ಇಸ್ಲಮಾಬಾದ್(ಡಿ.31): ಸ್ಥಳೀಯ ಮುಸಲ್ಮಾನರ ನೇತೃತ್ವದಲ್ಲಿ ಸುಮಾರು ನೂರಕ್ಕೂ ಅಧಿಕ ಮಂದಿಯ ಗುಂಪೊಂದು ಹಿಂದೂ ದೇಗುಲವೊಂದಕ್ಕೆ ಬೆಂಕಿ ಹಚ್ಚಿ ಧ್ವಂಸಗೊಳಿಸಿರುವ ಘಟನೆ ಪಾಕಿಸ್ತಾನದ ಖೈಬರ್ ಪ್ರಾಂತ್ಯದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. 

ವೈರಲ್ ಆದ ವಿಡಿಯೋದಲ್ಲಿ ಉದ್ರಿಕ್ತರ ಗುಂಪೊಂದು ದೇಗುಲದ ಗೋಡೆ ಹಾಗೂ ಛಾವಣಿಯನ್ನು ಕಿತ್ತೆಸೆಯುವ ದೃಶ್ಯಗಳಿವೆ. ಇನ್ನು ಪಾಕಿಸ್ತಾನ ಸೇರಿ ವಿಶ್ವಾದ್ಯಂತ ಮಾನವ ಹಕ್ಕು ಹೋರಾಟಗಾರರು ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡುವ ಈ ಕೃತ್ಯವನ್ನು ಖಂಡಿಸಿದ್ದಾರೆ.

ಕರಾಚಿಯ ಪತ್ರಕರ್ತ ಮುಬಾಸಿರ್ ಜೈದಿ ಎಂಬಾತ ಈ ಘಟನೆಯ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಹಿಂದೂಗಳು ಆಡಳಿತಾಧಿಕಾರಿಗಳಿಂದ ದೇಗುಲವನ್ನು ವಿಸ್ತರಿಸಲು ಅನುಮತಿ ಪಡೆದಿದ್ದರು. ಆದರೆ ಸ್ಥಳೀಯ ಮುಸ್ಲಿಂ ಮುಖಂಡರು ಮಾತ್ರ ಇದನ್ನು ಧ್ವಂಸಗೊಳಿಸಲು ಗುಂಪೊಂದನ್ನು ಕರೆ ತಂದಿದ್ದಾರೆ. ಇಷ್ಟಾದರೂ ಪೊಲೀಸರು ಹಾಗೂ ಆಡಳಿತಾಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆಂದು ಅವರು ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಲಂಡನ್‌ ಮೂಲದ ಮಾನವ ಹಕ್ಕು ಹೋರಾಟಗಾರ್ತಿಯೂ ಈ ಬಗ್ಗೆ ಟ್ವೀಟ್ ಮಾಡಿದ್ದು, 'ಇದುವೇ ಹೊಸ ಪಾಕಿಸ್ತಾನ. ಹಿಂದೂ ದೇಗುಲವೊಂದನ್ನು ಖೈಬರ್ ಪ್ರಾಂತ್ಯದಲ್ಲಿ ಧ್ವಂಸಗೊಳಿಸಲಾಗಿದೆ. ಇಲ್ಲಿ ಪಿಟಿಐ ನೇತೃತ್ವದ ಸರ್ಕಾರವೇ ಅಧಿಕಾರದಲ್ಲಿದೆ. ಹೀಗಿದ್ದರೂ ಪೊಲೀಸರಾಗಲೀ, ಅಧಿಕಾರಿಗಳಾಗಲೀ ಈ ಗುಂಪನ್ನು ಚದುರಿಸಲಿಲ್ಲ. ಯಾಕೆಂದರೆ ಅವರೆಲ್ಲರೂ ಅಲ್ಲಾಹು ಅಕ್ಬರ್ ಎಂದು ಜಪಿಸುತ್ತಿದ್ದರು. ಇದೊಂದು ತಲೆ ತಗ್ಗಿಸುವಂತಹ ದಿನ' ಎಂದಿದ್ದಾರೆ.