ಹಾಲಿವುಡ್ ಸಿನಿಮಾ ಸ್ಟೈಲ್‌ನಲ್ಲಿ ಭಾರತ ಮೂಲದ ಜ್ಯುವೆಲ್ಲರಿ ಶಾಪ್ ದರೋಡೆ: ಮೂರೇ ನಿಮಿಷದಲ್ಲಿ ಶಾಪ್ ಖಾಲಿ
ಹಾಲಿವುಡ್ ಮೂವಿ ಹೇಯಿಸ್ಟ್‌ನಲ್ಲಿ ಮಾಸ್ಕ್ ಧರಿಸಿ ಬಂದು ದರೋಡೆ ಮಾಡುವ ದೃಶ್ಯಾವಳಿಯನ್ನು ನೋಡಿರಬಹುದು. ಅದೇ ದೃಶ್ಯವನ್ನು ನೆನಪಿಸುವ ಘಟನೆಯೊಂದು ಅಮೆರಿಕಾದಲ್ಲಿ ನಡೆದಿದೆ.
ನವದೆಹಲಿ: ಹಾಲಿವುಡ್ ಮೂವಿ ಹೇಯಿಸ್ಟ್‌ನಲ್ಲಿ ಮಾಸ್ಕ್ ಧರಿಸಿ ಬಂದು ದರೋಡೆ ಮಾಡುವ ದೃಶ್ಯಾವಳಿಯನ್ನು ನೋಡಿರಬಹುದು. ಅದೇ ದೃಶ್ಯವನ್ನು ನೆನಪಿಸುವ ಘಟನೆಯೊಂದು ಅಮೆರಿಕಾದಲ್ಲಿ ನಡೆದಿದೆ. ಭಾರತ ಮೂಲದ ಜ್ಯುವೆಲ್ಲರಿ ಶಾಪ್ ಪಿಎನ್‌ಜಿ ಜ್ಯುವೆಲ್ಲರಿಯಲ್ಲಿ ದರೋಡೆ ನಡೆದಿದೆ. ಮಾಸ್ಕ್ ಧರಿಸಿ ಬಂದು 20 ಜನ ದರೋಡೆಕೋರರು ಕೆಲ ನಿಮಿಷಗಳಲ್ಲಿ ಇಡೀ ಜ್ಯುವೆಲ್ಲರಿ ಶಾಪ್ ಅನ್ನು ಖಾಲಿ ಮಾಡಿದ್ದಾರೆ. ಹಾಡಹಗಲೇ ಈ ದರೋಡೆ ನಡೆದಿದ್ದು, ಈ ಕೃತ್ಯದ ಸಂಪೂರ್ಣ ದೃಶ್ಯಾವಳಿ ಜ್ಯುವೆಲ್ಲರಿ ಶಾಪ್‌ನಲ್ಲಿದ್ದ ಸಿಸಿ ಕ್ಯಾಮರಾಗಳಲ್ಲಿ ಸೆರೆ ಆಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದರೋಡೆ ಕೃತ್ಯ ಬೆಚ್ಚಿ ಬೀಳಿಸುವಂತಿದೆ.
ಅಮೆರಿಕಾದ ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಪಿಎನ್‌ಜಿ ಜ್ಯುವೆಲ್ಲರಿ ಶಾಪ್‌ನಲ್ಲಿ ಈ ಘಟನೆ ನಡೆದಿದೆ. ಹಾಡಹಗಲೇ ದರೋಡೆಗಿಳಿದ ಎಲ್ಲಾ ದರೋಡೆಕೋರರು ಮಾಸ್ಕ್ ಜೊತೆ ತಲೆಯನ್ನು ಮುಚ್ಚುವ ಹೂಡಿಸ್ ಧಿರಿಸು ಧರಿಸಿದ್ದರು. ಗ್ಲಾಸ್ ಡೋರ್ ಒಡೆದು ಒಳನುಗ್ಗಿದ್ದ ದುಷ್ಕರ್ಮಿಗಳು, ಬೆಲೆ ಬಾಳುವ ಜ್ಯುವೆಲ್ಲರಿಯನ್ನು ಇರಿಸಿದ್ದ ಗ್ಲಾಸ್‌ನ ಡೋರ್‌ಗಳಿಂದ ಮುಚ್ಚಲ್ಪಟ್ಟ ಶೋ ಕಪಾಟುಗಳನ್ನು ಗಟ್ಟಿಯಾದ ಆಯುಧದಿಂದ ಒಡೆದು ಹಾಕುತ್ತಾ ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಒಬ್ಬ ಹೀಗೆ ಗ್ಲಾಸ್‌ಗಳನ್ನು ಒಡೆಯುತ್ತಾ ಹೋದರೆ ಉಳಿದವರು ಅದರೊಳಗಿರುವ ಬೆಲೆ ಬಾಳುವ ಆಭರಣಗಳನ್ನು ಕೈಯಲ್ಲಿ ಎತ್ತಿ ಚೀಲಕ್ಕೆ ತುಂಬಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಕಳ್ಳತನ ಕಲಿಸುವ ಬೆಂಗಳೂರಿನ ತಾಯಿ ; ಅಪ್ರಾಪ್ತ ಮಗನಿಗೆ ಕಳ್ಳತನದ ಟ್ರೈನಿಂಗ್ ಕೊಡ್ತಿದ್ದ ಹೆತ್ತಮ್ಮ
ಮೂರು ನಿಮಿಷದೊಳಗೆ ದರೋಡೆಕೋರರು ಇಡೀ ಶಾಪ್‌ನ್ನು ಖಾಲಿ ಮಾಡಿದ್ದು, ದರೋಡೆಕೋರರ ಕೃತ್ಯ ಗಮನಿಸಿದರೆ ಅವರು ಈ ಶಾಪ್‌ನ ಬಗ್ಗೆ ಚೆನ್ನಾಗಿ ತಿಳಿದಿದ್ದವರೇ ಆಗಿರಬಹುದು ಎಂಬ ಶಂಕೆ ಮೂಡಿದೆ. ದಾಳಿಗೂ ಮೊದಲು ಅವರು ಈ ಶಾಪ್‌ಗೆ ಬಂದು ಚೆನ್ನಾಗಿ ಅಧ್ಯಯನ ನಡೆಸಿಯೇ ಈ ದರೋಡೆಗಿಳಿದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಘಟನೆಗೆ ಸಂಬಂಧಿಸಿದಂತೆ ಐವರು ಶಂಕಿತರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ದಿವಂಗತ ಉದ್ಯಮಿ ಪುರುಷೋತ್ತಮ್ ನಾರಾಯಣ್ ಗಡ್ಗಿಲ್ ಅವರ ಹೆಸರಿನಿಂದ ಈ ಜ್ಯುವೆಲ್ಲರಿ ಶಾಪ್‌ಗೆ ಪಿಎನ್‌ಜಿ ಎಂಬ ಹೆಸರು ಬಂದಿದ್ದು, ಪ್ರಸ್ತುತ ಇದರ ಮಾಲೀಕತ್ವ ಯಾರ ಕೈಯಲ್ಲಿದೆ ಎಂಬ ಮಾಹಿತಿ ಇಲ್ಲ. ಪುಣೆಯಲ್ಲಿ ಮುಖ್ಯ ಕಚೇರಿಯಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಪಿಎನ್‌ಜಿ ಜ್ಯುವೆಲ್ಲರಿಯೂ ಭಾರತದಾದ್ಯಂತ ಒಟ್ಟು 30ಕ್ಕೂ ಹೆಚ್ಚು ಜ್ಯುವೆಲ್ಲರಿ ಸ್ಟೋರ್‌ಗಳನ್ನು ಹೊಂದಿದೆ. ಇದರ ಜೊತೆಗೆ ಅಮೆರಿಕಾ ಹಾಗೂ ದುಬೈನಲ್ಲಿಯೂ ಇದರ ಶಾಖೆಗಳಿವೆ.
ಹಾಡಹಗಲೇ ತಹಸೀಲ್ದಾರ್ ಕಚೇರಿಗೆ ನುಗ್ಗಿ ಎರಡು ಪ್ರಿಂಟರ್ ಕದ್ದೊಯ್ದ ಕಳ್ಳ!