* 2012ರಲ್ಲೇ ಪತ್ತೆಯಾಗಿತ್ತು ವೈರಸ್‌* ವುಹಾನ್‌ ಲ್ಯಾಬ್‌ಗೆ ತಂದು ಏನೋ ಬದಲಾವಣೆ ಮಾಡಿದರು* ಸೀಫುಡ್‌ ಮಾರುಕಟ್ಟೆಯಿಂದ ಬಂತೆಂಬುದು ಕಟ್ಟುಕತೆ* ಪುಣೆಯ ವಿಜ್ಞಾನಿ ದಂಪತಿಯ ಸಂಶೋಧನೆ

ಪುಣೆ(ಜೂ.07): ವಿಶ್ವವನ್ನೇ ಹೈರಾಣಾಗಿಸಿರುವ ಕೊರೋನಾ ವೈರಸ್‌ನ ಮೂಲ ಚೀನಾ ಹಾಗೂ ಅಲ್ಲಿನ ವುಹಾನ್‌ನಲ್ಲಿರುವ ವೈರಾಣು ಸಂಸ್ಥೆ ಎಂದು ಇಡೀ ಜಗತ್ತೇ ಬೊಟ್ಟು ಮಾಡುತ್ತಿದೆ. ಇದನ್ನೆಲ್ಲಾ ಚೀನಾ ನಿರಾಕರಿಸುತ್ತ ಬಂದಿರುವಾಗಲೇ, ವೈರಾಣು ಮೂಲ ಯಾವುದು ಎಂಬುದನ್ನು ಪುಣೆಯ ವಿಜ್ಞಾನಿ ದಂಪತಿ ಪತ್ತೆ ಮಾಡಿದ್ದಾರೆ.

ಡಾ| ರಾಹುಲ್‌ ಬಾಹುಳಿಕರ್‌ ಹಾಗೂ ಡಾ| ಮೋನಾಲಿ ರಾಹಾಳ್ಕರ್‌ ಎಂಬ ಈ ದಂಪತಿಯ ಸಂಶೋಧನೆಯ ಪ್ರಕಾರ, ಕೊರೋನಾ ರೂಪದ ವೈರಾಣು ಮೊದಲು ಪತ್ತೆಯಾಗಿದ್ದು ದಕ್ಷಿಣ ಚೀನಾದ ಗಣಿಯಲ್ಲಿ. ಅದರ ಸಂಶೋಧನೆಗೆಂದು ಹೋದ ವುಹಾನ್‌ ತಜ್ಞರು, ಲ್ಯಾಬ್‌ನಲ್ಲಿ ವೈರಾಣುವಿನ ವಂಶವಾಹಿಯಲ್ಲೇ ಬದಲಾವಣೆ ಮಾಡಿದರು. ಅದರ ಫಲವಾಗಿ ಈಗ ಇರುವ ಕೊರೋನಾ ಸೃಷ್ಟಿಯಾಗಿರಬಹುದು. ಅದು ಲ್ಯಾಬ್‌ನಿಂದ ಸೋರಿಕೆಯಾಗಿರಬಹುದು ಎಂಬ ವಾದ ಮಂಡಿಸಿದೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಈ ದಂಪತಿಯ ವಾದವನ್ನು ಸಂಚು ಎಂದು ಆರಂಭದಲ್ಲಿ ಉಪೇಕ್ಷಿಸಲಾಗಿತ್ತು. ಕೊರೋನಾ ಮೂಲ ಪತ್ತೆಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ತನಿಖೆಗೆ ಆದೇಶಿಸಿದ ಬಳಿಕ ಈ ದಂಪತಿಯ ವಾದಕ್ಕೆ ಸಾಕಷ್ಟುಪುಷ್ಟಿಬಂದಿದೆ. ಕೊರೋನಾ ವೈರಸ್‌ನ ಮೂಲ ಹತ್ತೆ ಹಚ್ಚಲು ಯತ್ನಿಸುತ್ತಿರುವ ಜಗತ್ತಿನ ವಿವಿಧೆಡೆಯ ತಜ್ಞರ ಜತೆಗೂಡಿ ಸಾಕಷ್ಟುಸಾಕ್ಷ್ಯಗಳನ್ನು ಈ ದಂಪತಿ ಕಲೆ ಹಾಕಿದೆ.

ಸಂಶೋಧನೆ ಹೇಗೆ?:

ಕೊರೋನಾದಿಂದ ಸಾಕಷ್ಟುಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಈ ವೈರಸ್‌ ಹೇಗೆ ಬಂತು ಎಂಬ ಕುತೂಹಲ ನಮಗೆ ಇತ್ತು. ಈ ಹಿನ್ನೆಲೆಯಲ್ಲಿ 2020ರ ಏಪ್ರಿಲ್‌ನಲ್ಲಿ ಸಂಶೋಧನೆಗೆ ಇಳಿದಾಗ ಕೊರೋನಾ ವೈರಸ್‌ನ ಸಮೀಪವರ್ತಿ ರಾರ‍ಯಟ್‌ಜಿ 13ಗಾಗಿ ಶೋಧಿಸಲಾಯಿತು. ಈ ಸಂಶೋಧನೆ ವೇಳೆ ಸಂಗತಿಯೊಂದು ಗೊತ್ತಾಯಿತು. ದಕ್ಷಿಣ ಚೀನಾದಲ್ಲಿ ಮೋಜಿಯಾಂಗ್‌ ಎಂಬ ತಾಮ್ರದ ಗಣಿ ಇದೆ. ಅದರ ಸುರಂಗ ದ್ವಾರದಲ್ಲಿ ಬಾವಲಿಗಳ ಮಲಮೂತ್ರ ವಿಸರ್ಜನೆಯಾಗಿತ್ತು. ಅದನ್ನು ಸ್ವಚ್ಛಗೊಳಿಸಲು 2012ರಲ್ಲಿ 6 ಜನ ನೌಕರರನ್ನು ನಿಯೋಜಿಸಲಾಗಿತ್ತು. ಅಲ್ಲಿ ಕೆಲಸ ಮಾಡಿದ ಆರೂ ಮಂದಿ ಅಸ್ವಸ್ಥರಾಗಿದ್ದರು. ಜ್ವರ, ಕೆಮ್ಮು, ರಕ್ತ ಹೆಪ್ಪುಗಟ್ಟುವಂತಹ ಲಕ್ಷಣಗಳು ಅವರಲ್ಲಿ ಕಂಡುಬಂದಿದ್ದವು. ಇವೆಲ್ಲಾ ಕೊರೋನಾ ರೋಗಿಗಳಲ್ಲಿ ಕಾಣಿಸುವ ರೋಗ ಲಕ್ಷಣಗಳೇ ಆಗಿದ್ದವು. ಇದಲ್ಲದೆ ಆಯಾಸ, ನ್ಯುಮೋನಿಯಾ ಕೂಡ ಕಂಡುಬಂದಿತ್ತು. ಶ್ವಾಸಕೋಶದ ರಕ್ತನಾಳಗಳು ಮುಚ್ಚಲ್ಪಟ್ಟಸಮಸ್ಯೆಗೂ ತುತ್ತಾಗಿದ್ದರು. ಈ ಪೈಕಿ ಮೂವರು ಮರಣ ಹೊಂದಿದರು.

ಜಪಾ​ನ್‌​ನಲ್ಲಿ 12-15 ವರ್ಷ​ದ ಮಕ್ಕ​ಳಿಗೆ ಫೈಝರ್‌ ಲಸಿಕೆ!

ಚೀನಾದ ವುಹಾನ್‌ ವೈರಾಣು ಸಂಸ್ಥೆ ರಾರ‍ಯಟ್‌ಜಿ13 ಎಂಬ ಕೊರೋನಾ ವೈರಾಣುವನ್ನು ಆ ಗಣಿಯಿಂದ ಸಂಗ್ರಹಿಸಿತ್ತು. ವೈರಾಣು ಸಂಶೋಧನೆಯಲ್ಲಿ ನಿರತವಾಗಿರುವ ವುಹಾನ್‌ ಹಾಗೂ ಇನ್ನಿತರೆ ಸಂಸ್ಥೆಗಳು ವೈರಸ್‌ನ ವಂಶವಾಹಿಯಲ್ಲಿ ಬದಲಾವಣೆ ಮಾಡಿದ್ದಿರಬಹುದು. ಅದು ಲ್ಯಾಬ್‌ನಿಂದ ಲೀಕ್‌ ಆಗಿರಬಹುದು ಎನ್ನುತ್ತಾರೆ ದಂಪತಿ.

ಈ ಕುರಿತ ವರದಿಯನ್ನು ಮೊದಲು ನಾವು ಪ್ರಕಟಿಸಿದವು. ಆ ವೇಳೆ ‘ಸೀಕರ್‌’ ಎಂಬ ಟ್ವೀಟರ್‌ ಬಳಕೆದಾರರೊಬ್ಬರು ನಮ್ಮನ್ನು ಸಂಪರ್ಕಿಸಿದರು. ವುಹಾನ್‌ ಲ್ಯಾಬ್‌ನಿಂದ ಕೊರೋನಾ ಸೋರಿಕೆಯಾದುದ್ದನ್ನು ಪತ್ತೆ ಹಚ್ಚಲು ಶ್ರಮಿಸುತ್ತಿರುವ ‘ಡ್ರಾಸ್ಟಿಕ್‌’ ಎಂಬ ಗ್ರೂಪ್‌ನ ಜತೆ ಸೀಕರ್‌ ತೊಡಗಿಸಿಕೊಂಡಿದ್ದರು. ಚೀನಾ ಗಣಿಯ ನೌಕರರು ಗಂಭೀರ ಅನಾರೋಗ್ಯಕ್ಕೆ ಒಳಗಾಗಿದ್ದ ಚೀನಿ ಭಾಷೆಯ ಪ್ರಬಂಧವನ್ನು ತಮ್ಮ ಜತೆ ಹಂಚಿಕೊಂಡರು ಎಂದು ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona