ಪಾಕ್‌ನಲ್ಲಿ ಪ್ರವಾಹ ಸಂತ್ರಸ್ತರಿಗೆ ಆಹಾರ, ವಸತಿ ಒದಗಿಸಿದ ದೇವಸ್ಥಾನ!
ಪಾಕಿಸ್ತಾನದಲ್ಲಿ ಪ್ರವಾಹ ಪರಿಸ್ಥಿತಿಯ ಕಾರಣದಿಂದಾಗಿ ಸಾಕಷ್ಟು ಮಂದಿ ಆಶ್ರಯ ಕಳೆದುಕೊಂಡಿದ್ದಾರೆ. ಈ ನಡುವೆ ಹಿಂದು ದೇವಸ್ಥಾನವೊಂದು ಪಾಕಿಸ್ತಾನದಲ್ಲಿ ನಿರಾಶ್ರಿತರಿಗೆ ಆಹಾರ ಹಾಗೂ ವಸತಿ ಒದಗಿಸಿ ಮಾನವೀಯತೆ ಮೆರೆದಿದೆ.
ಕರಾಚಿ (ಸೆ. 12): ಪಾಕಿಸ್ತಾನದಲ್ಲಿ ಪ್ರತಿದಿನ ಎನ್ನುವಂತೆ ಹಿಂದುಗಳ ದೇವಸ್ಥಾನದ ಮೇಲೆ ದಾಳಿ, ಹಿಂದುಗಳ ಮೇಲೆ ದಾಳಿ ಆಗುತ್ತಿರುವ ನಡುವೆಯೂ ಇತ್ತೀಚೆಗೆ ಪ್ರವಾಹ ಪೀಡಿತರಾದ ಪಾಕಿಸ್ತಾನದ ಜನಕ್ಕೆ ಹಿಂದು ದೇವಾಲಯವೊಂದು ಆಶ್ರಯ ನೀಡಿದ ಪ್ರಕರಣ ವರದಿಯಾಗದೆ. ಪಾಕಿಸ್ತಾನ ಎದುರಿಸಿದ ಈವರೆಗಿನ ಅತ್ಯಂತ ಕೆಟ್ಟ ಪ್ರವಾಹ ಪರಿಸ್ಥಿತಿಯಲ್ಲಿ ಲಕ್ಷಾಂತರ ಜನರು ನಿರಾಶ್ರಿತರ ಸಹಾಯಕ್ಕೆ ಹಿಂದು ದೇವಸ್ಥಾನ ಧಾವಿಸಿದೆ. ಬಲೂಚಿಸ್ತಾನದ ಒಂದು ಸಣ್ಣ ಹಳ್ಳಿಯಲ್ಲಿರುವ ಹಿಂದೂ ದೇವಾಲಯವು ಸ್ಥಳಾಂತರಗೊಂಡ ನಿವಾಸಿಗಳಿಗೆ ಆಶ್ರಯ ಮತ್ತು ಆಹಾರವನ್ನು ಒದಗಿಸಲು ತನ್ನ ಬಾಗಿಲನ್ನು ತೆರೆದಿದೆ. ಸುಮಾರು 200-300 ಪ್ರವಾಹ ಪೀಡಿತ ಜನರು ಜಲಾಲ್ ಖಾನ್ ಗ್ರಾಮದ ಎತ್ತರದ ನೆಲದಲ್ಲಿರುವ ಬಾಬಾ ಮಧೋದಾಸ್ ಮಂದಿರದಲ್ಲಿ ಆಶ್ರಯ ಪಡೆದಿದ್ದಾರೆ. ಈ ದೇವಸ್ಥಾನಕ್ಕೆ ಯಾವುದೇ ರೀತಿಯಲ್ಲಿ ಪ್ರವಾಹದಿಂದ ಹಾನಿಯಾಗಲಿಲ್ಲ. ಆ ಕಾರಣಕ್ಕಾಗಿ ಪ್ರವಾಹ ಪೀಡಿತ ಜನರಿಗೆ ಈ ದೇವಸ್ಥಾನ ನಿರಾಶ್ರಿತರ ತಾಣವಾಗಿ ಕಾರ್ಯನಿರ್ವಹಿಸಿದೆ. ಪಾಕಿಸ್ತಾನದಲ್ಲಿ ಪ್ರವಾಹದಿಂದಾಗಿ ಈವರೆಗೂ 1300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಪ್ರವಾಹದ ನಡುವೆಯೂ ಕೆಲವು ಸಂದರ್ಭಗಳಲ್ಲಿ ಮಾನವೀಯತೆಯ ಮುಖವನ್ನೂ ಪರಿಚಯ ಮಾಡಿದೆ.
