Sindagi Road murder incident: ವಿಜಯಪುರದ ಸಿಂದಗಿ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿದ್ದ ಮೂವರು ಯುವಕರ ನಡುವೆ ಜಗಳ ಉಂಟಾಗಿ, ಇಬ್ಬರು ಸೇರಿ ಒಬ್ಬನನ್ನು ಇಟ್ಟಿಗೆಯಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ವಿಜಯಪುರ (ಅ.15): ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವನನ್ನು ಇಟ್ಟಿಗೆಯಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ವಿಜಯಪುರ ನಗರದ ಸಿಂದಗಿ ರಸ್ತೆಯಲ್ಲಿ ನಡೆದಿದೆ.
ಪೊಲೀಸ್ ಪ್ರಕಾರ. ಕುಡಿದ ನಶೆಯಲ್ಲಿ ಮೂವರು ಯುವಕರ ನಡುವಿನ ಜಗಳದಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಕೊಲೆಯಾದ ಯುವಕ, ಇಬ್ಬರು ಆರೋಪಿಗಳೊಂದಿಗೆ ಸೇರಿ ಒಟ್ಟಿಗೆ ಮದ್ಯ ಸೇವಿಸಿದ್ದರು. ಕುಡಿಯಲು ಮೂವರು ಯುವಕರು ಒಟ್ಟಿಗೆ ಬಂದಿದ್ದರು. ಕುಡಿದ ಬಳಿಕ ಮೂವರ ನಡುವೆ ಏನೋ ಕಾರಣಕ್ಕೆ ಜಗಳ ಉಂಟಾಗಿದೆ. ಈ ವೇಳೆ ಇಬ್ಬರು ಯುವಕರು ಒಬ್ಬನನ್ನು ಇಟ್ಟಿಗೆಯಿಂದ ಭೀಕರವಾಗಿ ಜಜ್ಜಿ ಮಾಡಿ ಕೊಂದು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಚಿತ್ರದುರ್ಗ: ಜಾತಿ ಗಣತಿಗೆ ತೆರಳಿದ್ದ ಶಿಕ್ಷಕರಿಬ್ಬರು ಅಪಘಾತದಲ್ಲಿ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
ಹತ್ಯೆಗೀಡಾದ ಯುವಕನ ಶವವು ರಸ್ತೆ ಪಕ್ಕದಲ್ಲಿ ರಕ್ತದ ಮಡುವಿನಲ್ಲಿ ಕಂಡು ಬಂದಿದ್ದು, ಸ್ಥಳೀಯರು ಮಾಹಿತಿ ನೀಡಿದ ನಂತರ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೊಲೆ ದೃಶ್ಯ ಕಂಡು ರಸ್ತೆಯಲ್ಲಿ ಜನರು ಗಾಬರಿಯಿಂದ ನೋಡಲು ಜಮಾಯಿಸಿದ್ದರು.
ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ ಯಾವ ಕಾರಣಕ್ಕೆ ಹತ್ಯೆಯಾಗಿದೆ, ಹತ್ಯೆ ಮಾಡಿದ ಆರೋಪಿಗಳು ಯಾರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಘಟನೆಯು ಸ್ಥಳೀಯರಲ್ಲಿ ಭಯ ಮತ್ತು ಆತಂಕ ಮೂಡಿಸಿದೆ. ಮದ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರ ಚರ್ಚೆಗೆ ಕಾರಣವಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಲು ತೀವ್ರ ತನಿಖೆ ನಡೆಸುತ್ತಿದ್ದು, ಘಟನೆಯ ಹಿನ್ನೆಲೆಯನ್ನು ಸಂಪೂರ್ಣವಾಗಿ ತಿಳಿಯಲು ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.
