ಬಾಂಗ್ಲಾದೇಶದ ಫೆನಿ ಜಿಲ್ಲೆಯಲ್ಲಿ, ಸಮೀರ್ ದಾಸ್ ಎಂಬ ಹಿಂದೂ ಆಟೋ ಚಾಲಕನನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿ, ಆಟೋವನ್ನು ದೋಚಿದ್ದಾರೆ. ಈ ಘಟನೆಯು ದೇಶದಲ್ಲಿ ಹೆಚ್ಚುತ್ತಿರುವ ಕೋಮು ಹಿಂಸಾಚಾರದ ಭಾಗವಾಗಿದ್ದು, ಅಲ್ಪಸಂಖ್ಯಾತ ಹಿಂದೂ ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ.

ಢಾಕಾ(ಜ.13): ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಕ್ರೌರ್ಯ ಮುಂದುವರಿದಿದೆ. ಆಟೋರಿಕ್ಷಾ ಚಾಲಕ ಸಮೀರ್ ದಾಸ್ ಎಂಬುವವರನ್ನು ದುಷ್ಕರ್ಮಿಗಳು ಭೀಕರವಾಗಿ ಥಳಿಸಿ ಕೊಂದಿರುವ ಘಟನೆ ಜನೆವರಿ 11ರ ಭಾನುವಾರ ತಡರಾತ್ರಿ ನಡೆದಿದೆ. ಈ ಘಟನೆಯು ವಿಶ್ವದಾದ್ಯಂತ ಇರುವ ಹಿಂದೂ ಸಮುದಾಯದಲ್ಲಿ ಆತಂಕ ಮತ್ತು ಆಕ್ರೋಶವನ್ನು ಹುಟ್ಟುಹಾಕಿದೆ.

ಬ್ಯಾಟರಿ ಆಟೋ ಚಾಲಕನ ಭೀಕರ ಕೊಲೆ

ಫೆನಿ ಜಿಲ್ಲೆಯ ನಿವಾಸಿ ಸಮೀರ್ ಕುಮಾರ್ ದಾಸ್ ಅವರು ದೀರ್ಘಕಾಲದಿಂದ ಬ್ಯಾಟರಿ ಚಾಲಿತ ಆಟೋರಿಕ್ಷಾ ಓಡಿಸುತ್ತಾ ಜೀವನ ಸಾಗಿಸುತ್ತಿದ್ದರು. ಭಾನುವಾರ ರಾತ್ರಿ ಕೆಲಸಕ್ಕೆ ಹೋದವರು ಮನೆಗೆ ಹಿಂತಿರುಗದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸೋಮವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ದಕ್ಷಿಣ ಕರಿಂಪುರದ ಮುಹುರಿ ಬಾರಿ ಬಳಿ ಸಮೀರ್ ಅವರ ಶವ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ದುಷ್ಕರ್ಮಿಗಳು ಸಮೀರ್‌ನನ್ನು ಕೊಂದ ಬಳಿಕ ಅವರ ಆಟೋರಿಕ್ಷಾದೊಂದಿಗೆ ಪರಾರಿಯಾಗಿದ್ದಾರೆ.

ದರೋಡೆಯೋ ಅಥವಾ ಕೋಮು ದ್ವೇಷ?

ಘಟನೆಯ ಬಗ್ಗೆ ಮಾಹಿತಿ ನೀಡಿದ ದಗನ್‌ಭುಯಾನ್ ಪೊಲೀಸ್ ಠಾಣೆಯ ಅಧಿಕಾರಿ ಮೊಹಮ್ಮದ್ ಫಯಾಜುಲ್ ಅಜೀಮ್, ಕೊಲೆಗೆ ನಿಖರ ಕಾರಣ ಏನೆಂದು ಪತ್ತೆ ಹಚ್ಚುತ್ತಿದ್ದೇವೆ. ಕೇವಲ ಆಟೋ ದರೋಡೆ ಮಾಡಲು ಕೊಲೆ ಮಾಡಲಾಗಿದೆಯೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಉದ್ದೇಶವಿದೆಯೇ ಎಂಬ ಆಯಾಮದಲ್ಲಿ ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಮೃತರ ಕುಟುಂಬ ಈಗಾಗಲೇ ನ್ಯಾಯಕ್ಕಾಗಿ ದೂರು ದಾಖಲಿಸಿದೆ.

ಬಾಂಗ್ಲಾದಲ್ಲಿ ಉಲ್ಬಣಗೊಂಡ ಹಿಂದೂಗಳ ಮೇಲಿನ ದೌರ್ಜನ್ಯ

2024ರ ರಾಜಕೀಯ ದಂಗೆಯ ನಂತರ ಬಾಂಗ್ಲಾದೇಶವು ಪ್ರಕ್ಷುಬ್ಧತೆಯ ಗೂಡಾಗಿದೆ. ಅಲ್ಪಸಂಖ್ಯಾತ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ಉಗ್ರಗಾಮಿಗಳು ಸರಣಿ ದಾಳಿಗಳನ್ನು ನಡೆಸುತ್ತಿದ್ದಾರೆ. ಫೆಬ್ರವರಿಯಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೋಮು ಹಿಂಸಾಚಾರವು ಆತಂಕಕಾರಿ ಮಟ್ಟಕ್ಕೆ ತಲುಪಿದೆ ಎಂದು 'ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಏಕತಾ ಮಂಡಳಿ' ಕಳವಳ ವ್ಯಕ್ತಪಡಿಸಿದೆ. ಹಿಂದೂಗಳ ಮನೆ ಮತ್ತು ವ್ಯಾಪಾರ ಮಳಿಗೆಗಳನ್ನು ಧ್ವಂಸ ಮಾಡುವುದು ನಿತ್ಯದ ಘಟನೆಯಂತಾಗಿದೆ.

ಭಾರತ ಸರ್ಕಾರದ ತೀಕ್ಷ್ಣ ಪ್ರತಿಕ್ರಿಯೆ

ಬಾಂಗ್ಲಾದಲ್ಲಿನ ಈ ಬೆಳವಣಿಗೆಗಳ ಬಗ್ಗೆ ಭಾರತ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಅಲ್ಪಸಂಖ್ಯಾತರ ಮೇಲೆ ಪದೇ ಪದೇ ನಡೆಯುತ್ತಿರುವ ಆತಂಕಕಾರಿ ಸರಣಿ ದಾಳಿಗಳನ್ನು ನಾವು ಗಮನಿಸುತ್ತಿದ್ದೇವೆ. ಅಪರಾಧಿಗಳ ವಿರುದ್ಧ ದೃಢವಾದ ಕ್ರಮ ಕೈಗೊಳ್ಳದಿದ್ದರೆ ಅವರಿಗೆ ಮತ್ತಷ್ಟು ಧೈರ್ಯ ಬರುತ್ತದೆ ಮತ್ತು ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ಭಾವನೆ ಹೆಚ್ಚಿಸುತ್ತದೆ ಎಂದು ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.