Talakaveri Kodagu festival: ಕೊಡಗಿನ ತಲಕಾವೇರಿಯಲ್ಲಿ ವಾರ್ಷಿಕ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಮಧ್ಯಾಹ್ನ ಬ್ರಹ್ಮ ಕುಂಡಿಕೆಯಲ್ಲಿ ಕಾವೇರಿ ಮಾತೆ ಜಲರೂಪಿಣಿಯಾಗಿ ದರ್ಶನ ನೀಡಲಿದ್ದು, ಸಹಸ್ರಾರು ಭಕ್ತರ ಆಗಮನದ ನಿರೀಕ್ಷೆಯಲ್ಲಿ ಜಿಲ್ಲಾಡಳಿತವು ಪೊಲೀಸ್ ಬಂದೋಬಸ್ತ್
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಅ.16): ವರ್ಷಕ್ಕೊಮ್ಮೆ ಜಲರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡುವ ಆ ತಾಯಿಯ ಕಣ್ತುಂಬಿಕೊಳ್ಳಲು ಸಹಸ್ರಾರು ಜನರು ಕಾತರರಾಗಿದ್ದಾರೆ. ಕೊಡಗಿನಲ್ಲಿ ಹುಟ್ಟಿ ನಾಡಿನೆಲ್ಲೆಡೆ ಹರಿದು ನಾಡನ್ನೇ ಸಮೃದ್ದವಾಗಿಸುವ ಆ ತೀರ್ಥ ರೂಪಿಣಿಯ ಬರಮಾಡಿಕೊಳ್ಳಲು ಸಿದ್ಧತೆ ಆಗಿದೆ. ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ, ನಾಡಿನುದ್ಧಕ್ಕೂ ಹರಿದು ನಾಡನ್ನೇ ಹಚ್ಚಹಸಿರಿನಿಂದ ಕಂಗೊಳಿಸುವಂತೆ ಮಾಡುವ ಕನ್ನಡ ನಾಡಿನ ಜೀವನದಿ ಕೊಡಗಿನ ಕುಲದೇವಿ ಮಾತೆ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ
ಶುಕ್ರವಾರ ಮಧ್ಯಾಹ್ನ ಕಾವೇರಿ ತೀರ್ಥೋದ್ಭವ ನಡೆಯಲಿದೆ. ಸೂರ್ಯ ಕನ್ಯಾರಾಶಿಯಿಂದ ತುಲಾರಾಶಿಗೆ ಪಥ ಬದಲಾಯಿಸುವ ಆ ವೇಳೆಗೆ ಮಕರ ಲಗ್ನದಲ್ಲಿ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಲಿದ್ದಾಳೆ. ಮಡಿಕೇರಿ ತಾಲ್ಲೂಕಿನ ತಲಕಾವೇರಿಯಲ್ಲಿರುವ ಬ್ರಹ್ಮ ಕುಂಡಿಕೆಯಲ್ಲಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಶುಕ್ರವಾರ ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ತೀರ್ಥೋದ್ಭವವಾಗಲಿದೆ. ಆ ಕ್ಷಣಗಳಿಗಾಗಿ ನಾಡಿನ ಸಹಸ್ರಾರು ಭಕ್ತರು ಕಾತರರಾಗಿದ್ದು ತಲಕಾವೇರಿಗೆ ಆಗಮಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಯವರೆಗೆ ನಿತ್ಯದಂತೆ ಪೂಜೆ ಪುನಸ್ಕಾರಗಳು ನಡೆಯಲಿವೆ. ಆ ಬಳಿಕ ತೀರ್ಥೋದ್ಭವವಾಗುವವರೆಗೆ ಮುಖ್ಯ ಅರ್ಚಕ ಗುರುರಾಜ್ ಆಚಾರ್, ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಲಿವೆ. ವಿವಿಧ ಅರ್ಚನೆಗಳು, ಅಭಿಷೇಕಗಳು ನಡೆಯಲಿವೆ. ಅಂತಿಮವಾಗಿ ಮಹಾ ಸಂಕಲ್ಪದೊಂದಿಗೆ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ದರ್ಶನ ನೀಡಲಿದ್ದಾಳೆ.