ಕಚ್ಚಿ ಜಿಲ್ಲೆಯ ಜಲಾಲ್ ಖಾನ್ ಕುಗ್ರಾಮದಲ್ಲಿರುವ ಬಾಬಾ ಮಧೋದಾಸ್ ಮಂದಿರವು (Baba Madhodas Mandir) ಎತ್ತರ ಪ್ರದೇಶದಲ್ಲಿದ್ದು, ಪ್ರವಾಹದಿಂದ (Floods) ಸುರಕ್ಷಿತವಾಗಿ ಉಳಿದಿದೆ. ಈಗ ಪಾಕ್ (Pakistan) ಜನತೆಯ ಕರಾಳ ಸಮಯದಲ್ಲಿ ಪ್ರವಾಹ ಪೀಡಿತ ಜನರಿಗೆ ಆಶ್ರಯವಾಗಿದೆ. ನಾರಿ, ಬೋಲನ್ ಮತ್ತು ಲೆಹ್ರಿ ನದಿಗಳಲ್ಲಿನ ಪ್ರವಾಹದಿಂದಾಗಿ, ಈ ವಸಾಹತು ಪ್ರಾಂತ್ಯದ ಉಳಿದ ಭಾಗಗಳಿಂದ ಕಡಿತಗೊಂಡಿತು, ಇದರಿಂದಾಗಿ ಜನಸಂಖ್ಯೆಯು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಿಡಲಾಯಿತು. ಡಾನ್ ಪತ್ರಿಕೆಯ ವರದಿಯ ಪ್ರಕಾರ ಸ್ಥಳೀಯ ಹಿಂದೂ ಸಮುದಾಯವು ಪ್ರವಾಹ ಸಂತ್ರಸ್ತರನ್ನು ಮತ್ತು ಅವರ ಜಾನುವಾರುಗಳನ್ನು ಬಾಬಾ ಮಧೋದಾಸ್ ಮಂದಿರಕ್ಕೆ ಸ್ವಾಗತಿಸಿದೆ.
ಸ್ಥಳೀಯರ ಪ್ರಕಾರ, ಬಾಬಾ ಮಧೋದಾಸ್ ಅವರು ವಿಭಜನಾಪೂರ್ವ ಹಿಂದೂ ಸಂತರಾಗಿದ್ದರು, ಅವರನ್ನು ಈ ಪ್ರದೇಶದಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಪೂಜಿಸುತ್ತಾರೆ. ಬಲೂಚಿಸ್ತಾನದಾದ್ಯಂತ (Balochistan) ಹಿಂದೂ ಭಕ್ತರು ಆಗಾಗ್ಗೆ ಭೇಟಿ ನೀಡುವ ಈ ದೇವಾಲಯವು ಕಾಂಕ್ರೀಟ್‌ನಿಂದ ಮಾಡಲ್ಪಟ್ಟಿದೆ ಮತ್ತು ವಿಶಾಲವಾದ ಪ್ರದೇಶದಲ್ಲಿ ವ್ಯಾಪಿಸಿದೆ. ಇದು ಎತ್ತರದ ಭೂಪ್ರದೇಶದಲ್ಲಿ ನೆಲೆಗೊಂಡಿರುವುದರಿಂದ, ಪ್ರವಾಹದ ಸಮಯದಲ್ಲಿ ಸುರಕ್ಷಿತವಾಗಿತ್ತು.
ಪ್ರವಾಹದಲ್ಲಿ ಮುಳುಗಿದ ಅರ್ಧ ಪಾಕಿಸ್ತಾನ: 1041 ಜನರ ಸಾವು
ಕನಿಷ್ಠ 200 ರಿಂದ 300 ಜನರಿಗೆ ಅದರಲ್ಲೂ ಪ್ರಮುಖವಾಗಿ ಮುಸ್ಲಿಮರು ಹಾಗೂ ಅವರ ಜಾನುವಾರುಗಳಿಗೆ ಈ ದೇವಸ್ಥಾನ ನಿರಾಶ್ರಿತರ ತಾಣವಾಗಿದೆ. ಹಿಂದು ಕುಟುಂಬಗಳು ಕೂಡ ಇವರ ಪ್ರತಿದಿನದ ವ್ಯವಸ್ಥೆಗಳನ್ನು ಮಾಡುತ್ತಿದೆ. ಈ ಪ್ರದೇಶವನ್ನು ಮೊದಲು ಜಿಲ್ಲೆಯ ಉಳಿದ ಭಾಗಗಳಿಂದ ಸಂಪರ್ಕ ಕಡಿತಗೊಂಡಿತ್ತು. ನಿರಾಶ್ರಿತರಿಗೆ ಆರಂಭದಲ್ಲಿ ತಮಗೆ ಹೆಲಿಕಾಪ್ಟರ್ ಮೂಲಕ ಪರಿಹಾರ ಸಾಮಗ್ರಿಗಳನ್ನು ಪೂರೈಸಲಾಗಿದೆ ಎಂದು ಹೇಳಿದ್ದರು. ಆದರೆ ಒಮ್ಮೆ ದೇವಾಲಯದ ಒಳಗೆ ಪ್ರವೇಶ ಪಡೆದ ಬಳಿಕ, ಹಿಂದೂ ಜನರಿಂದ ಆಹಾರವನ್ನು ನೀಡಲಾಗಿದೆ.
ಪಾಕಿಸ್ತಾನದಲ್ಲಿ ಟೊಮೇಟೋ ಕೆಜಿಗೆ 500, ಈರುಳ್ಳಿ ಕೆಜಿಗೆ 400 ರೂಪಾಯಿ, ಭಾರತದ ಸಹಾಯ ಬೇಡಿದ ನೆರೆಯ ದೇಶ!
"ನಿವಾಸಿಗಳ ಜೊತೆಗೆ, ಹಿಂದೂಗಳು ಆಡುಗಳು ಮತ್ತು ಕುರಿಗಳು ಮತ್ತು ಇತರ ಪ್ರಾಣಿಗಳಿಗೆ ಆಶ್ರಯ ನೀಡಿದ್ದಾರೆ" ಎಂದು ದೇವಾಲಯದೊಳಗೆ ವೈದ್ಯಕೀಯ ಶಿಬಿರವನ್ನು ಸ್ಥಾಪಿಸಿದ ಜಲಾಲ್ ಖಾನ್ ವೈದ್ಯ ಇಸ್ರಾರ್ ಮುಘೇರಿ ಹೇಳಿದರು. "ಸ್ಥಳೀಯ ಹಿಂದೂಗಳು ಧ್ವನಿವರ್ಧಕದಲ್ಲಿ ಘೋಷಣೆಗಳನ್ನು ಮಾಡುವ ಮೂಲಕ ಆಶ್ರಯಕ್ಕಾಗಿ ದೇವಸ್ಥಾನಕ್ಕೆ ಬರುವಂತೆ ಕೇಳಿಕೊಂಡಿದ್ದರು' ಎಂದು ಅವರು ಹೇಳಿದ್ದಾರೆ. ಅಲ್ಲಿ ಆಶ್ರಯ ಪಡೆದವರೆಲ್ಲರೂ ತಮ್ಮ ರಕ್ಷಣೆಗೆ ಬಂದು ಆಹಾರ ಮತ್ತು ಆಶ್ರಯವನ್ನು ನೀಡಿದ್ದಕ್ಕಾಗಿ ಸ್ಥಳೀಯ ಹಿಂದೂ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದರು.