ಹೃದಯ ಹಿಂಡುವಂತಿದೆ ಉಕ್ರೇನ್‌ನ ವಿಡಿಯೋಗಳು ಜೀವ ಉಳಿಸಿಕೊಳ್ಳಲು ಪುಟ್ಟ ಮಕ್ಕಳ ಪರದಾಟ ಏಕಾಂಗಿಯಾಗಿ ದೂರ ಸಾಗುತ್ತಿರುವ ಪುಟ್ಟ ಬಾಲಕರು
ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ದೇಶಗಳ ನಡುವಿನ ಸಂಬಂಧವನ್ನು ಮಾತ್ರವಲ್ಲ, ಹಲವು ಕುಟುಂಬಗಳನ್ನೇ ಒಡೆದು ಹಾಕಿದೆ. ಕನಿಷ್ಠ ನಾವು ಉಳಿಯದಿದ್ದರೂ ಪರವಾಗಿಲ್ಲ ನಮ್ಮ ಪುಟ್ಟ ಕಂದಮ್ಮಗಳು ಬದುಕಿಕೊಳ್ಳಲಿ ಎಂದು ಪೋಷಕರು ತಮ್ಮ ಪುಟ್ಟ ಪುಟ್ಟ ಮಕ್ಕಳನ್ನು ಏಕಾಂಗಿಯಾಗಿ ಪೋಲೆಂಡ್ ಗಡಿಯತ್ತ ಕಳಿಸುತ್ತಿದ್ದಾರೆ. ಈಗಾಗಲೇ 11 ವರ್ಷದ ಬಾಲಕನೋರ್ವ ಏಕಾಂಗಿಯಾಗಿ 14 ಸಾವಿರ ಕಿ.ಲೋ ಮೀಟರ್ ಪ್ರಯಾಣಿಸಿ ಸ್ಲೊವಾಕಿಯಾ ದೇಶವನ್ನು ತಲುಪಿದ ವಿಚಾರವನ್ನು ನೀವು ಈಗಾಗಲೇ ಕೇಳಿರಬಹುದು. ಬಹುಶಃ ಇಲ್ಲಿ ನಾವು ನಿಮಗೆ ತೋರಿಸಲು ಹೊರಟಿರುವ ವಿಡಿಯೋದಲ್ಲಿ ಕಾಣಿಸುವ ಬಾಲಕನಿಗೂ ಬಹುಶಃ ಅದೇ ಬಾಲಕನ ಪ್ರಾಯವಿರಬಹುದು ಅಥವಾ ಅದಕ್ಕಿಂತ ಕಡಿಮೆ ಇರಬಹುದು. ಈ ಪುಟ್ಟ ಬಾಲಕ ಏಕಾಂಗಿಯಾಗಿ ಬೆನ್ನ ಮೇಲೆ ಒಂದು ಬ್ಯಾಗ್ ನೇತು ಹಾಕಿಕೊಂಡು ಕೈಯಲ್ಲಿ ಇನ್ನೊಂದು ಪುಟ್ಟ ಚೀಲ ಹಿಡಿದುಕೊಂಡು ರಸ್ತೆಯಲ್ಲಿ ಅಳುತ್ತಾ ಸಾಗುತ್ತಿದ್ದಾನೆ. ಈ ದೃಶ್ಯ ನೋಡುಗರ ಹೃದಯವನ್ನು ವೇದನೆಯಿಂದ ಮರುಗುವಂತೆ ಮಾಡುತ್ತಿದೆ.
ಉಕ್ರೇನ್‌ನಿಂದ ಹೊರಬರುತ್ತಿರುವ ಅನೇಕ ಕಠೋರ ದೃಶ್ಯಗಳಲ್ಲೇ ಇದು ಅತ್ಯಂತ ಘೋರವಾಗಿದ್ದು, ಹೃದಯ ಹಿಂಡುವಂತಹ ವೇದನೆಯನ್ನು ನೀಡುತ್ತಿದೆ. ಅಳುತ್ತಿರುವ ಈ ಪುಟ್ಟ ಬಾಲಕ ಶನಿವಾರ ಉಕ್ರೇನ್‌ನಿಂದ ಪೋಲೆಂಡ್‌ನ ಮೆಡಿಕಾಗೆ (Medyka) ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ರಷ್ಯಾ ದಾಳಿ ಆರಂಭವಾದಾಗಿನಿಂದಲೂ 1.7 ಮಿಲಿಯನ್‌ಗಿಂತಲೂ ಹೆಚ್ಚು ಜನರು ದೇಶ ತೊರೆದಿದ್ದಾರೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ. ಯುದ್ಧವು 13ನೇ ದಿನ ಪ್ರವೇಶಿಸುತ್ತಿದ್ದಂತೆ, ಉಕ್ರೇನಿಯನ್ ನಿರಾಶ್ರಿತರು ಪೋಲೆಂಡ್, ರೊಮೇನಿಯಾ ಮತ್ತು ಮೊಲ್ಡೊವಾ ಸೇರಿದಂತೆ ನೆರೆಯ ದೇಶಗಳಿಗೆ ಹೋಗುತ್ತಿರುವುದನ್ನು ಮುಂದುವರೆಸಿದ್ದಾರೆ. ಉಕ್ರೇನ್ ಜನ ಜೀವನ ಸಂಪೂರ್ಣ ನರಕಸದೃಶವಾಗಿದ್ದು, ಆಹಾರ, ನೀರು, ಔಷಧ ಕೊನೆಗೆ ಶುದ್ಧ ಗಾಳಿಯೂ ಇಲ್ಲದೇ ಉಕ್ರೇನ್ ಜನ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಎರಡನೇ ವಿಶ್ವ ಯುದ್ಧದ ನಂತರ ಯುರೋಪ್‌ನಲ್ಲಿ ನಡೆದ ಅತ್ಯಂತ ದೊಡ್ಡ ವಲಸೆ ಇದು ಎಂದು ವಿಶ್ವಸಂಸ್ಥೆ ಹೇಳಿದೆ.
ತುಂಟಾಟದಿಂದ ವರದಿಗಾರ್ತಿಗೆ ಅಡ್ಡಿಪಡಿಸಿದ ಉಕ್ರೇನ್ ಮಗು... ವಿಡಿಯೋ
ಯುದ್ಧದಿಂದಾಗಿ ವಿಭಜನೆಗೊಂಡಿರುವ ಉಕ್ರೇನಿಯನ್ ಕುಟುಂಬಗಳು ಉಕ್ರೇನ್‌ನಿಂದ ಪಲಾಯನ ಮಾಡಿ ಸಮೀಪದ ಪೋಲೆಂಡ್‌ಗೆ ಆಗಮಿಸುತ್ತಿದ್ದಾರೆ. ಮಧ್ಯ ಉಕ್ರೇನಿಯನ್ ಪಟ್ಟಣದಲ್ಲಿ ಭಾರೀ ಶೆಲ್ ದಾಳಿಯಿಂದ ತಪ್ಪಿಸಿಕೊಂಡು ಮಹಿಳೆಯೊಬ್ಬರು ಸೋಮವಾರ ಪೋಲೆಂಡ್‌ಗೆ ತನ್ನ ಹದಿಹರೆಯದ ಮಗಳು ಮತ್ತು 60 ವರ್ಷದ ತಾಯಿಯೊಂದಿಗೆ ಆಗಮಿಸಿದ ದೃಶ್ಯ ಮನಕಲಕುವಂತಿತ್ತು. 37 ವರ್ಷದ ಮಹಿಳೆ ಯೆಲೆನಾ ಮಕರೋವಾ (Yelena Makarova), ಶೆಲ್ ದಾಳಿ ಆರಂಭವಾಗುತ್ತಿದ್ದಂತೆ ಕೈವ್‌ನ ಆಗ್ನೇಯಕ್ಕೆ ಸುಮಾರು 300 ಕಿಲೋಮೀಟರ್ (190 ಮೈಲುಗಳು) ದೂರದಲ್ಲಿರುವ ಕ್ರೆಮೆನ್‌ಚುಕ್‌ನಲ್ಲಿರುವ (Kremenchuk) ತನ್ನ ಮನೆಯನ್ನು ತರಾತುರಿಯಲ್ಲಿ ತೊರೆದರು. ಆಕೆಯ ಕುಟುಂಬದ ಪುರುಷರು ಯುದ್ಧ ಮಾಡಲು ಅಲ್ಲೇ ಉಳಿದರು. ಇದು ಅವರಿಗೆ ತಿಳಿದಿರುವಂತೆ ಅವರ ಜೀವನದ ಅಂತ್ಯವನ್ನು ಗುರುತಿಸಿತು ಮತ್ತು ಅವಳ ಕುಟುಂಬವನ್ನು ವಿಭಜಿಸಿತು.
ಯುದ್ಧ ಪೀಡಿತ ಉಕ್ರೇನ್‌ನಿಂದ ಒಂಟಿಯಾಗಿ 1400 ಕಿ.ಮೀ ಪ್ರಯಾಣಿಸಿದ 11ರ ಬಾಲಕ
ಉಕ್ರೇನ್‌ನಲ್ಲಿ 18 ದಾಟಿದ ಯುವಕರು, ಗಂಡಸರು ದೇಶ ತೊರೆಯಲು ಅನುಮತಿ ಇಲ್ಲ. ಅವರು ದೇಶದಲ್ಲೇ ನೆಲೆ ನಿಂತು ರಷ್ಯಾ ವಿರುದ್ಧ ಹೋರಾಡಬೇಕಾಗಿದೆ. ಹೀಗಾಗಿ ಕೇವಲ ತಮ್ಮ ಮನೆಯ ಮಹಿಳೆಯರು ಮಕ್ಕಳನ್ನು ಸುರಕ್ಷಿತ ಪ್ರದೇಶಕ್ಕೆ ಕಳುಹಿಸಿಕೊಟ್ಟು ಉಕ್ರೇನ್‌ನ ಪುರುಷರು ಅಲ್ಲೇ ನೆಲೆ ನಿಂತಿದ್ದಾರೆ. ಹೀಗಾಗಿ ಎಷ್ಟೋ ಕುಟುಂಬಗಳು ತಮ್ಮ ಮನೆಯ ಆಧಾರಸ್ಥಂಭಗಳನ್ನೇ ಕಳೆದುಕೊಂಡಿದ್ದಾರೆ. ಅಲ್ಲದೇ ಒಂದು ವೇಳೆ ಯುದ್ಧ ಮುಗಿದು ತಮ್ಮ ಮನೆಯ ಗಂಡಸರು ಬದುಕಿ ಬರುವರು ಮತ್ತೆ ಅವರನ್ನು ಭೇಟಿಯಾಗುವೆವು ಎಂಬ ಭರವಸೆ ಅವರಲಿಲ್ಲ. ಹೀಗಾಗಿ ಬಹುತೇಕ ಉಕ್ರೇನಿಗರು ಒಡೆದ ಹೃದಯದೊಂದಿಗೆ ತಮ್ಮ ತಾಯ್ನೆಲವನ್ನು ಬಿಟ್ಟು ಬೇರೆ ದೇಶಕ್ಕೆ ಪಲಾಯನ ಮಾಡುತ್ತಿದ್ದಾರೆ.
