತವಾಗಿದೆ.

Follow Us:
Download App:
  • android
  • ios