ತೀರ್ಥೋದ್ಭವದ ಬಳಿಕ ಸಾವಿರಾರು ಭಕ್ತರು ಬ್ರಹ್ಮ ಕುಂಡಿಕೆಯ ಮುಂಭಾಗದಲ್ಲಿ ಇರುವ ಕೊಳದಲ್ಲಿ ಮಿಂದಿದೆದ್ದು ಪುಣ್ಯ ಸ್ನಾನ ಮಾಡಲಿದ್ದಾರೆ. ಅಲ್ಲದೆ ತೀರ್ಥ ಪಡೆದು ತಮ್ಮ ಮನೆಗಳಿಗೆ ಕೊಂಡೊಯ್ಯಲಿದ್ದಾರೆ. ಇದಕ್ಕಾಗಿ ಸಾವಿರಾರು ಭಕ್ತರು ಆಗಮಿಸುತ್ತಿರುವುದರಿಂದ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಯಾವುದೇ ನೂಕು ನುಗ್ಗಲು ಆಗದಂತೆ ಎಲ್ಲೆಡೆ ಬ್ಯಾರಿಕೇಡ್ ಹಾಕಿ ಭದ್ರಗೊಳಿಸಲಾಗಿದೆ. ಒಂದೆಡೆ ಹೋಗಿ ಮತ್ತೊಂದೆ ಹೊರಗೆ ಬರುವ ವ್ಯವಸ್ಥೆ ಮಾಡಲಾಗಿದೆ. ತೀರ್ಥ ಸಂಗ್ರಹಿಸುವುದಕ್ಕೆ ಯಾವುದೇ ನೂಕು ನುಗ್ಗಲು ಆಗದಂತೆ ಸರದಿಯಲ್ಲಿ ಹಲವು ಕೌಂಟರ್ ಗಳನ್ನು ಮಾಡಿ ಅಲ್ಲಿಂದ ತೀರ್ಥ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಭಾಗಮಂಡಲದಿಂದ ತಲಕಾವೇರಿಯವರೆಗೆ ಸಿಸಿಟಿವಿ
ಭಾಗಮಂಡಲದಿಂದ ತಲಕಾವೇರಿಯವರೆಗೆ 182 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ 1 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ತಲಕಾವೇರಿಗೆ ಹೆಚ್ಚಿನ ವಾಹನಗಳ ಎಂಟ್ರಿ ಇಲ್ಲದೇ ಇರುವುದರಿಂದ ಭಾಗಮಂಡಲದಿಂದ ತಲಕಾವೇರಿಗೆ ಹೋಗಿ ಬರಲು ಉಚಿತವಾಗಿ 25 ಕೆಎಸ್ಆರ್ಟಿಸಿ ಬಸ್ಸುಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ತೀರ್ಥ ರೂಪಿಣಿ ಕಾವೇರಿಯನ್ನು ಕಣ್ತುಂಬಿಕೊಳ್ಳಲಿದ್ದಾರೆ.
ಒಟ್ಟಿನಲ್ಲಿ ವರ್ಷಕ್ಕೊಮ್ಮೆ ತೀರ್ಥ ರೂಪಿಣಿಯಾಗಿ ಸಹಸ್ರಾರು ಭಕ್ತರಿಗೆ ದರ್ಶನ ನೀಡಲಿರುವ ಕಾವೇರಿ ತೀರ್ಥೋದ್ಭವ ಹಾಗೂ ಜಾತ್ರಾ ಮಹೋತ್ಸವಕ್ಕೆ ಕೊಡಗು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಆ ಕ್ಷಣಗಳಿಗಾಗಿ ಭಕ್ತ ಸಮೂಹ ಕೂಡ ಕಾತರವಾಗಿದೆ.
