ನರ್ಸ್ ಒಬ್ಬಳು ತನ್ನ ನೈಟ್ ಶಿಫ್ಟ್ ವೇಳೆ ಪ್ರಿಯಕರನನ್ನು ಆಸ್ಪತ್ರೆಗೆ ಕರೆತಂದು ರೋಗಿಗಳಿಗೆ ಔಷಧಿ ಸಿದ್ಧಪಡಿಸಲು ಬಿಟ್ಟಿದ್ದಾಳೆ. ಈ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಂತರ ವಿಡಿಯೋ ವೈರಲ್ ಆಗಿದ್ದು, ಆಸ್ಪತ್ರೆ ಆಡಳಿತ ಮಂಡಳಿ ಆಕೆಯನ್ನು ಕೆಲಸದಿಂದ ಅಮಾನತುಗೊಳಿಸಿದೆ.
ಪ್ರೀತಿ ಎನ್ನುವುದು ಎಂತಹ ಕೆಲಸವನ್ನೂ ಮಾಡಿಸುತ್ತದೆ ಎಂಬ ಮಾತಿದೆ. ಆದರೆ ಇಲ್ಲಿ ನರ್ಸ್ ಒಬ್ಬಳು ಕೆಲಸದ ವೇಳೆಯೂ ತನ್ನ ಪ್ರೀತಿಯನ್ನು ತೋರಿಸಲು ಹೋಗಿ ಕೆಲಸವನ್ನೇ ಕಳೆದುಕೊಂಡಿದ್ದಾಳೆ. ರಾತ್ರಿ ಪಾಳಿಯ ಕೆಲಸದ ವೇಳೆ (Night Shift) ತನ್ನ ಪ್ರಿಯಕರನನ್ನು ಆಸ್ಪತ್ರೆಗೆ ಕರೆಸಿಕೊಂಡು, ಆತನ ಕೈಯಲ್ಲೇ ರೋಗಿಗಳಿಗೆ ಔಷಧಿ ಸಿದ್ಧಪಡಿಸಿ ಚಿಕಿತ್ಸೆ ಕೊಡಿಸಿದ ಆರೋಪದ ಮೇಲೆ ನರ್ಸ್ ಅನ್ನು ಅಮಾನತುಗೊಳಿಸಲಾಗಿದೆ.
ಘಟನೆಯ ವಿವರ
ಈ ಘಟನೆ ಚೀನಾದ ಫುಜಿಯಾನ್ ಪ್ರಾಂತ್ಯದಲ್ಲಿ ನಡೆದಿದೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ನರ್ಸ್, ನೈಟ್ ಶಿಫ್ಟ್ ವೇಳೆ ಒಂಟಿತನ ದೂರ ಮಾಡಲು ತನ್ನ ಪ್ರಿಯಕರನನ್ನು ಆಸ್ಪತ್ರೆಯೊಳಗೆ ತಾನು ಕೆಲಸ ಮಾಡುವ ವಾರ್ಡ್‌ಗೆ ಕರೆಸಿಕೊಳ್ಳುತ್ತಿದ್ದಳು. ಹೀಗೆ, ಪ್ರೇಯಸಿಯನ್ನು ಭೇಟಿ ಮಾಡಲು, ಆಕೆಯೊಂದಿಗೆ ರಾತ್ರಿ ಕಳೆಯಲು ಬಂದಿದ್ದ ಪ್ರಿಯಕರ ಸುಮ್ಮನೆ ಕುಳಿತುಕೊಳ್ಳದೆ, ನರ್ಸ್‌ಗೆ ಕೆಲಸದಲ್ಲಿ ನೆರವಾಗುತ್ತಿದ್ದನು. ಹೀಗೆ, ರೋಗಿಗಳಿಗೆ ನೀಡಬೇಕಾದ ಔಷಧಿಗಳನ್ನು ಸಿದ್ಧಪಡಿಸುವುದು, ಔಷಧಿ ಬಾಟಲಿಗಳಿಗೆ ಲೇಬಲ್ ಹಚ್ಚುವುದು ಮತ್ತು ಇತರ ತಾಂತ್ರಿಕ ನರ್ಸಿಂಗ್ ಕೆಲಸಗಳಲ್ಲಿ ಆತ ಸಕ್ರಿಯವಾಗಿ ಭಾಗಿಯಾಗುತ್ತಿದ್ದನು.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ
ತನ್ನ ಪ್ರಿಯಕರ ತನಗೆ ಕೆಲಸದಲ್ಲಿ ಎಷ್ಟು ಸಹಾಯ ಮಾಡುತ್ತಿದ್ದಾನೆ ಎಂಬ ಹೆಮ್ಮೆಯಿಂದ ನರ್ಸ್ ಈ ದೃಶ್ಯಗಳನ್ನು ವಿಡಿಯೋ ಮಾಡಿ ಜನವರಿ 2 ರಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾಳೆ. 'ನೈಟ್ ಡ್ಯೂಟಿಯಲ್ಲಿ ನನಗೆ ಸಹಾಯ ಮಾಡಲು ಒಬ್ಬರಿದ್ದಾರೆ' ಎಂಬ ಕ್ಯಾಪ್ಷನ್ ನೀಡಿ ಈ ವಿಡಿಯೋ ಪೋಸ್ಟ್ ಮಾಡಿದ್ದಾಳೆ. ವಿಡಿಯೋದಲ್ಲಿ ಆತ ಪ್ರತಿದಿನ ಬೇರೆ ಬೇರೆ ಬಟ್ಟೆಗಳನ್ನು ಧರಿಸಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಅಂದರೆ, ಈತ ಹಲವು ದಿನಗಳಿಂದ ಆಸ್ಪತ್ರೆಗೆ ಬಂದು ಚಿಕಿತ್ಸಾ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿದ್ದ ಎಂಬುದು ಸಾಬೀತಾಗಿದೆ.
ಆಸ್ಪತ್ರೆ ಮತ್ತು ಸರ್ಕಾರದ ಕಠಿಣ ಕ್ರಮ
ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ಧ ಕಿಡಿಕಾರಿದ್ದಾರೆ. ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಕಿಂಗ್ಡಾವೊ ಮುನ್ಸಿಪಲ್ ಹೆಲ್ತ್ ಕಮಿಷನ್ ಮತ್ತು ಆಸ್ಪತ್ರೆ ಅಧಿಕಾರಿಗಳು ತನಿಖೆ ನಡೆಸಿ, ನರ್ಸ್ ಅನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. 'ವೈದ್ಯಕೀಯ ಅನುಭವ ಅಥವಾ ಅರ್ಹತೆ ಇಲ್ಲದ ವ್ಯಕ್ತಿಯನ್ನು ವಾರ್ಡ್‌ಗೆ ಕರೆತಂದು ರೋಗಿಗಳ ಔಷಧಿಗಳೊಂದಿಗೆ ಕೆಲಸ ಮಾಡಲು ಬಿಟ್ಟಿರುವುದು ಗಂಭೀರ ಶಿಸ್ತು ಉಲ್ಲಂಘನೆಯಾಗಿದೆ. ರೋಗಿಗಳ ಜೀವ ಮತ್ತು ಖಾಸಗಿತನಕ್ಕೆ ಇದರಿಂದ ಧಕ್ಕೆ ಉಂಟಾಗಿದೆ' ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.


