ದಿನಕ್ಕೊಂದು ರೀತಿಯಲ್ಲಿ ಅಮೆರಿಕಕ್ಕೆ ತಿರುಗೇಟಿನ ಮೂಲಕ ಇರಾನ್‌ ಎಲ್ಲರನ್ನು ಅಚ್ಚರಿಗೆ ಗುರಿ ಮಾಡಿತ್ತು. ಆದರೆ ಆ ಅಚ್ಚರಿ ಇನ್ನಷ್ಟು ಹೆಚ್ಚುವ ರೀತಿಯಲ್ಲಿ ತನ್ನ ದೇಶದಿಂದ 4000 ಕಿ.ಮೀ ದೂರದಲ್ಲಿನ ಅಮೆರಿಕದ ಸೇನಾ ನೆಲೆ ಮೇಲೆ ದಾಳಿಗೆ ಇರಾನ್‌ ಯತ್ನಿಸಿದೆ.

ದುಬೈ/ಟೆಹ್ರಾನ್‌: ಸರಿಯಾಗಿ 22 ದಿನಗಳ ಹಿಂದೆ ಇರಾನ್ ಮೇಲೆ ಅಮೆರಿಕ- ಇಸ್ರೇಲ್‌ ಜಂಟಿ ದಾಳಿ ಆರಂಭಿಸಿದ ಹೊತ್ತಿನಲ್ಲಿ ಕೆಲವೇ ದಿನಗಳಲ್ಲಿ ಇರಾನ್‌ ಕಥೆ ಮುಗಿಯೋದು ಖಚಿತ ಎಂದು ಭಾವಿಸಿದವರೇ ಹೆಚ್ಚು. ಆದರೆ ನಂತರದಲ್ಲಿ ದಿನಕ್ಕೊಂದು ರೀತಿಯಲ್ಲಿ ಅಮೆರಿಕಕ್ಕೆ ತಿರುಗೇಟಿನ ಮೂಲಕ ಇರಾನ್‌ ಎಲ್ಲರನ್ನು ಅಚ್ಚರಿಗೆ ಗುರಿ ಮಾಡಿತ್ತು. ಆದರೆ ಆ ಅಚ್ಚರಿ ಇನ್ನಷ್ಟು ಹೆಚ್ಚುವ ರೀತಿಯಲ್ಲಿ ತನ್ನ ದೇಶದಿಂದ 4000 ಕಿ.ಮೀ ದೂರದಲ್ಲಿನ ಅಮೆರಿಕದ ಸೇನಾ ನೆಲೆ ಮೇಲೆ ದಾಳಿಗೆ ಇರಾನ್‌ ಯತ್ನಿಸಿದೆ.

Add Asianetnews Kannada as a Preferred SourcegooglePreferred

ವಿಶ್ವದ ಯಾವುದೇ ಪ್ರದೇಶದಲ್ಲೂ ನಮ್ಮ ಶತ್ರುಗಳು ಸುರಕ್ಷಿತವಲ್ಲ. ನಾವು ಕೊಲ್ಲಿಯಾಚೆಗೂ ದಾಳಿ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ ಮಾರನೇ ದಿನವೇ ಹಿಂದೂ ಮಹಾಸಾಗರದಲ್ಲಿನ ಡಿಯಾಗೋ ಗಾರ್ಸಿಯಾ ದ್ವೀಪದ ಮೇಲೆ ಶನಿವಾರ ಇರಾನ್ ಎರಡು ಕ್ಷಿಪಣಿ ದಾಳಿ ನಡೆಸಿದೆ. ಈ ಪೈಕಿ ಒಂದು ಕ್ಷಿಪಣಿ ಮಾರ್ಗ ಮಧ್ಯದಲ್ಲೇ ಪತನಗೊಂಡಿದ್ದರೆ, ಮತ್ತೊಂದನ್ನು ಅಮೆರಿಕ ಹೊಡೆದುರುಳಿಸಿದೆ.

ತನ್ನ ಈ ಯತ್ನದಲ್ಲಿ ಇರಾನ್‌ ವಿಫಲವಾಗಿದ್ದರೂ ಅದು ಅಮೆರಿಕ, ಯುರೋಪ್‌ ದೇಶಗಳಲ್ಲಿ ಹೊಸ ಆತಂಕ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಕಾರಣ, ಇರಾನ್‌ನ ಅತ್ಯಾಧುನಿಕ ಕ್ಷಿಪಣಿಗಳ ದೂರ ಸಾಗುವ ಗರಿಷ್ಠ ಸಾಮರ್ಥ್ಯ 2000 ಕಿ.ಮೀ ಎಂದು ಇದುವರೆಗೆ ಅಮೆರಿಕ ಸೇರಿದಂತೆ ಅದರ ವೈರಿ ದೇಶಗಳು ನಂಬಿದ್ದವು. ಹೀಗಾಗಿ ಇರಾನ್‌ನಿಂದ 2000 ಕಿ.ಮೀ ದೂರದ ದೇಶಗಳೆಲ್ಲಾ ಚಿಂತೆ ಮುಕ್ತವಾಗಿದ್ದವು. ಆದರೆ 4000 ಕಿ.ಮೀ ದೂರದ ಗುರಿಯ ಮೇಲೆ ನಡೆಸಿರುವ ದಾಳಿ, ಇರಾನ್‌ನ ಗುಪ್ತ ಸಾಮರ್ಥ್ಯದ ಬಗ್ಗೆ ಎಲ್ಲರೂ ಅಚ್ಚರಿ ಮತ್ತು ಆತಂಕ ಪಡುವಂತಾಗಿದೆ.

ಅಚ್ಚರಿಯ ದಾಳಿ:

ಹಿಂದೂ ಮಹಾಸಾಗರದ ಪುಟ್ಟ ದೇಶ ಮಾರಿಷಸ್‌ ಸಮೀಪದ ಅಮೆರಿಕ, ಬ್ರಿಟನ್‌ನ ಜಂಟಿ ಸೇನಾ ನೆಲೆ ಇದೆ. ಈ ನೆಲೆ ಬಳಸಿ ಇರಾನ್‌ ಮೇಲೆ ದಾಳಿ ನಡೆಸಲು ಶುಕ್ರವಾರವಷ್ಟೇ ಬ್ರಿಟನ್‌ ಅಮೆರಿಕಕ್ಕೆ ಅನುಮತಿ ನೀಡಿತ್ತು. ಅದರ ಬೆನ್ನಲ್ಲೇ ಎರಡೂ ದೇಶಗಳಿಗೆ ಎಚ್ಚರಿಕೆ ನೀಡುವ ರೀತಿಯಲ್ಲಿ ಆ ದ್ವೀಪದ ಮೇಲೆ ಇರಾನ್‌ ಬ್ಯಾಲೆಸ್ಟಿಕ್‌ ಕ್ಷಿಪಣಿ ದಾಳಿ ನಡೆಸಿದೆ.

ಈ ಹಿಂದೆ ಇರಾನ್‌ ಕೇವಲ 2 ಸಾವಿರ ಕಿ.ಮೀ. ದೂರ ಕ್ರಮಿಸಬಲ್ಲ ಸಾಮರ್ಥ್ಯದ ಕ್ಷಿಪಣಿಗಳನ್ನಷ್ಟೇ ಹೊಂದಿದೆ ಎಂದು ನಂಬಲಾಗಿತ್ತು. ಆದರೆ, 4 ಸಾವಿರ ಕಿ.ಮೀ. ದೂರದ ಸೇನಾ ನೆಲೆ ಮೇಲೆ ದಾಳಿ ನಡೆಸಿರುವುದು ಇದೇ ಮೊದಲಾಗಿದೆ. ಈ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳು ಮಾತ್ರವಲ್ಲದೆ, ಯುರೋಪ್‌ ಮೇಲೂ ದಾಳಿ ನಡೆಸುವ ಸಾಮರ್ಥ್ಯ ತನ್ನ ಬಳಿ ಇದೆ ಎಂಬ ಎಚ್ಚರಿಕೆಯನ್ನು ಇರಾನ್‌ ಪರೋಕ್ಷವಾಗಿ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಶಾಕ್‌ ನೀಡಿದೆ.

ಏಕೆ ಮಹತ್ವದ್ದು?:

ಇರಾನ್‌ ಮೇಲಿನ ದಾಳಿಗೆ ಬ್ರಿಟನ್‌ ತನ್ನ ಎರಡು ಸೇನಾ ನೆಲೆಗಳನ್ನು ಬಳಸಲು ಅಮೆರಿಕಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಅದರಲ್ಲಿ ಡಿಯಾಗೋ ಗಾರ್ಸಿಯಾ ಕೂಡ ಒಂದು. ಈ ದ್ವೀಪವು ಹಿಂದೂ ಮಹಾಸಾಗರದಲ್ಲಿರುವ ಪ್ರಮುಖ ಸೇನಾ ನೆಲೆಯಾಗಿದೆ. ಆಫ್ರಿಕಾ, ಏಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ವಾಯು ಮತ್ತು ನೌಕಾ ಕಾರ್ಯಾಚರಣೆಯಲ್ಲಿ ಈ ನೆಲೆ ಮಹತ್ವದ ಪಾತ್ರವಹಿಸಿದೆ. ಹಿಂದೂ ಮಹಾಸಾಗರದಲ್ಲಿ ಚೀನಾದ ಪ್ರಭಾವ ತಡೆಯಲು ಮಾತ್ರವಲ್ಲದೆ, ಅಫ್ಘಾನಿಸ್ತಾನ, ಇರಾನ್‌ ಸಂಘರ್ಷದ ವೇಳೆಯೂ ಈ ನೆಲೆಯನ್ನು ಅಮೆರಿಕ ವ್ಯಾಪಕವಾಗಿ ಬಳಸಿಕೊಂಡಿತ್ತು. ಈ ದ್ವೀಪದ ಮೇಲಿನ ನಿಯಂತ್ರಣ ಬ್ರಿಟನ್‌ ಕೈಯಲ್ಲಿದ್ದು, 1968ರಲ್ಲಿ ನಡೆದ ಒಪ್ಪಂದದ ಪ್ರಕಾರ 99 ವರ್ಷಗಳ ಕಾಲ ಈ ದ್ವೀಪವನ್ನು ಅಮೆರಿಕ ಸೇನೆಗೆ ಬಳಸಲು ಅವಕಾಶ ಕಲ್ಪಿಸಲಾಗಿದೆ.

ಅಮೆರಿಕ ನೆಲೆ ಇರುವ ಹಿಂದು ಮಹಾಸಾಗರ ದ್ವೀಪಕ್ಕೆ 2 ಕ್ಷಿಪಣಿ

- ಇರಾನ್‌ ಬಳಿ 2000 ಕಿ.ಮೀ. ಸಾಗುವ ಕ್ಷಿಪಣಿ ಇದೆ ಎನ್ನಲಾಗಿತ್ತು

- ಆದರೆ ದುಪ್ಪಟ್ಟು ದೂರ ಸಾಗುವ ಕ್ಷಿಪಣಿ ಬಳಸಿ ವಿಶ್ವಕ್ಕೆ ಶಾಕ್‌

----

- 4000 ಕಿ.ಮೀ ದೂರದ ಗಾರ್ಸಿಯಾ ದ್ವೀಪದ ಮೇಲೆ ಇರಾನ್‌ ಕ್ಷಿಪಣಿ

- ಒಂದು ಕ್ಷಿಪಣಿ ಮಾರ್ಗ ಮಧ್ಯ ಪತನ, ಮತ್ತೊಂದರ ಮೇಲೆ ಅಮೆರಿಕ ದಾಳಿ

- ಕೊಲ್ಲಿಯಾಚೆಗೂ ದಾಳಿ ಎಂದ ಮರುದಿನ ಇರಾನ್‌ ಅಚ್ಚರಿಯ ಅಟ್ಯಾಕ್‌

- ಕೊಲ್ಲಿ ಬಳಿಕ ಇದೀಗ ಯುರೋಪ್‌ ದೇಶಗಳಿಗೂ ಇರಾನ್‌ ದಾಳಿ ಆತಂಕ